ADVERTISEMENT

ಸಿನಿಮಾ ವಿಮರ್ಶೆ | ಹವಾಲಾ ಹಣದ ಸುತ್ತಲಿನ ಕಥೆ ‘13’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 13:08 IST
Last Updated 17 ಸೆಪ್ಟೆಂಬರ್ 2023, 13:08 IST
ರಾಘವೇಂದ್ರ ರಾಜ್‌ಕುಮಾರ್‌
ರಾಘವೇಂದ್ರ ರಾಜ್‌ಕುಮಾರ್‌   

ಚಿತ್ರ: 13

ನಿರ್ದೇಶನ:  ಕೆ.ನರೇಂದ್ರಬಾಬು

ನಿರ್ಮಾಣ: ಯುವಿ ಪ್ರೊಡಕ್ಷನ್ 

ADVERTISEMENT

ತಾರಾಗಣ: ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್‌ ಶೆಟ್ಟಿ ಮತ್ತಿತ್ತರು.

ಹವಾಲಾ ಹಣ ಸಾಗಿಸುವ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ, ತನ್ನ ಮಾಲೀಕನಿಗೆ ವಂಚಿಸಲೆಂದು ₹13 ಕೋಟಿ ಹಣವಿರುವ ಸೂಟ್‌ಕೇಸ್‌ನ್ನು ಹುಲ್ಲಿನ ಪೊದೆಯಲ್ಲಿ ಎಸೆದು ಹೋಗುತ್ತಾನೆ. ಪೊಲೀಸರು ಆತನನ್ನು ಹಿಡಿದು ವಿಚಾರಣೆಗೊಳಪಡಿಸುತ್ತಾರೆ. ಆದರೆ ಹಣ ಇಟ್ಟ ಜಾಗದಲ್ಲಿ ಇರುವುದಿಲ್ಲ. ಕಳೆದುಕೊಂಡ ಹಣ ಮರಳಿ ಸಿಗುತ್ತದೆಯೋ ಇಲ್ಲವೋ ಎಂಬುದೇ ‘13’ ಚಿತ್ರದ ಕಥೆ. 

ರಾಘವೇಂದ್ರ ರಾಜ್‌ಕುಮಾರ್‌ ಗುಜರಿ ಅಂಗಡಿ ಮಾಲೀಕ ಮೋಹನ್‌ ಕುಮಾರನಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಮೋಹನ್‌ ಕುಮಾರನ ಪತ್ನಿ ಸಾಯಿರಾ ಆಗಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯಾಗಿ ಕಾಣಿಸಿಕೊಂಡಿರುವ ಶ್ರುತಿ ಟೀ ಅಂಗಡಿ ನಡೆಸುತ್ತಿರುತ್ತಾರೆ. ಪಕ್ಕದಲ್ಲಿಯೇ ಆಕೆಯ ಪತಿಯ ಗುಜರಿ ಅಂಗಡಿ. ಅದರ ಹಿಂದೆಯೇ ಚಿಕ್ಕ ಮನೆ. ಎಲ್ಲಿಯೂ ಇವರಿಬ್ಬರದ್ದು ಬೇರೆ ಧರ್ಮವೆಂಬ ಎಳೆಯೂ ಕಾಣಿಸಿದಷ್ಟು ಸೊಗಸಾಗಿ ನಿರ್ದೇಶಕರು ಇವರಿಬ್ಬರನ್ನು ತೋರಿಸಿದ್ದಾರೆ.

ಮುಸ್ಲಿಂ ಮಹಿಳೆಯಾಗಿ ಶ್ರುತಿ ನಟನೆ ಅದ್ಭುತವಾಗಿದೆ. ಹೆಚ್ಚು ವ್ಯವಹಾರ ಜ್ಞಾನವಿಲ್ಲದ, ಮುಗ್ಧ ಮಹಿಳೆಯಾಗಿ ಅವರು ಬಹಳ ಇಷ್ಟವಾಗುತ್ತಾರೆ. ಅವರ ಮಾತುಗಳು ಸಾಕಷ್ಟು ಕಡೆ ಸಹಜವಾಗಿ ನಗು ತರಿಸುತ್ತದೆ. ಇಂತಹ ಮಹಿಳೆಗೆ ಎಸೆದುಹೋದ ₹13 ಕೋಟಿ ಹವಾಲಾ ಹಣ ಸಿಗುತ್ತದೆ. ಚಿತ್ರದ ಮೊದಲರ್ಧ ನಿಧಾನವಾಗಿ, ಸಾಮಾನ್ಯ ಕಥೆಯಾಗಿ ಸಾಗುತ್ತದೆ.

ಲಂಚಕೋರ ಇನ್‌ಸ್ಪೆಕ್ಟರ್‌ ಆಗಿ, ಹವಾಲಾ ಮಂದಿಗೆ ಸಹಾಯ ಮಾಡುವ ಋಣಾತ್ಮಕ ಪಾತ್ರದಲ್ಲಿ ಪ್ರಮೋದ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ತುಸು ಹಾಸ್ಯವನ್ನೂ ಹೊಂದಿರುವ ಪಾತ್ರಕ್ಕೆ ಪ್ರಮೋದ್‌ ಶೆಟ್ಟಿ ನ್ಯಾಯ ಒದಗಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಅವರದ್ದು ಸಮಾಧಾನಿ, ಬುದ್ಧಿವಂತನ ಪಾತ್ರ. 

ಸಿನಿಮಾದ ದ್ವಿತೀಯಾರ್ಧದಲ್ಲಿ ಒಂದಷ್ಟು ಟ್ವಿಸ್ಟ್‌, ಕುತೂಹಲ ಕಾಣಿಸುತ್ತದೆ. ಶ್ರುತಿ, ಮೋಹನ್‌ಗೆ ಸಿಕ್ಕ ಹಣ ಅಂತಿಮವಾಗಿ ಯಾರಿಗೆ ಸೇರುತ್ತದೆ ಎಂಬುದರತ್ತ ಕಥೆ ಹೊರಳುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯಾಗಿರುವುದರಿಂದ ಕಥೆಯ ನಿರೂಪಣೆಯನ್ನು ರೋಚಕವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಸಂಗೀತ ಇನ್ನಷ್ಟು ಉತ್ತಮವಾಗಬಹುದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.