ADVERTISEMENT

ಸಿನಿಮಾ ಸಂಸ್ಕೃತಿ ಪತ್ರಿಕೆಯ ಸಿನಿ ಸಮ್ಮಾನದ ಅಧ್ಯಾಯ: ಗಿರೀಶ್‌ ಕಾಸರವಳ್ಳಿ

ಪ್ರಜಾವಾಣಿ ವಿಶೇಷ
Published 27 ಏಪ್ರಿಲ್ 2023, 19:32 IST
Last Updated 27 ಏಪ್ರಿಲ್ 2023, 19:32 IST
ಗಿರೀಶ ಕಾಸರವಳ್ಳಿ
ಗಿರೀಶ ಕಾಸರವಳ್ಳಿ   

‘ಪ್ರಜಾವಾಣಿ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರುವಾಗಿದೆ. 2022ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಸಿನಿಮಾಗಳನ್ನು, ಚಿತ್ರರಂಗದ ಪ್ರತಿಭೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅದಾಗಲೇ ನಡೆಯುತ್ತಿದೆ. ಮೂರು ಸ್ತರದ ಪಾರದರ್ಶಕ ಪ್ರಕ್ರಿಯೆ ಇದಾಗಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಮುಖ್ಯ ತೀರ್ಪುಗಾರರ ಸಮಿತಿಯ ಅಧ್ಯಕ್ಷರು. ಇಂದು ಸಂಜೆ (ಏ.28) ಈ ಪ್ರಶಸ್ತಿಯ ಟ್ರೋಫಿ ಅನಾವರಣಗೊಳ್ಳಲಿದೆ. ‘ಪ್ರಜಾವಾಣಿ’ಗೂ ಚಲನಚಿತ್ರ ರಂಗಕ್ಕೂ ಇರುವ ಸಾಂಸ್ಕೃತಿಕ ಸಂಬಂಧದ ಕುರಿತು ಗಿರೀಶ ಕಾಸರವಳ್ಳಿ ‘ಸಿನಿಮಾ ಪುರವಣಿ’ ಜತೆಗೆ ಮಾತನಾಡಿದ್ದಾರೆ.

‘ಚಲನಚಿತ್ರ ರಂಗವು ಮದ್ರಾಸ್‌ನಲ್ಲಿ ನೆಲೆಗೊಂಡಿದ್ದಾಗ ಅಲ್ಲಿನ ಚಟುವಟಿಕೆಗಳನ್ನು ‘ಪ್ರಜಾವಾಣಿ’ ಆಸ್ಥೆಯಿಂದ ವರದಿ ಮಾಡುತ್ತಿತ್ತು. ಆಮೇಲೆ ರಾಮಕೃಷ್ಣ ಹೆಗಡೆ ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ನೀಡುವ ಪರಿಪಾಟ ಪ್ರಾರಂಭಿಸಿದ ಮೇಲೆ ಸಿನಿಮಾ ಚಟುವಟಿಕೆ ಬೆಂಗಳೂರಿನಲ್ಲಿ ಗಟ್ಟಿಗೊಳ್ಳಲಾರಂಭಿಸಿತು. ಇವೆಲ್ಲವನ್ನೂ ‘ಪ್ರಜಾವಾಣಿ’ ಅಚ್ಚುಕಟ್ಟಾಗಿ ದಾಖಲಿಸುತ್ತಾ ಬಂದಿದೆ. ಕನ್ನಡ ಸಿನಿಮಾ ಬೆಳವಣಿಗೆಗೆ ಪತ್ರಿಕೆಯ ಕೊಡುಗೆ ಬಹಳ ದೊಡ್ಡದು’ ಎನ್ನುವುದು ಅವರ ಮೊದಲ ನುಡಿ.

‘ಬಹುತೇಕ ಮಾಧ್ಯಮಗಳು ಸಿನಿಮಾ ಉದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ವರದಿ ಮಾಡುವುದು ಸಹಜ. ಆದರೆ, ‘ಪ್ರಜಾವಾಣಿ’ ಕಲಾಪ್ರಕಾರವಾಗಿಯೂ ಚಲನಚಿತ್ರವನ್ನು ಸೂಕ್ಷ್ಮವಾಗಿ ದಾಖಲಿಸಿದೆ. ಹೀಗಾಗಿಯೇ 1960–70ರ ದಶಕಗಳಲ್ಲಿ ಹೊಸ ಅಲೆಯ ಚಿತ್ರಗಳನ್ನೂ ಜನಪ್ರಿಯವಾಗಿಸುವಲ್ಲಿ ಪತ್ರಿಕೆಯ ಕಾಣ್ಕೆ ಮುಖ್ಯವಾಯಿತು’ ಎಂದು ಅವರು ನೆನಪಿಸಿಕೊಂಡರು.

ADVERTISEMENT

‘ವ್ಯಕ್ತಿ ಕೇಂದ್ರಿತ ಉದ್ಯಮದಿಂದ ವಸ್ತು ಕೇಂದ್ರಿತ ಕಲಾಪ್ರಕಾರವಾಗಿ ಪರಿಭಾವಿಸಿ ‘ಪ್ರಜಾವಾಣಿ’ ಚಲನಚಿತ್ರಗಳನ್ನು ದಾಖಲಿಸುತ್ತಾ ಬಂದಿದ್ದು, ಇಲ್ಲಿನ ವಿಮರ್ಶೆಗಳನ್ನು ಆಧರಿಸಿ ಗುಣಾವಗುಣಗಳ ಚರ್ಚೆ ನಡೆಯುತ್ತದೆ. ಇದು ಪತ್ರಿಕೆಯ ಇನ್ನೊಂದು ಕಾಣ್ಕೆ’ ಎಂದು ಶ್ಲಾಘಿಸಿದರು.

ಇಂತಹ ಗಂಭೀರ ಧೋರಣೆಯ ಮುಂದುವರಿದ ಭಾಗವೇ ‘ಸಿನಿ ಸಮ್ಮಾನ’. ಸರ್ಕಾರ ಅಥವಾ ಕೆಲವು ಸಂಘ–ಸಂಸ್ಥೆಗಳು ಕೊಡುವ ಪ್ರಶಸ್ತಿಗಳಿಗೆ ಇರುವ ಮಾನದಂಡವೇ ಬೇರೆ. ಚಿತ್ರೋದ್ಯಮದ ಎಲ್ಲರ ಸಹಕಾರ, ಸಹಭಾಗಿತ್ವ ಪಡೆದು ಮೂರು ಸ್ತರದಲ್ಲಿ ಪರಿಣಾಮಕಾರಿ ನಿಷ್ಕರ್ಷೆಗೆ ಒಳಪಡಿಸಿ ‘ಪ್ರಜಾವಾಣಿ ಸಿನಿ ಸಮ್ಮಾನ’ಕ್ಕೆ ಅರ್ಹರನ್ನು ಆಯ್ಕೆ ಮಾಡುತ್ತಿರುವುದಕ್ಕೆ ಗಿರೀಶ ಕಾಸರವಳ್ಳಿ ಮಾತಿನಲ್ಲಿ ಅಡಿಗೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.