ADVERTISEMENT

ಸಿನಿಮಾ ವಿಮರ್ಶೆ: ತೊಳಲಾಟದ ನಡುವೆ ‘ಶೋಕಿವಾಲ’ನ ಕಾಲಹರಣ

ಶರತ್‌ ಹೆಗ್ಡೆ
Published 29 ಏಪ್ರಿಲ್ 2022, 10:09 IST
Last Updated 29 ಏಪ್ರಿಲ್ 2022, 10:09 IST
ಅಜಯ್‌ ರಾವ್‌, ಸಂಜನಾ ಆನಂದ್‌
ಅಜಯ್‌ ರಾವ್‌, ಸಂಜನಾ ಆನಂದ್‌   

ಚಿತ್ರ: ಶೋಕಿವಾಲ
ನಿರ್ದೇಶನ: ಜಾಕಿ (ಬಿ.ತಿಮ್ಮೇಗೌಡ)
ನಿರ್ಮಾಪಕರು: ಡಾ.ಟಿ.ಆರ್‌.ಚಂದ್ರಶೇಖರ್‌
ಸಂಗೀತ: ಶ್ರೀಧರ್‌ ವಿ. ಸಂಭ್ರಮ್‌
ತಾರಾಗಣ: ಅಜಯ್‌ ರಾವ್‌, ಸಂಜನಾ ಆನಂದ್‌, ಶರತ್‌ ಲೋಹಿತಾಶ್ವ, ಪ್ರಮೋದ್‌ ಶೆಟ್ಟಿ, ತಬಲಾ ನಾಣಿ, ಅರುಣಾ ಬಾಲರಾಜ್‌

***

ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕಥೆ ಗಟ್ಟಿಯಾಗಿರುತ್ತದೆ ಅಥವಾ ಗಟ್ಟಿಯಾಗಿರಬೇಕು ಎಂಬ ನಿಯಮ ಇಲ್ಲ. ಆದರೆ, ಕೊನೇ ಪಕ್ಷ ನಗಿಸುವುದರಲ್ಲಾದರೂ ಗಟ್ಟಿಯಾಗಿರಬೇಕು. ಅಥವಾ ಹಾಸ್ಯದೊಳಗೆ ಗಂಭೀರ ವಸ್ತುವೊಂದನ್ನಾದರೂ ಪ್ರಸ್ತುತಪಡಿಸಬೇಕು. ಅದ್ಯಾವುದೂ ಆಗದಿದ್ದರೆ...?

ADVERTISEMENT

‘ಶೋಕಿವಾಲ’ನನ್ನು ನೋಡುವಾಗ ಪ್ರೇಕ್ಷಕ ಹೀಗೆ ಪ್ರಶ್ನಿಸಿಕೊಂಡೇ ಹೊರಬರುತ್ತಾನೆ. ಅಜಯ್‌ ರಾವ್‌ ಅವರನ್ನು ‘ಶೋಕಿವಾಲ’ನನ್ನಾಗಿಸಿ ಪ್ರಯೋಗ ಮಾಡಲಾಗಿದೆ. ಅಜಯ್‌ ರಾವ್‌ ಅತ್ತ ಕಾಮೆಡಿಯನ್ನೂ ಅಲ್ಲ, ಇತ್ತ ಲವ್ವರ್‌ಬಾಯ್‌ಯೂ ಅಲ್ಲ ಎಂಬಂತಾಗಿ ತೊಳಲಾಡಿಬಿಟ್ಟಿದ್ದಾರೆ.

ಮಂಡ್ಯದ ಹಳ್ಳಿಯೊಂದರಲ್ಲಿ ನಡೆಯುವ ಕಥೆ. ಊರು, ಊರಿಗೊಬ್ಬರು ಗೌಡರು, ಗೌಡರಿಗೊಬ್ಬರು ಮಗಳು, ಮಗಳಿಗೆ ಕಾಳು ಹಾಕುವ ಶೋಕಿವಾಲ ಕೃಷ್ಣ.ನಾಯಕನ ಮಾಮೂಲು ಸಂಭಾಷಣೆಗೇ ಮರುಳಾಗಿ ಅವನನ್ನು ಪ್ರೀತಿಸುವ ನಾಯಕಿ ರಾಧಾ (ಸಂಜನಾ ಆನಂದ್‌). ಮಧ್ಯೆ ಒಂದಿಷ್ಟು ಸೆಂಟಿಮೆಂಟ್‌ಗಾಗಿ ಪ್ರೀತಿ, ಸ್ನೇಹ... ಅನ್ನುವ ಉಪದೇಶಗಳು. ದೇವಸ್ಥಾನದ ಮುಂದೆ ‘ಗಾಂಧರ್ವ ವಿವಾಹ’ವಾಗುವ ನಾಯಕ ಶೋಕಿವಾಲ.ಈ ವಿಷಯದಲ್ಲೇ ಒಂದಿಷ್ಟು ತೀರಾ ಕ್ಷುಲ್ಲಕವೆನಿಸುವ ಜಗಳಗಳು.ಅದಕ್ಕೊಂದಿಷ್ಟು ಹೊಡೆದಾಟಗಳು. ಮೊದಲ ರಾತ್ರಿಗಾಗಿ ಕಾಯುವ ಪಡಿಪಾಟಲು, ಪೊಲೀಸ್‌ ಠಾಣೆಯಲ್ಲೇ ನಡೆಯುವ ಕುಟುಂಬ ಪ್ರಹಸನ. ಪೆಕರಾಗಿಬಿಡುವ ಪೊಲೀಸ್‌ ಇನ್ಸ್‌ಪೆಕ್ಟರ್‌, ಆ್ಯಂಟಿ ಹೀರೊ ಪಾತ್ರವೇ, ‘ನಾನು ನಾಯಕನಿಗೆ ಸಹಾಯ ಮಾಡುತ್ತಿದ್ದೆ’ ಎನ್ನುವ ಹೇಳಿಕೆ..., ‘ಸತ್ತ’ ನಾಯಕ, ನಾಯಕಿ ಪೊಲೀಸರ ಮನೆಯಲ್ಲೇ ಪ್ರತ್ಯಕ್ಷ. ಅಷ್ಟರಲ್ಲಿ ಪ್ರೇಕ್ಷಕನ ಜಾಗ ಖಾಲಿ. ಮತ್ತೆ 10 ನಿಮಿಷ ಫ್ಲಾಷ್‌ಬ್ಯಾಕ್‌ ಕಥೆ ಹೇಳುತ್ತಾ ಹಾಗೂ ಹೀಗೂ ಸಿನಿಮಾ ಮುಗಿಯುತ್ತದೆ.

ತಬಲಾ ನಾಣಿ ಅವರ ಒಂದು ಪ್ರವೇಶ ಸ್ವಲ್ಪ ನಗು ತರಿಸುತ್ತದೆ. ಪಂಚ್‌ ಮಾಡಬಹುದಾದ ಸನ್ನಿವೇಶಗಳೇ ತುಂಬಾ ಗಂಭೀರವಾಗಿಬಿಟ್ಟಿವೆ. ಸಂಭಾಷಣೆಗಳನ್ನಾದರೂ ಒಂದಿಷ್ಟು ಹದಗೊಳಿಸಿ ಪ್ರಸ್ತುತಪಡಿಸಬೇಕಿತ್ತು ಎನಿಸುತ್ತದೆ. ಪ್ರಬುದ್ಧ ಕಲಾವಿದರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿತ್ತು. ಕಥೆ ಕುತೂಹಲ ಉಳಿಸಿಕೊಳ್ಳುವುದಿಲ್ಲ. ಮುಕ್ತಾಯಕ್ಕೆ ಸುಮಾರು ಅರ್ಧಗಂಟೆ ಮುನ್ನ ಸ್ವಲ್ಪ ವೇಗ ಪಡೆದುಕೊಂಡಿದೆ ಅಷ್ಟೆ.

ನಿರ್ದೇಶಕರಿಗೆ ಇದು ಮೊದಲ ಸಿನಿಮಾ. ಹಾಗಾಗಿ ಇದೊಂದು ಪ್ರಯೋಗ ಎಂದಷ್ಟೇ ನೋಡಬಹುದು. ಸಂಗೀತ ಪರವಾಗಿಲ್ಲ. ಛಾಯಾಗ್ರಹಣ ಚೆನ್ನಾಗಿದೆ. ತಾಂತ್ರಿಕವಾಗಿ ಗುಣಮಟ್ಟ ಕಾಯ್ದುಕೊಂಡಿದೆ. ನೃತ್ಯ, ವರ್ಣ ಚಿತ್ತಾರಗಳು ಕೆಲ ನಿಮಿಷ ಕಣ್ಣಿಗೆ ಹಿತ ಕೊಡುತ್ತವೆ. ರೆಟ್ರೋ ಚಿತ್ರಗಳಲ್ಲೇ ಕಂಡುಬರುತ್ತಿದ್ದ ವಿಷಯವನ್ನೇ ತಾಂತ್ರಿಕವಾಗಿ ಉನ್ನತಗೊಳಿಸಿ ಒಂದು ಪ್ರಹಸನವನ್ನು ತೆರೆಯ ಮೇಲೆ ಮೂಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.