ADVERTISEMENT

PV Web Exclusive: ಚೀನಿ ಕಥೆಯೂ, ‘ಮುಲಾನ್’ ಎಂಬ ಡಿಸ್ನಿ ದೃಶ್ಯಕಾವ್ಯವೂ

ನವೀನ ಕುಮಾರ್ ಜಿ.
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
‘ಮುಲಾನ್‌’ ಚಿತ್ರದ ದೃಶ್ಯ
‘ಮುಲಾನ್‌’ ಚಿತ್ರದ ದೃಶ್ಯ   

ವಾಲ್ಟ್‌ ಡಿಸ್ನಿ ಕಂಪನಿ ನಿರ್ಮಾಣದ ಚಿತ್ರಗಳೆಂದರೆ ಅವು ದೃಶ್ಯ ವೈಭವಕ್ಕೆ ಮತ್ತೊಂದು ಹೆಸರು. ಅನಿಮೇಷನ್ ಇರಲಿ ಲೈವ್ ಆ್ಯಕ್ಷನ್ ಚಿತ್ರಗಳಿರಲಿ ಡಿಸ್ನಿ ಚಿತ್ರಗಳು ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ.

1998ರಲ್ಲಿ ಈ ಕಂಪನಿ ನಿರ್ಮಿಸಿದ್ದ ‘ಮುಲಾನ್’ ಎಂಬ ಅನಿಮೇಷನ್ ಚಿತ್ರ ಭಾರಿ ಜನಪ್ರಿಯತೆ ಗಳಿಸಿತ್ತು. ಮಕ್ಕಳ ನೆಚ್ಚಿನ ಚಿತ್ರವಾಗಿ ಅದು ಪ್ರಸಿದ್ಧಿ ಪಡೆದಿತ್ತು. ಈಗ ಅದೇ ಚಿತ್ರವನ್ನು ಡಿಸ್ನಿ, ಲೈವ್ ಆ್ಯಕ್ಷನ್ ಚಿತ್ರವಾಗಿ ಹೊರತಂದಿದೆ.

ಆದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರ ಮಾರ್ಚ್ ತಿಂಗಳಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧಗೊಂಡಿತ್ತು ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಡಿಸ್ನಿ ಪ್ಲಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡಿದೆ.

ADVERTISEMENT

ಚೀನಿ ಜನಪದ ಗೀತೆಗಳಲ್ಲಿ ಜನಜನಿತವಾಗಿರುವ ‘ಮುಲಾನ್’ ಎಂಬ ಯೋಧೆಯ ಕಥೆಯನ್ನು ಈ ಚಿತ್ರದಲ್ಲಿ ದೃಶ್ಯ ರೂಪಕ್ಕಿಳಿಸಲಾಗಿದೆ. ಇದೇ ಕಥೆಯನ್ನಾಧರಿಸಿ ಚೀನಿ ಭಾಷೆಯಲ್ಲಿ ಹಲವು ಸಿನಿಮಾಗಳು ನಿರ್ಮಾಣಗೊಂಡಿದ್ದರೂ ಡಿಸ್ನಿ ನಿರ್ಮಿಸಿರುವುದರಿಂದ ಈ ಚಿತ್ರವು ಸಹಜವಾಗಿಯೇ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು.

2002ರಲ್ಲಿ ಬಿಡುಗಡೆಗೊಂಡಿದ್ದ ‘ವೇಲ್ ರೈಡರ್’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕಿ ನಿಕಿ ಕ್ಯಾರೊ ಅವರು ‘ಮುಲಾನ್’ ಚಿತ್ರವನ್ನು ನಿರ್ದೇಶಿದ್ದಾರೆ.

ಇದೊಂದು ಸಾಹಸ ಪ್ರಧಾನ ಚಿತ್ರವಾದರೂ ಭಾವನಾತ್ಮಕ ಅಂಶಗಳಿಗೂ ಒತ್ತು ನೀಡಲಾಗಿದೆ. ಆದರೆ 1992ರ ಅನಿಮೇಷನ್ ಚಿತ್ರಕ್ಕೆ ಹೋಲಿಸಿದರೆ ಇದರ ಕಥಾ ನಿರೂಪಣೆ ಅದರಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ ಎನ್ನಬಹುದು. ಅನಿಮೇಷನ್ ಚಿತ್ರದ ರೀಮೇಕ್ ಆದರೂ ಅಲ್ಲಿನ ಕಥನ ತಂತ್ರಕ್ಕಿಂತ ಇದು ಭಿನ್ನವಾಗಿಯೇ ನಿಲ್ಲುತ್ತದೆ.

ಲಿಯು ಯಿಫೈ ಅವರು ‘ಮುಲಾನ್’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜೆಟ್ ಲಿ, ಗಾಂಗ್ ಲಿ, ಡೊನ್ನಿ ಯೆನ್ ಮೊದಲಾದವರೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಚೀನಾದ ಚಕ್ರಾಧಿಪತ್ಯದ ವಿರುದ್ಧ ಶತ್ರುಗಳು ಯುದ್ಧ ಸಾರುತ್ತಾರೆ. ಈ ಸಂದರ್ಭದಲ್ಲಿ ಪ್ರತಿ ಮನೆಯಿಂದಲೂ ಒಬ್ಬ ವ್ಯಕ್ತಿಯನ್ನು ಸೈನ್ಯಕ್ಕೆ ಕಳುಹಿಸಬೇಕೆಂದು ಚಕ್ರವರ್ತಿ ಆಜ್ಞಾಪಿಸುತ್ತಾನೆ. ಆದರೆ ಮುಲಾನ್ ಎಂಬ ಹೆಣ್ಣು ಮಗಳ ಕುಟುಂಬದಲ್ಲಿ ಗಂಡು ಮಕ್ಕಳು ಇರುವುದಿಲ್ಲ. ಈ ಕಾರಣಕ್ಕೆ ಆಕೆಯ ಅನಾರೋಗ್ಯಪೀಡಿತ ತಂದೆಯೇ ಯುದ್ಧಕ್ಕೆ ತೆರಳಲು ಮುಂದಾಗುತ್ತಾನೆ. ಇದನ್ನು ಅರಿತ ಆಕೆ ಮನೆಯವರಿಗೆ ತಿಳಿಸದೆ ಸೈನ್ಯಕ್ಕೆ ಸೇರುತ್ತಾಳೆ. ಆ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಪದ್ಧತಿ ಇರದ ಕಾರಣ ಆಕೆ ಗಂಡಸಿನಂತೆ ವೇಷ ತೊಟ್ಟು ಸೇನೆಗೆ ಸೇರುತ್ತಾಳೆ. ಮುಂದೆ ತನ್ನ ಅಪ್ರತಿಮ ಶೌರ್ಯದಿಂದ ಶತ್ರುಗಳೊಂದಿಗೆ ಹೋರಾಡಿ ರಾಜ್ಯವನ್ನು ರಕ್ಷಿಸುವುದೇ ಈ ಸಿನಿಮಾದ ಮುಖ್ಯ ಕಥಾ ಹಂದರ.

ಅಂದಿನ ಕಾಲದಲ್ಲಿ ಚೀನಾದಲ್ಲಿ ಯುದ್ಧ ಕೌಶಲದ ಜೊತೆಗೆ ಅತಿಮಾನುಷ ಶಕ್ತಿ ಹೊಂದಿದ್ದರೆ ಅಂತಹ ಪುರುಷರನ್ನು ಅಪ್ರತಿಮ ಯೋಧರು ಎಂದು ಗೌರವಿಸಲಾಗುತ್ತಿತ್ತು. ಆದರೆ ಅದೇ ಗುಣಗಳನ್ನು ಮಹಿಳೆಯರು ಹೊಂದಿದ್ದರೆ ಅಂಥವರನ್ನು ಮಾಟಗಾತಿಯರು ಎಂದು ಸಮಾಜವು ಪ್ರತ್ಯೇಕವಾಗಿ ನೋಡುತ್ತಿತ್ತು. ಈ ಅಸಮಾನತೆಯ ಮೇಲೆ ನಿರ್ದೇಶಕಿಯು ಈ ಚಿತ್ರದ ಮೂಲಕ ಬೆಳಕು ಚೆಲ್ಲಿದ್ದಾರೆ. ಜೊತೆಗೆ ಸ್ತ್ರೀ ಸಮಾನತೆಯ ಆಶಯವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿಕಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ ಎನ್ನಬಹುದು.

ಈ ಚಿತ್ರ ಹಲವು ವಿವಾದಗಳಿಗೂ ಕಾರಣವಾಗಿತ್ತು. ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವಪರ ಹೋರಾಟಗಾರರು ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಈಚೆಗೆ ಕರೆ ನೀಡಿದ್ದರು. ಚಿತ್ರದ ನಾಯಕಿ ಲಿಯು ಯಿಫೈ ಅವರು ಹಾಂಗ್‌ಕಾಂಗ್ ಪೊಲೀಸರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ ಹೋರಾಟಗಾರರು ಚಿತ್ರ ಬಹಿಷ್ಕಾರಕ್ಕೆ ಕರೆ ನೀಡಿದ್ದರು.

ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಕಳುಹಿಸುವ ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ಹಾಂಗ್‌ಕಾಂಗ್‌ನಲ್ಲಿ ಆರಂಭವಾಗಿದ್ದ ಪ್ರತಿಭಟನೆ ಅನಂತರ ಪೊಲೀಸ್‌ ದೌರ್ಜನ್ಯಕ್ಕೂ ಸಾಕ್ಷಿಯಾಗಿತ್ತು. ಈ ಕಾರಣಕ್ಕೆ ಲಿಯು ಯಿಫೈ ಪೋಸ್ಟ್ ಪ್ರತಿಭಟನಕಾರರನ್ನು ಕೆರಳಿಸಿತ್ತು.

ಮೂಲ ಅನಿಮೇಷನ್ ಚಿತ್ರವು ಒಂದು ಪ್ರಬಲವಾದ ಸ್ತ್ರೀವಾದಿ ನಿಲುವನ್ನು ಹೊಂದಿತ್ತು. ಆದರೆ ಈ ಚಿತ್ರವು ಚೀನಿ ಸಾಂಸ್ಕೃತಿಕ ಮೌಲ್ಯಕ್ಕೆ ಹೆಚ್ಚು ಒತ್ತು ನೀಡಿ, ಅದನ್ನು ಉದಾತ್ತವಾಗಿ ಚಿತ್ರಿಸಿರುವುದರಿಂದ ಸ್ತ್ರೀವಾದಿ ನಿಲುವು ಗೌಣವಾಗಿದೆ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ಇನ್ನು ಈ ಚಿತ್ರಕ್ಕೆ ಸಹಕರಿಸಿದ್ದಕ್ಕೆ ಚೀನಾದ ಕ್ಸಿನ್ ಜಿಯಾಂಗ್ ಪ್ರದೇಶದ ಸರ್ಕಾರಿ ಸಂಸ್ಥೆಗಳಿಗೆ ಡಿಸ್ನಿ ಕಂಪನಿಯು ಕೃತಜ್ಞತೆ ಸಲ್ಲಿಸಿರುವುದು ಭಾರಿ ಟೀಕೆಗೆ ಗುರಿಯಾಗಿದೆ. ಚೀನಾ ಸರ್ಕಾರ ಕ್ಸಿನ್ ಜಿಯಾಂಗ್‌ನಲ್ಲಿ ಸಾವಿರಾರು ಉಯಿಘರ್ ಮುಸ್ಲಿಮರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದೆ ಮತ್ತು ಅವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂಬ ಆರೋಪವು ಜಾಗತಿಕ ಮಟ್ಟದಲ್ಲಿ ಕೇಳಿ ಬಂದ ಕಾರಣ ಡಿಸ್ನಿಯ ಈ ನಡೆಗೆ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.