ಬೆಂಗಳೂರಿನ ಗಾಂಜಾ ಮಾರಾಟ ಜಾಲಕ್ಕೆ ಕೊಳೆಗೇರಿ ಹುಡುಗರು ಬಳಕೆಯಾಗುತ್ತಿದ್ದಾರೆ ಮತ್ತು ನಗರದ ಯುವಕರು ಮಾದಕ ವ್ಯಸನಿಗಳಾಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ‘ಭೀಮ’ ಚಿತ್ರದ ಒಂದು ಸಾಲಿನ ಕಥೆ. ಈ ಎಳೆ ಮತ್ತು ಚಿತ್ರದಲ್ಲಿ ಬರುವ ಕೆಲವು ನೈಜ ಸನ್ನಿವೇಶಗಳು ಚಿತ್ರ ನೋಡುತ್ತಿದ್ದವರನ್ನು ಒಂದು ಕ್ಷಣ ಯೋಚಿಸುವಂತೆ ಮಾಡುತ್ತದೆ. ಆದರೆ, ಇಡೀ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಭರದಲ್ಲಿ ಇನ್ನೊಂದಷ್ಟು ಕೆಡಕುಗಳ ಪಾಠ ಮಾಡಿದಂತಿದೆ. ಅದಕ್ಕೆ ಮುಖ್ಯ ಕಾರಣ ಚಿತ್ರಕಥೆ.
ಹೈಸ್ಕೂಲ್, ಕಾಲೇಜಿನ ಮೆಟ್ಟಿಲಿನಲ್ಲಿರುವ ಹುಡುಗರು ಕತ್ತಿ, ಚಾಕು ಹಿಡಿದು ಹೊಡೆದಾಟದ ದೃಶ್ಯಗಳನ್ನು ನೋಡಲು ಹಿಂಸೆಯಾಗುತ್ತದೆ. ಈ ದೃಶ್ಯಗಳು ಇಲ್ಲದಿದ್ದರೂ ಚಿತ್ರದಲ್ಲಿ ಯಾವುದೇ ವ್ಯತ್ಯಾಸವಾಗುತ್ತಿರಲಿಲ್ಲ. ಪುಟ್ಟ ಹೆಣ್ಣು ಮಕ್ಕಳ ಬಾಯಿಂದ ಬರುವ ಬೈಗುಳಗಳನ್ನು ಕೂಡ ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ನಾಲ್ಕು ಹಾಡು, ಐದು ಫೈಟುಗಳ ಸಿದ್ಧಸೂತ್ರದ ಮಾಸ್ ಚಿತ್ರಗಳ ಸಾಲಿಗೆ ‘ಭೀಮ’ವನ್ನು ಖಂಡಿತ ಸೇರಿಸಬಹುದು. ಆ್ಯಕ್ಷನ್, ಮಾಸ್ ಚಿತ್ರಗಳೆಂದರೆ ಕಥೆಗೆ ಲಾಜಿಕ್ ಇರುವುದಿಲ್ಲ ಎಂಬುದು ನಿಜ. ಆದರೆ, ಅವುಗಳಿಗೆ ಇರಬೇಕಾದ ಜೋಶ್ ಕೂಡ ಇಲ್ಲಿಲ್ಲ. ಏರಿಳಿತಗಳು, ಟ್ವಿಸ್ಟ್ ಕೂಡ ಕಾಣಿಸುವುದಿಲ್ಲ. ನಾಯಕ ಭೀಮನ ಗ್ಯಾಂಗು ಎದುರಾಳಿಗಳನ್ನು ಹೀಗೆಯೇ ಹೊಡೆಯುತ್ತದೆ ಎಂಬುದು ಚಿತ್ರ ಪ್ರಾರಂಭವಾದ 15 ನಿಮಿಷಗಳಲ್ಲಿಯೇ ಊಹೆಗೆ ಸಿಲುಕಿಬಿಡುತ್ತದೆ.
ಚಿತ್ರದಲ್ಲಿನ ಪಾತ್ರಗಳು ಮಜವಾಗಿವೆ. ತಮಿಳರು ಹೆಚ್ಚಿರುವ ಕೊಳೆಗೇರಿಗಳಲ್ಲಿ ಕಾಣಿಸುವ ಒಂದಷ್ಟು ನೈಜ ಪಾತ್ರಗಳು, ಆಚರಣೆಗಳು ಚಿತ್ರದುದ್ದಕ್ಕೂ ಕಾಣುತ್ತವೆ. ಆದರೆ, ಯಾವ ಪಾತ್ರಕ್ಕೂ ಸರಿಯಾದ ಉದ್ದೇಶ, ಪೋಷಣೆ ಇಲ್ಲ. ಮಾತಿನಲ್ಲಿ ಅವಾಚ್ಯ ಶಬ್ದಗಳು ಯಥೇಚ್ಛವಾಗಿವೆ. ಇಡೀ ಚಿತ್ರದ ದೊಡ್ಡ ಶಕ್ತಿ ಕಲಾವಿದರ ದಂಡು. ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ರಂಗಭೂಮಿ ಕಲಾವಿದೆ ಪ್ರಿಯ ಶಟಮರ್ಷಣ ನಟನೆ ಗಮನ ಸೆಳೆಯುತ್ತದೆ. ಸ್ಥಳೀಯ ರಾಜಕಾರಣಿ, ಆತನ ಪಿಎ, ಡ್ರ್ಯಾಗನ್ ಮಂಜು ಮೊದಲಾದ ಪಾತ್ರಗಳನ್ನು ನಿರ್ವಹಿಸಿರುವ ಹೊಸ ಕಲಾವಿದರು ನಟನೆಯಿಂದ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಹಾಸ್ಯ ಸನ್ನಿವೇಶಗಳು ಅಲ್ಲಲ್ಲಿ ನಗು ತರಿಸುತ್ತವೆ. ಆದರೆ, ಹಲವೆಡೆ ಇದು ಕಥೆಯ ಭಾಗವಾಗದೇ ನಗಿಸಲಿಕ್ಕಾಗಿಯೇ ಪೋಣಿಸಲಾದ ಸನ್ನಿವೇಶಗಳಂತಿವೆ. ಅವಾಚ್ಯ ಮಾತುಗಳಿಂದಾಗಿ ಸಂಭಾಷಣೆಯ ಕಚಗುಳಿ ಕಳೆದು ಹೋಗಿದೆ. ಚರಣ್‌ರಾಜ್ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಸರಿ ಹೊಂದುವಂತಿದೆ. ಆದರೆ, ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಒಂದೆರಡು ಕಡೆ ಹಾಡಿನ ಅವಶ್ಯವೂ ಇರಲಿಲ್ಲ. ಶಿವಸೇನ ಛಾಯಾಚಿತ್ರಗ್ರಹಣದಲ್ಲಿಯೂ ಹೊಸತೇನೂ ಕಾಣಿಸುವುದಿಲ್ಲ. ಹೊಡೆದಾಟ, ಬೈಗಳಗಳನ್ನೇ ಮನರಂಜನೆಯ ಬಂಡವಾಳವಾಗಿಸಿಕೊಳ್ಳುವ ಬದಲು ಗಾಂಜಾ ಸಮಸ್ಯೆ ಮತ್ತು ಮೂಲದತ್ತ ಇನ್ನಷ್ಟು ಗಮನಹರಿಸಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.