ಚಿತ್ರ: ಕೂಲಿ ನಂ. 1 (ಹಿಂದಿ)
ನಿರ್ಮಾಣ: ವಶು ಭಾಗ್ನಾನಿ, ಜಾಕಿ ಭಾಗ್ನಾನಿ, ದೀಪ್ಷಿಖಾ ದೇಶ್‌ಮುಖ್
ನಿರ್ದೇಶನ: ದೇವಿಡ್ ಧವನ್
ತಾರಾಗಣ: ವರುಣ್ ಧವನ್, ಸಾರಾ ಅಲಿ ಖಾನ್, ಪರೇಶ್ ರಾವಲ್, ಜಾವೆದ್ ಜಾಫ್ರಿ, ರಾಜ್‌ಪಾಲ್ ಯಾದವ್, ಜಾನಿ ಲಿವರ್, ಶಿಖಾ ತಲ್ಸಾನಿಯಾ
‘ಟಾಮ್ ಅಂಡ್ ಜೆರ್ರಿ’ ನೋಡುವಾಗ ತರ್ಕವನ್ನು ಪಕ್ಕಕ್ಕಿಡುತ್ತೇವೆ. ಜಗ್ಗೇಶ್ ಕಚಗುಳಿ ಇಟ್ಟ ಎಷ್ಟೋ ಸಂದರ್ಭದಲ್ಲೂ ಮನಸ್ಸು ಬಿಂದಾಸ್ ನಕ್ಕು ಹಗುರಾಗಿದ್ದಿದೆ. ಹಿಂದಿ ಚಿತ್ರಗಳಲ್ಲಿ ಗೋವಿಂದ ‘ಜಾನರ್’ ಕೂಡ ಇಂಥದ್ದೇ ಆಗಿತ್ತು. 1995ರಲ್ಲಿ ತೆರೆಕಂಡಿದ್ದ ‘ಕೂಲಿ ನಂ.1’ ಅಸಡಾ ಬಸಡಾ ಸಾಹಿತ್ಯದ ಹಾಡುಗಳ ಮೂಲಕ, ಗೋವಿಂದ ಕಡುಗಾಡು ಬಣ್ಣದ ಬಟ್ಟೆಗಳಿಂದ ಪ್ರೇಕ್ಷಕರ ಮನ ಗೆದ್ದಿತ್ತು. ನಗು ತಂದಿತ್ತು. ಅದನ್ನೇ ಈಗ, ಅದೇ ನಿರ್ದೇಶಕ ಡೇವಿಡ್ ಧವನ್ ಮರುಸೃಷ್ಟಿಸಿದ್ದಾರೆ. ಪಾರಂಪರಿಕ ಕಟ್ಟಡವನ್ನು ಒಡೆದು, ಆಧುನಿಕ ಶೈಲಿಯಲ್ಲಿ ಕಟ್ಟಿದರೆ ಹೇಗೆ ಕಂಡೀತೋ ಈ ಚಿತ್ರದ ಸ್ಥಿತಿಯೂ ಹಾಗೇ ಆಗಿದೆ.
ರೈಲುನಿಲ್ದಾಣದ ಕೂಲಿಯವನೊಬ್ಬ ಶ್ರೀಮಂತ ಹುಡುಗಿಯನ್ನು ಪ್ರೀತಿಸಿ, ಸುಳ್ಳುಗಳ ಸರಮಾಲೆ ಪೋಣಿಸಿ ಮದುವೆಯಾಗುವುದು ಚಿತ್ರದ ಒನ್‌ಲೈನರ್. 1990ರ ದಶಕದ ಚಿತ್ರದಲ್ಲಿ ಗೋವಿಂದ, ಶಕ್ತಿಕಪೂರ್, ಕರಿಷ್ಮಾ ಕಪೂರ್ ಕಾಂಬಿನೇಷನ್ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿತ್ತು. ಆಗ ಇಂತಹ ಬ್ರೇನ್‌ಲೆಸ್ ಕಾಮಿಡಿಯನ್ನು ಸ್ವೀಕರಿಸುವ ಪ್ರೇಕ್ಷಕರ ಸಂಖ್ಯೆಯೂ ದೊಡ್ಡದಿತ್ತು. ಅದೇ ಕಥೆಯನ್ನು ಈ ಕಾಲಮಾನಕ್ಕೆ ಒಗ್ಗಿಸಿಹೇಳುವಾಗ ಬರೀ ಮೇಲ್ಮಟ್ಟದ ‘ಕಾಸ್ಮೆಟಿಕ್ ಬದಲಾವಣೆ’ ಮಾಡಿಕೊಂಡರೆ ಸಾಲದು. ಸಿನಿಮೀಯ ತರ್ಕವಾದರೂ ಇರಲೇಬೇಕು. ಡೇವಿಡ್ ಧವನ್ ಅವರಿಗೆ ತಮ್ಮದೇ ಹಳೆಯ ಮ್ಯಾಜಿಕ್ ಮರುಸೃಷ್ಟಿಸಲು ಇಲ್ಲಿ ಆಗಿಲ್ಲ.
ಸಂಭಾಷಣೆಯಲ್ಲಿ ಪನ್‌ಗಳು ಇವೆಯಾದರೂ, ಅವು ನಗು ತರಿಸುವುದಿಲ್ಲ. ಜಾನಿ ಲಿವರ್ ತರಹದ ಮಾಗಿದ ನಟರ ಆಂಗಿಕ ಅಭಿನಯ ಕೂಡ ವರ್ಕ್‌ಔಟ್ ಆಗಿಲ್ಲ.
ವರುಣ್ ಧವನ್ ಮೊದಲಿನಿಂದಲೂ ಹಾಸ್ಯದ ಟೈಮಿಂಗ್‌ನಲ್ಲಿ ಗೋವಿಂದ ಅವರನ್ನು ಅನುಕರಿಸಲು ಹೆಣಗಾಡುತ್ತಿದ್ದಾರೆ. ಕುದುರಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಮಿಥುನ್ ಚಕ್ರವರ್ತಿ ಅವರನ್ನು ಅನುಕರಿಸುವ ಮಾತುಗಳು ಕೃತಕ ಎನಿಸುತ್ತವೆ. ನಾಯಕಿ ಸಾರಾ ಅಲಿ ಖಾನ್ ವದನದ ಗೆರೆಗಳು ಕೂಡ ಸ್ಕ್ರಿಪ್ಟ್‌ನಂತೆಯೇ ಜಡವಾಗಿವೆ. ಅವರು ಅಳುವುದನ್ನು ನೋಡಲಂತೂ ಎರಡು ಕಣ್ಣುಗಳು ಸಾಲವು. ಪರೇಶ್ ರಾವಲ್ ಡೈಲಾಗ್‌ಬಾಜಿ ನೋಡಿ ಕಷ್ಟಪಟ್ಟು ನಗಬೇಕಾದೀತು.
ಸಿದ್ಧ ಟೆಂಪ್ಲೇಟ್‌ನಲ್ಲೂ ಇನ್ನೊಂದು ಚೆಂದದ ಉತ್ಪನ್ನ ಕಟ್ಟಿಕೊಡುವುದು ತಮಾಷೆಯಲ್ಲ. ಅದು ಡೇವಿಡ್ ಧವನ್ ಅವರಿಗೂ, ಅವರ ಮಗ ವರುಣ್‌ಗೂ ಗೊತ್ತಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.