ADVERTISEMENT

ಕಾಂಗರೂ ಸಿನಿಮಾ ವಿಮರ್ಶೆ: ಮಾನಸಿಕ ಕಾಯಿಲೆಗೆ ಹಾರರ್‌ ಸ್ಪರ್ಶ

ಅಭಿಲಾಷ್ ಪಿ.ಎಸ್‌.
Published 3 ಮೇ 2024, 11:27 IST
Last Updated 3 ಮೇ 2024, 11:27 IST
<div class="paragraphs"><p>ಕಾಂಗರೂ</p></div>

ಕಾಂಗರೂ

   

ಭ್ರೂಣಹತ್ಯೆ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಕಿಶೋರ್‌ ಮೇಗಳಮನೆ ‘ಕಾಂಗರೂ’ ಎಂಬ ಹಾರರ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೆಣೆದಿದ್ದಾರೆ. ಭ್ರೂಣಹತ್ಯೆ ವಿರುದ್ಧ ಜಾಗೃತಿ ಮೂಡಿಸುವುದು ಸಿನಿಮಾದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶೀರ್ಷಿಕೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಕಾಂಗರೂವಿನಂತೆ ಒಡಲಲ್ಲಿರುವ ಮಗುವನ್ನು ಹೆಣ್ಣುಮಗಳೊಬ್ಬಳು ಜತನವಾಗಿಟ್ಟುಕೊಳ್ಳುವ; ಇತರೆ ಭ್ರೂಣಗಳನ್ನು ಜೋಪಾನವಾಗಿರಿಸುವ ಕಥೆಯೇ ‘ಕಾಂಗರೂ’. 

ಬೆಂಗಳೂರಿನಲ್ಲಿ ಕೆಲಸ ಮಾಡುವ ‘ಪೃಥ್ವಿ’(ಆದಿತ್ಯ) ಎಂಬ ಇನ್‌ಸ್ಪೆಕ್ಟರ್‌ಗೆ ಚಿಕ್ಕಮಗಳೂರು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗುತ್ತದೆ. ಆತನ ಪತ್ನಿ ‘ಮೇಘನಾ’(ರಂಜನಿ ರಾಘವನ್‌) ಆಸ್ಪತ್ರೆಯೊಂದರಲ್ಲಿ ಮನಃಶಾಸ್ತ್ರಜ್ಞೆ. ಚಿಕ್ಕಮಗಳೂರಿನ ‘ಆಂಟನಿ ಕಾಟೇಜ್‌’ ಎಂಬ ಹೋಂಸ್ಟೇಯಲ್ಲಿ ನಡೆಯುವ ಆತ್ಮಹತ್ಯೆಯ ಘಟನೆಯೊಂದು ಕಥೆಗೆ ಮುನ್ನುಡಿ ಬರೆಯುತ್ತದೆ. ನಂತರದಲ್ಲಿ ಈ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ ದಂಪತಿಗಳಿಗೆ ದೆವ್ವದ ಕಾಟ. ಆ ದೆವ್ವವನ್ನು ಕಂಡವರು ತಮ್ಮ ಊರಿಗೆ ಮರಳಿದ ಕೆಲವೇ ದಿನಗಳನ್ನು ನಾಪತ್ತೆಯಾಗುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಎಪ್ಪತ್ತು ಪ್ರಕರಣಗಳ ತನಿಖಾಧಿಕಾರಿಯಾಗಿ ಅವುಗಳ ಜಾಡು ಹಿಡಿದು ಹೊರಟ ಪೃಥ್ವಿ ಎದುರಿಸುವ ಸನ್ನಿವೇಶಗಳು, ಕಂಡುಕೊಳ್ಳುವ ಸತ್ಯಗಳೇ ಚಿತ್ರದ ಕಥೆ. 

ADVERTISEMENT

ಪಿಟಿಎಸ್‌ಡಿ–ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌(ಸಣ್ಣ ಪ್ರಾಯದಲ್ಲೇ ಅನುಭವಿಸಿದ ಆಘಾತದಿಂದ ಎದುರಾಗುವ ಮಾನಸಿಕ ಕಾಯಿಲೆ) ಎಳೆಯಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಸರಣಿ ಕೊಲೆಯಂತಹ ಕೃತ್ಯದ ವ್ಯಸನಿಯಾಗುವರೇ ಎನ್ನುವುದಕ್ಕೆ ನಿರ್ದೇಶಕರೇ ಉತ್ತರಿಸಬೇಕು. ಸಿನಿಮಾದ ಆರಂಭದಿಂದ ಕಥೆಯ ಬೆಳವಣಿಗೆ ಅಚ್ಚುಕಟ್ಟಾಗಿದೆ. ಕೆಲವೆಡೆ ಲಾಜಿಕ್‌ ಇಲ್ಲದ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಸಿನಿಮಾದಲ್ಲಿ ರೋಮಾಂಚಕ ಸನ್ನಿವೇಶಗಳಿಗಿಂತ ಹಾರರ್‌ ಅಂಶಕ್ಕೆ ಆದ್ಯತೆ ನೀಡಲಾಗಿದ್ದು, ಈ ದೃಶ್ಯಗಳು ಎಳೆದಾಡಿದಂತೆ ಭಾಸವಾಗುತ್ತದೆ. ಇವು ಕಥೆಯ ಮೂಲ ಉದ್ದೇಶವನ್ನು ದಾರಿತಪ್ಪಿಸುವಂತಿದೆ. ಆತ್ಮಹತ್ಯೆಯನ್ನು ಪ್ರಚೋದಿಸುವಂತೆ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯವಿದೆ. ಜೊತೆಗೆ ಕಥೆಯ ಹೀರೊ ಪ್ರಕರಣವನ್ನು ಹೇಗೆ ಭೇದಿಸುತ್ತಾನೆ ಎನ್ನುವುದಕ್ಕೆ ಸೂಕ್ತ ಅಡಿಪಾಯವೇ ಇಲ್ಲ.   

ನಟನೆಯಲ್ಲಿ ಆದಿತ್ಯ ‘ಪೃಥ್ವಿ’ಯಾಗಿ ಜೀವಿಸಿದ್ದಾರೆ. ರಂಜನಿ ರಾಘವನ್‌ ಭಿನ್ನವಾದ ಪಾತ್ರವನ್ನು ನಿಭಾಯಿಸುವ ಮೂಲಕ ನಟನೆಯ ಸಾಮರ್ಥ್ಯವನ್ನು ತೋರಿದ್ದಾರೆ. ಪೊಲೀಸ್‌ ಪಾತ್ರಕ್ಕೆ ಅಶ್ವಿನ್‌ ಹಾಸನ ಫಿಕ್ಸ್‌ ಆದಂತಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಅಮ್ಮನ ಕುರಿತ ಹಾಡಿಗೆ ಸಾಧು ಕೋಕಿಲ ಸಂಗೀತ ಇಂಪಾಗಿದೆ. ಕಾಂಗರೂ–2 ಬಗ್ಗೆ ಸಣ್ಣ ಸುಳಿವನ್ನೂ ನಿರ್ದೇಶಕರು ನೀಡಿದ್ದಾರೆ.           

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.