ಸಾಹಸಭರಿತ ಫಿಕ್ಷನ್ ಸರಣಿಯಾದ ‘ಮ್ಯಾಡ್ ಮ್ಯಾಕ್ಸ್’ಗೆ ಹಾಲಿವುಡ್‌ನಲ್ಲಿ ವಿಶೇಷ ಸ್ಥಾನ ಇದೆ. ಸಿನಿಮಾಲೋಕದ ಮಾಸ್ಟರ್‌ಮೈಂಡ್ ಎಂದೇ ಖ್ಯಾತಿ ಆಗಿರುವ ಆಸ್ಟ್ರೇಲಿಯನ್ ಫಿಲ್ಮ್ ಮೇಕರ್ ಜಾರ್ಜ್ ಮಿಲ್ಲರ್ ಅವರು ನಿರ್ದೇಶಿಸಿರುವ ಮ್ಯಾಡ್ ಮ್ಯಾಕ್ಸ್ ಸರಣಿಯ ಮತ್ತೊಂದು ಚಿತ್ರ ‘ಫ್ಯುರಿಯೋಸಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾ’.
80ರ ದಶಕದಲ್ಲಿ ಸಾಹಸ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಮಿಲ್ಲರ್ ಅವರು ತಮ್ಮ 80ನೇ ವಯಸ್ಸಿನಲ್ಲೂ 'ಮಾಸ್ಟರ್‌ಪೀಸ್' ಎನ್ನುವಂತಹ ಮತ್ತೊಂದು ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಮ್ಯಾಡ್ ಮ್ಯಾಕ್ಸ್ ಸರಣಿಯ 6 ಚಿತ್ರಗಳು ಒಳಗೊಂಡಂತೆ ಇದು ಅವರು ನಿರ್ದೇಶಿಸಿರುವ 12ನೇ ಚಿತ್ರ.
‘ಫ್ಯುರಿಯೋಸಾ’ ಇದು 2015ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಆದಂತಹ ಹಾಗೂ 6 ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಭರ್ಜರಿ ಆಕ್ಷನ್‌ನ ‘ಮ್ಯಾಡ್ ಮ್ಯಾಕ್ಸ್– ಫ್ಯೂರಿ ರೋಡ್’ನ ಪ್ರಿಕ್ವೆಲ್.
ಇಲ್ಲಿ ‘ಫ್ಯುರಿಯೋಸಾ’ (ಇಂಪ್ರೇಟರ್ ಫ್ಯುರಿಯೋಸಾ ಎಂಬ ಒಂದು ಕಾಲ್ಪನಿಕ ಪಾತ್ರ–ದಂಡನಾಯಕಿ) ಗ್ರೀನ್‌ಲ್ಯಾಂಡ್ ಎಂಬ ಜೀವಚೈತನ್ಯದ ಜಾಗದಿಂದ ವೇಸ್ಟ್‌ಲ್ಯಾಂಡ್ ಎಂಬ ನರಕದಲ್ಲಿನ ಸಿಟಾಡಲ್ ಎಂಬ ಸುಪ್ಪತ್ತಿಗೆಗೆ ಬಂದ ಕಥೆಯನ್ನು ಹೇಳಲಾಗಿದೆ.
ಪ್ರಾಕೃತಿಕ ವಿಕೋಪದ ನಂತರ ಎಲ್ಲವನ್ನೂ ಕಳೆದುಕೊಂಡ ಮೇಲೆ ಮದರ್‌ಲ್ಯಾಂಡ್, 'ವೇಸ್ಟ್‌ಲ್ಯಾಂಡ್' ಆಗಿ ಬದಲಾಗುವ ಭಯಾನಕ ಸನ್ನಿವೇಶ ಹಾಗೂ ಆ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳ ಪರಿಕಲ್ಪನೆಯೇ ಇಲ್ಲಿ ಹೈಲೈಟ್.
ಎಲ್ಲ ಅಳಿದರೂ ಇಲ್ಲಿ ಪ್ರೀತಿ, ವಾತ್ಸಲ್ಯ, ಪ್ರತಿಕಾರ ಉಳಿದಿದೆ. ಅಪಹರಣಕ್ಕೆ ಒಳಗಾದ ಮಗಳನ್ನು (ಬಾಲ್ಯದ ಫ್ಯುರಿಯೋಸಾ) ಕರೆತರಲು ರಾಕ್ಷಸರಿರುವ ಇನ್ನೊಂದು ಜಾಗಕ್ಕೆ ಒಬ್ಬಳೇ ಹೋಗಲೂ ಫ್ಯುರಿಯೋಸಾಳ ತಾಯಿ ಹೆದರುವುದಿಲ್ಲ.
ಕಥೆಯ ಸ್ವಾರಸ್ಯ ಏನು?
ರಾಕ್ಷಸರ ಗುಂಪಿನ ನಾಯಕ ಡಿಮಂಟಸ್. ಈತ ಖಾಲಿ ಜಾಗದ ಬೈಕರ್‌ಗಳ ನಾಯಕ. ಬಾಲ್ಯದಲ್ಲಿ ಫ್ಯುರಿಯೋಸಾಳನ್ನು ಬೈಕರ್‌ಗಳು ಗ್ರೀನ್‌ಲ್ಯಾಂಡ್‌ನಿಂದ ಅಪಹರಣ ಮಾಡಿಕೊಂಡು ಬಂದು ಡಿಮಂಟಸ್ ಬಳಿ ಬಿಟ್ಟಾಗ ಆತನಿಗೆ ಬೇಕಾಗಿದ್ದ ಗ್ರೀನ್‌ಲ್ಯಾಂಡ್ ಇರುವಿಕೆ ಬಗೆಗಿನ ಮಾಹಿತಿಯನ್ನು ಫ್ಯುರಿಯೋಸಾ ಬಿಟ್ಟು ಕೊಡುವುದಿಲ್ಲ.
ಇದೇ ವೇಳೆ ತಾಯಿ, ಮಗಳನ್ನು ಕಾಪಾಡಬೇಕೆಂದು ಬಂದು ಡಿಮಂಟಸ್‌ನಿಂದ ಭೀಕರವಾಗಿ ಹತ್ಯೆಯಾದಾಗ ಫ್ಯುರಿಯೋಸಾಳಿಗೆ ಬೇರೆ ದಾರಿಯಿಲ್ಲ. ಡಿಮಂಟಸ್ ಗ್ರೀನ್‌ಲ್ಯಾಂಡ್‌ಗೆ ಹುಡುಕುವ ಹಟ. ಈ ಹಟದ ದಾರಿಯಲ್ಲೇ ಫ್ಯುರಿಯೋಸಾ ಮತ್ತೊಬ್ಬ ರಾಕ್ಷಸ, ಸಿಟಾಡೆಲ್ ಪ್ರದೇಶದ ನಾಯಕ ಇಮ್ಮೊರ್ಟನ್ ಜೋನ ಪಾಲಾಗುತ್ತಾಳೆ.
ಇಲ್ಲಿ ಡಿಮಂಟಸ್ ಇಮ್ಮೊರ್ಟನ್‌ನ ಜೊತೆ ಒಪ್ಪಂದ ಮಾಡಿಕೊಂಡು ಅವಳನ್ನು ಬಿಟ್ಟು ಹೋಗಿರುತ್ತಾನೆ. ಅವಳು ಇಮ್ಮೊರ್ಟನ್ ಕರಾಳ ಜಗತ್ತಿನಲ್ಲಿ ಬೆಳೆದು ದೊಡ್ಡವಳಾಗುತ್ತಾಳಲ್ಲದೇ ಇಮ್ಮೊರ್ಟನ್‌ಗೆ ಅಷ್ಟೇ ದೊಡ್ಡ ಶಕ್ತಿಯಾಗುತ್ತಾಳೆ. ನಂತರ ಇಮ್ಮೊರ್ಟನ್–ಡಿಮಂಟಸ್ ನಡುವಿನ ಯುದ್ಧದಲ್ಲಿ ತನ್ನ ಇರುವಿಕೆಯನ್ನು ಕಂಡು ಕೊಳ್ಳುವ ಫ್ಯುರಿಯೋಸಾ ಕಡೆಗೆ ತನ್ನ ತಾಯಿಯನ್ನು ಕೊಂದ ಡಿಮಂಟಸ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಸಫಲ ಆಗುತ್ತಾಳೋ ಇಲ್ಲವೋ ಎಂಬುದು ಕಥಾ ಕುತೂಹಲ.
ಸಾಹಸ ದೃಶ್ಯಗಳು ಹೆಚ್ಚು ನೈಜತೆ
ಇಲ್ಲಿ ಕಥೆಯೂ ಸ್ಪಷ್ಟವಾಗಿದೆ. ಅದಕ್ಕೆ ಚಿತ್ರಕಥೆಯೂ ಅಷ್ಟೇ ಸ್ಪುಟವಾಗಿ ಕೂಡಿಕೊಂಡಿದೆ. ಇವು ಒಂದು ತೂಕವಾದರೇ ಅದರಷ್ಟೇ ಮತ್ತೊಂದು ತೂಕ ರೋಮಾಂಚಕಾರಿ ಸಾಹಸ ದೃಶ್ಯಗಳ ಸಂಯೋಜನೆ. ಗ್ರಾಫಿಕ್ ಮಿಶ್ರವಾಗಿದ್ದರೂ ಆರಂಭದಿಂದ ಅಂತ್ಯದವರೆಗೂ ಇದರಲ್ಲಿ ಬರುವ ಸಾಹಸ ದೃಶ್ಯಗಳು ಹೆಚ್ಚು ನೈಜ ಎನಿಸುತ್ತವೆ. ಇಂತಹ ದೃಶ್ಯಗಳು ಹಾಲಿವುಡ್‌ನಲ್ಲಿ ಸಾಕಷ್ಟು ಬಂದಿದ್ದರೂ ಈ ಸಿನಿಮಾದ ಸಾಹಸ ದೃಶ್ಯಗಳು ಹೆಚ್ಚು ನೈಜತೆಯನ್ನು ಬಿಂಬಿಸುವುದು ಅದರ ಹೆಚ್ಚುಗಾರಿಕೆ.
ಫ್ಯುರಿಯೋಸಾ ಪಾತ್ರದಲ್ಲಿ ನಟಿ ಆನ್ಯಾ ಟೇಲರ್ ಜಾಯ್ ಅವರು ಜೀವಿಸಿದ್ದಾರೆ. ಪ್ಯೂರಿ ರೋಡ್‌ನಲ್ಲಿ ಚಾರ್ಲಿ ಥೆರೋನ್ ನಿರ್ವಹಿಸಿದ್ದ ಪಾತ್ರವನ್ನು ಯಂಗ್ ಫ್ಯುರಿಯೋಸಾ ಆಗಿ ಆನ್ಯಾ ಅವಾಹಿಸಿಕೊಂಡಿದ್ದಾರೆ. ಇಲ್ಲಿ ಪ್ರತಿಕಾರದ ನೀಲಿ ಕಂಗಳ ಉರಿಯಲ್ಲಿ ಅವರ ಬಳಕುವ ಮೈಮಾಟ ಮರೆಯಾಗಿ ಕಾಣಿಸಿಕೊಳ್ಳುತ್ತದೆ. ಕೃತಕ ಮೂಗು ಅಳವಡಿಸಿಕೊಂಡು ಡಿಮಂಟಸ್ ಪಾತ್ರಕ್ಕೆ ಜೀವ ತುಂಬಿರುವ ಕ್ರಿಸ್ ಹೆಮ್ಸ್‌ವರ್ಥ್ ಅವರು ಬೆರಗು ಮೂಡಿಸುತ್ತಾರೆ.
ಚಿತ್ರಕಥೆ ಹಾಗೂ ಸಂಭಾಷಣೆಗೆ ದಕ್ಕೆ ತರದಂತೆ ಹಿನ್ನೆಲೆ ಸಂಗೀತ ಚಿತ್ರದಲ್ಲಿ ಲೀನವಾಗಿರುವುದು ಪ್ರೇಕ್ಷಕರಿಗೆ ಆಪ್ತತೆ ತರುತ್ತದೆ. ಎಡಿಟಿಂಗ್ ಕೂಡ ಹದವಾಗಿದೆ. ಜಾರ್ಜ್ ಮಿಲ್ಲರ್ ಅವರ ಪತ್ನಿ ಮಾರ್ಗರೇಟ್ ಸಿಕ್ಸೆಲ್ ಅವರೇ ಇದರ ಎಡಿಟರ್. ಖ್ಯಾತ ಸಿನಿಮಾಟೋಗ್ರಾಫರ್ ಸಿಮೋನ್ ಡಗ್ಗನ್ ಅವರ ಕೈಚಳಕದಲ್ಲಿ ಮೂಡಿಬಂದಿರುವ ದೃಶ್ಯಗಳು ಪ್ರೇಕ್ಷಕನನ್ನು ಹಿಡಿದಿಡುತ್ತವೆ.
ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ
₹1,396 ಕೋಟಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಒಂದು ಪ್ರಮುಖ ಹಿನ್ನಡೆ ಏನೆಂದರೆ ಯಂಗ್ ಫ್ಯುರಿಯೋಸಾ ಪಾತ್ರ ತೆರೆದುಕೊಳ್ಳುವಾಗ ಅದನ್ನು ಪರಿಣಾಮಕಾರಿಯಾಗಿ ತೋರಿಸದಿರುವುದು ಪ್ರೇಕ್ಷಕನಿಗೆ ಕೆಲಕಾಲ ಗೊಂದಲ ಮೂಡಿಸುತ್ತದೆ.
ಎಲ್ಲಾ ಪ್ರಕಾರದ ಪ್ರೇಕ್ಷಕರು ಇಂತಹ ಸಿನಿಮಾವನ್ನು ಇಷ್ಟಪಡಲಿಕ್ಕಿಲ್ಲ ಎನ್ನುವ ಅಪವಾದ ಬರಬಹುದಾದರೂ ನಿರ್ದೇಶಕರಿಗೆ ಇದು ಮಾಸ್ಟರ್‌ಪೀಸ್ ಎನ್ನುವಂತಹ ಸಿನಿಮಾ ಆಗಬಲ್ಲದು ಎನ್ನುವ ಸ್ಪಷ್ಟತೆ ಇದೆ ಎಂದು ತೋರುತ್ತದೆ.
ಈ ಸಿನಿಮಾ ಒಂದು ಪೋಸ್ಟ್ ಅಪೋಕ್ಯಾಲಿಪ್ಸ್ ಫಿಕ್ಷನ್ ಸ್ಟೋರಿ ಆದರೂ (ಅಳಿದ ನಂತರ ಉಳಿದಿದ್ದು) ಫಿಕ್ಷನ್‌ಗಳಲ್ಲಿ ಬರುವ ಕ್ಯಾರೆಕ್ಟರ್‌ಗಳನ್ನು ತೆರೆ ಮೇಲೆ ತಂದು, ಜೀವ ನೀಡಿ, ಅವುಗಳನ್ನು ಯಶಸ್ವಿಯಾಗಿ ಪ್ರೇಕ್ಷಕರಿಗೆ ದಾಟಿಸುತ್ತದೆ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.