ಚಿತ್ರ: ಗುಂಟೂರು ಖಾರಂ
ನಿರ್ದೇಶನ: ತ್ರಿವಿಕ್ರಂ ಶ್ರೀನಿವಾಸ್
ನಿರ್ಮಾಣ: ಎಸ್.ರಾಧಾಕೃಷ್ಣ ಮತ್ತು ಸೂರ್ಯದೇವರ ನಾಗ ವಂಶಿ
ತಾರಾಗಣ: ಮಹೇಶ್ ಬಾಬು, ಶ್ರೀಲೀಲಾ, ಪ್ರಕಾಶ್ ರಾಜ್, ರಮ್ಯಾಕೃಷ್ಣ ಮತ್ತಿತರರು
ಮಹೇಶ್ ಬಾಬು–ತ್ರಿವಿಕ್ರಂ ಶ್ರೀನಿವಾಸ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಜೋಡಿ. ಆದರೆ ಆ ನಿರೀಕ್ಷೆಯನ್ನು ಹುಸಿಯಾಗಿಸುವ ಸಿನಿಮಾ ‘ಗುಂಟೂರು ಖಾರಂ’. ಮಹೇಶ್ ಬಾಬು ಎಂದಾಕ್ಷಣ ಆ್ಯಕ್ಷನ್, ಮಾಸ್ ದೃಶ್ಯಗಳು ಇರುವುದು ಸಹಜ. ಅಂತೆಯೇ ಇಲ್ಲಿ ಹಾಡು, ಫೈಟ್‌ಗಳು ಭರಪೂರವಾಗಿವೆ. ಆದರೆ ಯಾವುದರಲ್ಲಿಯೂ ಹೊಸತನವಿಲ್ಲ. 10 ವರ್ಷ ಹಳೆಯದಾದ ಸರಕುಗಳಿವು. ಸಿನಿಮಾ ಶುರುವಾದ 10 ನಿಮಿಷಗಳ ಕಾಲ ಒಂಚೂರು ಉತ್ಸಾಹ ಮೂಡುತ್ತದೆ. ನಂತರದಿಂದ ಸಿನಿಮಾ ಮುಗಿಯುವವರೆಗೂ ಒಂದೇ ವೇಗ.
ಈ ಹಿಂದೆ ತೆಲುಗಿನಲ್ಲಿಯೇ ಬಂದಿರುವ ನಾಲ್ಕಾರು ಮಾಸ್ ಸಿನಿಮಾಗಳ ಒಂದೆಳೆ ಕಥೆಯನ್ನು ಒಟ್ಟಾಗಿಸಿ ಇಡೀ ಸಿನಿಮಾದ ಕಥೆ ಹೆಣೆಯಲಾಗಿದೆ. ಒಂದಷ್ಟು ದೃಶ್ಯಗಳು ಗುಂಟೂರು ಮೆಣಸಿನಕಾಯಿ ಗೋದಾಮಿನಲ್ಲಿ ನಡೆಯುತ್ತವೆ. ನಾಯಕನ ಕುಟುಂಬ ಈ ಮೆಣಸಿನಕಾಯಿ ವ್ಯಾಪಾರಿ ಕುಟುಂಬವೆಂಬದಷ್ಟೇ ಸಿನಿಮಾದಲ್ಲಿ ಹೊಸತಾಗಿ ಕಾಣಿಸುವಂತಹದ್ದು. ನಾಯಕ ರಮಣ ಬಾಲ್ಯದಿಂದಲೇ ತಾಯಿಯಿಂದ ದೂರವಾಗುತ್ತಾನೆ. ಕೌಟಂಬಿಕ ಕಲಹದಿಂದಾಗಿ ಸಂಬಂಧಗಳ ಕೊಂಡಿ ಕಳೆದುಹೋಗುತ್ತದೆ. ತಾಯಿ–ಮಗ ಒಂದಾಗುವ ಸೆಂಟಿಮೆಂಟ್‌ನೊಂದಿಗೆ ಫೈಟ್, ಲವ್, ಹಾಡು ಎಲ್ಲವನ್ನೂ ಬೆರೆಸಿ ಒಂದು ಕೌಟಂಬಿಕ ಮನರಂಜನೆ ಪ್ಯಾಕ್ ನೀಡಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ ಇದು, ಹದ ತಪ್ಪಿ ಹಲವೆಡೆ ಸಿನಿಮಾ ಬೋರ್ ಎನ್ನಿಸುತ್ತದೆ.
ಇಡೀ ಸಿನಿಮಾದ ಹೈಲೈಟ್ ಪಾತ್ರವರ್ಗ. ಮಹೇಶ್ ಬಾಬು ಅವರಿಗೆ ಸಾಧ್ಯವಿರುವ ಜಾಗದಲೆಲ್ಲ ಸಾಕಷ್ಟು ಬಿಲ್ಡಪ್ ನೀಡಲಾಗಿದೆ. ಆದರೆ, ಹಿನ್ನೆಲೆ ಸಂಗೀತ ಅದಕ್ಕೆ ಸಾಥ್ ನೀಡುವುದಿಲ್ಲ. ಇದರಾಚೆಗೂ ಮಹೇಶ್ ಬಾಬು ನಟನೆಯಿಂದ ಇಷ್ಟವಾಗುತ್ತಾರೆ. ಇಡೀ ಸಿನಿಮಾವನ್ನು ನಟನೆಯಿಂದಾಗಿ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಪಂಚ್ ಡೈಲಾಗ್‌ಗಳು ಸನ್ನಿವೇಶಕ್ಕೆ ಸರಿಯಾಗಿ ಸಿಂಕ್ ಆಗಿ, ಅಲ್ಲಲ್ಲಿ ನಗು ತರಿಸುತ್ತವೆ. ತಾತನಾಗಿ ಪ್ರಕಾಶ್ ರಾಜ್ ನಟನೆ ಸಹಜವಾಗಿದೆ. ನಾಯಕಿಯಾಗಿರುವ ಶ್ರೀಲೀಲಾ ಪಾತ್ರಕ್ಕೆ ಮಹತ್ವವಿಲ್ಲ. ಕಥೆಯ ಜೊತೆಗೆ ಈ ಲವ್ ಟ್ರ್ಯಾಕ್ ಸರಿಯಾಗಿ ಸಿಂಕ್ ಆಗುವುದಿಲ್ಲ. ಉದ್ದೇಶಪೂರ್ವಕವಾಗಿ ಪ್ರೀತಿಯ ಎಳೆ ತಂದಿಟ್ಟಂತೆ ಭಾಸವಾಗುತ್ತದೆ.
ಇಡೀ ಸಿನಿಮಾದ ಕೊರತೆ ಗಟ್ಟಿಯಾದ ಒಂದೆಳೆ ಕಥೆ ಇಲ್ಲದಿರುವುದು ಮತ್ತು ಪೇಲವವಾದ ಚಿತ್ರಕಥೆ. ಸಾಕಷ್ಟು ದೃಶ್ಯಗಳು ಈಗಾಗಲೇ ಬೇರೆ ಬೇರೆ ಸಿನಿಮಾಗಳಲ್ಲಿ ಬಂದಂತಹವು. ಅವನ್ನೇ ಹೊಸತಾದ ಫ್ರೇಮಿನಲ್ಲಿ ಹೇಳಿದಂತಿದೆ. ತಮನ್ ಸಂಗೀತದಲ್ಲಿನ ಯಾವ ಹಾಡುಗಳೂ ನೆನಪಿನಲ್ಲಿ ಉಳಿಯುವುದಿಲ್ಲ. ಚಿತ್ರದ ಪ್ರಾರಂಭದಲ್ಲಿಯೇ ಬರುವ ಐಟಂ ಸಾಂಗ್‌ನ ಛಾಯಾಚಿತ್ರಗ್ರಹಣ ಸೊಗಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.