ADVERTISEMENT

ಸಿನಿಮಾ ವಿಮರ್ಶೆ: ಮಾತಿನ ಮಂಟಪದಲ್ಲಿ ‘ರಂಗನಾಯಕ’

ಪ್ರಜಾವಾಣಿ ವಿಶೇಷ
Published 9 ಮಾರ್ಚ್ 2024, 0:28 IST
Last Updated 9 ಮಾರ್ಚ್ 2024, 0:28 IST
ಜಗ್ಗೇಶ್‌
ಜಗ್ಗೇಶ್‌   

ಚಿತ್ರ: ರಂಗನಾಯಕ

ನಿರ್ದೇಶನ: ಗುರುಪ್ರಸಾದ್‌

ನಿರ್ಮಾಣ: ವಿಖ್ಯಾತ್‌ 

ADVERTISEMENT

ತಾರಾಗಣ: ಜಗ್ಗೇಶ್‌ ರಚಿತಾ ಮಹಾಲಕ್ಷ್ಮಿ ಗುರುಪ್ರಸಾದ್‌ ಮತ್ತಿತರರು

ಟಿವಿ ವಾಹಿನಿಯೊಂದರಲ್ಲಿ ಸಮ್ಮೋಹನ ವಿದ್ಯೆ ಬಳಸಿ ಮನುಷ್ಯನನ್ನು ಹಿಂದಿನ ಜನ್ಮಕ್ಕೆ ಕರೆದುಕೊಂಡು ಹೋಗುವ ಕಾರ್ಯಕ್ರಮ. ಅದಕ್ಕೆ ಅತಿಥಿಯಾಗಿ ಬರುವುದು ನಿರ್ದೇಶಕ ಗುರುಪ್ರಸಾದ್‌. ಅವರ ಬಗ್ಗೆ ಮಾತನಾಡಲು ಪ್ಯಾನೆಲ್‌ನಲ್ಲಿ ಕುಳಿತವರು ನಿರ್ದೇಶಕ ಯೋಗರಾಜ್‌ ಭಟ್ಟರು. ಇಲ್ಲಿಂದ ರಂಗನಾಯಕ ಚಿತ್ರ ಪ್ರಾರಂಭವಾಗುತ್ತದೆ. 15 ವರ್ಷಗಳ ನಂತರ ‘ಮಠ’ ಜೋಡಿಯಿಂದ ಬಂದ ಮತ್ತೊಂದು ಚಿತ್ರ. ‘ಮಠ’ದಂತೆ ಇಲ್ಲಿಯೂ ಹಾಸ್ಯಕ್ಕೆ, ದ್ವಂದ್ವಾರ್ಥದ ಸಂಭಾಷಣೆಗಳಿಗೆ ಬರವಿಲ್ಲ!

ಸಮ್ಮೋಹನಕ್ಕೆ ಒಳಗಾಗುವ ಮೊದಲು ಗುರುಪ್ರಸಾದ್‌ ಈ ಜನ್ಮದ ಬಗ್ಗೆ, ಕನ್ನಡ ಚಿತ್ರರಂಗದ ಕುರಿತು ಒಂದಷ್ಟು ಮಾತನಾಡುತ್ತಾರೆ. ಆ ಸನ್ನಿವೇಶದಲ್ಲಿ ರಂಗನಾಯಕನಾಗಿ ಜಗ್ಗೇಶ್‌ ಆಗಮನವಾಗುತ್ತದೆ. ನಾಯಕನ ಪ್ರೇಯಸಿಯಾಗಿ ರಚಿತಾ ಮಹಾಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಗುರುಪ್ರಸಾದ್‌ ಕಥೆ ನಡೆಯುತ್ತಿದ್ದರೆ ಮತ್ತೊಂದೆಡೆ ರಂಗನಾಯಕನ ಟ್ರ್ಯಾಕ್‌ ತೆರೆದುಕೊಳ್ಳುತ್ತದೆ. 

ಚಿತ್ರದ ಮೊದಲಾರ್ಧ ಕನ್ನಡದ ಮೊದಲ ಚಿತ್ರ ಮಾಡಿದ ವ್ಯಕ್ತಿಯ ಕಥೆಯ ಹಿಂದೆ ಸಾಗುತ್ತದೆ. ಇಲ್ಲಿ ಗುರುಪ್ರಸಾದ್‌ ಹೆಚ್ಚು ಆವರಿಸಿಕೊಂಡು, ಅವರ ತಂದೆಯ ಕಥೆ ತೆರೆದುಕೊಂಡು, ಜಗ್ಗೇಶ್‌ಗೆ ಅವಕಾಶ ಕಡಿಮೆ. ದ್ವಿತೀಯಾರ್ಧದಲ್ಲಿ ಮಕ್ಕಳಿಲ್ಲದ ರಾಜನ ಮನೆಗೆ ದತ್ತುಪುತ್ರನಾಗಿ ಬರುವುದರೊಂದಿಗೆ ರಂಗನಾಯಕನ ಕಥೆ ಪ್ರಾರಂಭವಾಗುತ್ತದೆ. ನಂತರ ಇವೆರಡೂ ಕಥೆಗಳು ಬೆಸೆದುಕೊಳ್ಳುತ್ತ ಹೋಗುತ್ತವೆ. ಇದು ಅಪ್ಪಟ್ಟ ಗುರುಪ್ರಸಾದ್‌ ಶೈಲಿಯ ಚಿತ್ರ. ಕನ್ನಡ ಚಿತ್ರರಂಗಕ್ಕೆ ಟಾಂಗ್‌ ಕೊಡುತ್ತ ಮಾತಿನಿಂದಲೇ ನಗಿಸುತ್ತಾರೆ. ಹಲವು ಕಡೆ ಮೌನಕ್ಕೆ ಜಾಗವಿಲ್ಲದೆ ಮಾತು ವಿಪರೀತವಾಯಿತು ಎನ್ನಿಸುತ್ತದೆ. ಕಥೆ ನ್ಯೂಸ್‌ರೂಂ ಮತ್ತು ಅರಮನೆ ಬಿಟ್ಟು ಕದಲದಿರುವುದು ಓಘವನ್ನು ತಗ್ಗಿಸುತ್ತದೆ.  

ಇಡೀ ಚಿತ್ರದಲ್ಲಿ ಕ್ಲೋಸಪ್‌ಗಳು ಹೆಚ್ಚಿವೆ. ಜಗ್ಗೇಶ್‌ ಹಾವಭಾವ, ವಿಚಿತ್ರ ವರ್ತನೆಯ ಹಾಸ್ಯದಿಂದ ಇಷ್ಟವಾಗುತ್ತಾರೆ. ರಚಿತಾ ಮಹಾಲಕ್ಷ್ಮಿ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೋಗರಾಜ್‌ ಭಟ್ಟರು ಕೂಡ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನೂಪ್‌ ಸೀಳಿನ್‌ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿವೆ. ಸಾಮ್ರಾಟ್ ಅಶೋಕ್ ಗೌತಂ ಫ್ರೇಮುಗಳನ್ನು ವರ್ಣಮಯವಾಗಿಸಿದ್ದಾರೆ. ಚಿತ್ರದ ಕಲರ್‌ ಟೋನ್‌ ಇಷ್ಟವಾಗುತ್ತದೆ. ಚಿತ್ರಕಥೆಯನ್ನು ಇನ್ನಷ್ಟು ಬಿಗಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.