ADVERTISEMENT

Kaatera | ‘ಕಾಟೇರ’ ಸಿನಿಮಾ ವಿಮರ್ಶೆ: ಗಟ್ಟಿ ಕಥೆಗೆ ಹೊಡೆದಾಟದ ಅತಿ ಒಗ್ಗರಣೆ

ಅಭಿಲಾಷ್ ಪಿ.ಎಸ್‌.
Published 29 ಡಿಸೆಂಬರ್ 2023, 9:36 IST
Last Updated 29 ಡಿಸೆಂಬರ್ 2023, 9:36 IST
   

ಚಿತ್ರ: ಕಾಟೇರ (ಕನ್ನಡ)

ನಿರ್ದೇಶನ: ತರುಣ್‌ ಕಿಶೋರ್‌ ಸುಧೀರ್‌

ನಿರ್ಮಾಣ: ರಾಕ್‌ಲೈನ್‌ ವೆಂಕಟೇಶ್‌

ADVERTISEMENT

ತಾರಾಗಣ: ದರ್ಶನ್, ಆರಾಧನಾ, ಜಗಪತಿ ಬಾಬು, ಅವಿನಾಶ್‌, ಶ್ರುತಿ, ಕುಮಾರ್‌ ಗೋವಿಂದ್, ವೈಜನಾಥ ಬಿರಾದಾರ್‌, ಮಾಸ್ಟರ್‌ ರೋಹಿತ್‌ ಮತ್ತಿತರರು

‘ಕಾಟೇರ’ ಸಿನಿಮಾದ ಒಟ್ಟು ಸಂದೇಶ, ರಾಷ್ಟ್ರಕವಿ ಕುವೆಂಪು ಅವರ ಆಶಯಗಳಿಗೆ ಹತ್ತಿರವಾಗಿದೆ. ಭೂ ಸುಧಾರಣಾ ಕಾಯ್ದೆಯನ್ನು ಎಳೆಯಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಹೆಣೆದ ‘ಕಾಟೇರ’ ಚಿತ್ರದ ಕಥೆ ಮನಸ್ಸಿಗೆ ಹತ್ತಿರವಾಗುತ್ತದೆ, ಇಷ್ಟವಾಗುತ್ತದೆ. ಆದರೆ ಚಿತ್ರಕಥೆಯು ‘ಮಾಸ್‌’ ಎಂಬ ಮಾನದಂಡಕ್ಕೆ ಕಟ್ಟುಬಿದ್ದಾಗ, ಒಂದು ಹಂತದಲ್ಲಿ ಹೊಡೆದಾಟ ಸಾಕೆನಿಸಿಬಿಡುತ್ತದೆ.

ತರುಣ್‌–ದರ್ಶನ್‌ ಕಾಂಬಿನೇಷನ್‌ನಲ್ಲಿ ಈ ಹಿಂದೆ ‘ರಾಬರ್ಟ್‌’ ಸಿನಿಮಾ ತೆರೆಕಂಡಿತ್ತು. ಇದಕ್ಕೆ ಹೋಲಿಸಿದರೆ ‘ಕಾಟೇರ’ ಭಿನ್ನ ಪ್ರಯೋಗ. ಹಲವು ವಿಷಯಗಳ ಸಾರ ಇಲ್ಲಿದೆ. ನೆಲದ ಕಥೆಯಾಗಿರುವ ಕಾರಣ ದರ್ಶನ್ ಪಾತ್ರದ ಅಭಿನಯಾವಕಾಶ ಗಮನಾರ್ಹವಾಗಿದೆ. 1970–80ರಲ್ಲಿ ನಡೆಯುವ ಕಥೆ ಹೊತ್ತಿರುವ ‘ಕಾಟೇರ’ ರಿವರ್ಸ್‌ ಸ್ಕ್ರೀನ್‌ಪ್ಲೇಯಲ್ಲಿ ಸಾಗುತ್ತದೆ. ಹೊಸ ಲುಕ್‌ನಲ್ಲಿ ದರ್ಶನ್‌ ತೆರೆ ಪ್ರವೇಶಿಸುತ್ತಾರೆ. ಇದು ಸಿನಿಮಾಗೆ ಭದ್ರ ಅಡಿಪಾಯ ಹಾಕುತ್ತದೆ. ಭೀಮನಹಳ್ಳಿ ಹಾಗೂ ಮಲ್ಲನಕೆರೆ ಎಂಬ ಎರಡು ಊರುಗಳು. ಭೀಮನಹಳ್ಳಿಯಲ್ಲಿ ಕುಲುಮೆ ಇಟ್ಟಿರುವ ‘ಕಾಟೇರ’(ದರ್ಶನ್‌) ಕಟ್ಟುಮಸ್ತಾದ ಯುವಕ. ಅಕ್ಕನ ಮೆಚ್ಚಿನ ತಮ್ಮ. ಶಾನುಭೋಗರ ಮಗಳು ‘ಪ್ರಭಾವತಿ’ಗೆ(ಆರಾಧನಾ) ಅವನೆಂದರೆ ಇಷ್ಟ. ಆ ಎರಡೂ ಊರಿನಲ್ಲಿ ಜಮೀನ್ದಾರರ ದಬ್ಬಾಳಿಕೆ. ಇಂತಹ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಬರುತ್ತದೆ. ಜಮೀನ್ದಾರರಿಗೇ ಮಚ್ಚು ತಟ್ಟಿದ ಕೈ ಏಕೆ ಅವರ ವಿರುದ್ಧವೇ ತಿರುಗಿ ಬೀಳುತ್ತದೆ ಎನ್ನುವುದು ಚಿತ್ರದ ಮುಂದಿನ ಕಥೆ.

ಕಥೆಯೇ ಇಡೀ ಸಿನಿಮಾದ ಜೀವಾಳ. ಈ ಹಿಂದೆ ದರ್ಶನ್‌ ‘ಯಜಮಾನ’ದಲ್ಲಿ ಇಂತಹ ಒಂದು ಸದೃಢವಾದ ಕಥೆಗೆ ಅಭಿನಯಿಸಿದ್ದರು. ‘ಕಾಟೇರ’ವೂ ಇಂತಹ ಒಂದು ಗಟ್ಟಿಯಾದ ಕಥೆ ಹೊಂದಿದೆ. ಅಂದಿಗೂ ಇಂದಿಗೂ ಪ್ರಸ್ತುತ ಎನಿಸುವ ಕಥೆ ಅದು. ಹೀಗಾಗಿ ಮೊದಲಾರ್ಧ ಧುಮ್ಮಿಕ್ಕಿದಂತೆ ಸಾಗುತ್ತದೆ. ಇದರಲ್ಲಿ ಇರುವುದು ಕೇವಲ ಒಂದು ಪ್ರಮುಖ ಆ್ಯಕ್ಷನ್‌ ದೃಶ್ಯ ಎನ್ನುವುದನ್ನು ಗಮನಿಸಬೇಕು. ಅಬ್ಬರದ ಹೀರೋ ಎಂಟ್ರಿಯಾಗಲಿ, ಆತನಿಗೊಂದು ಹಾಡಾಗಲಿ, ಹಾರುವ ರೌಡಿಗಳು ಇಲ್ಲಿಲ್ಲ. ಕಥೆ ಕಟ್ಟುವುದಕ್ಕೇ ಇಲ್ಲಿ ಆದ್ಯತೆ. ಕಥೆಗೆ ತಕ್ಕಂತೆ ದರ್ಶನ್‌ ಇಲ್ಲಿ ಮಾಗಿದ್ದಾರೆ. ಇದಕ್ಕೆ ತಕ್ಕಂತೆ ಇತರೆ ಕಲಾವಿದರ ನಟನೆಯಿದೆ. ಸಿನಿಮಾ ಹೀಗೆ ಮೊದಲಾರ್ಧದಲ್ಲಿ ಚಿತ್ರಕಥೆಯಲ್ಲೇ ಹಿಡಿದು ಕೂರಿಸುತ್ತದೆ. ದ್ವಿತೀಯಾರ್ಧದಲ್ಲಿ ಬರುವ ಎರಡು ಆ್ಯಕ್ಷನ್‌ ದೃಶ್ಯಗಳು ‘ಮಾಸ್‌’ ವರ್ಗದ ಮೆಚ್ಚುಗೆಗಾಗಿ ತುರುಕಿದಂತಿದೆ. ಇದು ಸಿನಿಮಾದ ಅವಧಿ ಹೆಚ್ಚಿಸುವುದರ ಜೊತೆಗೆ ಚಿತ್ರಕಥೆಯ ವೇಗಕ್ಕೂ ಅಡ್ಡಿ ಮಾಡಿದೆ. ಹೆಚ್ಚಿನ ಹೊಡೆದಾಟವಿಲ್ಲದ ಕ್ಲೈಮ್ಯಾಕ್ಸ್‌ ಭಿನ್ನವಾಗಿದೆ. ‘ಹುಟ್ಟಿದ ಮಕ್ಕಳೆಲ್ಲರೂ ದೇವರು ಇದ್ದ ಹಾಗೆ. ಆ ದೇವರಿಗೆ ಜಾತಿ ಎನ್ನುವ ಮುದ್ರೆ ಒತ್ತಬೇಡಿ. ಮನುಷ್ಯತ್ವ, ಪ್ರೀತಿ, ಸಮಾನತೆ ಎಂಬ ಮುದ್ರೆ ಒತ್ತಿ’ ಎಂದು ಕೊನೆಯಲ್ಲಿ ನೀಡಿರುವ ಸಾಮಾಜಿಕ ಸಂದೇಶ ಇಂದಿಗೂ ಪ್ರಸ್ತುತ.

ಸಿನಿಮಾ ಪೂರ್ತಿ ದರ್ಶನ್‌ ತುಂಬಿಕೊಂಡಿದ್ದಾರೆ ಎನ್ನಬಹುದು. ಅವರು ಭಾವನಾತ್ಮಕ ದೃಶ್ಯಗಳನ್ನು ನಿಭಾಯಿಸಿದ ರೀತಿ ಉಲ್ಲೇಖಾರ್ಹ. ಆ್ಯಕ್ಷನ್‌ ದೃಶ್ಯಗಳಲ್ಲಿ ಎಂದಿನಂತಹ ಗತ್ತು ಇದೆ. ಎರಡು ಶೇಡ್ಸ್‌ನಲ್ಲಿ ನಟನೆಯ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ‘ಕಾಟೇರ’ನ ಸಂಗಡಿಗರಾಗಿ ಬಿರಾದಾರ್‌ ಮತ್ತು ರೋಹಿತ್‌ ನಟನೆಗೆ ಹೆಚ್ಚು ಅಂಕ. ಆರಾಧನಾ ಮೊದಲ ಸಿನಿಮಾದಲ್ಲೇ ನಟನೆಯ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಉಳಿದಂತೆ ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜಡೇಶ್‌ ಕೆ.ಹಂಪಿ ಹಾಗೂ ತರುಣ್‌ ಅವರ ಕಥೆ ಮತ್ತು ಮಾಸ್ತಿ ಅವರ ಸಂಭಾಷಣೆ ಸಿನಿಮಾದ ಆಸ್ತಿ. ಅದುವೇ ಪರಿಣಾಮಕಾರಿ ಅಸ್ತ್ರವಾಗಿದೆ. ಛಾಯಾಚಿತ್ರಗ್ರಹಣದಲ್ಲಿ ಸುಧಾಕರ್‌ ಕೆಲಸವೂ ಗಮನಾರ್ಹ. ಹಾಡುಗಳು ಮತ್ತೆ ಮತ್ತೆ ಗುನುಗುವಷ್ಟು ಇಂಪಾಗಿಲ್ಲ. 1970 ರ ಕಾಲಘಟ್ಟದ ಮರುಸೃಷ್ಟಿಯಲ್ಲಿನ ಶ್ರಮ ಕಾಣುತ್ತದೆ.

ಸಿನಿಮಾದ ಅವಧಿ 182 ನಿಮಿಷವಿದ್ದು, ಮೊದಲಾರ್ಧದಲ್ಲಿ ಒಂದು ಹಾಡು ಹಾಗೂ ದ್ವಿತೀಯಾರ್ಧದ ಎರಡು ಸಾಹಸ ದೃಶ್ಯಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ನಿರ್ದೇಶಕರು ಕತ್ತರಿ ಹಾಕಿದ್ದರೆ ಸಿನಿಮಾ ತೂಕ, ವೇಗ ಇನ್ನಷ್ಟು ಹೆಚ್ಚುತ್ತಿತ್ತು. ಕೆಲವು ದೃಶ್ಯಗಳು ಕೃತಕವಾಗಿವೆ. ‘ದೇವರಾಯನ’ ಹತ್ಯೆ ಸಂದರ್ಭ ಅಷ್ಟು ಹೊತ್ತು ಪೊಲೀಸರು ಬಾಗಿಲ ಹಿಂದೆ ಏನು ಮಾಡುತ್ತಿದ್ದರು? ಅದೂ ನಡುರಾತ್ರಿಯಲ್ಲಿ? ಎಂದು ಕೇಳುವುದು ತಪ್ಪಲ್ಲ. ಬಾಯಿಯಲ್ಲೇ ಮಚ್ಚು ಹಿಡಿದು ಹತ್ತಾರು ವಿರೋಧಿಗಳನ್ನು ಕೊಚ್ಚುವುದು ಸೇರಿದಂತೆ ಕೆಲವೆಡೆ ದೃಶ್ಯಗಳು ತರ್ಕಕ್ಕೆ ಸಿಗುವುದಿಲ್ಲ. ಇವುಗಳನ್ನು ಹೊರತುಪಡಿಸಿ ಒಟ್ಟು ಸಿನಿಮಾ ಸದೃಢವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.