ADVERTISEMENT

‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ವಿಮರ್ಶೆ: ಸೂರಿ ‘ಮಿಕ್ಸ್‌ ಮಸಾಲಾ’

ವಿಶಾಖ ಎನ್.
Published 24 ನವೆಂಬರ್ 2023, 10:59 IST
Last Updated 24 ನವೆಂಬರ್ 2023, 10:59 IST
ಅಭಿಷೇಕ್‌ ಅಂಬರೀಶ್‌ 
ಅಭಿಷೇಕ್‌ ಅಂಬರೀಶ್‌    

ನಿರ್ಮಾಣ: ಸುಧೀರ್ ಕೆ.ಎಂ.

‘ಮಿಕ್ಸ್ ಮಸಾಲಾ’ ಎಂಬ ಪದಪುಂಜ ಈ ಸಿನಿಮಾದ ಸಂಭಾಷಣೆಯಲ್ಲಿ ಕೇಳಿಬರುತ್ತದೆ. ಅದನ್ನು ಇಡೀ ಚಿತ್ರಕ್ಕೆ ಅನ್ವಯಿಸಿ, ಇದೊಂದು ಭರ್ತಿ ಮನರಂಜನಾ ಸಿನಿಮಾ ಎಂದು ನಿಸ್ಸಂಶಯವಾಗಿ ಹೇಳಬಹುದು. ನಟ ಅಂಬರೀಶ್ ಪರಂಪರೆಯ ಒಂದು ಎಳೆಯನ್ನು ಎತ್ತಿಕೊಂಡು, ಅದನ್ನು ಅವರ ಪುತ್ರನಿಗೆ ತೆಳುವಾಗಿ ಸುತ್ತಿ, ಸೂರಿ ತಮ್ಮದೇ ಮಸಾಲೆಯನ್ನು ಇಲ್ಲಿ ಅರೆದಿದ್ದಾರೆ. ಆ ಮಸಾಲೆ ಆಗಾಗ ಮೂಗಿಗೆ ಘಾಟು. ಅಲ್ಲಲ್ಲಿ ಕಣ್ಣುರಿ ತರಿಸುವಷ್ಟು ಖಾರವೂ ಉಂಟು.

‘ಗ್ಯಾಂಗ್ಸ್ ಆಫ್ ವಸೇಪುರ್’ ಹಿಂದಿ ಸಿನಿಮಾದ ಕಚ್ಚಾ ಗುಣವನ್ನು ಈ ಸಿನಿಮಾಗೂ ಆರೋಪಿಸಬಹುದು. ಅದರಲ್ಲೂ ವಿಲಕ್ಷಣ ಪಾತ್ರಗಳ ಪೋಷಣೆ ಆ ಚಿತ್ರದ ರೂಹನ್ನೇ ನೆನಪಿಸುತ್ತದೆ. ಆದರೆ ಅಲ್ಲಿ ಇರುವಷ್ಟು ಮೌನ ಇಲ್ಲಿ ಇಲ್ಲ. ನಿಜಕ್ಕೂ ಅತಿ ಚಲನಶೀಲ ಚಲನಚಿತ್ರ ಎನ್ನುವಂತಿದೆ ಚಿತ್ರಕಥೆಯ ಓಘ.

ADVERTISEMENT

‘ಗೋಢ’ ಅರ್ಥಾತ್ ಗೋವರ್ಧನಗಢಕ್ಕೆ ನಾಯಕ ಕಾಲಿಡುತ್ತಾನೆ. ದೇಸಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಲ್ಪನಾಲೋಕ ಅದು. ‘ರಾಮ್‌ಲೀಲಾ ಗೋಲಿಯೋಂ ಕಿ ರಾಸಲೀಲಾ’ ಹಿಂದಿ ಸಿನಿಮಾದಲ್ಲಿ ಮೂಟೆಗಳಲ್ಲಿ ಉದ್ದುದ್ದ ಶಸ್ತ್ರಾಸ್ತ್ರಗಳನ್ನು ಮಾರುವ ದೃಶ್ಯಗಳನ್ನು ನಾವು ನೋಡಿದ್ದೆವು. ಇಲ್ಲಿ ಸಣ್ಣ ಚೀಲಗಳಲ್ಲಿ ಮಾರಾಟಕ್ಕಿಟ್ಟ ಬಂದೂಕುಗಳ ಭರಾಟೆ. ಅಂಥ ಊರಿಗೆ ಹೋಗಿ ಪಿಸ್ತೂಲ್‌ಗಳನ್ನೇ ಪೇರಿಸಿಟ್ಟು, ನಾಯಕ ಲಗೋರಿ ಆಡುವ ಸಾಹಸ ದೃಶ್ಯವೊಂದರ ಸಂಯೋಜನೆ ಇದೆ. ಕಳಪೆ ಗುಣಮಟ್ಟದ ನಾಡಬಂದೂಕಿನ ಲೋಕದೊಳಗೆ ನಾಯಕ ಪ್ರವೇಶಿಸಿದ್ದಾದರೂ ಯಾಕೆ, ಅದರ ಹಿಂದೆ ಇರುವ ಉದ್ದೇಶವಾದರೂ ಏನು ಎನ್ನುವ ಹುಳ ನಿಧಾನ ತಲೆಯಲ್ಲಿ ಗುಂಯ್‌ಗುಡುವಂತಿದೆ ಮಧ್ಯಂತರದವರೆಗಿನ ನಿರೂಪಣೆ. ದೃಶ್ಯಗಳ ಕೊಲಾಜ್‌ ತೇಲಿಬಿಟ್ಟು, ‘ಊಹಿಸಿ ನೋಡಿ’ ಎಂದು ಸವಾಲೊಡ್ಡುವ ಸೂರಿ ಜಾಯಮಾನದ ನಿರೂಪಣೆ ಇದು.

ಅಂಬರೀಶ್‌ ಚಹರೆಯ ಕೆಲವು ಲಕ್ಷಣಗಳು ಅಭಿಷೇಕ್ ಅವರಲ್ಲಿಯೂ ಇವೆ. ಅವನ್ನು ಸೂರಿ ದುಡಿಸಿಕೊಂಡಿರುವ ರೀತಿ ಆಸಕ್ತಿಕರ; ವಿಶೇಷವಾಗಿ ಅವರ ಕಣ್ಣಿನ ನೋಟ. ನಾಯಕನ ನೀಳಕಾಯ, ಕಟ್ಟುಮಸ್ತು ಆಕಾರವನ್ನು ಸಂಭಾಷಣೆಯಲ್ಲಿ ಮಾಸ್ತಿ ಹಾಗೂ ಅಮ್ರಿ ಕೇಸರಿ ಹದವರಿತಂತೆ ಬಳಸಿದ್ದಾರೆ. ಅಲ್ಲಲ್ಲಿ ಮೊನಚಾದ ಮಾತೂ ಇರುವುದು ಸುರೇಂದ್ರನಾಥ್ ಹಾಗೂ ಸೂರಿ ಭಿತ್ತಿಯ ಚಿತ್ರಕಥಾ ಪರಿಣಾಮವನ್ನು ವರ್ಧಿಸಿದೆ. ಶೇಖರ್ ಎಸ್. ಛಾಯಾಗ್ರಹಣ, ಚರಣ್‌ರಾಜ್‌ ಹಿನ್ನೆಲೆ ಸಂಗೀತ, ರವಿವರ್ಮ ಸಾಹಸ ದೃಶ್ಯಗಳ ಸಂಯೋಜನೆ ಎಲ್ಲವೂ ಇನ್ನೊಂಥರ ಮಜಾ ಕೊಡುವ ‘ಮಿರ್ಚಿ ಮಸಾಲಾ’.

ರೋಚಿತ್ ಶೆಟ್ಟಿ, ತ್ರಿವಿಕ್ರಮ್ ಇಬ್ಬರೂ ಮುಖ್ಯಪಾತ್ರಗಳಲ್ಲಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಶರತ್ ಲೋಹಿತಾಶ್ವ ಫಾರ್ಮ್ ಮುಂದುವರಿದಿದೆ. ಹುಳಿ, ಒಗರು, ಖಾರ, ಸಿಹಿ ಎಲ್ಲವನ್ನೂ ಬೆರೆಸಿಟ್ಟ ಈ ‘ಮಸಾಲಾ’ ಸರಕು ಹೊಡೆದಾಟದ ದೃಶ್ಯಪ್ರಿಯರ ಕಣ್ಣಿಗಂತೂ ಹಬ್ಬ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.