ADVERTISEMENT

ವಿಕ್ಕಿ ವರುಣ್‌ ‘ಕಾಲಾಪತ್ಥರ್‌’ ಸಿನಿಮಾ ವಿಮರ್ಶೆ: ಭಿನ್ನ ಕಥೆಯ ಸಹಜ ಲೋಕ!

ಸೈನ್ಯದಲ್ಲಿ ಆತ ಜೀಪ್‌ ಚಾಲಕ, ಬಾಣಸಿಗ ಕೂಡ ಆಗಿರಬಹುದೆಂಬ ವಾಸ್ತವದೊಂದಿಗೆ ‘ಕಾಲಾಪತ್ಥರ್‌’ ಚಿತ್ರ ಪ್ರಾರಂಭವಾಗುತ್ತದೆ.

ವಿನಾಯಕ ಕೆ.ಎಸ್.
Published 13 ಸೆಪ್ಟೆಂಬರ್ 2024, 10:35 IST
Last Updated 13 ಸೆಪ್ಟೆಂಬರ್ 2024, 10:35 IST
<div class="paragraphs"><p>ಕಾಲಾಪತ್ಥರ್‌</p></div>

ಕಾಲಾಪತ್ಥರ್‌

   

ಸೈನಿಕ, ಸೈನ್ಯದಲ್ಲಿದ್ದಾನೆ ಎಂದರೆ ಆತ ದೇಶದ ಗಡಿಯಲ್ಲಿ ಬಂದೂಕು ಹಿಡಿದು ಓಡಾಡುತ್ತಾನೆ ಎಂಬ ಕಲ್ಪನೆ ಸಹಜ. ಆದರೆ ಸೈನ್ಯದಲ್ಲಿ ಆತ ಜೀಪ್‌ ಚಾಲಕ, ಬಾಣಸಿಗ ಕೂಡ ಆಗಿರಬಹುದೆಂಬ ವಾಸ್ತವದೊಂದಿಗೆ ‘ಕಾಲಾಪತ್ಥರ್‌’ ಚಿತ್ರ ಪ್ರಾರಂಭವಾಗುತ್ತದೆ. ಚಿತ್ರದ ನಾಯಕ, ಉತ್ತರ ಕರ್ನಾಟಕದ ಶಂಕ್ರ ಸೇನೆಯಲ್ಲಿದ್ದಾನೆ, ಧೀರ, ಸಾಹಸಿ ಎಂದು ಊರೆಲ್ಲ ಸಂಭ್ರಮಿಸುತ್ತಿರುತ್ತದೆ. ಆದರೆ ಶಂಕ್ರ ಕಾಶ್ಮೀರದ ಸೇನಾ ಬೆಟಾಲಿಯನ್‌ನಲ್ಲಿ ಅಡುಗೆಯವನಾಗಿರುತ್ತಾನೆ. ಶಂಕ್ರನ ಈ ಜಗತ್ತನ್ನು ಕಟ್ಟಿಕೊಡುವ ‘ಬಾಂಡಲಿ, ಸ್ಟೌ’ ಗೀತೆ. ಅದಕ್ಕೆ ದೃಶ್ಯ ಸಂಯೋಜನೆ ಭಿನ್ನವಾಗಿದೆ.

ಸೇನೆಯಲ್ಲಿ ತನ್ನ ಶೌರ್ಯವನ್ನು ಪ್ರದರ್ಶಿಸಿ, ತಾನು ಸೌಟು ಬಿಟ್ಟು ಗನ್‌ ಹಿಡಿಯುವ ಸೈನಿಕನಾಗಬೇಕೆಂಬ ಅವಕಾಶಕ್ಕಾಗಿ ಕಾಯುತ್ತಿರುವ ಶಂಕ್ರನಿಗೊಂದು ದಿನ ಆ ಅವಕಾಶ ಲಭಿಸುತ್ತದೆ. ಭಯೋತ್ಪಾದಕರ ಜೊತೆ, ಸೌಟು, ಸಿಲಿಂಡರ್‌, ಪಾತ್ರೆಗಳನ್ನೆಲ್ಲ ಬಳಸಿ ಹೋರಾಡುವ ಫೈಟ್‌ ಕೂಡ ಹೊಸತಾಗಿದೆ. ಆದರೆ ಗನ್‌ ಹಿಡಿದು ಬಂದ ಭಯೋತ್ಪಾದಕರು ಈತನ ಜೊತೆಗೆ ಸೌಟು ಹಿಡಿದು ಏಕೆ ಹೋರಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ!

ADVERTISEMENT

ಭಯೋತ್ಪಾದಕರನ್ನು ಹೊಡೆದುರುಳಿಸಿದ ಶಂಕ್ರ ರಾತ್ರೋರಾತ್ರಿ ಜನಪ್ರಿಯನಾಗಿ, ಸುದ್ದಿವಾಹಿನಿಗಳಿಗೆ ಆಹಾರವಾಗುತ್ತಾನೆ. ಹುಟ್ಟೂರಲ್ಲಿ ಶಂಕ್ರನ ಮೂರ್ತಿಯೊಂದು ತಲೆ ಎತ್ತುತ್ತದೆ. ಆ ಶಿಲೆಯ ಮೂರ್ತಿಯಿಂದ ಊರಲ್ಲಿ, ಶಂಕ್ರನ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ. ಸತ್ಯಪ್ರಕಾಶ್‌ ಅವರ ಕಥೆಯಾಗಿದ್ದರಿಂದ ಇಲ್ಲಿಯೂ ಸ್ವಲ್ಪ ‘ರಾಮಾ ರಾಮಾ ರೇ’ ಚಿತ್ರದ ಛಾಯೆಯಿದೆ. ಚಿತ್ರದ ಕಥೆಯೇ ಭಿನ್ನ ಮತ್ತು ಬಹಳ ಸಹಜವಾಗಿ ನಡೆಯುತ್ತದೆ. ಒಂದಷ್ಟು ತಿರುವುಗಳೊಂದಿಗೆ ದ್ವಿತೀಯಾರ್ಧದ ಚಿತ್ರಕಥೆಯನ್ನು ಸ್ವಲ್ಪ ಗಟ್ಟಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು.‌ ಕಂಟೆಂಟ್‌ ಜೊತೆಗೆ ನಾಯಕ–ನಾಯಕಿ ಪ್ರೀತಿ ಇನ್ನಷ್ಟು ಗಾಢವಾಗಬಹುದಿತ್ತು. ನಗುವಿಗೊಂದಷ್ಟು ಜಾಗ ಬೇಕಿತ್ತು.  

ಚಿತ್ರದ ದೊಡ್ಡ ಶಕ್ತಿ ನಟರ ದಂಡು. ಸೈನಿಕನಾಗಿ ವಿಕ್ಕಿ ವರುಣ್‌ ಇಷ್ಟವಾಗುತ್ತಾರೆ. ಶಿಕ್ಷಕಿ ಪಾತ್ರದಲ್ಲಿ ಧನ್ಯಾ ರಾಮ್‌ಕುಮಾರ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಊರಿನ ಗೌಡರಾಗಿ ಟಿ.ಎಸ್‌.ನಾಗಾಭರಣ ವಿಭಿನ್ನವಾಗಿ ಕಾಣಿಸುತ್ತಾರೆ. ಸಂದೀಪ್‌ ಅವರ ಛಾಯಾಚಿತ್ರಗ್ರಹಣ ಉತ್ತರ ಕರ್ನಾಟಕ ಊರುಗಳನ್ನು ಚೆಂದವಾಗಿ ಕಟ್ಟಿಕೊಟ್ಟಿದೆ. ಅನೂಪ್‌ ಸೀಳೀನ್‌ ಸಂಗೀತ ಕಥೆಗೆ ಪೂರಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.