ಅಭಿಲಾಷ ಪಿ.ಎಸ್.
ಚಂದನವನದ ‘ಚಿನ್ನಾರಿಮುತ್ತ’ ವಿಜಯ ರಾಘವೇಂದ್ರ ‘ರಾಘು’
ಎಂಬ ವಿಭಿನ್ನವಾದ ಸಿನಿಮಾ ಮೂಲಕ ಪ್ರೇಕ್ಷಕರೆದುರಿಗೆ ಬಂದಿದ್ದಾರೆ. ಬಾಲಿವುಡ್‌ನಲ್ಲಿ ಈಗಾಗಲೇ ಪ್ರಯೋಗವಾದಂತಹ ‘ಸೋಲೊ ಆ್ಯಕ್ಟಿಂಗ್’(ಏಕ ವ್ಯಕ್ತಿ ನಟನೆ) ಇದೀಗ ಕಮರ್ಷಿಯಲ್ ರೂಪದಲ್ಲಿ ‘ರಾಘು’ ಸಿನಿಮಾ ಮೂಲಕ ಕನ್ನಡಕ್ಕೂ ಹೆಜ್ಜೆ ಇಟ್ಟಿದೆ. ಎಂ. ಆನಂದ್ ರಾಜ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಇಂದು(ಏ.28) ಈ ಸಿನಿಮಾ ತೆರೆಕಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣದ ಅನುಭವ ಹಾಗೂ ಪ್ರಯೋಗಾತ್ಮಕ ಚಿತ್ರಗಳ ಬಗ್ಗೆ ‘ಸಿನಿಮಾ ಪುರವಣಿ’ ಜೊತೆ ಮಾತಿಗಳಿದು ವಿಜಯ್ ಹೀಗಂದರು...
‘ನಿರ್ದೇಶಕರಾದ ಆನಂದ್ ಈ ಚಿತ್ರದ ಪರಿಕಲ್ಪನೆಯನ್ನು ಮುಂದಿಟ್ಟಾಗಲೇ ಇದು ಕಷ್ಟ ಹಾಗೂ ಸವಾಲಿನಿಂದ ಕೂಡಿದೆ ಎನ್ನಿಸಿತ್ತು. ಏಕೆಂದರೆ ಇಡೀ ಸಿನಿಮಾದಲ್ಲಿ ಒಬ್ಬನೇ ನಟನಿದ್ದಾಗ, ಸಿನಿಮಾ ಹೇಗೆ ತೂಗುತ್ತದೆ ಎನ್ನುವ ಪ್ರಶ್ನೆ ಮೂಡಿತ್ತು. ಕನ್ನಡ ಚಿತ್ರರಂಗ ಪ್ರಸ್ತುತ ಇರುವ ಸನ್ನಿವೇಶದಲ್ಲಿ, ಈಗಿನ ಜನ ಮೂರು ದೊಡ್ಡ ದೊಡ್ಡ ಹೀರೊಗಳಿದ್ದರೂ ಸಿನಿಮಾ ನೋಡುತ್ತಿಲ್ಲ. ಅಂತಹ ಸಂದರ್ಭದಲ್ಲಿ ಏಕವ್ಯಕ್ತಿ ಸಿನಿಮಾ ಮಾಡುವುದು ಸರಿಯೇ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡೆ. ಜನರ ಮನಃಸ್ಥಿತಿಯ ಬಗ್ಗೆ ನನಗೆ ಭಯ. ನಾನು ಹಿಂದೆಂದೂ ಈ ರೀತಿಯ ಪಾತ್ರ ಮಾಡಿಲ್ಲ. ಹೀಗಿರುವಾಗ ಅಂಜಿಕೆಯೇ ಹೆಚ್ಚಿತ್ತು. ಒಬ್ಬ ನಟನಾಗಿ ನನ್ನ ನಟನೆಯ ಮೇಲೆ ನನಗೆ ಧೈರ್ಯ, ವಿಶ್ವಾಸವಿದೆ. ಆದರೆ ಇಡೀ ಸಿನಿಮಾದಲ್ಲಿ ಒಬ್ಬನೇ ಇದ್ದರೆ ಜನ ನೋಡುತ್ತಾರೆಯೇ ಎನ್ನುವ ವಿಚಾರ ಕಾಡುತ್ತಿತ್ತು. ಈ ಭಯ, ಅಳುಕು ಚಿತ್ರೀಕರಣ ಆರಂಭವಾದ ಒಂದು ವಾರದಲ್ಲಿ ಬಗೆಹರಿಯಿತು’ ಎನ್ನುತ್ತಾರೆ ವಿಜಯ ರಾಘವೇಂದ್ರ.
‘ಮನರಂಜನೆ ಎಂಬ ಅಂಶ ಇಟ್ಟುಕೊಂಡು ನೋಡಿದರೆ ನಮ್ಮ ಕನ್ನಡ ಪ್ರೇಕ್ಷಕರಲ್ಲಿ ಬಗೆಬಗೆಯ ಆಸಕ್ತಿಗಳಿವೆ. ಪ್ರಯೋಗಾತ್ಮಕವಾಗಿ ನಾವು ನಮ್ಮ ಯೋಚನೆಗಳನ್ನು ಇಡಬಹುದೇ ವಿನಾ ಇಡೀ ಸಿನಿಮಾವನ್ನು ಬಾಲಿವುಡ್ ಮಟ್ಟಕ್ಕೆ ಪ್ರಯೋಗಕ್ಕೆ ಇಳಿಸಿದರೆ, ಅದನ್ನು ನೋಡುವ ತಾಳ್ಮೆ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಲ್ಲ. ಸದಭಿರುಚಿಯ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಪ್ರಯೋಗಾತ್ಮಕ ಚಿತ್ರಗಳು ಹಿಡಿಸುತ್ತವೆ. ನಮ್ಮ ವೀಕ್ಷಕರಲ್ಲಿ ಇಂಥ ತಾಳ್ಮೆ ಎಷ್ಟಿದೆ ಎನ್ನುವುದೇ ಪ್ರಶ್ನೆ. ಬಾಲಿವುಡ್‌ನ ‘ಕಾಸ್ಟ್‌ಅವೇ’ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ‘ರಾಘು’ ಈ ಮಾದರಿಯಲ್ಲಿ ಇರುತ್ತದೆಯೇ ಅಂದುಕೊಂಡರೆ ಆ ರೀತಿ ಇಲ್ಲ. ಇದೊಂದು ಆಸಕ್ತಿಕರ ಕ್ರೈಂ ಆ್ಯಕ್ಷನ್ ಥ್ರಿಲ್ಲರ್. ಇದರಲ್ಲಿ ಒಬ್ಬನನ್ನೇ ತೆರೆ ಮೇಲೆ ಹೇಗೆ ತೋರಿಸಿದ್ದಾರೆ ಎನ್ನುವುದೇ ಮುಖ್ಯ. ಇದು ತಂತ್ರಜ್ಞರೇ ತೆಗೆದುಕೊಂಡಿರುವ ಸವಾಲು. ಎದುರಿಗಿರುವ ಪಾತ್ರವನ್ನು ಕಲ್ಪನೆ ಮಾಡಿಕೊಂಡು, ಯಾವ ರೀತಿ ನಾನು ಪ್ರತಿಕ್ರಿಯೆ ನೀಡಿದರೆ ಕಥೆಗೆ ನ್ಯಾಯ ಸಿಗಲಿದೆ ಎನ್ನುವುದು ನಟನಾಗಿ ನನಗಿದ್ದ ಸವಾಲಾಗಿತ್ತು’ ಎಂದರು.
‘ಆನಂದ್ ರಾಜ್, ತಿಳಿವಳಿಕೆ ಇರುವ ತಂತ್ರಜ್ಞ. ತಮ್ಮ ವಿಚಾರದ ಮೇಲೆ ಅವರಿಗೆ ಹಿಡಿತವಿದೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ನಿರ್ಮಾಪಕರ ಬೆಂಬಲವಿತ್ತು. ಮಲ್ಟಿಸ್ಟಾರ್ ಸಿನಿಮಾ
ಗಳಿಗೇ ಬಂಡವಾಳ ಹೂಡಲು ನಿರ್ಮಾಪಕರು ಯೋಚಿಸುವ ಈ ಸಂದರ್ಭದಲ್ಲಿ, ‘ರಾಘು’ ಚಿತ್ರದ ನಿರ್ಮಾಪಕರು ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ಶ್ಲಾಘಿಸಿದರು ವಿಜಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.