ADVERTISEMENT

ಇರುವುದೆಲ್ಲವ ಬಿಟ್ಟು: ಹೊಸ ಬದುಕು; ಹಳೆಯ ಬಿರುಕು

ಇರುವುದೆಲ್ಲವ ಬಿಟ್ಟು ಸಿನಿಮಾ ವಿಮರ್ಶೆ

ಪದ್ಮನಾಭ ಭಟ್ಟ‌
Published 21 ಸೆಪ್ಟೆಂಬರ್ 2018, 11:04 IST
Last Updated 21 ಸೆಪ್ಟೆಂಬರ್ 2018, 11:04 IST
ಮೇಘನಾ ರಾಜ್ ಮತ್ತು ಶ್ರೀಮಹಾದೇವ್
ಮೇಘನಾ ರಾಜ್ ಮತ್ತು ಶ್ರೀಮಹಾದೇವ್   

ಸಿನಿಮಾ: ಇರುವುದೆಲ್ಲವ ಬಿಟ್ಟು
ನಿರ್ಮಾಣ: ದಾವಣಗೆರೆ ದೇವರಾಜ
ನಿರ್ದೇಶನ: ಕಾಂತ ಕನ್ನಲ್ಲಿ
ತಾರಾಗಣ: ಶ್ರೀಮಹದೇವ್, ಮಾ. ಅಭಿಷೇಕ್ ರಾಯಣ್ಣ, ಮೇಘನಾ ರಾಜ್, ತಿಲಕ್, ಅಚ್ಯುತ್‌ಕುಮಾರ್, ಅರುಣಾ ಬಾಲರಾಜ್

ವೃತ್ತಿ ಮಹತ್ವಾಕಾಂಕ್ಷೆ, ಸಾಧನೆ, ಹಣ ಗಳಿಕೆ, ವಿಲಾಸಿ ನಗರ ಜೀವನ, ಸ್ವಚ್ಛಂದ ಸಂಬಂಧಗಳು... ಇದಕ್ಕೆ ವಿರುದ್ಧವಾಗಿ ಹಳ್ಳಿ, ತಂದೆ ತಾಯಿ, ಸಂಪ್ರದಾಯದ ಚೌಕಟ್ಟಿನಲ್ಲಿಯೇ ಬೇರುಬಿಟ್ಟ ಸಂಬಂಧಗಳು, ಕಮ್ಮಿ ಹಣ ಜಾಸ್ತಿ ನೆಮ್ಮದಿ... ಹೀಗೆ ನಗರ ವರ್ಸಸ್ ಹಳ್ಳಿ ಎಂಬ ಕಥೆ ಇಟ್ಟುಕೊಂಡ ಸಿನಿಮಾಗಳು ಸಾಕಷ್ಟು ಬಂದಿವೆ. ಇಂಥ ವಸ್ತುಗಳನ್ನು ಆಯ್ದುಕೊಂಡಾಗಲೇ ಹಳ್ಳಿ ಬದುಕು, ಅಲ್ಲಿನ ಮೌಲ್ಯಗಳು ಒಳ್ಳೆಯವು, ನಗರಜೀವನ, ಆಧುನಿಕ ಜೀವನ ಶೈಲಿ ಕೆಟ್ಟದ್ದು ಎಂಬ ಪೂರ್ವಾಗ್ರಹವೊಂದು ಗೊತ್ತಿಲ್ಲದೆಯೇ ಸೇರಿಕೊಂಡುಬಿಡುತ್ತವೆ. ಈ ವಸ್ತುವನ್ನು ಇಟ್ಟುಕೊಂಡು ಬಂದ ಬಹುತೇಕ ಸಿನಿಮಾಗಳು ಇದನ್ನೇ ಪ್ರತಿಪಾದಿಸಿವೆ. ಹಾಗಾಗಿ ಆ ದಿಕ್ಕಿನಲ್ಲಿ ವಾಸ್ತವವಲ್ಲದ ಹೆದ್ದಾರಿಯೊಂದು ನಿರ್ಮಾಣಗೊಂಡಿದೆ.

ನಿರ್ದೇಶಕ ಕಾಂತ ಕನ್ನಲ್ಲಿ ಅವರಿಗೂ ಈ ಸಿದ್ಧ ಹೆದ್ದಾರಿಯನ್ನು ದಾಟಿ ವಾಸ್ತವದ ಕಾಲುದಾರಿಯನ್ನು ಕಾಣಿಸಲು ಸಾಧ್ಯವಾಗಿಲ್ಲ. ಆದರೆ ಈ ಮಿತಿಯೊಂದನ್ನು ಬಿಟ್ಟು ನೋಡಿದರೆ ‘ಇರುವುದೆಲ್ಲವ ಬಿಟ್ಟು’ ಹಲವು ಕಾರಣಗಳಿಗೆ ಮೆಚ್ಚಿಕೊಳ್ಳಬಹುದಾದ ಸಿನಿಮಾ.

ADVERTISEMENT

ಸಾಫ್ಟ್‌ವೇರ್ ಜಗತ್ತಿನ, ಹೊಸ ತಲೆಮಾರಿನವರ ಮಹತ್ವಾಕಾಂಕ್ಷೆಗಳು– ಮೌಲ್ಯಗಳು, ಸಂಬಂಧಗಳು ಅದರಿಂದ ಉಂಟಾಗುವ ಸಂಘರ್ಷಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವುದೇ ಮೆಚ್ಚುಗೆಗೆ ಅರ್ಹ. ಮನಸ್ಸನ್ನು ಆರ್ದ್ರಗೊಳಿಸುವ ಹಲವು ಭಾವತೀವ್ರ ಸನ್ನಿವೇಶಗಳನ್ನೂ ಅವರು ಕಟ್ಟಿಕೊಟ್ಟಿದ್ದಾರೆ.

ಆಕಾಶ್ ಅನಾಥ ಹುಡುಗ. ಗೊಂಬೆಯಂಗಡಿ ಇಟ್ಟುಕೊಂಡಿದ್ದಾನೆ. ಅಲ್ಲಿ ಅವನು ವ್ಯಾಪಾರ ಮಾಡುವುದಕ್ಕಿಂತ ಮಕ್ಕಳಿಗೆ ಉಚಿತವಾಗಿ ಗೊಂಬೆ ಕೊಡುವುದೇ ಹೆಚ್ಚು. ಯಾರಾದರೂ ಕಷ್ಟದಲ್ಲಿ ಇರುವುದನ್ನು ಕಂಡರೆ ಸಹಾಯಕ್ಕೆ ದಾವಿಸುವ ಮುದ್ದು ಮುಗ್ಧ ಹುಡುಗ. ಇಂಥದ್ದೇ ಒಂದು ಸಹಾಯ ಪ್ರಹಸನದಲ್ಲಿ ಅವನಿಗೆ ಪೂರ್ವಿ ಭೇಟಿಯಾಗುತ್ತಾಳೆ. ಇಷ್ಟವೂ ಆಗಿತ್ತಾಳೆ. ಇನ್ನೇನು ಪ್ರೇಮದ ಬಳ್ಳಿಗೆ ಹೂಬಿಟ್ಟಿತು ಅನ್ನುವಷ್ಟರಲ್ಲಿ ಅವಳು ತನ್ನ ಮಗ ಭುವನ್‌ನನ್ನು ಪರಿಚಯಿಸುತ್ತಾಳೆ. ಅಲ್ಲಿ ಸಂತೂರ್... ಸಂತೂರ್... ಜಾಹೀರಾತಿನ ನೆನಪು. ನಂತರದಲ್ಲಿ ಪೂರ್ವಿಯ ಹಳೆಯ ಬದುಕಿನ ಕಥೆ.

ಆಧುನಿಕ ತಲೆಮಾರಿನ ಸಂಪ್ರದಾಯದ ಚೌಕಟ್ಟನ್ನುಮೀರುವ ಹಂಬಲ – ಅದರ ಸವಾಲುಗಳನ್ನು ಪೂರ್ವಿ ಮತ್ತು ದೇವ್ ಪಾತ್ರಗಳ ಮೂಲಕ ನಿರ್ದೇಶಕರು ಸಮರ್ಧವಾಗಿಯೇ ಹೆಣೆದಿದ್ದಾರೆ. ದ್ವಿತೀಯಾರ್ಧದಲ್ಲಿ ಪೂರ್ವಿ ಮತ್ತು ದೇವ್ ಇಬ್ಬರೂ ಹಿನ್ನೆಲೆಗೆ ಸರಿದು ಪುಟಾಣಿ ಭುವನ್ ಮತ್ತು ಆಕಾಶ್‌ ಪೂರ್ತಿಯಾಗಿ ಆವರಿಸಿಕೊಳ್ಳುತ್ತಾರೆ. ಅವರ ಟಾಮ್‌ ಆ್ಯಂಡ್ ಜೆರ್ರಿ ಆಟಾಟೋಪಗಳು ತುಸು ಬೇಸರವನ್ನೂ ಹುಟ್ಟಿಸುತ್ತವೆ. ತ್ರಿಕೋನ ಸಂಬಂಧದಲ್ಲಿ ಬಿಗಿಯಾಗಿದ್ದ ಹೆಣಿಗೆ ಕೊನೆಯಲ್ಲಿ ಕೊಂಚ ಸಡಿಲಾಗುತ್ತದೆ. ‘ತನ್ನ ಬದುಕಿನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುತ್ತೇನೆ’ ಎಂದು ಹೊರಟ ಪೂರ್ವಿ ಕೊನೆಗೆ ‘ನಾನು ನಿನ್ನ ಋಣದಲ್ಲಿದ್ದೇನೆ. ಬೇಕಾದರೆ ಮದುವೆಯಾಗುತ್ತೇನೆ’ ಎಂದು ಆಕಾಶ್‌ಗೆ ಹೇಳುವುದು ಅಸಹಜವಾಗಿದೆಯಷ್ಟೇ ಅಲ್ಲ, ಆ ಪಾತ್ರವನ್ನು ಪೂರ್ತಿ ದುರ್ಬಲಗೊಳಿಸುತ್ತದೆ.

‘ನಗರ ಪಾಪಿಗಳು ಇರುವ ನರಕ; ಹಳ್ಳಿ ಪುಣ್ಯವಂತರು ಇರುವ ಸ್ವರ್ಗ’ ಎಂಬ ಆಕಾಶ್‌ನ ಭಾವನೆಗೆ ಪ್ರತಿಕ್ರಿಯಿಸುತ್ತಾ ಪೂರ್ವಿಯ ತಂದೆ ‘ಒಳ್ಳೆಯವರು ಎಲ್ಲಿದ್ದರೂ ಹಾಗೆಯೇ ಇರುತ್ತಾರೆ. ಕೆಟ್ಟ ಮನಸ್ಥಿತಿ ಇದ್ದರೆ ಹಳ್ಳಿಯೂ ನರಕವಾಗುತ್ತದೆ’ ಎಂಬರ್ಥದ ಮಾತನ್ನು ಹೇಳುತ್ತಾರೆ. ಮನುಷ್ಯನ ಸ್ವಭಾವ– ಲೋಭಗಳನ್ನು ನಗರ ಅಥವಾ ಹಳ್ಳಿಯ ಪರಿಸರ ನಿರ್ಧರಿಸುವುದಿಲ್ಲ ಎನ್ನುವ ಪ್ರಬುದ್ಧತೆ ನಿರ್ದೇಶಕರಿಗೆ ಇದ್ದಿದ್ದರೆ ಈ ಸಿನಿಮಾ ಇನ್ನೊಂದು ಮಟ್ಟ ಮೇಲೆ ನಿಲ್ಲುತ್ತಿತ್ತು. ಲಿವಿಂಗ್ ರಿಲೇಷನ್‌ಷಿಪ್‌ನಲ್ಲಷ್ಟೇ ಅಲ್ಲ, ದಾಂಪತ್ಯದ ಬಂಧನದೊಳಗೂ ಬಿರುಕು– ನರಕಗಳು ಇರುತ್ತವೆ ಎನ್ನುವ ಅರಿವು ಇದ್ದಿದ್ದರೆ ದೇವ್‌, ಪೂರ್ವಿಗೆ ಅರಿಶಿನ ದಾರ ಕಟ್ಟುವ ದೃಶ್ಯದಲ್ಲಿಯೇ ಸಿನಿಮಾ ಕೊನೆಗೊಳ್ಳಬೇಕು ಎಂದು ಅನಿಸುತ್ತಿರಲಿಲ್ಲ. ಹಲವು ಗಡೀರೆಖೆಗಳನ್ನು ಮೀರಿ ಕೊನೆಗೂ ಅದೇ ಹಳೆಯ ಸೂತ್ರಕ್ಕೆ ಸಿಕ್ಕುಬಿದ್ದಿರುವುದು ಚಿತ್ರದ ಮಿತಿ. ಇದು ಸುಮಾರು ಪೊಟ್ಟಣದ ಕಡೆಯಲ್ಲಿ ಕಹಿ ಕಡಲೆ ಬೀಜ ಸಿಕ್ಕಂತೆ ಮುಖ ಕಿವುಚುವಂತಾಗುತ್ತದೆ.

ಈ ಮಿತಿಯನ್ನು ಬಿಟ್ಟು ನೋಡಿದರೆ ಸೂಕ್ಷ್ಮ ಮತ್ತು ಸಕಾಲಿಕವಾಗಿರುವ ವಸ್ತುವನ್ನು ಆಯ್ದುಕೊಂಡು ನಿರ್ವಹಿಸಿರುವ ರೀತಿ ಮೆಚ್ಚುಗೆಯಾಗುವಂತಿದೆ.

ಮೊದಲ ಸಿನಿಮಾದಲ್ಲಿಯೇ ಶ್ರೀಮಹಾದೇವ್ ಚುರುಕಾಗಿ ನಟಿಸಿದ್ದಾರೆ. ಪುಟಾಣಿ ಮಾ. ಅಭಿಷೇಕ್ ರಾಯಣ್ಣ ಚಿನಕುರುಳಿತನ ಚಿತ್ರದ ದ್ವಿತೀಯಾರ್ಧವಕ್ಕೆ ವೇಗವರ್ಧಕವಾಗಿದೆ. ಕಡಿಮೆ ಅವಧಿಯಲ್ಲಿಯೇ ಅಚ್ಯುತ್ ಕುಮಾರ್ ಮನಸಲ್ಲಿ ಅಚ್ಚೊತ್ತುತ್ತಾರೆ. ನಗುವನ್ನೂ, ನೋವನ್ನೂ ದುಗುಡವನ್ನೂ ಮೇಘನಾ ರಾಜ್ ಹದವಾಗಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.