ಚಿತ್ರ: ಡಂಕಿ (ಹಿಂದಿ)
ನಿರ್ಮಾಣ: ಗೌರಿ ಖಾನ್, ರಾಜ್‌ಕುಮಾರ್ ಹಿರಾನಿ, ಜ್ಯೋತಿ ದೇಶಪಾಂಡೆ
ನಿರ್ದೇಶನ: ರಾಜ್‌ಕುಮಾರ್ ಹಿರಾನಿ
ತಾರಾಗಣ: ತಾಪ್ಸಿ ಪನ್ನು, ಶಾರುಕ್ ಖಾನ್, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್, ವಿಕ್ಕಿ ಕೌಶಲ್, ಬೊಮನ್ ಇರಾನಿ.
ಆಸ್ಪತ್ರೆಯಿಂದ ವೃದ್ಧೆ ತಪ್ಪಿಸಿಕೊಂಡು, ಒಂದು ಕೈಲಿ ತನಗೆ ಹಾಕಿದ್ದ ಡ್ರಿಪ್ಸ್ ಅನ್ನೇ ಹಿಡಿದು ಸೀದಾ ವಕೀಲನ ಕಚೇರಿ ತಲುಪುವ ದೃಶ್ಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಇದು ರಾಜ್‌ಕುಮಾರ್ ಹಿರಾನಿ ರುಜು.
ಕೆಲವೇ ನಿಮಿಷಗಳಲ್ಲಿ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಪಂಜಾಬ್. ಇಂಗ್ಲೆಂಡ್‌ಗೆ ಹೋಗಲು ತುದಿಗಾಲಲ್ಲಿ ನಿಂತ ಬಡವರ ಗುಂಪು. ಸೇನೆಯಿಂದ ಬಂದ ನಾಯಕ ಅದನ್ನು ಸೇರಿಕೊಳ್ಳುತ್ತಾನೆ. ಹಣವಿಲ್ಲದ, ಕನಸೊಂದನ್ನೇ ಬಂಡವಾಳವಾಗಿ ಉಳ್ಳ ಅವರೆಲ್ಲ ಇಂಗ್ಲೆಂಡ್‌ಗೆ ಅಕ್ರಮವಾಗಿ ಸಾಗಿ ತಲುಪುವ ಆಸಕ್ತಿಕರ ಒನ್‌ಲೈನರ್ ಅನ್ನು ನಿರ್ದೇಶಕರು ಹಿಂಜುತ್ತಾ ಚಿತ್ರಕಥೆ ಕಟ್ಟಿದ್ದಾರೆ.
ರಾಜ್‌ಕುಮಾರ್ ಹಿರಾನಿ ಸಿನಿಮಾಗಳಲ್ಲಿ ಒಂದು ನಿರ್ದಿಷ್ಟ ವ್ಯಾಕರಣವನ್ನು ನಾವು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಅವರು ತಮ್ಮ ಬಹುತೇಕ ದೃಶ್ಯಗಳ ಆದಿ, ಅಂತ್ಯದ ನಡುವೆ ಭಾವುಕತೆಯ ಹೂರಣ ತುಂಬುತ್ತಾರೆ. ಒಂದೊಂದು ದೃಶ್ಯಕ್ಕೂ ‘ಕ್ಲೈಮ್ಯಾಕ್ಸ್’ ಇರಬೇಕೆನ್ನುವ ಕ್ರಮವಿದು. ನಗು, ಅಳು, ತಿರುವು, ಅಚ್ಚರಿ, ಹುಚ್ಚಾಟ, ಅತಿರೇಕ... ಇವೆಲ್ಲವೂ ಇಡುಕಿರಿದಂತಹ ಸಿನಿಮಾ ವ್ಯಾಕರಣ ಅದು. ಈ ಸಿನಿಮಾದಲ್ಲಿ ಆ ವ್ಯಾಕರಣವೇ ಚಿಂದಿ. ಮೊದಲ ದೃಶ್ಯದಲ್ಲಿ ಕಾಣುವ ಹಿರಾನಿ ಅವರ ಹಳೆಯ ರುಜುವಿಗೆ ಆಮೇಲೆ ಹುಡುಕಾಡಬೇಕು.
ಪಂಜಾಬ್‌ನ ಹಳ್ಳಿಯವರು ಇಂಗ್ಲೆಂಡ್‌ಗೆ ವೀಸಾ ಪಡೆಯಲು ನಡೆಸುವ ಪಡಿಪಾಟಲನ್ನು ಹಾಸ್ಯವಲ್ಲರಿಯಲ್ಲಿ ತೋರಿಸುವುದು ಸಿನಿಮಾದ ಮೊದಲರ್ಧದ ಉದ್ದೇಶ. ಆದರೆ ಎಷ್ಟೋ ಕಡೆ ‘ಇದು ಹಾಸ್ಯವಲ್ಲ... ರೀ’ ಎನಿಸುತ್ತದೆ. ‘ಥ್ರೀ ಈಡಿಯಟ್ಸ್’, ‘ಪಿಕೆ’ ಸಿನಿಮಾಗಳ ಒಂದೊಂದೂ ಕಚಗುಳಿಯನ್ನು ನೆನಪಿಸಿಕೊಂಡರೆ, ಇದು ಹಿರಾನಿ ವರಸೆಯೇ ಅಲ್ಲವಲ್ಲ ಎನಿಸತೊಡಗುತ್ತದೆ.
‘ಡಂಕಿ’ ಎಂದರೆ ಅಕ್ರಮವಾಗಿ ಹಲವು ದೇಶಗಳ ಗಡಿಗಳನ್ನು ದಾಟಿಕೊಂಡು ವಿದೇಶ ತಲುಪುವುದು ಎಂದರ್ಥ. ಈ ಪಯಣವನ್ನಾದರೂ ರೋಚಕ ಅಥವಾ ಆಸಕ್ತಿಕರವಾಗಿ ತೋರಿಸುವ ದೊಡ್ಡ ಸಾಧ್ಯತೆ ಇತ್ತು. ಹಿರಾನಿ ಅದನ್ನೂ ಮಾಡಿಲ್ಲ.
ಚಿತ್ರಕತೆಯು ಹೀಗೇ ಸಾಗಬಹುದು ಎಂಬ ನಮ್ಮ ಊಹೆಯನ್ನು ಬಹುಪಾಲು ನಿಜವಾಗಿಸುವುದು ಸಿನಿಮಾದ ಇನ್ನೊಂದು ದುರ್ಬಲ ಅಂಶ. ಈ ವಿಷಯದಲ್ಲಿಯೂ ಹಿಂದಿನ ತಮ್ಮ ಚಿತ್ರಗಳ ಹೋಲಿಕೆಯಲ್ಲಿ ಹಿರಾನಿ ದಣಿದಂತಾಗಿದ್ದಾರೆ.
ತಾಪ್ಸಿ ಪನ್ನು, ಶಾರುಕ್ ಖಾನ್ ಹಾಗೂ ವಿಕ್ಕಿ ಕೌಶಲ್ ಅಭಿನಯ ಅಲ್ಲಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಬೊಮನ್ ಇರಾನಿ ಪಾತ್ರಪೋಷಣೆಯೇ ಜಾಳುಜಾಳಾಗಿದೆ. ಹಾಡುಗಳೂ ಕಾಡುವುದಿಲ್ಲ. ಅಪರೂಪಕ್ಕೊಮ್ಮೆ ಕಣ್ಣಂಚಿನಲ್ಲಿ ನೀರು ಒಸರುವಂತೆ ಮಾಡುವ ಕೆಲವು ವರಸೆಗಳನ್ನು ಹೊರತುಪಡಿಸಿದರೆ ರಾಜ್‌ಕುಮಾರ್ ಹಿರಾನಿ ಫಾರ್ಮ್ ಕಳೆದುಕೊಂಡಿದ್ದಾರೇನೋ ಎನ್ನುವ ಅಭಿಪ್ರಾಯವೇ ಕೊನೆಗೆ ಉಳಿಯವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.