ADVERTISEMENT

'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ವಿಮರ್ಶೆ: ತೆರೆಯಲ್ಲಿ ಕಾವ್ಯಾತ್ಮಕ ದೃಶ್ಯರೂಪ

ಅಭಿಲಾಷ್ ಪಿ.ಎಸ್‌.
Published 6 ಸೆಪ್ಟೆಂಬರ್ 2024, 8:23 IST
Last Updated 6 ಸೆಪ್ಟೆಂಬರ್ 2024, 8:23 IST
ಚಿತ್ರದ ದೃಶ್ಯ
ಚಿತ್ರದ ದೃಶ್ಯ   
ಕೆಲವು ಸಿನಿಮಾಗಳು ಹಾಗೆಯೇ. ಅಲ್ಲೊಂದು ಇಲ್ಲೊಂದು ತಿರುವುಗಳನ್ನು ಕಾಣುತ್ತಾ ನಿಶ್ಶಬ್ದ ನದಿಯಂತೆ ಹರಿಯುತ್ತವೆ. ಹರಿವಿನ ಮೌನವೇ ಹಲವು ದಿನ ಕಾಡುತ್ತದೆ. ಇತ್ತೀಚೆಗೆ ರಾಜ್‌ ಬಿ.ಶೆಟ್ಟಿ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಈ ಅನುಭವ ನೀಡಿತ್ತು. ಇದೀಗ ಬಂದಿರುವ ಚಂದ್ರಜಿತ್‌ ಬೆಳ್ಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾವೂ ಇದೇ ಧಾಟಿಯಲ್ಲಿದೆ. ಇಲ್ಲಿ ಯಾವುದಕ್ಕೂ ಧಾವಂತವಿಲ್ಲ. ಮೊನಚಾದ ಎಲೆಯ ಮೇಲೆ ಇಬ್ಬನಿ ಬಿದ್ದರಷ್ಟೇ ಅದಕ್ಕೊಂದು ಸೌಂದರ್ಯ. ಸೂರ್ಯನ ರಶ್ಮಿಗೆ ಹೊಳೆಯುವ, ಅದೇ ಶಾಖಕ್ಕೆ ಕರಗುವ ಇಬ್ಬನಿಯ ಕಥೆಯಿದು.       

‘ಸಿದ್ಧಾರ್ಥ್‌ ಅಶೋಕ್‌; ಸಿದ್‌’(ವಿಹಾನ್‌) ಖ್ಯಾತ ಉದ್ಯಮಿ ಅಶೋಕ್‌ ನಾಚಪ್ಪ ಪುತ್ರ. ಕಾಲೇಜಿನಲ್ಲಿದ್ದಾಗ ಕ್ರಿಕೆಟ್‌ ತಂಡದ ನಾಯಕ. ಕೋಪ ತುಸು ಜಾಸ್ತಿ. ಸದ್ಯ ತನ್ನದೇ ಸ್ವಂತ ಉದ್ಯಮ ಆರಂಭಿಸಲು ಕನಸು ಕಾಣುತ್ತಿರುವಾತ. ಕಾಲೇಜು ಓದುತ್ತಿರುವ ‘ರಾಧೆ’(ಮಯೂರಿ ನಟರಾಜ್‌) ಜೊತೆಗೆ ಸಿದ್‌ ನಿಶ್ಚಿತಾರ್ಥದ ದೃಶ್ಯಾವಳಿಯೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಪ್ರೀತಿ ಇಲ್ಲದೇ ಕೃತಕವಾದ ಮದುವೆಯ ಬಂಧನದೊಳಗೆ ರಾಧೆಯನ್ನು ತರಬಾರದು ಎನ್ನುವ ಕಾರಣಕ್ಕೆ, ಮದುವೆಯ ಮಂಟಪದಲ್ಲೇ ಸಿದ್‌ ತಾಳಿ ಕಟ್ಟುವ ಮೊದಲು ತನ್ನ ಮನಸ್ಸಿನಲ್ಲಿರುವುದನ್ನು ರಾಧೆಯ ಬಳಿ ಹೇಳಿಕೊಳ್ಳುತ್ತಾನೆ. ಮದುವೆ ಮುರಿದು ಬೀಳುತ್ತದೆ. ರಾಧೆಯ ಕನಸೂ...ಇಲ್ಲಿಂದ ಸಿದ್‌ ತನ್ನ ಮೊದಲ ಪ್ರೀತಿಯನ್ನು ಹುಡುಕುತ್ತಾ ‘ಅನಾಹಿತ’ಳತ್ತ(ಅಂಕಿತಾ ಅಮರ್‌) ಸಾಗುತ್ತಾನೆ. ಯಾರು ಈ ಅನಾಹಿತ, ‘ಸಿದ್‌’ ಎಂಬ ಮೊನಚಾದ ಎಲೆಯ ಮೇಲೆ ‘ಅನಾಹಿತ’ಳೆಂಬ ಇಬ್ಬನಿಯ ಪರಿಣಾಮವೇ ಚಿತ್ರದ ಮುಂದಿನ ಕಥೆ. 

ಇದು ಚಂದ್ರಜಿತ್‌ ಬೆಳ್ಯಪ್ಪ ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ಬ್ಲಾಗ್‌ನಲ್ಲಿ ಬರೆದ ಕಥೆಯೊಂದು ಇಲ್ಲಿ ಸಿನಿಮಾ ರೂಪ ಪಡೆದಿದೆ. ಈ ಕಾರಣದಿಂದಲೋ ಏನೋ ಕಾದಂಬರಿಯಂತೆ ಅಧ್ಯಾಯಗಳ ರೂಪದಲ್ಲಿ ಈ ಸಿನಿಮಾವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಒಟ್ಟು ಆರು ಅಧ್ಯಾಯಗಳಲ್ಲಿ ಕಥೆಯನ್ನು ಪೋಣಿಸಿರುವ ಚಂದ್ರಜಿತ್‌ ನಾನ್‌ ಲೀನಿಯರ್‌ ಮಾದರಿಯಲ್ಲಿ ಅವುಗಳನ್ನು ಪ್ರಸ್ತುತಪಡಿಸಿದ್ದಾರೆ. ಕಾಲೇಜು ದಿನಗಳನ್ನು ಮತ್ತಷ್ಟು ಸೂಕ್ತವಾಗಿ ಹೆಣೆಯಬಹುದಿತ್ತು. ಒಂದೆರಡು ಹಾಸ್ಯದ ಸನ್ನಿವೇಷಗಳಿಗೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಿತ್ತು. ಇದೊಂದು ಕಾವ್ಯಾತ್ಮಕ ಪ್ರೇಮಕಥೆಯಾದ ಕಾರಣ ಇಲ್ಲಿ ಹಾಡುಗಳಿಗೆ, ಕಾವ್ಯಕ್ಕೆ ಪ್ರಾಶಸ್ತ್ಯ ದೊರಕಿದೆ. ‘ಅನಾಹಿತ’ಳಿಗೆ ಜೀವ ತುಂಬುವುದು ಇವುಗಳೇ. ‘ಸಿದ್‌’ ಭಾವನೆಗಳು ಬದಲಾಗುತ್ತಿರುವುದು ಅರಿವಿಗೆ ಬರುವುದು ಈ ಕಾವ್ಯಗಳಿಂದಲೇ. ಅವುಗಳು ಕಥೆಯೊಳಗೆ ಸೂಕ್ತವಾಗಿ ಪೋಣಿಸಲ್ಪಟ್ಟಿದೆ. ಚಂದ್ರಜಿತ್‌ ಅವರ ಒಳಗಿನ ಒಬ್ಬ ತುಂಟ ‍ಪ್ರೇಮಿಯನ್ನೂ, ಪ್ರಬುದ್ಧ ಕವಿಯನ್ನೂ ಇಲ್ಲಿ ಕಾಣಬಹುದು. ಕಥೆಯೊಳಗೊಂದು ಗಾಢ ಅರ್ಥದ ಪ್ರೇಮಕಥೆಯೊಂದನ್ನು ಸರಳವಾಗಿ ಹೆಣೆದಿರುವ ಅವರ ಬರವಣಿಗೆಯ ಸಾಮರ್ಥ್ಯ ಇಲ್ಲಿ ಉಲ್ಲೇಖಾರ್ಹ. ಇದೊಂದು ಸ್ವಚ್ಛವಾದ ಪ್ರೇಮಕಥೆಯ ಬರವಣಿಗೆ. ದೃಶ್ಯಗಳ ಕೊನೆಗೊಳ್ಳುವಿಕೆ ಕೊಂಚ ಸುದೀರ್ಘವೆನಿಸಿದರೂ ಮೌನಕ್ಕೂ ಅರ್ಥಕೊಡುವ ರೀತಿಯಲ್ಲಿದೆ. ಕಣ್ಣುಗಳಲ್ಲೇ ಕಥೆ ಕಟ್ಟಿಕೊಡುವ ಪ್ರಯತ್ನ ಇಲ್ಲಾಗಿದೆ.        

‘ಅನಾಹಿತ’ಳನ್ನು ಹೆಚ್ಚು ಪರಿಚಯಿಸಲು ಸಾಧ್ಯವಿಲ್ಲ. ಆಕೆಯ ಮಾತುಗಳನ್ನು, ಭಾವನೆಗಳನ್ನು ಪರದೆ ಮೇಲೆಯೇ ಅನುಭವಿಸಬೇಕು. ಈ ಪಾತ್ರದಲ್ಲಿ ಅಂಕಿತಾ ಅಮರ್‌ ಜೀವಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮಂಜುಗಡ್ಡೆಯಂಥ ಅನಾಹಿತಳ ಕಣ್ಗಳು ಕರಗುವ ದೃಶ್ಯವೊಂದು ಸಾಕು ಅಂಕಿತಾ ನಟನೆಯನ್ನು ವರ್ಣಿಸಲು. ವಿಹಾನ್‌ ಹೊಸ ರೂಪ ತಾಳಿದ್ದಾರೆ. ಅವರ ನಟನೆಯಲ್ಲಿನ ಪ್ರಬುದ್ಧತೆಯನ್ನು ಈ ಸಿನಿಮಾ ತೋರ್ಪಡಿಸಿದೆ. ಮಯೂರಿ ತಮ್ಮ ಧ್ವನಿ ಹಾಗೂ ನಟನೆಯಿಂದ ಸೆಳೆಯುತ್ತಾರೆ. 

ADVERTISEMENT

ತಾಂತ್ರಿಕವಾಗಿ ಗಗನ್‌ ಬಡೇರಿಯಾ ಸಂಗೀತ ಚಿತ್ರಕ್ಕೆ ಇಂಬು ನೀಡಿದೆ. ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಚಿತ್ರಗ್ರಹಣ, ವಿಎಫ್‌ಎಕ್ಸ್‌ ತಂಡ ತೆರೆಯ ಮೇಲೆ ಹೊಸ ಲೋಕವನ್ನೇ ಸೃಷ್ಟಿಸಿದೆ. ಕೆಲವೆಡೆ ಡಬ್ಬಿಂಗ್‌ ಸೂಕ್ತವಾಗಿ ಆಗಿಲ್ಲ. ಪ್ರಸ್ತುತ ಇರುವಂತಹ ಧಾವಂತದ, ಮಾಸ್‌ ಸಿನಿಮಾಗಳ ಭರಾಟೆ ನಡುವೆ ಇದೊಂದು ಆಸ್ವಾದಿಸುವ ಚಿತ್ರವೆನ್ನಬಹುದು. ಹಲವರಿಗೆ ಇದು ಪ್ರತಿಬಿಂಬದಂತೆ ಕಾಣಬಹುದು, ಪ್ರೀತಿಗೊಂದು ಹೊಸ ಭಾಷ್ಯದಂತೆ ಕಾಣಬಹುದು, ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಬಹುದು. ಫೀಲ್‌ ಗುಡ್‌ ಚಿತ್ರ ಸರಪಳಿಗೆ ಇದನ್ನು ಸೇರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.