ADVERTISEMENT

ಗರುಡ ಗಮನ ವೃಷಭ ವಾಹನ ಸಿನಿಮಾ ವಿಮರ್ಶೆ: ಮಂಗಳಾದೇವಿಗೊಮ್ಮೆ ಹೋಗಿಬನ್ನಿ

ಅಭಿಲಾಷ್ ಪಿ.ಎಸ್‌.
Published 19 ನವೆಂಬರ್ 2021, 10:56 IST
Last Updated 19 ನವೆಂಬರ್ 2021, 10:56 IST
ಗರುಡ ಗಮನ ವೃಷಭ ವಾಹನ
ಗರುಡ ಗಮನ ವೃಷಭ ವಾಹನ   

ಚಿತ್ರ:ಗರುಡ ಗಮನ ವೃಷಭ ವಾಹನ
ನಿರ್ದೇಶನ: ರಾಜ್‌ ಬಿ. ಶೆಟ್ಟಿ
ಸಂಗೀತ ನಿರ್ದೇಶನ: ಮಿಧುನ್‌ ಮುಕುಂದನ್‌
ನಿರ್ಮಾಣ: ಪರಂವಃ ಪಿಕ್ಚರ್ಸ್‌
ತಾರಾಗಣ: ರಾಜ್‌ ಬಿ. ಶೆಟ್ಟಿ, ರಿಷಬ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರೈ ಪಾಣಾಜೆ

ಇಲ್ಲಿ ಹಿಂಸಾತ್ಮಕ ದೃಶ್ಯವೂ ಆಕರ್ಷಕವಾಗಿ ಕಾಣಿಸುತ್ತದೆ. ಮೌನವೂ ಮಾತನಾಡುತ್ತದೆ. ಪ್ರತಿ ನೋಟವೂ ಒಂದು ಕಥೆ ಹೇಳುತ್ತದೆ. ದೃಶ್ಯಕ್ಕೆ ತದ್ವಿರುದ್ಧವಾದ ಹಿನ್ನೆಲೆ ಸಂಗೀತ ಪ್ರೇಕ್ಷಕನಿಂದ ಒಪ್ಪಿಗೆ ಪಡೆಯುತ್ತದೆ. ಶಿಳ್ಳೆ–ಚಪ್ಪಾಳೆ ಗಿಟ್ಟಿಸುತ್ತದೆ. ದೇವಿ ಮಹಾತ್ಮೆ ಯಕ್ಷಗಾನದ ಅಂಶವೊಂದನ್ನಿಟ್ಟುಕೊಂಡು ಪುರಾಣದ ನೆರಳಲ್ಲಿ ಪ್ರಸಕ್ತ ಬದುಕಿನ ವಾಸ್ತವವನ್ನು ಅದ್ಭುತವಾಗಿ ಹೆಣೆದು ‘ಗರುಡ ಗಮನ ವೃಷಭ ವಾಹನ’ದ ಕಥೆ ಕಟ್ಟಿದ್ದಾರೆ ನಿರ್ದೇಶಕ ರಾಜ್‌ ಬಿ.ಶೆಟ್ಟಿ.

ಮಂಗಳೂರಿನ ಮಂಗಳಾದೇವಿ ಪ್ರದೇಶ ಇಡೀ ಕಥೆ ನಡೆಯುವ ಸ್ಥಳ. ಮಂಗಳಾದೇವಿ, ಕದ್ರಿ ದೇವಸ್ಥಾನಗಳೂಇಲ್ಲಿ ಅಷ್ಟೇ ಮುಖ್ಯ. ಇದೇ ಪ್ರದೇಶದಲ್ಲಿನ ಮನೆಯೊಂದರ ಬಳಿ ಇರುವ ಪಾಳುಬಾವಿಯಲ್ಲಿ ಗೋಣಿಚೀಲದಲ್ಲಿ ಸಿಗುವ ಕತ್ತು ಸೀಳಿದ ಮಗುವಿನ ಅನಾಥ ಶವ ‘ಶಿವ’ನಾಗಿ ಬದುಕಿ, ಇದೇ ಮನೆಯ ಮುಗ್ಧ ಹುಡುಗ ‘ಹರಿ’ಯ ಜೊತೆಗೂಡಿ ಅಣ್ಣ–ತಮ್ಮರಂತೆ ಬೆಳೆಯುತ್ತಾರೆ. ಯಾರೀ ಶಿವ ಎನ್ನುವುದಕ್ಕೊಂದು ಕಟ್ಟುಕಥೆ. ಕಟ್ಟುಕಥೆಯ ಸುಳಿಯಲ್ಲಿ ಮೌನವಾಗೇ ಬೆಳೆದ ಶಿವ ಯುವಕನಾದ ಮೇಲೆ ಸ್ಫೋಟಿಸುತ್ತಾನೆ. ಹರಿಯ ಮೇಲೆ ರೌಡಿಶೀಟರ್‌ ಒಬ್ಬ ಗನ್‌ ತೋರಿಸಿದ್ದಕ್ಕೆ ರೊಚ್ಚಿಗೆದ್ದು ಆತನನ್ನು ಚಚ್ಚುತ್ತಾನೆ ಶಿವ. ಮೂರು ಜನರಿದ್ದ ಗ್ಯಾಂಗ್‌ ಆರಾಗುತ್ತದೆ. ಬರುತ್ತಾ ಈ ಸಂಖ್ಯೆಯೂ ಇಳಿಯುತ್ತದೆ. ಖ್ಯಾತಿಯೂ ಹೆಚ್ಚುತ್ತದೆ. ಕೊಲೆಯೋ, ಅಪರಾಧವೋ ಮಾಡಿ ಕದ್ರಿಯಲ್ಲಿ ಕಲಶ ಸ್ನಾನ ಮಾಡಿ ಶುದ್ಧವಾಗುವ ‘ಹರಿ’ಗೂ, ತಾನು ಕೊಂದ ವ್ಯಕ್ತಿಯ ಚಪ್ಪಲಿ ಹಾಕಿಕೊಂಡು ತನ್ನ ‘ಸಿಗ್ನೇಚರ್‌ ಮಾರ್ಕ್‌’ ಬಿಡುವ ‘ಶಿವ’ನ ನಡುವೆ ಹುಟ್ಟಿಕೊಳ್ಳುವ ತಪ್ಪು ತಿಳಿವಳಿಕೆ ಮುಂದಿನ ಕಥೆಯನ್ನು ಕೊಂಡೊಯ್ಯುತ್ತದೆ. ಈ ರೌಡಿ ಲೋಕದ ಕಥೆ ಹೇಳುವ ಸಬ್‌ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಜೀವಿಸಿದ್ದಾರೆ.

‘ಒಂದು ಮೊಟ್ಟೆಯ ಕಥೆ’ಯ ಮೂಲಕ ನಿರ್ದೇಶಕರಾಗಿ ಚಂದನವನ ಪ್ರವೇಶಿಸಿದ್ದ ರಾಜ್‌, ಈ ಚಿತ್ರದ ಮುಖಾಂತರ ತಮ್ಮೊಳಗಿನ ನಿರ್ದೇಶನದ ಸಾಮರ್ಥ್ಯವನ್ನು ಕನ್ನಡ ಸಿನಿಮಾಗೆ ತೋರಿಸಿದ್ದಾರೆ. ಇಡೀ ಚಿತ್ರದ ಹೈಲೈಟ್‌ ‘ಶಿವ’ನ ಪಾತ್ರದಲ್ಲಿ ಕಾಣಿಸಿಕೊಂಡ ರಾಜ್‌. ಮಾತು ಕಮ್ಮಿ. ಆದರೆ ದೇಹದ ಹಾವಭಾವವೇ ದೃಶ್ಯ ಕಟ್ಟಿಕೊಡುತ್ತದೆ. ಮಂಗಳಾದೇವಿ ದೇವಸ್ಥಾನದೆದುರಿನ ‘ಶಿವ’ ತಾಂಡವ ಕಣ್ಣಲ್ಲಿ ಉಳಿಯುತ್ತದೆ. ಕದ್ರಿ ದೇವಸ್ಥಾನದ ಮೆಟ್ಟಿಲಲ್ಲಿ ಕೂತಾಗ ಕಣ್ಣೀರು ತುಂಬಿದ ಶಿವನೂ ಶಾಂತವಾಗುತ್ತಾನೆ.

ADVERTISEMENT

ಮುಗ್ಧ ‘ಹರಿ’ಯಾಗಿ ಕಾಣಿಸಿಕೊಂಡ ರಿಷಬ್‌ ಶೆಟ್ಟಿ, ‘ಶಿವ’ನ ಧೈರ್ಯ ಕಂಡು ದೃಶ್ಯ ಬದಲಾಗುವುದರೊಳಗೆ ತಾನೇ ಗ್ಯಾಂಗ್‌ ಲೀಡರ್‌ ಆದಾಗ ಒಮ್ಮೆ ಪ್ರೇಕ್ಷಕನ ಮನಸ್ಸಿನಲ್ಲಿ ಪ್ರಶ್ನೆ ಹುಟ್ಟುತ್ತದೆ. ಆದರೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡ ಹರಿಯನ್ನೂ ಜನ ಮೆಚ್ಚಿದ್ದಾರೆ. ಹರಿ–ಶಿವನ ಬಾಲ್ಯ, ಯೌವನಕ್ಕೆ ಜೀವ ತುಂಬಿದ ಹರ್ಷದೀಪ್‌, ಚಿಂತನ್‌ ಹಾಗೂ ಯಶ್ವಿನ್‌ ನೋಟ, ಮೌನ ಮನಸ್ಸಿನಾಳದಲ್ಲಿ ಉಳಿಯುತ್ತದೆ. ತುಳು ರಂಗಭೂಮಿಯ ದೀಪಕ್‌ ರೈ ಪಾಣಾಜೆ ತಾವು ಹಾಸ್ಯಕ್ಕಷ್ಟೇ ಸೀಮಿತವಲ್ಲ ಎಂದು ಸಾಬೀತುಪಡಿಸಿದ್ದಾರೆ. ಚಿತ್ರದಲ್ಲಿ ‘ಯಮಹ ಆರ್‌ಎಕ್ಸ್‌ 100’ ಕೂಡಾ ತನ್ನ ಪಾತ್ರವನ್ನು ನಿಭಾಯಿಸಿದ ರೀತಿ ಕಣ್ಣಿಗೆ ಕಾಣದಿದ್ದರೂ ಕಿವಿಯಲ್ಲಿ ಗುನುಗುನಿಸುತ್ತದೆ. ನಾಯಕಿ ಇಡೀ ಚಿತ್ರಕಥೆ. ಸಂಗೀತ ನಿರ್ದೇಶಕ ಮಿಧುನ್‌ ಮುಕುಂದನ್‌ ಹಲವು ದೃಶ್ಯಕ್ಕೆ ನಿರ್ದೇಶಕರಾಗಿದ್ದಾರೆ. ಹುಲಿವೇಷ ಕಾಲು ಕುಣಿಸುತ್ತದೆ, ಅದರೊಳಗಿನ ರಾಜಕೀಯವನ್ನೂ ತೆಳ್ಳನೆ ತೋರಿಸುತ್ತದೆ.

ಕರಾವಳಿ ಕನ್ನಡದ ಸೊಗಡನ್ನು ಎಲ್ಲ ಪ್ರೇಕ್ಷಕರು ಆನಂದಿಸಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ನೀವು ನಗದೇ ಇದ್ದಾಗ ಪಕ್ಕದ ಸೀಟಿನವರು ನಕ್ಕರೆ ‘ನೀವು ಮಂಗಳೂರಿನವರಾ?’ ಎಂದೊಮ್ಮೆ ಕೇಳಿಬಿಡಿ. ‘ಸಾವು’ ಮತ್ತು ‘ಬೇವರ್ಸಿ’ ಎನ್ನುವೆರಡು ಪದವನ್ನು ಕೆಟ್ಟ ಭಾಷೆ ಎಂದು ಪರಿಗಣಿಸದೆ ಕರಾವಳಿಯವರ ಭಾವನೆ ಎಂದು ಭಾವಿಸಿದರೆ, ‘ಎ’ ಪ್ರಮಾಣ ಪತ್ರ ನೀಡಿದ್ದೇಕೆ ಎಂದು ಚಿತ್ರದಲ್ಲಿ ದುರ್ಬೀನು ಹಾಕಿ ಹುಡುಕಬೇಕು.

ಕೊನೆಯಲ್ಲಿ ಮೌನವಾಗೇ ಹೇಳಿರುವ ಅದ್ಭುತವಾದ ಸಂದೇಶವನ್ನು ನೋಡಲು ಮಂಗಳಾದೇವಿಗೊಮ್ಮೆ ಭೇಟಿ ನೀಡಿ. ಒಟ್ಟಿನಲ್ಲಿಗಂಜಿಗೆ ಉಪ್ಪೂ ಇದೆ..ಜೊತೆಗೆ ರುಚಿ ಹೆಚ್ಚಿಸಲು ಉಪ್ಪಿನಕಾಯಿ, ಎಟ್ಟಿ ಚಟ್ನಿಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.