ADVERTISEMENT

ಭೈರಾದೇವಿ ಸಿನಿಮಾ ವಿಮರ್ಶೆ: ಕತೆ ಮಾಮೂಲಿ, ಪ್ರಯತ್ನ ವಿಭಿನ್ನ

ವಿನಾಯಕ ಕೆ.ಎಸ್.
Published 4 ಅಕ್ಟೋಬರ್ 2024, 14:09 IST
Last Updated 4 ಅಕ್ಟೋಬರ್ 2024, 14:09 IST
film
film   

ಉತ್ತರ ಭಾರತದಲ್ಲಿ ಕಂಡುಬರುವ ಅಘೋರಿಗಳ ಜಗತ್ತನ್ನು ದರ್ಶನ ಮಾಡಿಸುವ ಚಿತ್ರ ‘ಭೈರಾದೇವಿ’. ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಾಯಕ ರಮೇಶ್‌ ಅರವಿಂದ್‌ಗೆ ಭೂತದ ಕಾಟ. ಅದಕ್ಕೆ ಪರಿಹಾರ ಹುಡುಕಿಕೊಂಡು ಹೊರಟಾಗ ಸಿಗುವುದು ಅಘೋರಿಗಳ ಸಾಮ್ರಾಜ್ಯ. ಚಿತ್ರದ ಮೊದಲಾರ್ಧದಲ್ಲಿ ವಾರಾಣಸಿ, ಅಘೋರಿಗಳು, ಅವರ ಗುಹೆ, ಆಚಾರ–ವಿಚಾರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೀಜೈ.

ರಮೇಶ್‌ ಕುಟುಂಬದ ಮೇಲೆ ಪ್ರೇತದ ದಾಳಿ, ಒಂದಷ್ಟು ಭಯದೊಂದಿಗೆ ಚಿತ್ರದ ಮೊದಲಾರ್ಧ ವೇಗವಾಗಿ ಸಾಗುತ್ತದೆ. ಭಯ ಹುಟ್ಟಿಸಲು, ಅಘೋರಿಗಳ ವಿಸ್ಮಯ ಪ್ರಪಂಚ ತೋರಿಸಲು ಗ್ರಾಫಿಕ್ಸ್‌ ಅನ್ನು ನಿರ್ದೇಶಕರು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದೇ ಭಯ, ಅಘೋರಿಗಳ ಆ ಜಗತ್ತನ್ನು ಚಿತ್ರದ ಕೊನೆತನಕ ಉಳಿಸಿಕೊಂಡಿದ್ದರೆ ಚಿತ್ರ ಇನ್ನೊಂದು ಮಜಲಿಗೆ ತಲುಪುವ ಸಾಧ್ಯತೆ ಇತ್ತು. ಆದರೆ ಚಿತ್ರದ ದ್ವಿತೀಯಾರ್ಧ ಬಹಳ ತಾಳ್ಮೆ ಬೇಡುತ್ತದೆ. ಅಘೋರಿಯಾಗಿರುವ ಭೈರಾದೇವಿಯನ್ನು ಉತ್ತರ ಭಾರತದಿಂದ ಬೆಂಗಳೂರಿನ ಸ್ಮಶಾನಕ್ಕೆ ಕರೆತರುವ ಚಿತ್ರಕಥೆಯೇ ಸಹಜ ಎನ್ನಿಸುವುದಿಲ್ಲ. ಚಿತ್ರ ನಿರ್ಮಾಪಕಿಯೂ ಆಗಿರುವ ನಾಯಕಿ ರಾಧಿಕಾ ಅವರ ಪ್ರತಿಭಾ ಪ್ರದರ್ಶನದ ವೇದಿಕೆಯಾಗುತ್ತದೆ. 

ಪೊಲೀಸ್ ಅಧಿಕಾರಿಯಾಗಿ, ಕೌಟಂಬಿಕ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ರಮೇಶ್‌ ಅರವಿಂದ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡು, ಹೊಡೆದಾಟ, ಅಬ್ಬರಿಸುವಿಕೆಯೊಂದಿಗೆ ರಾಧಿಕಾ ಭೈರಾದೇವಿಯಾಗಿ ಮಾಸ್‌ ಅವತಾರ ತಳೆದಿದ್ದಾರೆ. ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ರಂಗಾಯಣ ರಘು ಅಲ್ಲಲ್ಲಿ ನಗಿಸುವ ಯತ್ನ ಮಾಡುತ್ತಾರೆ. ಅಘೋರಿಗಳ ಗುರುವಾಗಿ ರವಿಶಂಕರ್‌ ನೋಟದಿಂದಲೇ ಭಯ ಹುಟ್ಟಿಸುತ್ತಾರೆ. ಅಘೋರಿಗಳ ಗುಹೆಯ ಭಾಗದ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಭೈರಾಗಿಗಳ ವಸ್ತ್ರಾಲಂಕಾರ, ಮೇಕಪ್‌ ಗಮನ ಸೆಳೆಯುತ್ತದೆ. ಎರಡು ಹಾಡು ಸೊಗಸಾಗಿದೆ. ಹಿನ್ನೆಲೆ ಸಂಗೀತದ ಅಬ್ಬರ ಸ್ವಲ್ಪ ಕಡಿಮೆಯಾಗಬಹುದಿತ್ತು. 

ADVERTISEMENT

ಕಥೆ ಮಾಮೂಲು. ಆದರೆ ಅದನ್ನು ಹೇಳಲು ನಿರ್ದೇಶಕರು ಆಯ್ದುಕೊಂಡ ಮಾರ್ಗ ಕನ್ನಡಕ್ಕೆ ಬಹಳ ಅಪರೂಪವಾಗಿತ್ತು. ಚಿತ್ರದ ಮೇಕಿಂಗ್ ಕೂಡ ಗಮನ ಸೆಳೆಯುವಂತಿದೆ. ಆದರೆ ಚಿತ್ರಕಥೆ ದಾರಿ ತಪ್ಪಿಬಿಡುತ್ತದೆ. ಒಂದಷ್ಟು ಕುತೂಹಲ ಉಳಿಸಿಕೊಳ್ಳುವ, ಭಯ ಹುಟ್ಟಿಸುವ, ಟ್ವಿಸ್ಟ್‌ಗಳನ್ನು ನೀಡುವ ಅವಕಾಶ ನಿರ್ದೇಶಕರಿಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.