ADVERTISEMENT

‘ಗಾಳಿಪಟ–2’ ಸಿನಿಮಾ ವಿಮರ್ಶೆ: ಏರಿಳಿತದಲ್ಲಿ ವಿಲವಿಲ ಎನ್ನುವ ಪಟ!

ಅಭಿಲಾಷ್ ಪಿ.ಎಸ್‌.
Published 12 ಆಗಸ್ಟ್ 2022, 9:42 IST
Last Updated 12 ಆಗಸ್ಟ್ 2022, 9:42 IST
ದಿಗಂತ್‌, ಗಣೇಶ್‌ ಹಾಗೂ ಪವನ್‌ ಕುಮಾರ್‌
ದಿಗಂತ್‌, ಗಣೇಶ್‌ ಹಾಗೂ ಪವನ್‌ ಕುಮಾರ್‌   

ಸಿನಿಮಾ: ಗಾಳಿಪಟ–2(ಕನ್ನಡ)
ನಿರ್ದೇಶನ: ಯೋಗರಾಜ್‌ ಭಟ್‌
ನಿರ್ಮಾಣ: ಉಮಾ, ಎಂ. ರಮೇಶ್‌ ರೆಡ್ಡಿ
ತಾರಾಗಣ: ಅನಂತನಾಗ್‌, ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀನಾಥ್‌

ಯೋಗರಾಜ್‌ ಭಟ್‌ ಅವರು ದಶಕದ ಬಳಿಕ ಮತ್ತೊಂದು ‘ಗಾಳಿಪಟ’ವನ್ನು ಹಾರಿಬಿಡುತ್ತಾ ತಮ್ಮ ‘ಹಳೆ ಪಾತ್ರೆ’ಗೆ ಅದೇ ಹಳೆ ಒಗ್ಗರಣೆ ಹಾಕಿದ್ದಾರೆ. ಸ್ನೇಹ, ಪ್ರೇಮ, ವಿರಹ, ತ್ಯಾಗ, ಭಾವನೆಯ ಜೊತೆಗೆ ಒಂದಿಷ್ಟು ಮಸಾಲೆ ಸೇರಿಸಿದ್ದರೂ, ಯಾವುದೂ ಆಘ್ರಾಣಿಸುವಷ್ಟು ಘಂ ಎನ್ನದಿರುವ ಕಾರಣ ‘ಪ್ರಾಯಶಃ’ ಕಥೆ ಅಡಿಹಿಡಿದಿದೆ.ಅಂತ್ಯದವರೆಗೂದಿಕ್ಕಿಲ್ಲದೆ ಗಿರಕಿ ಹೊಡೆಯುವ ಪಟವನ್ನುಕೊನೆಯಕಾಲುಗಂಟೆಯಲ್ಲಿನಿಯಂತ್ರಿಸುವುದಕ್ಕೆ ನಿರ್ದೇಶಕರು ಇಲ್ಲಿ ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ:

‘ತ್ರಿ ಈಡಿಯಟ್ಸ್‌’ ಹಾಗೂ ‘ಹ್ಯಾಂಗ್‌ ಒವರ್‌’ನ ಚಿತ್ರಕಥೆಯಂತೆಯೇ ‘ಗಾಳಿಪಟ–2’ಕ್ಕೆ ಸೂತ್ರಕಟ್ಟಿ ತೆರೆಗೆ ಹಾರಿಬಿಟ್ಟಿದ್ದಾರೆ ನಿರ್ದೇಶಕರು. 14 ವರ್ಷದ ಹಿಂದೆ ಮೊದಲ ಗಾಳಿಪಟವನ್ನು ಹಾರಿಬಿಟ್ಟ ಅನುಭವದಲ್ಲೇ ಇಲ್ಲಿಯೂ ಪಟವನ್ನು ತಯಾರಿಸಿದ್ದಾರೆ ಯೋಗರಾಜ್‌ ಭಟ್‌. ಮೊದಲ ಭಾಗದ ಕಥೆಗೂ ಎರಡನೇ ಭಾಗದ ಕಥೆಗೆ ಸಂಬಂಧವಿಲ್ಲ. ಕೆಲ ಪಾತ್ರಗಳಷ್ಟೇ ತಮ್ಮ ಮೂಲ ಹೆಸರು, ಗುಣಲಕ್ಷಣಗಳನ್ನು ಉಳಿಸಿಕೊಂಡು ಇಲ್ಲಿಯೂ ಮುಂದುವರಿದಿವೆ. ಸ್ನೇಹಿತನೊಬ್ಬ ಬದಲಾಗಿದ್ದಾನೆ, ಯೌವ್ವನ ಮರಳಿದೆ ಅಷ್ಟೆ.

ADVERTISEMENT

ಭಟ್ಟರ ಪಾಕದಲ್ಲಿ ಸದಾ ಸಿಗುವ ತುಂಟತನ, ಸ್ನೇಹ, ಲವ್‌ ಆ್ಯಟ್‌ ಫಸ್ಟ್‌ ಸೈಟ್‌, ವಿರಹ, ಕಣ್ಣೀರು ಎಲ್ಲವೂ ಇಲ್ಲಿದೆ. ಸದಾ ಕಾಲೆಳೆಯುತ್ತಾ ಜೀವನ ಸಾಗಿಸುವ ನಾಯಕ, ದ್ವಿತೀಯಾರ್ಧದಲ್ಲಿ ತಾನೂ ಭಾವುಕನಾಗುವ ಪರಿಪಾಟ ಇಲ್ಲೂ ಮುಂದುವರಿದಿದೆ. ಆದರೆ ಮೊದಲ ಭಾಗದಂತೆ ಬಿಗಿಯಾದ ಕಥೆಯಿಲ್ಲದೆ ಗಾಳಿಪಟ–2 ಆರಂಭದಿಂದಲೇ ಗಿರಕಿ ಹೊಡೆಯಲಾರಂಭಿಸುತ್ತದೆ.

ಇದನ್ನೂ ಓದಿ:

ಕಾದಂಬರಿಕಾರ್ತಿ ‘ಕುಮುದಾ’ (ಸುಧಾ ಬೆಳವಾಡಿ) ಹಾಗೂ ಮಾಜಿ ಶಾಸಕ ‘ಬೈರೇಗೌಡ’ (ರಂಗಾಯಣ ರಘು) ಸುಪುತ್ರ ‘ಗಣಿ’ (ಗಣೇಶ್‌) ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ನೀರುಕೋಟೆಯ ಕಾಲೇಜಿಗೆ ಸೇರುತ್ತಾನೆ. ಇಲ್ಲಿ ಜೊತೆಯಾಗುವವರು ‘ದಿಗಿ’ (ದಿಗಂತ್‌) ಮತ್ತು ‘ಭೂಷಣ್‌’ (ಪವನ್‌ ಕುಮಾರ್‌). ಗಣಿಯ ಕನ್ನಡದ ಜ್ಞಾನ ಮಳೆಗಾಲದಲ್ಲಿ ನೀರುಕೋಟೆ ಕಾಲೇಜಿನ ಚಾವಣಿಯಷ್ಟೇ ಸೋರುತ್ತದೆ. ಗಣಿ ಮೊದಲ ನೋಟದಲ್ಲೇ ‘ಶ್ವೇತ’ಳ (ವೈಭವಿ ಶಾಂಡಿಲ್ಯ) ಪಾಲಾಗುತ್ತಾನೆ.

ದಿಗಿಗೆ ಹಳೆ ಪ್ರೇಯಸಿ ‘ಅನುಪಮಾ’ (ಸಂಯುಕ್ತಾ ಮೆನನ್‌) ಸಿಕ್ಕಿದ್ದಾಳೆ. ಭೂಷಣ್‌ಗೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ‘ಶರ್ಮಿಳಾ’ (ಶರ್ಮಿಳಾ ಮಾಂಡ್ರೆ) ಮೇಲೆ ‘ಬಗೆಹರಿಯದ’ ಪ್ರೀತಿ ಮೂಡಿದೆ. ಈ ಪಾತ್ರಗಳ ಜೊತೆಗೆ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಿಶೋರ್‌ (ಅನಂತನಾಗ್‌) ಪ್ರವೇಶ. ಇವರೆಲ್ಲರೂ ಆರಂಭದ ಅರ್ಧಗಂಟೆಯಲ್ಲಿ ಮೂರು ಹಾಡಿನೊಳಗೆ ಜೊತೆಯಾಗುತ್ತಾರೆ. ಮುಂದಿನ ಪಯಣವೇ ಚಿತ್ರದ ಕಥೆ.

ಇದನ್ನೂ ಓದಿ:

ಮೊದಲ ಭಾಗಕ್ಕೆ ಜೀವತುಂಬಿದ್ದೇ ಟೈಟಲ್‌ ಹಾಡು. ‘ಗಾ......ಳಿಪಟ’ ಎಂದಾಕ್ಷಣ ಇಡೀ ಸಿನಿಮಾ ಕಣ್ಮುಂದೆ ಬರುತ್ತಿತ್ತು. ಆದರೆ ಎರಡನೇ ಭಾಗದಲ್ಲಿ ಟೈಟಲ್‌ ಹಾಡು ಪ್ರೇಕ್ಷಕರನ್ನು ಸೆಳೆದಿಲ್ಲ. ಆರಂಭದಲ್ಲೇ ಸಾಲು ಸಾಲು ಹಾಡುಗಳ ತಾಳ್ಮೆ ಪರೀಕ್ಷೆಗಿಳಿದಿವೆ. ಅವುಗಳಿಗೆ ಜಯಂತ ಕಾಯ್ಕಿಣಿ, ಅರ್ಜುನ್‌ ಜನ್ಯ ಅವರು ನೀಡಿರುವ ಇಂಪು ಸವಿಯುವ ಸಮಯಾವಕಾಶವನ್ನೂ ನಿರ್ದೇಶಕರು ನೀಡಿಲ್ಲ. ಕೆಲವೆಡೆ ಸಂಭಾಷಣೆ ನಗಿಸುತ್ತವೆಯೇ ಹೊರತು ಪಾತ್ರಗಳಲ್ಲ. ಬಿಗಿಯಾದ ಕಥೆ, ಚಿತ್ರಕಥೆಯಲ್ಲದೆ ಗಿರಕಿ ಹೊಡೆಯುವ ಪಟಕ್ಕೆ ರಂಗಾಯಣ ರಘು ಪ್ರವೇಶ ಒಂದೈದು–ಹತ್ತು ನಿಮಿಷ ಉಸಿರು (ಗಾಳಿ) ನೀಡಿ ಎಬ್ಬಿಸಿದೆ.

‘ಬೈರೇಗೌಡ’ರ ನಿರ್ಗಮನದ ನಂತರ ಪಟ ಮತ್ತೆ ಪಲ್ಟಿಯಾಗುತ್ತದೆ. ದ್ವಿತೀಯಾರ್ಧದ ಕಥೆ ವಿದೇಶ ಪ್ರಯಾಣಕ್ಕೆ ಉಚಿತ ಟಿಕೆಟ್‌ ಅಷ್ಟೆ. ಪ್ರಾಧ್ಯಾಪಕರಾಗಿದ್ದ ಕಿಶೋರ್‌ ಇಲ್ಲಿ ಫಿಲಾಸಫರ್‌ ಆಗುತ್ತಾರೆ. ಈ ಭಾಗದಲ್ಲೂ ಬಿಗಿಯಾದ ಕಥೆ ಇರದ ಕಾರಣ ಪಟ ವಿಲವಿಲ ಒದ್ದಾಡುತ್ತದೆ. ಇಡೀ ಸಿನಿಮಾದಲ್ಲಿ ಕೆಲವೆಡೆ ಲಾಜಿಕ್‌ ಹುಡುಕಬಾರದು. ಈ ಸಂದರ್ಭದಲ್ಲಿ ಗಣೇಶ್ಮತ್ತೆ ತನ್ನ ಬಲುಸಾಮರ್ಥ್ಯದ ನಟನಾಶೈಲಿಗೆ ಹೊರಳಿದಾಗ ಚಿತ್ರಕಥೆ ಬಿಗಿಯಾಗುತ್ತದೆ. ಕಾರೊಳಗೆ ಕುಳಿತು ಗಣಿ ಅಳುವಾಗ ಪ್ರೇಕ್ಷಕನಿಗೆ ಉಸಿರುಗಟ್ಟುತ್ತದೆ. ಅಮ್ಮನ ಮಡಿಲಲ್ಲಿ ಕೈಯಿಟ್ಟು ಗಣಿ ಚಡಪಡಿಸುವಾಗ ದುಃಖ ಉಮ್ಮಳಿಸುತ್ತದೆ.

ಕಥೆಯ ಕಾರಣದಿಂದ ಮೊದಲ ಭಾಗದಲ್ಲಿರುವಂತೆ ನಗೆಯ ಕಡಲಿನಲ್ಲಿ ಪ್ರೇಕ್ಷಕನನ್ನು ತೇಲಿಸಲು ಗಣೇಶ್‌ ಇಲ್ಲಿ ಕೊಂಚ ವಿಫಲವಾದರೂ, ಭಾವನಾತ್ಮಕ ದೃಶ್ಯಗಳಲ್ಲಿ ಅಂಕ ಗಿಟ್ಟಿಸುತ್ತಾರೆ. ಅನಂತನಾಗ್‌, ಸುಧಾ ಬೆಳವಾಡಿ ಎಂದಿನಂತೆ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ದಿಗಂತ್‌ ಅಘೋರಿಯಾಗಿ ಆಗಾಗ ನಗಿಸುತ್ತಾರೆ. ಪವನ್‌ ಡ್ಯಾನ್ಸ್‌ ನೋಡಲು ಪ್ರೇಕ್ಷಕನಿಗೆ ಖಂಡಿತಾ ಬೇಕು ‘ಹಿತರಕ್ಷಣೆ’. ‘ಎಷ್ಟೆಂದರೂ ನಾನು ಉದಯೋನ್ಮುಖ ಪ್ರೇಮಿ’ ಎಂದು ಮುಚ್ಚಳಿಕೆ ಕೊಟ್ಟಿರುವ ಕಾರಣ ಪ್ರೇಮಕಥೆಯಲ್ಲಿ ನಟನೆಯನ್ನು ಕ್ಷಮಿಸಬಹುದು. ವೈಭವಿ ಶಾಂಡಿಲ್ಯ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ.

ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ಶ್ರೀನಾಥ್‌ ನಟನೆ ಕಥೆಯ ನೆಪಕ್ಕಷ್ಟೆ. ಇನ್ನಾದರೂ ಕ್ಲೈಮ್ಯಾಕ್ಸ್‌ನಲ್ಲಿ ನಾಯಕ–ನಾಯಕಿಯನ್ನು ನದಿಯಲ್ಲಿ, ಕೆರೆಯಲ್ಲಿ ಮುಳುಗಿಸುವುದನ್ನು ನಿಲ್ಲಿಸಲಿ ಎನ್ನುವುದು ನಿರ್ದೇಶಕರಿಗೆ ಕೋರಿಕೆ. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಹೋದರೆ ಖಂಡಿತಾ ಜೀವ ವಿಲವಿಲ ಎನ್ನಬಹುದು ಪ್ರಾಯಶಃ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.