ADVERTISEMENT

‘ಗಂಧದಗುಡಿ’ ವಿಮರ್ಶೆ: ಕಾಡು ನೋಡಹೋದೆ ಕವಿತೆಯೊಡನೆ ಬಂದೆ

ವಿಶಾಖ ಎನ್.
Published 28 ಅಕ್ಟೋಬರ್ 2022, 13:08 IST
Last Updated 28 ಅಕ್ಟೋಬರ್ 2022, 13:08 IST
‘ಗಂಧದಗುಡಿ’ಯಲ್ಲಿ ಪುನೀತ್‌ ರಾಜ್‌ಕುಮಾರ್‌
‘ಗಂಧದಗುಡಿ’ಯಲ್ಲಿ ಪುನೀತ್‌ ರಾಜ್‌ಕುಮಾರ್‌   

ಚಿತ್ರ: ಗಂಧದಗುಡಿ (ಡಾಕ್ಯುಡ್ರಾಮಾ–ಕನ್ನಡ)
ನಿರ್ಮಾಣ: ಅಶ್ವಿನಿ ಪುನೀತ್ ರಾಜ್‌ಕುಮಾರ್‌
ನಿರ್ದೇಶನ: ಅಮೋಘವರ್ಷ ಜೆ.ಎಸ್.
ತಾರಾಗಣ: ಪುನೀತ್ ರಾಜ್‌ಕುಮಾರ್‌, ಅಮೋಘವರ್ಷ, ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಮತ್ತಿತರರು

ಹರಿವ ನದಿಯ ಸ್ವಚ್ಛ ನೀರಿನ ಮೇಲೆ ಪುನೀತ್‌ ರಾಜ್‌ಕುಮಾರ್‌ ಪ್ರತಿಬಿಂಬ. ಅದೇ ಸ್ನಿಗ್ಧ ನಗು. ಅದೇ ದೃಢ ನಿಲುವು. ಕಣ್ಣ ಪಕ್ಕದ ಸುಕ್ಕುಗಳಲ್ಲಿ ಉಳಿದುಹೋದ ಅದೇ ಮುಗ್ಧತೆ. ಆ ದೃಶ್ಯವು ಕಣ್ಣಂಚಲ್ಲಿ ನೀರು ಜಮೆಯಾಗಿಸುವ ಹೊತ್ತಿಗೆ ಪ್ರಕೃತಿಯತ್ತ ಕ್ಯಾಮೆರಾ ಕಣ್ಣು ಹೊರಳಿಕೊಳ್ಳುತ್ತದೆ. ಅಲ್ಲಿಗೆ ಪುನೀತ್‌ ಪ್ರಕೃತಿಯ ಮಡಿಲಿಗೇ ಸೇರಿಹೋದರೆನ್ನುವ ದಿವ್ಯಭಾವವೊಂದರ ದಾಟುವಿಕೆ.

ಸ್ಟಾರ್‌ಗಿರಿಯನ್ನೆಲ್ಲ ಮೂಟೆ ಕಟ್ಟಿ, ಪುನೀತ್ ಮುಗ್ಧ ಹುಡುಗನಂತೆ ಕಾಡು, ನದಿ, ಬೆಟ್ಟಗುಡ್ಡಗಳು, ಸಮುದ್ರದ ನೀರಿನಾಳ... ಹೀಗೆ ಎಲ್ಲೆಡೆಗೂ ಇಳಿದಿದ್ದಾರೆ. ಈ ಪ್ರಕೃತಿ ಪ್ರಯಾಣದ ಉದ್ದಕ್ಕೂ ಅವರ ಜತೆ ನಿರ್ದೇಶಕ ಅಮೋಘವರ್ಷ ಇದ್ದಾರೆ. ಇಬ್ಬರ ಸಂವಾದದಲ್ಲೇ ಕೆಲವು ಆಪ್ತ ಸಂಗತಿಗಳು ವಿನಿಮಯಗೊಳ್ಳುತ್ತವೆ. ರಾಜ್‌ಕುಮಾರ್‌ ಅವರು ತುಂಬಾ ಇಷ್ಟಪಡುತ್ತಿದ್ದ ಗಾಜನೂರಿನ ದೊಡ್ಡ ಆಲದಮರ ಅಂತಹ ನೆನಹುಗಳಲ್ಲಿ ಒಂದು. ಆ ಮರದಡಿಯಲ್ಲಿ ರಾಜ್‌ಕುಮಾರ್‌ ಧ್ಯಾನ ಮಾಡಿ, ಕರ್ಚೀಫನ್ನೆ ಮಡಚಿಟ್ಟು, ಸಣ್ಣ ತಲೆದಿಂಬಿನಂತೆ ಮಾಡಿಕೊಂಡು ಮಲಗುತ್ತಿದ್ದ ಘಟನೆಯನ್ನು ಪುನೀತ್ ನೆನಪಿಸಿಕೊಳ್ಳುತ್ತಾರೆ. ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಅವರು ನಡೆದಾಡಿರಬಹುದಾದ ಜಾಗಗಳನ್ನೂ ಪುನೀತ್‌ ಬೇರೆಯದೇ ಕಣ್ಣುಗಳಿಂದ ನೋಡುತ್ತಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ಸರಳತೆಯಲ್ಲಿ ಬೆರೆಯುತ್ತಾರೆ. ಯಾವ ದೃಶ್ಯದಲ್ಲೂ ಒಂದಿನಿತೂ ಹೀರೊ ಎಂಬ ಭಾವ ಹೊಮ್ಮುವುದೇ ಇಲ್ಲ. ಕೊನೆಯಲ್ಲಿ ಬಳ್ಳಾರಿ ಭಾಗದ ಅಲೆಮಾರಿಗಳು ನೃತ್ಯ ಮಾಡುವಾಗ ಅಪ್ಪಿತಪ್ಪಿಯೂ ಪುನೀತ್ ಒಂದು ಕುಣಿತ ಹಾಕುವುದಿಲ್ಲ. ಮಗುವಿನಂತೆ ಕುಳಿತು ಅದನ್ನು ಎದೆಗಿಳಿಸಿಕೊಳ್ಳುತ್ತಾರೆ.

ADVERTISEMENT

ಹಾವು ಕಂಡರೆ ತಮಗೆ ಯಾಕೆ ಭಯ ಎನ್ನುವುದಕ್ಕೆ ಬಾಲನಟನಾಗಿ ತಮಗಾಗಿದ್ದ ಅನುಭವವನ್ನೇ ಅವರು ಹಂಚಿಕೊಳ್ಳುತ್ತಾರೆ. ಅದೇನು ಎನ್ನುವುದನ್ನು ತಿಳಿಯಲು ‘ಗಂಧದಗುಡಿ’ ನೋಡಬೇಕು.

ನಿರ್ದೇಶಕ ಅಮೋಘವರ್ಷ ಇದನ್ನು ‘ಡಾಕ್ಯುಡ್ರಾಮಾ’ ಎಂದು ಕರೆಯಲು ಕಾರಣವಿದೆ: ಅದು ಬರೀ ಸಾಕ್ಷ್ಯಚಿತ್ರವಲ್ಲ. ಪ್ರಕೃತಿ ಮಡಿಲಿನಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಡ್ರಾಮಾಗಳೂ ಅಡಕವಾಗಿವೆ.

ಇಡೀ ಚಲನಚಿತ್ರದ ತುಂಬೆಲ್ಲ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವ ಅಸಂಖ್ಯ ದೃಶ್ಯಗಳಿವೆ. ನೇತ್ರಾಣಿ ದ್ವೀಪದ ಪಕ್ಕದ ಸಮುದ್ರದಾಳಕ್ಕೆ ಡೈವ್‌ ಮಾಡಿ, ಅಲ್ಲಿನ ಸಕಲ ಜೀವ ಚರಾಚರಗಳನ್ನು ಪುನೀತ್‌ ಹಾಗೂ ಅಮೋಘವರ್ಷ ತಾವಷ್ಟೆ ನೋಡದೆ ನಾವೂ ನೋಡುವಂತೆ ಮಾಡಿರುವುದು ಅದಕ್ಕೆ ಒಂದು ಉದಾಹರಣೆ. ಅಲ್ಲಲ್ಲಿ, ಪ್ರಾಣಿ–ಪಕ್ಷಿಗಳ ಬಗೆಗಿನ ಕೆಲವು ವೈಜ್ಞಾನಿಕ ಮಾಹಿತಿಯನ್ನೂ ಅಮೋಘವರ್ಷ ನೀಡುತ್ತಾ ಹೋಗುತ್ತಾರೆ. ಕಡಲಾಳದಲ್ಲಿ ಸಿಲುಕಿದ್ದ ಪ್ಲಾಸ್ಟಿಕ್‌ ಒಂದನ್ನು ಹೊರಗೆ ತರುವ ಪುನೀತ್ ಮುಗುಮ್ಮಾಗಿ ಒಂದು ಸಂದೇಶವನ್ನೂ ದಾಟಿಸುತ್ತಾರೆ. ‘ಕಾಡಿನಲ್ಲಿ ಪ್ರಾಣಿಗಳ ಪಾಲಿಗೆ ನಾವೇ ಝೂನಲ್ಲಿ ಇರುವವರಂತೆ ಕಾಣುತ್ತೇವೆ’ ಎನ್ನುವ ಅವರ ಮಾತಿನ ಅರ್ಥಸಾಧ್ಯತೆಯೂ ದೊಡ್ಡದು.

ಪ್ರತೀಕ್ ಶೆಟ್ಟಿ ಸಿನಿಮಾಟೊಗ್ರಫಿ ಕರ್ನಾಟಕದ ಹಲವು ಕಣ್ತುಂಬಿಕೊಳ್ಳಬೇಕಾದ ಸ್ಥಳಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಮೋಘವರ್ಷ ಆಗಲಿ, ಪುನೀತ್‌ ಆಗಲಿ ಎಲ್ಲಿಯೂ ಅಭಿನಯಿಸಿದ್ದಾರೆ ಎನಿಸುವುದಿಲ್ಲ. ಅಜನೀಶ್ ಲೋಕನಾಥ್ ಸಂಗೀತ ಪ್ರಕೃತಿ ಸೌಂದರ್ಯವನ್ನು ಕರ್ಣಾನಂದದೊಂದಿಗೆ ನೋಡುವಂತೆ ಮಾಡಿದೆ.

ಸಹಜ ಪಯಣದ ಅನುಭವಗಳ ದೃಶ್ಯಡೈರಿ ಎನ್ನಬಹುದಾದ ‘ಗಂಧದಗುಡಿ’ಯಲ್ಲಿ ಪುನೀತ್ ಒಂದೊಂದು ಕದಲಿಕೆಯೂ ಅವರಿನ್ನೂ ಜೀವಂತವಾಗಿದ್ದಾರೇನೊ ಎನ್ನುವ ಭಾವವನ್ನು ಮೂಡಿಸುತ್ತದೆ. ಬಹುಶಃ ಇದೇ ಕಾರಣಕ್ಕೆ ಅಶ್ವಿನಿ ಇದನ್ನು ಎಲ್ಲರೂ ನೋಡಲಿ ಎಂದು ಬಯಸಿ ತೆರೆಗೆ ತಂದಿದ್ದಾರೋ ಏನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.