ಮಂಡ್ಯದ ಹಳ್ಳಿಯಲ್ಲಿ ನಡೆಯುವ ಗ್ರಾಮಪಂಚಾಯ್ತಿ ಚುನಾವಣೆಯ ‘ದರ್ಬಾರೇ’ ಚಿತ್ರದ ಪ್ರಮುಖ ಕಥೆ. ಆದರೆ ಇದು ಚುನಾವಣೆಯ ಕಥೆ ಎಂದು ತಿಳಿಯುವ ಹೊತ್ತಿಗೆ ಚಿತ್ರ ಸರಿಸುಮಾರು ಮಧ್ಯಂತರ ವಿರಾಮಕ್ಕೆ ಬಂದು ನಿಂತಿರುತ್ತದೆ! 23 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿರುವ ವಿ.ಮನೋಹರ್ ಹಳ್ಳಿಯ ಸೊಬಗನ್ನು ದೃಶ್ಯಗಳಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯದ ಭಾಷೆ, ಹಳ್ಳಿಯಲ್ಲಿನ ಹಾಸ್ಯ ಕೆಲವು ಕಡೆ ನಗು ತರಿಸುತ್ತದೆ. ಚಿತ್ರದ ಸಂಗೀತ ನಿರ್ದೇಶಕರೂ ಅವರೇ ಆಗಿದ್ದು, ಹಿನ್ನೆಲೆ ಸಂಗೀತದಲ್ಲಿ ನಿರ್ದೇಶನಕ್ಕಿಂತ ತುಸು ಹೆಚ್ಚೇ ಮೇಲುಗೈ ಸಾಧಿಸಿದ್ದಾರೆ.
ಮಂಡ್ಯದ ಹಳ್ಳಿಯೊಂದರಲ್ಲಿ ಊರಿನ ಪಟೇಲರ ಮಗ ಚಿತ್ರದ ನಾಯಕ ಮಧು. ಒಳ್ಳೆಯವರಿಗೆ ಒಳ್ಳೆಯವನಾಗಿ, ದುಷ್ಟರಿಗೆ ಶಿಕ್ಷೆ ನೀಡುವ ನಾಯಕನಿಗೆ ಊರಿನಲ್ಲಿ ಒಂದಷ್ಟು ಜನ ವೈರಿಗಳು. ನಾಯಕನ ದರ್ಪ ಮುರಿಯಬೇಕು, ಈತನನ್ನು ತುಳಿಯಬೇಕೆಂದು ನಿರ್ಧರಿಸುವ ಒಂದು ಗುಂಪು ನಾಯಕನ ಜೊತೆಗಿದ್ದೇ ಆತನನ್ನು ಪಂಚಾಯ್ತಿ ಚುನಾವಣೆಗೆ ನಿಲ್ಲಿಸುತ್ತದೆ ಎಂಬಲ್ಲಿಂದ ಚಿತ್ರದ ಮುಖ್ಯ ಕಥೆ ಪ್ರಾರಂಭವಾಗುತ್ತದೆ.
ನಮ್ಮ ರಾಜಕೀಯ ಹೇಗೆ ನಡೆಯುತ್ತದೆ, ಇಲ್ಲಿ ಏನೆಲ್ಲ ಕೆಲಸ ಮಾಡುತ್ತದೆ? ಒಬ್ಬ ರಾಜಕಾರಣಿಯಾಗಬೇಕಿದ್ದರೆ ಏನೆಲ್ಲ ಕಳೆದುಕೊಳ್ಳಬೇಕಾಗುತ್ತದೆ ಎಂಬ ಚಿತ್ರಣವನ್ನು ಹಳ್ಳಿಯ ರಾಜಕೀಯ ವಿಡಂಬನೆ ಮೂಲಕ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕಥೆಯ ನಡುವೆ ನಾಯಕ ಮಧುವಿಗೆ ನಾಯಕಿ ದೀಪಿಕಾ ಸಿಗುತ್ತಾಳೆ. ಚಿತ್ರಕ್ಕೊಂದು ಪ್ರೀತಿ, ಪ್ರೇಮ, ಗ್ಲಾಮರ್ ಇರಲೇಬೇಕೆಂಬ ಕಾರಣಕ್ಕೆ ಈ ಟ್ರ್ಯಾಕ್ ತಂದಂತೆ ಕಾಣುತ್ತದೆ. ದೀಪಿಕಾ ಪಾತ್ರದಲ್ಲಿನ ಚಿತ್ರದ ನಾಯಕಿ ಜಾಹ್ನವಿ ನಟನೆಯಲ್ಲಿ ಇನ್ನಷ್ಟು ಪಳಗಬೇಕಿತ್ತು.
ತಮ್ಮ ಚಿತ್ರದ ನಾಯಕ ಇವತ್ತಿನ ಯಾವ ಸ್ಟಾರ್ ನಟನಿಗೂ ಕಡಿಮೆಯಿಲ್ಲ ಎನ್ನುವಂತಹ ಫೈಟ್, ಹಾಡುಗಳನ್ನು ನಿರ್ದೇಶಕರು ಚಿತ್ರದಲ್ಲಿರಿಸಿದ್ದಾರೆ. ಪ್ರೇಕ್ಷಕನಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಇಂತಹ ಕೆಲವು ಸನ್ನಿವೇಶಗಳನ್ನು ಕತ್ತರಿಸಿದ್ದರೆ ಕಥೆಯ ವೇಗ ಹೆಚ್ಚುತ್ತಿತ್ತು. ಇಡೀ ಚಿತ್ರದಲ್ಲಿ ನಾಯಕನನ್ನೇ ಮೆರೆಸುವ ಬದಲು ಉತ್ತಮವಾಗಿ ನಟಿಸಿದ ಕೆಲ ಸಹ ನಟರಿಗೆ ಇನ್ನೊಂದಷ್ಟು ಜಾಗ ಕೊಡಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.