ಚಿತ್ರ: ಸಖತ್ (ಕನ್ನಡ)
ನಿರ್ಮಾಣ: ನಿಶಾ ವೆಂಕಟ್ ಕೋಣಂಕಿ
ನಿರ್ದೇಶನ: ಸುನಿ
ತಾರಾಗಣ: ಗಣೇಶ್, ಸುರಭಿ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಮಾಳವಿಕಾ, ಶೋಭರಾಜ್
***
ಅಂಧರ ವಾಕಿಂಗ್ ಸ್ಟಿಕ್‌ನಲ್ಲಿ ಹೊಡೆದರೆ ಗಿರಗಿರನೆ ತಿರುಗಿ ಖಳರು ಡ್ರಮ್‌ಗೆ ಬಡಿದುಕೊಂಡು ಬೀಳುತ್ತಾರೆಯೇ ಎಂಬ ತರ್ಕ ಕೇಳಲು ಹೋಗಬಾರದು. ಈಗಲೂ ಗೋಲ್ಡನ್ ತಾರೆಯ ಬಿರುದನ್ನೇ ಉಜ್ಜುತ್ತಾ ಹಾಡನ್ನು ಯಾಕೆ ಬರೆಯಬೇಕು ಎಂದೆನ್ನುವ ಗೊಡವೆ ಬೇಡ. ಎರಡನೇ ಅರ್ಧದ ಭಾವುಕ, ಆಸಕ್ತಿಕರ ಕಥೆಯನ್ನು ನಿಲ್ಲಿಸಿಕೊಳ್ಳಲು ಏರುಪೇರು ಗ್ರಾಫುಗಳ ಮೊದಲರ್ಧ ಬೇಕಿತ್ತೆ ಎಂಬ ಪ್ರಶ್ನೆಯನ್ನೂ ನಮ್ಮಷ್ಟಕ್ಕೆ ಕೇಳಿಕೊಳ್ಳಬಹುದು.
‘ಸಖತ್’ ಎಂಬ ಶೀರ್ಷಿಕೆಯೇ ಸುಖಾಸುಮ್ಮನೆ ರಂಜಿಸುವ, ಸಸ್ಪೆನ್ಸನ್ನು ಭುಂಜಿಸುವ ಉಮೇದನ್ನು ಹೇಳುತ್ತದೆ. ಶೀರ್ಷಿಕೆಯನ್ನು ಹೀಗಿಟ್ಟಮಾತ್ರಕ್ಕೆ ಎಲ್ಲವೂ ‘ಸಖತ್’ ಆಗಲಾರದು. ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಹೇಳಿದ್ದಂತೆ ಸಖತ್ ಎನ್ನುವುದು ಸಕಾರಾತ್ಮಕ ಗುಣವಿಶೇಷಣವೇನಲ್ಲ. ಹಿಂದೆ ‘ಸಖತ್ ಜ್ವರ’ ಎಂದು ಇದನ್ನು ಬಳಸುತ್ತಿದ್ದರು. ಹೊಸ ಕಾಲದಲ್ಲಿ ಅದರ ಧ್ವನಿಯೂ ಬದಲಾಗಿರುವುದರಿಂದ ಈ ಚಿತ್ರವನ್ನು ಅಂತೆಯೇ ಗ್ರಹಿಸಬೇಕಿದೆ.
ನಾಯಕನಿಗೆ ಕಣ್ಣಿದೆ. ಆದರೂ ಅಂಧನಾಗಲು ಸುಂದರಿಯ ಮೇಲಿನ ಮೋಹವೇ ಇಂಬು. ಅದೇ ಮುಂದೆ ಅವನೊಂದು ಬಲೆಯೊಳಗೆ ಸಿಲುಕಲು, ಅದರಲ್ಲಿಯೇ ಭಾವುಕ ಪಯಣವ ದಾಟಲು ಎಡೆಮಾಡಿಕೊಡುತ್ತದೆ. ಮನರಂಜನೆಯನ್ನು ಅಲ್ಲಲ್ಲಿ ಇಡುತ್ತಾ, ಕೋರ್ಟ್ ಡ್ರಾಮಾದ ದುರ್ಬಲ ಎಪಿಸೋಡುಗಳನ್ನು ಕೊಲಾಜ್ ಮಾಡಿ, ಸಾಮಾಜಿಕ ಕಳಕಳಿಯ ಭಾವುಕತೆಯನ್ನೂ ಬೆಸೆದಿರುವ ಚಿತ್ರವಿದು. ಕೊನೆಯಲ್ಲೊಂದು ಅಚ್ಚರಿ ತೆರೆದುಕೊಳ್ಳುವಂಥ ಸಸ್ಪೆನ್ಸ್.
ನಿರ್ದೇಶಕ ಸುನಿ ಅವರಿಗೆ ನಾಯಕನನ್ನು ಕುರುಡನನ್ನಾಗಿ ನಟಿಸುವಂತೆ ಮಾಡಲು ಸಕಾರಣವೊಂದನ್ನು ಸೃಷ್ಟಿಸಬೇಕಿದೆ. ಅದು ತಮಾಷೆಗೆ ಶುರುವಾಗುವುದು ಆಮೇಲೆ ಪಡೆದುಕೊಳ್ಳುವ ತಿರುವು ಆಸಕ್ತಿಕರ. ಹೀಗಾಗಿ ಅವರು ಸಕಾರಣವನ್ನು ಬಲವಾಗಿಸಲು ಹೋಗುವುದಿಲ್ಲ. ಅದನ್ನೊಂದು ಟೈಂಪಾಸ್ ಸರಕಿನಂತೆ ತೇಲಿಬಿಡುತ್ತಾರೆ. ಟಿ.ವಿ. ರಿಯಾಲಿಟಿ ಷೋವನ್ನು ವ್ಯಂಗ್ಯ ಮಾಡಹೊರಟ ಅವರಿಗೆ ತಮ್ಮ ವಸ್ತುವೂ ತೆಳುವಾಗಿಬಿಟ್ಟಿದೆ ಎನ್ನುವುದು ಅರಿವಾದಂತಿಲ್ಲ.
ಮೊದಲರ್ಧ ಎಲ್ಲೆಲ್ಲಿಯೋ ಹಾಡುಗಳು ಬಂದು, ಆಗೀಗ ಕಚಗುಳಿ ಇಡುವ ಸನ್ನಿವೇಶಗಳು ಮೂಡಿ ವಿಪರೀತ ಹಂಪ್‌ಗಳಿರುವ ರಸ್ತೆಯಲ್ಲಿನ ಪ್ರಯಾಣದಂತೆನಿಸುತ್ತದೆ. ನಟಿ ನಿಶ್ವಿಕಾ ನಾಯ್ಡು ಅವರ ನಿಯಂತ್ರಿತವೂ ಘನತೆಯದ್ದೂ ಆದ ಅಭಿನಯದ ಬೋನಸ್ ಸಿಗುವುದು ಎರಡನೇ ಅರ್ಧದಲ್ಲಿ. ಚೂರು ಚೂರೇ ವೈವಿಧ್ಯಮಯ ರಂಜನೆಯೂ ಆ ಭಾಗದಲ್ಲೇ ಒದಗುತ್ತದೆ. ಇದಕ್ಕಾಗಿ ಮೊದಲರ್ಧವನ್ನು ಹೆಚ್ಚೇ ಸಹಿಸಿಕೊಳ್ಳಬೇಕೆನ್ನುವುದು ಚಿತ್ರದ ಮಿತಿ.
ನಾಯಕ ಗಣೇಶ್‌ಗೆ ಈ ಪಾತ್ರ ಲೀಲಾಜಾಲ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೆಲಸದ ವೃತ್ತಿಪರತೆ ಎದ್ದುಕಾಣುತ್ತದೆ. ಜೂಡಾ ಸ್ಯಾಂಡಿ ಸಂಗೀತದ ರ‍್ಯಾಪ್ ರಾಗ ಕಾಲುಗಳ ಕುಣಿಸುವಂತೆ ಮಾಡುತ್ತದೆನ್ನುವುದೂ ಬೋನಸ್ಸು. ಸಿದ್ ಶ್ರೀರಾಮ್ ಪಲುಕುಗಳು ಚೆಂದವಾದರೂ ಕನ್ನಡದ ಉಚ್ಚಾರ ಕರ್ಣಾನಂದವಲ್ಲ. ಸುರಭಿ ಮುಖದಲ್ಲಿ ಅಭಿನಯದ ಗೆರೆಗಳು ಮೂಡಬೇಕಷ್ಟೆ.
‘ಕಾಬಿಲ್’, ‘ಅಂಧಾಧುನ್’ ರೀತಿಯ ಗಟ್ಟಿಯಾದ ಅಂಧರ ಆಟದ, ಮಾಟದ ಕಥನಗಳ ಜತೆಗೆ ತಕ್ಕಡಿಯಲ್ಲಿಟ್ಟರೆ ಇದು ‘ಸಖತ್’ ಏನಲ್ಲ ಬಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.