ಹೈದರಾಬಾದ್: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ‘ ಇಂದು (ಜೂನ್ 16) ತೆರೆಗೆ ಬಂದಿದೆ.
ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಹುಟ್ಟಿಸಿದ್ದ ಹಾಗೂ ಕಳಪೆ ವಿಎಫ್‌ಎಕ್ಸ್, ಇತರೆ ವಿವಾದಾತ್ಮಕ ವಿಷಯಗಳಿಂದ ಚರ್ಚೆಯಲ್ಲಿದ್ದ ಈ ಸಿನಿಮಾ ಜಾಗತಿಕವಾಗಿ 7000 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.
ಚಿತ್ರಕ್ಕೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾದರೂ, ಹಲವರು ಚಿತ್ರ ಚೆನ್ನಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.
ರಾಮಾಯಣದ ಸೀತಾಪಹರಣದ ಕಥೆಯನ್ನು ಇದು ಹೊಂದಿದ್ದು, ಅದನ್ನೇ ವಿಎಫ್‌ಎಕ್ಸ್ ಬಳಸಿ 3ಡಿಯಲ್ಲಿ ಹಾಲಿವುಡ್ ಚಿತ್ರಗಳ ಮಟ್ಟಿಗೆ ತೋರಿಸಲಾಗಿದೆ ಎಂದಿದ್ದಾರೆ. ‘ಹಳೆ ಕಥೆಯನ್ನು ಆಧುನಿಕವಾಗಿ ಮನಮುಟ್ಟಿಸುವ ಕೆಲಸವೇ ಆದಿಪುರುಷ’ ಎಂದು ಹೇಳಲಾಗಿದೆ.
ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಅಭಿನಯಿಸಿರುವ ಪ್ರಭಾಸ್ ಹಾಗೂ ರಾವಣ ಪಾತ್ರದಲ್ಲಿ ಅಭಿನಯಿಸಿರುವ ಸೈಫ್ ಅಲಿಖಾನ್ ಅವರ ಪಾತ್ರಗಳಿಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ರಾಮ ಹೀಗಿರಬಾರದಿತ್ತು ಎಂದಿದ್ದರೇ, ರಾವಣನ ಪಾತ್ರಕ್ಕೆ ವಿಪರೀತ ತಾಂತ್ರಿಕ ಅಂಶಗಳನ್ನು ಬೆರಸಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಕೆಲವೊಂದು ವಿಎಫ್ಎಕ್ಸ್ ಸನ್ನಿವೇಶಗಳು ಇನ್ನೂ ನಗೆಪಾಟಲಿಗೆ ಈಡಾಗುತ್ತವೆ ಎಂದಿದ್ದಾರೆ.
ಮೈನವಿರೇಳಿಸುವ ದೃಶ್ಯಗಳೊಂದಿಗೆ ರಾಮ ತನ್ನ ವಾನರ ಸೇನೆಯೊಂದಿಗೆ ಲಂಕೆಗೆ ನುಗ್ಗಿ ಸೀತೆಯನ್ನು ರಕ್ಷಿಸಿ ಕರೆತರುವುದು ಆ ಮೂಲಕ ಒಳ್ಳೆಯದ್ದು ಗೆಲ್ಲುತ್ತೆ, ಕೆಟ್ಟದ್ದು ಸೋಲುತ್ತೆ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಟ್ವಿಟರ್ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದಿಪುರುಷ ಸಿನಿಮಾವು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ತೆರೆ ಕಂಡಿದೆ.
ಓಂ ರಾವತ್ ನಿರ್ದೇಶಿಸಿರುವ ‘ಆದಿಪುರುಷ‘ ಸಿನಿಮಾವು ಬಿಗ್ ಬಜೆಟ್ ಚಿತ್ರವಾಗಿದ್ದು, ಪ್ರಭಾಸ್, ಸೈಫ್ ಜೊತೆ ನಟಿ ಕೃತಿ ಸನೋನ್, ಸನ್ನಿ ಸಿಂಗ್ , ದೇವ ದತ್ತ ನಾಗೆ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.