ಚಿತ್ರ : ಆಡೇ ನಮ್ ಗಾಡ್
ನಿರ್ಮಾಣ: ಪ್ರೊ. ಬಿ. ಬಸವರಾಜ್ ರೇಣುಕಾ ಬಸವರಾಜ್
ನಿರ್ದೇಶನ: ಪಿ. ಎಚ್. ವಿಶ್ವನಾಥ್
ತಾರಾಗಣ: ನಟರಾಜ್ ಮಂಜುನಾಥ್ ಜಂಬೆ ಅಜಿತ್ ಬೊಪ್ಪನಹಳ್ಳಿ ಬಿ. ಸುರೇಶ್ ಸಾರಿಕಾ ರಾವ್ ಅನೂಪ್ ಶೂನ್ಯ.
ಕವಿ ಸಿದ್ಧಲಿಂಗಯ್ಯನವರ ‘ಕತ್ತೆ ಮತ್ತು ಧರ್ಮ’ ಕವನದ ವಸ್ತು ನೆನಪಿಸಿಕೊಳ್ಳೋಣ. ಕತ್ತೆಯೊಂದರ ಸಮಾಧಿ ಧರ್ಮಕ್ಷೇತ್ರವಾಗಿ ಬದಲಾಗುವ ವ್ಯಂಗ್ಯವನ್ನು ಅವರು ಕಾವ್ಯಶಿಲ್ಪದಲ್ಲಿ ಕಟ್ಟಿದ್ದರು. ನಿರ್ದೇಶಕ ಪಿ.ಎಚ್. ವಿಶ್ವನಾಥ್ ಕೂಡ ಅಂಥದ್ದೇ ವಸ್ತುವನ್ನು ಹೊಸಕಾಲದ ನೆಲೆಗಟ್ಟಿನಲ್ಲಿ ಸಿನಿಮಾ ಆಗಿಸಿದ್ದಾರೆ. ಅಲ್ಲಿ ಕತ್ತೆಯ ಸಮಾಧಿ ಇದ್ದರೆ, ಇಲ್ಲಿ ಬದುಕಿರುವ ಆಡು ಇದೆ. ಅದು ದೇವರಾಗಿ ಬದಲಾಗುವ ಪರಿಯನ್ನು ವ್ಯಂಗ್ಯದ ಚೌಕಟ್ಟಿನಲ್ಲಿ ಇಡುವ ಉಮೇದು ಅವರದ್ದು. ಗಂಭೀರವಾದ ವಿಷಯವನ್ನು ಹಾಸ್ಯದ ಧಾಟಿಯಲ್ಲಿ ಹೇಳುವುದು ತುಂಬ ಕಷ್ಟ. ಈ ಸಿನಿಮಾ ವಿಷಯದಲ್ಲೂ ಹಾಗೆಯೇ ಆಗಿದೆ.
ಆಡು ಆಕಸ್ಮಿಕವಾಗಿ ಗಾಡ್ ಆಗುವ ಪ್ರಕ್ರಿಯೆ ಅತಿ ಸಿನಿಮೀಯವಾಗಿದೆ. ಇದೊಂದು ಎಳೆಯನ್ನು ಬೆಳೆಸುವ ಹಟಕ್ಕೆ ಚಿತ್ರಕತೆ ಒಳಗಾಗಿದ್ದು, ಹಾರುತ್ತಾ ಸಾಗುವ ಪಟ ಸೂತ್ರ ಹರಿದುಕೊಂಡು ಸಾಗತೊಡಗುವಂತೆ ಭಾಸವಾಗುತ್ತದೆ.
ಆಡಿನ ದೇವಸ್ಥಾನ ಕಟ್ಟುವುದು ಹಾಗೂ ಅದೇ ರಿಯಲ್ ಎಸ್ಟೇಟ್ ಲಾಬಿಯಾಗಿ ಬದಲಾಗುವುದರ ನಡುವಿನ ತಂತು ಸಿನಿಮೀಯ ತರ್ಕಕ್ಕೂ ಹೊರತಾಗಿದೆ. ಕಾಲಕ್ಕೆ ತಕ್ಕಂತೆ ಅನುಕೂಲಸಿಂಧು ಆಗುವ ಮಾತಾ ಎಂಬ ಪಾತ್ರದ ಬರವಣಿಗೆಯಲ್ಲೂ ಸ್ಥಿರತೆ ಇಲ್ಲ. ಆ ಪಾತ್ರ ಕೆಲವೊಮ್ಮೆ ಸಂತ್ರಸ್ತೆ ತರಹ ಕಂಡರೆ, ಕೆಲವೊಮ್ಮೆ ದಗಲಬಾಜಿ ರೀತಿ ವರ್ತಿಸುತ್ತದೆ. ಆಡನ್ನು ದೇವರಾಗಿಸುವ ವಿದ್ಯಮಾನಗಳ ಕಟ್ಟು ಕೂಡ ಬಹುತೇಕ ಕಡೆ ಸಡಿಲವಾಗಿದೆ.
ನಟರಾಜ್, ಮಂಜುನಾಥ್ ಜಂಬೆ, ಅಜಿತ್, ಅನೂಪ್ ಅಭಿನಯ ಚೆನ್ನಾಗಿದೆ. ಬಿ. ಸುರೇಶ್ ಅವರೂ ಮುಖ್ಯವಾದ ಗೋಸುಂಬೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಕಡೆ ಮಾತೇ ಮುಂದಾಗಿ, ಘಟಿಸುವ ಬೆಳವಣಿಗೆಗಳ ದರ್ಶನ ಸಾವಧಾನಕ್ಕೆ ಬೆನ್ನುಮಾಡಿದೆ.
ಧರ್ಮಸೂಕ್ಷ್ಮದ ಸಿನಿಮಾ ಒಂದಕ್ಕೆ ‘ಟ್ರಾನ್ಸ್’ ಮಲಯಾಳ ಚಿತ್ರ ಒಳ್ಳೆಯ ಉದಾಹರಣೆ. ದೈವ ಹಾಗೂ ಮುಗ್ಧತೆಯ ಮುಖಾಮುಖಿಗೆ ‘ಪೀಕೆ’ ಹಿಂದಿ ಚಿತ್ರ ಇನ್ನೊಂದು ಮಾದರಿ. ಈ ಯಾವ ಜಾಯಮಾನವೂ ಇಲ್ಲದ ಆಡಿನ ಗಾಡು, ಏರಿಳಿತ ದರ್ಶನದ ಹಾಸ್ಯ ಚಿತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.