ADVERTISEMENT

‘ಬಘೀರ’ ಚಿತ್ರ ವಿಮರ್ಶೆ: ಹಳೆ ಕಥೆಗೆ ಹೊಸ ಆ್ಯಕ್ಷನ್‌

ವಿನಾಯಕ ಕೆ.ಎಸ್.
Published 31 ಅಕ್ಟೋಬರ್ 2024, 13:09 IST
Last Updated 31 ಅಕ್ಟೋಬರ್ 2024, 13:09 IST
ಶ್ರೀಮುರಳಿ
ಶ್ರೀಮುರಳಿ   

ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ಕೈಕಟ್ಟಿ ಕುಳಿತ ಪೊಲೀಸ್‌ ಅಧಿಕಾರಿಯೊಬ್ಬ ಮುಖವಾಡ ಧರಿಸಿಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡುವುದೇ ‘ಬಘೀರ’ ಚಿತ್ರದ ಒಂದೆಳೆ. ಈ ರೀತಿ ಕಥೆ ಹೊಂದಿರುವ ಸಾಕಷ್ಟು ಚಿತ್ರಗಳು ಈಗಾಗಲೇ ಕನ್ನಡದಲ್ಲಿಯೇ ಬಂದಿರುವುದರಿಂದ ಕಥೆಯಲ್ಲಿ ಹೊಸತನ ಕಾಣಿಸುವುದಿಲ್ಲ. ಇನ್ನು ಕಥೆ ಹೇಳಲು ಬಳಸಿದ ತಂತ್ರ ಆ್ಯಕ್ಷನ್‌ ಸಿನಿಮಾಗಳ ಸಿದ್ಧಸೂತ್ರದಿಂದ ಹೊರಗೆ ನಿಲ್ಲುವುದಿಲ್ಲ. ಕಥೆ ಪ್ರಶಾಂತ್‌ ನೀಲ್‌ ಅವರದ್ದಾಗಿರುವುದರಿಂದ ಚಿತ್ರದಲ್ಲಿ ಕತ್ತಲು ಹೆಚ್ಚಿದೆ! ಭೀಕರ ಹೊಡೆದಾಟದ ಸನ್ನಿವೇಶಗಳಿಗೆ ಕೊರತೆಯಿಲ್ಲ. 

ಚಿತ್ರದ ನಾಯಕ ವೇದಾಂತ್‌ಗೆ ಬಾಲ್ಯದಿಂದಲೇ ಸೂಪರ್‌ಮ್ಯಾನ್‌ ಆಗುವ ಕನಸು. ಸಮಾಜಕ್ಕೆ ಸೇವೆ ಮಾಡುವ ಎಲ್ಲರೂ ಸೂಪರ್‌ಮ್ಯಾನ್‌ಗಳು ಎಂಬ ಅಮ್ಮನ ಮಾತಿನಿಂದ ಆತ ಪೊಲೀಸ್‌ ಅಧಿಕಾರಿಯಾಗುತ್ತಾನೆ. ಕರಾವಳಿಯ ತೀರ ಮಂಗಳೂರಿಗೆ ನಿಯೋಜನೆಯಾಗಿ ಬಂದವನಿಗೆ ಪ್ರಾರಂಭದಲ್ಲಿ ಇಲಾಖೆ ಬೆಂಬಲವಾಗಿರುತ್ತದೆ. ಆದರೆ ದೊಡ್ಡ ರಾಜಕಾರಣಿಗಳ ಕೈಕೆಳಗಿನ ರೌಡಿಗಳನ್ನು ಬೇಟೆಯಾಡಲು ಪ್ರಾರಂಭಿಸಿದಾಗ ವೇದಾಂತ್‌ಗೆ ತನ್ನ ಇಲಾಖೆಯ ಉನ್ನತಾಧಿಕಾರಿಗಳಿಂದಲೇ ಸಂಕಷ್ಟ ಎದುರಾಗುತ್ತದೆ. ಜೊತೆಗೆ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿರುವ ತನ್ನ ತಂದೆ ಕೂಡ ಭ್ರಷ್ಟ ಎಂದು ತಿಳಿದು ಆಘಾತವಾಗುತ್ತದೆ. ಅಲ್ಲಿಂದ ಪೊಲೀಸ್‌ ಇಲಾಖೆ ಕುರಿತಾಗಿ ಆತನ ದೃಷ್ಟಿಕೋನ ಬದಲಾಗಿ, ‘ಬಘೀರ’ನ ಕತ್ತಲಿನ ಅಧ್ಯಾಯ ಪ್ರಾರಂಭವಾಗುತ್ತದೆ!

ಇಲಾಖೆಗೆ ನಿಷ್ಠನಾಗಿದ್ದ ವೇದಾಂತ್‌ ವರಸೆ ಬದಲಾಗುತ್ತದೆ. ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು ಆತ ರಾತ್ರಿ ವೇಳೆ ‘ಬಘೀರ’ನಾಗಿ ದುಷ್ಟರ ಬೇಟೆಗಿಳಿಯುತ್ತಾನೆ. ಮೊದಲಾರ್ಧ ಆಸಕ್ತಿದಾಯವಾಗಿದೆ. ಆದರೂ ಅವಧಿಯನ್ನು ಕೊಂಚ ತಗ್ಗಿಸುವ ಅವಕಾಶ ನಿರ್ದೇಶಕರಿಗಿತ್ತು. ಕಥೆಯನ್ನು ಸುಲಭವಾಗಿ ಊಹಿಸಬಹುದಾಗಿದ್ದು, ಹೆಚ್ಚು ತಿರುವುಗಳಿಲ್ಲದಿರುವುದು ದ್ವೀತಿಯಾರ್ಧವನ್ನು ಪೇಲವವಾಗಿಸುತ್ತದೆ. ಪೊಲೀಸ್‌ ಅಧಿಕಾರಿಯಾಗಿ ಶ್ರೀಮುರಳಿ ಇಷ್ಟವಾಗುತ್ತಾರೆ. ನಾಯಕಿ ರುಕ್ಮಿಣಿ ವಸಂತ್‌ಗೆ ಚಿತ್ರದಲ್ಲಿ ಹೆಚ್ಚು ಕೆಲಸವಿಲ್ಲ. ಹೊಡೆದಾಟಗಳ ಅಬ್ಬರದಲ್ಲಿ ರೊಮ್ಯಾನ್ಸ್‌ಗೆ ಜಾಗವಿರಲೆಂದು ಬಲವಂತವಾಗಿ ಈ ಪಾತ್ರವನ್ನು ಪೋಣಿಸಿದಂತೆ ಭಾಸವಾಗುತ್ತದೆ. 

ADVERTISEMENT

ಕಾನ್‌ಸ್ಟೆಬಲ್‌ ಆಗಿ ರಂಗಾಯಣ ರಘು, ಪ್ರಕಾಶ್‌ ತುಮ್ಮಿನಾಡು ಅಲ್ಲಲ್ಲಿ ನಗಿಸುತ್ತಾರೆ. ಪ್ರಮುಖ ಖಳನಟನಾಗಿ ಗರುಡ ರಾಮ್‌ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಘೀರ ಯಾರೆಂದು ಪತ್ತೆ ಮಾಡಲು ಬರುವ ಅಧಿಕಾರಿ ಪ್ರಕಾಶ್‌ ರಾಜ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವಿನಾಶ್‌, ಪ್ರಮೋದ್‌ ಶೆಟ್ಟಿ ಪಾತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವಿಲ್ಲ. ಪ್ರಾರಂಭದಲ್ಲಿ ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ತುಸು ಅಬ್ಬರವಾದಂತೆ ಅನ್ನಿಸಿದರೂ ಬಳಿಕ ಹಿತವೆನಿಸುತ್ತದೆ. ಆದರೆ ಹಾಡುಗಳು ಗುನುಗುವಂತಿಲ್ಲ. ಆ್ಯಕ್ಷನ್‌ ಸನ್ನಿವೇಶಗಳು ಅದ್ಧೂರಿಯಾಗಿವೆ. ಹೆರಿಗೆಗಾಗಿ ಬಸ್‌ಸ್ಟಾಂಡ್‌ನಲ್ಲಿ ಕಾಯುವ ಮಹಿಳೆ, ಸ್ಟೇಷನ್‌ ಎದುರು ಬೆಂಕಿ ಹಚ್ಚಿಕೊಳ್ಳುವ ಯುವತಿ...ಮೊದಲಾದ ದೃಶ್ಯಗಳ ನಿರೂಪಣೆ ಶೈಲಿಯನ್ನು ಬದಲಿಸುವ ಅವಕಾಶ ನಿರ್ದೇಶಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.