ADVERTISEMENT

ರಾಜ್ ಭಾವಗಳ ಕೊಲಾಜ್

ಎನ್.ಜಗನ್ನಾಥ ಪ್ರಕಾಶ್
Published 22 ಏಪ್ರಿಲ್ 2023, 19:55 IST
Last Updated 22 ಏಪ್ರಿಲ್ 2023, 19:55 IST
ವಿ.ಟಿ. ಕಾಳೆ ಅವರು ಮೂಡಿಸಿದ ರಾಜ್ ಕಲಾಕೃತಿ
ವಿ.ಟಿ. ಕಾಳೆ ಅವರು ಮೂಡಿಸಿದ ರಾಜ್ ಕಲಾಕೃತಿ   

ಏಪ್ರಿಲ್ 24 ರಾಜ್‌ಕುಮಾರ್ ಹುಟ್ಟಿದ ದಿನ. ಅವರು ಅಗಲಿದ ಮೇಲೆ ರಾಜ್ಯದ ಪ್ರಮುಖ ಕಲಾವಿದರು ರಚಿಸಿದ ಕಲಾಕೃತಿಗಳು ಇಂದಿಗೂ ಕಾಡುತ್ತವೆ. ಅವುಗಳ ಝಲಕ್ ಇದು...

ನೈಜ ಅಭಿನಯದಿಂದ ನೋಡುಗರ ಮನದಾಳದಲ್ಲಿ ಅಚ್ಚೊತ್ತಿದ ಅಪ್ರತಿಮ ಕಲಾವಿದ ರಾಜ್‌ಕುಮಾರ್‌.

ರಂಗಭೂಮಿಯಿಂದ ಶುರುವಿಟ್ಟು ಸಿನಿಮಾ ಪರದೆವರೆಗೂ ನಡೆದುಬಂದ ರಾಜ್‌ ಪಯಣ ಅಚ್ಚರಿಗಳ ಆಗರ. ಬಹುಮುಖ ಪ್ರತಿಭೆಯ ಅವರು ತಾವು ಅಭಿನಯಿಸಿದ ವಿವಿಧ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ಮುದಗೊಳಿಸಿದವರು.

ADVERTISEMENT

ಚಿತ್ರರಂಗವಲ್ಲದೆ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಂತಿದ್ದ ರಾಜ್ ತಮ್ಮ ಸರಳ ಜೀವನ, ಸುಸಂಸ್ಕೃತ ನಡವಳಿಕೆಯಿಂದಲೂ ಜನರ ಮೇಲೆ ಪ್ರಭಾವ ಬೀರಿದ್ದ ಅಪರೂಪದ ಕಲಾವಿದ. ಐದು ದಶಕಗಳಿಗೂ ಹೆಚ್ಚಿನ ಕಾಲ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಾಜ್‌ ನಮ್ಮಿಂದ ಕಣ್ಮರೆಯಾಗಿ ವರ್ಷಗಳೇ ಉರುಳಿದರೂ ಅವರ ನೆನಪು ಈಗಲೂ ಹಸಿರು. ‌

ರಾಜ್‌ಕುಮಾರ್‌ ಅಗಲಿದ ಬೆನ್ನಲ್ಲೇ ಅವರ ನೆನಪುಗಳನ್ನು ಕುಂಚದಲ್ಲಿ ಹಿಡಿದಿಡುವ ಯತ್ನಕ್ಕೆ ತಮ್ಮ ‘ಅನಿಕೇತನ’ ಸಾಂಸ್ಕೃತಿಕ ವೇದಿಕೆಯಿಂದ ಐ.ಎಂ. ವಿಠ್ಠಲಮೂರ್ತಿ ಮುಂದಾಗಿ, ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ರಾಜ್‌ ಅವರ ಭಾವಭಂಗಿಗಳನ್ನು ಕ್ಯಾನ್‌ವಾಸ್‌ನಲ್ಲಿ ಅರಳಿಸುವಲ್ಲಿ ಯಶಕಂಡರು. ಹಿಂದೆಯೇ ಆ ಚಿತ್ರ ಕೃತಿಗಳ ಪ್ರದರ್ಶನವೂ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಟ್ಟಿತ್ತು.

ರವಿಕುಮಾರ್ ಕಾಶಿ ವಿರಚಿತ ರಾಜ್ ಕಲಾಕೃತಿ

ಜೆ.ಎಂ.ಎಸ್. ಮಣಿ, ಎಚ್‌.ಎ. ಅನಿಲ್‌ಕುಮಾರ್, ವಿ.ಜಿ. ಅಂದಾನಿ, ಶಾಂತಾಮಣಿ, ಎಂ.ಸಿ. ಚೆಟ್ಟಿ, ವಿ.ಟಿ. ಕಾಳೆ, ರವಿಕುಮಾರ್‌ ಕಾಶಿ, ಜೆ.ಎಸ್. ಖಂಡೇರಾವ್, ಎನ್. ಮರಿಶಾಮಾಚಾರ್ ಹೀಗೆ ಹಲವು ಖ್ಯಾತನಾಮ ಕಲಾವಿದರು ಚಿತ್ರಿಸಿರುವ ರಾಜ್ ಬದುಕಿನ ಪಯಣ ಕುರಿತ ಚಿತ್ರ ಕಲಾಕೃತಿಗಳು ಅನಿಕೇತನದ ಸುಪರ್ದಿಯಲ್ಲಿವೆ.

‌ಪೌರಾಣಿಕ, ಸಾಮಾಜಿಕ, ಧಾರ್ಮಿಕ, ಬಾಂಡ್‌ ಶೈಲಿ ಹೀಗೆ ಹಲವು ಬಗೆಯ ಚಿತ್ರಗಳಲ್ಲಿ ರಾಜ್‌ ವಹಿಸಿದ ಪಾತ್ರಗಳನ್ನು ಬಸವರಾಜ ಮುಸಾವಳಗಿ ತಮ್ಮ ಕೃತಿಯಲ್ಲಿ ಹಿಡಿದಿಟ್ಟರೆ, ಎಂ.ಜಿ. ದೊಡ್ಡಮನಿ ಅವರು ರಾಜ್‌ರ ಸರಳತೆಯನ್ನು ದಾಖಲಿಸಿದ್ದಾರೆ.

ಬೇಡರ ಕಣ್ಣಪ್ಪ ಚಿತ್ರದಿಂದ ಈವರೆಗೆ ಗಮನಾರ್ಹವೆನ್ನಿಸಿದ ರಾಝ್‌ ಚಿತ್ರಗಳ ಸಂಕಲನವನ್ನು ವಿ.ಟಿ. ಕಾಳೆ ತಮ್ಮ ಕೃತಿಯಲ್ಲಿ ಚಿತ್ರಿಸಿದ್ದಾರೆ.

ಎಮ್ಮೆ ಹಾಡು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮುಂತಾದ ಜನಪ್ರಿಯ ಹಾಡುಗಳೂ, ಅವರ ಹಲವು ಚಿತ್ರಗಳ ಸನ್ನಿವೇಶಗಳೂ ಚಿತ್ರಕಲಾ ಕೃತಿಗಳಲ್ಲಿ ಮೂಡಿಬಂದಿವೆ.

ಕಲಾವಿದರು ವಿವಿಧ ಮಾಧ್ಯಮಗಳಲ್ಲಿ ಚಿತ್ರಕೃತಿಗಳನ್ನು ಚಿತ್ರಿಸಿದ್ದಾರೆ. ಜಲವರ್ಣ, ತೈಲವರ್ಣದ ಜತೆಗೆ ಡಿಜಿಟಲ್ ಸ್ಪರ್ಶವೂ ಇಲ್ಲಿದೆ. ಕೆಲವು ಮಿಶ್ರಕಲೆಗಳೂ ಗಮನ ಸೆಳೆಯುವಂತಿವೆ.

ಜನರಿಂದಲೇ ಮೇಲೆ ಬಂದ ರಾಜ್‌ ಅವರ ಕೃತಿಗಳನ್ನು ಇನ್ನೊಮ್ಮೆ ಪ್ರದರ್ಶನ ಏರ್ಪಡಿಸಿ, ಜನರತ್ತ ಕೊಂಡೊಯ್ಯಲು ಅವನ್ನು ಡಾ.ರಾಜ್‌ಕುಮಾರ್ ನೆನಪಿನ ಟ್ರಸ್ಟ್‌ಗೆ ನೀಡುವ ಇರಾದೆ ‘ಅನಿಕೇತನ’ದ ಐ.ಎಂ. ವಿಠ್ಠಲಮೂರ್ತಿ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.