ಸಿನಿಮಾ: ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ (ಕನ್ನಡ)
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಪಕ: ಪುಷ್ಕರ ಮಲ್ಲಿಕಾರ್ಜುನಯ್ಯ
ತಾರಾಗಣ: ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಸುಧಾರಾಣಿ, ಭವ್ಯಾ, ಸಾಧುಕೋಕಿಲ, ಶ್ರೀನಗರ ಕಿಟ್ಟಿ
ಸಿಂಪಲ್ ಕಥೆಗೆ ಸಖತ್ ಡೈಲಾಗ್ಸ್ ಬರೆದು ಹೀರೊ ಮೂಲಕ ತೆರೆ ಮೇಲೆ ಚಮಕ್ ಕೊಡ್ತಿದ್ದ ನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಪ್ರಯೋಗದಂತೆ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಪ್ರೇಕ್ಷಕರೆದುರಿಗೆ ಬಂದಿದೆ. ಪೌರಾಣಿಕ ಕಥೆಯ ಎಳೆಯನ್ನು ಹಿಡಿದು ಮಾಟ, ಮಂತ್ರ, ವಾಮಾಚಾರವೆಂಬ ಅಗ್ನಿಗೆ ಕಾಮಿಡಿಯೆಂಬ ಕಲ್ಲುಪ್ಪು ಹಾಕಿ ಸಿಡಿಸಿದ್ದಾರೆ ಸುನಿ. ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್, ನಟಿ ಆಶಿಕಾ ರಂಗನಾಥ್ ಪಕ್ಕದಲ್ಲಿ ಕುಳಿತು ಇದಕ್ಕೆ ಸಾಥ್ ನೀಡಿದ್ದಾರೆ. ಇಲ್ಲಿ ‘ಅಗ್ನಿ’ ಸದ್ಯಕ್ಕೆ ಶಾಂತವಾಗಿದೆ, ಹಾಸ್ಯ ಹದವಾಗಿ ಹರಡಿದೆ.
ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ನಾನಾವತಾರಗಳನ್ನು ಎತ್ತಿ ಅನಿಲ(ಶರಣ್) ಜೀವನ ನಡೆಸುತ್ತಿರುತ್ತಾನೆ. ಇತ್ತ ಸಣ್ಣ ಪ್ರಾಯದಲ್ಲೇ ಮಗ ಕಾಣೆಯಾದ ದುಃಖದಲ್ಲಿ ರಾಮ ಜೊಯೀಸ್(ಸಾಯಿಕುಮಾರ್) ಹಾಗೂ ಸುಶೀಲ(ಭವ್ಯಾ) ದಂಪತಿ. ಅನಿಲನಿಗೆ ನಿಜಜೀವನದಲ್ಲಿ ಈ ದಂಪತಿಯ ಮಗ ಕರ್ಣನಾಗಿ ನಟನೆ ಮಾಡುವ ಅವಕಾಶ ಸಿಗುತ್ತದೆ. ಈ ನಟನೆಗೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕಿ ಫಾರಿನ್ ರಿಟರ್ನ್ ಹುಡುಗಿ ಸಿರಿ(ಆಶಿಕಾ ರಂಗನಾಥ್). ಸಿರಿ, ರಾಮಜೊಯೀಸರ ತಂಗಿಯ ಮಗಳು. ಕರ್ಣ ಕಾಣೆಯಾಗಲು ತಂಗಿಯೇ ಕಾರಣ. ಹೀಗಾಗಿ ಅನಿಲನ ಮೂಲಕ ಒಡೆದ ಸಂಬಂಧವನ್ನು ಮತ್ತೆ ಜೋಡಿಸುವ ತಂತ್ರ ಸಿರಿಯದ್ದು. ಈ ಎಲ್ಲ ಘಟನೆಗಳ ನಡುವೆ ಅಷ್ಟದಿಗ್ಬಂಧನ ಹಾಕಿ ಇಟ್ಟಿದ್ದ ಶ್ರಿಶಂಕು ಮಣಿ ಪಡೆಯಲು ನಡೆಯುವ ಮಾಟಗಾರರ ಮಾಟ, ವಾಮಾಚಾರದ ಸರಣಿ. ಈ ಮಣಿಗೂ ರಾಮ ಜೊಯೀಸರ ಮನೆ, ಅನಿಲ ಹಾಗೂ ಉಳಿದ ಪಾತ್ರಗಳಿಗೆ ಇರುವ ಸಂಬಂಧ ಚಿತ್ರದ ಮೊದಲ ಭಾಗದ ಕಥೆ. ಕಥೆಯ ಅಂತ್ಯದ ತಿರುವು ಎರಡನೇ ಭಾಗ ‘ತ್ರಿಶಂಕುಮಣಿ ಪಯಣ’ಕ್ಕೆ ದಾರಿ. ಮಾಟ, ವಾಮಾಚಾರವೆಲ್ಲ ಮೂಢನಂಬಿಕೆ ಎನ್ನುವ ಈ ಕಾಲದಲ್ಲಿ ಇವೆಲ್ಲ ಈ ಸಿನಿಮಾದಲ್ಲಿ ಕೆಲಸ ಮಾಡುತ್ತವೆ. ಆದರೆ ಪ್ರೇಕ್ಷಕನ ವಶೀಕರಣಕ್ಕೆ ಅಧ್ಯಕ್ಷನ ಕಾಮಿಡಿ ಇನ್ನೊಂದಿಷ್ಟು ಬೇಕಾಗಿತ್ತು.
ಕಥೆಯ ಎಳೆ ಫ್ಲ್ಯಾಶ್‌ಬ್ಯಾಕ್‌ನಿಂದ ಆರಂಭವಾಗುವ ಕಾರಣ ಕೆಲಹೊತ್ತು ಸಿನಿಮಾ ಫಸ್ಟ್‌ಗೇರ್‌ನಲ್ಲೇ ಓಡುತ್ತದೆ. ತೆರೆಯ ಮೇಲೆ ಹಾಗೂ ‘ಅಷ್ಟದಿಗ್ಬಂಧನ ಮಂಡಲ’ದೊಳಗೆ ಅನಿಲನ ಪಾತ್ರ ಪ್ರವೇಶವಾಗುತ್ತಿದಂತೇ ಕಥೆಯ ವೇಗ ಕ್ರಮೇಣ ಹೆಚ್ಚುತ್ತದೆ. ಓವರ್ ಆ್ಯಕ್ಟಿಂಗ್‌ನಿಂದಲೇ ಗುರುತಿಸಿಕೊಂಡಿರುವ ಅನಿಲ ಎಂಬ ಪಾತ್ರ ಶರಣ್ ಆಗಿರದೇ ಇದ್ದರೆ ಕ್ಷರ. ಸುನಿ ಡೈಲಾಗ್ಸ್‌ಗೆ ಜೀವ ತುಂಬಿ ತಾವೂ ‘ಉಸಿರಾಡಿದ್ದಾರೆ’ ಶರಣ್. ಅವರ ಹೊಸ ಅವತಾರವೊಂದು ಕ್ಲೈಮ್ಯಾಕ್ಸ್‌ನಲ್ಲಿದೆ. ಸಿರಿ ಪಾತ್ರದಲ್ಲಿ ಆಶಿಕಾ ಹೀರೊಗೆ ಸಖತ್ ಜೋಡಿಯಾಗಿದ್ದಾರೆ. ಹೀರೊ ಹೋಂಡಾ ಹಾಡಿನಲ್ಲಿ ಆಶಿಕಾ ಡ್ಯಾನ್ಸ್ ಶಿಳ್ಳೆ ಹೊಡೆಸಿದೆ. ಸಾಯಿಕುಮಾರ್ ಅವರ ಪಾತ್ರ ಇಲ್ಲಿ ಉಲ್ಲೇಖಾರ್ಹ. ಅವರ ಮಾತು, ನಟನೆ ಆಧಿಕ್ಯ. ಆದರೆ ಭವ್ಯಾ ಅವರ ಪಾತ್ರ ಮತ್ತಷ್ಟು ಗಟ್ಟಿಯಾಗಬೇಕಿತ್ತು. ಸಾಯಿಕುಮಾರ್ ಎದುರು ಈ ಪಾತ್ರ ಕೃತಕವಾದಂತೆ ತೋಚುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಪ್ರವೇಶಿಸುವ ನಟ ಶ್ರೀನಗರ ಕಿಟ್ಟಿ ತೆರೆ, ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಸಾಯಿಕುಮಾರ್, ಶ್ರೀನಗರ ಕಿಟ್ಟಿ ಪಾತ್ರಗಳಿಗೆ ಎರಡನೇ ಭಾಗದಲ್ಲಿ ಹೆಚ್ಚಿನ ಹರವು ಇದ್ದಂತಿದೆ.
ಆಡಿಷನ್ ದೃಶ್ಯದಲ್ಲಿ ಬರುವ ಜ್ಯೂನಿಯರ್ ಆರ್ಟಿಸ್ಟ್‌ಗಳೂ ಶರಣ್ ಕಾಮಿಡಿ ಟೈಮಿಂಗ್‌ಗೆ ಪೈಪೋಟಿ ನೀಡುತ್ತಾರೆ. ಹಲವು ವರ್ಷಗಳ ಹಿಂದೆ ತೆರೆಕಂಡಿದ್ದ ಮಲಯಾಳಂನ ತಿಳಕ್ಕಂ ಸಿನಿಮಾ ಕಥೆಯ ಎಳೆಗೂ, ಈ ಚಿತ್ರದ ಮೊದಲಾರ್ಧಕ್ಕೂ ಕೊಂಚ ಹೋಲಿಕೆ ಇದ್ದಂತಿದೆ.
ಅರೆಬರೆ ಮಾಟ, ಮಂತ್ರ ಕಲಿತ ಮಾಟಗಾರನ ಪಾತ್ರದಲ್ಲಿ ಮನರಂಜಿಸುವ ನಟ ಸಾಧುಕೋಕಿಲ ಮತ್ತೊಂದಿಷ್ಟು ಸಮಯ ತೆರೆ ಮೇಲೆ ಇರಬೇಕಿತ್ತು. ವಿಜಯ್ ಚೆಂಡೂರು ಹಾಗೂ ಅವರ ಪಾತ್ರ ಮೊದಲ ಭಾಗದಲ್ಲಿ ವ್ಯರ್ಥ. ಸುಧಾರಾಣಿ, ಅಶುತೋಷ್ ರಾಣಾ, ಬಾಲಾಜಿ ಮನೋಹರ್, ಬಿ.ಸುರೇಶ್ ಪಾತ್ರಗಳು ಅಚ್ಚುಕಟ್ಟಾಗಿವೆ. ಛಾಯಾಗ್ರಾಹಕ ವಿಲಿಯಂ ಡೇವಿಡ್ ಹಾಗೂ ಅರ್ಜುನ್ ಜನ್ಯ ಅವರ ಕೈಚಳಕ ಮೊದಲ ಭಾಗಕ್ಕೆ ಪೂರಕ. ಎರಡನೇ ಭಾಗದ ಸಣ್ಣ ಗ್ಲಿಮ್ಸ್ ಅಂತ್ಯದಲ್ಲಿದ್ದು, ವಿಎಫ್‌ಎಕ್ಸ್ ಈ ಭಾಗದ ಮುಖ್ಯ ಪಾತ್ರದಂತಿದೆ. ಕೊನೆಯಲ್ಲಿ ಹಗುರವಾದೊಂದು ಮಾತು. ಲಿಂಬೆ ಹಣ್ಣಿನ ದರ ಗಗನಕ್ಕೇರುವ ಮೊದಲೇ ಈ ಜಾನರ್‌ನ ಸಿನಿಮಾ ಪೂರ್ಣಗೊಳಿಸಿ ನಿರ್ಮಾಪಕ, ‘ಸೆಕೆಂಡ್ ಹೀರೊ’ ಪುಷ್ಕರ ಮಲ್ಲಿಕಾರ್ಜುನಯ್ಯ ನಿಟ್ಟುಸಿರುಬಿಟ್ಟಿದ್ದಾರೆ ಎನ್ನಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.