ADVERTISEMENT

‘ನಟಸಾರ್ವಭೌಮ’ನ ‘ಕನ್ನಡಕ’ದೊಳಗಿನ ಸೇಡು

ಬಿ.ಎಂ.ಹನೀಫ್
Published 7 ಫೆಬ್ರುವರಿ 2019, 11:43 IST
Last Updated 7 ಫೆಬ್ರುವರಿ 2019, 11:43 IST
   

ಸಿನಿಮಾ:ನಟಸಾರ್ವಭೌಮ

ನಿರ್ದೇಶನ: ಪವನ್‌ ಒಡೆಯರ್‌

ತಾರಾಗಣ: ಪುನೀತ್‌ ರಾಜ್‌ಕುಮಾರ್‌, ರಚಿತಾ ರಾಮ್‌,ಅನುಪಮಾ ಪರಮೇಶ್ವರ್‌,ಬಿ.ಸರೋಜಾದೇವಿ, ರವಿಶಂಕರ್‌, ಚಿಕ್ಕಣ್ಣ

ADVERTISEMENT

ಸಂಗೀತ ನಿರ್ದೇಶನ: ಡಿ.ಇಮ್ಮಾನ್‌

ನಿರ್ಮಾಣ: ರಾಕ್‌ಲೈನ್‌ ವೆಂಕಟೇಶ್‌

**

ಭೂತ, ಆತ್ಮಗಳ ಕಥೆಗಳುಳ್ಳ ಸಿನಿಮಾಗಳನ್ನು ಮಾಡುವುದು ಈಗಿನ ಸಂದರ್ಭದಲ್ಲಿ ಮೂಢನಂಬಿಕೆಯನ್ನು ಪೋಷಿಸಿದಂತೆಯೇ. ಆದರೆ ಬುದ್ಧಿವಂತ ನಿರ್ದೇಶಕನೊಬ್ಬ ಇಂತಹ ಕಥೆಯನ್ನು ಇಟ್ಟುಕೊಂಡೂ ತರ್ಕವನ್ನು ಮೀರದೆ ಒಂದು ಸಹಜ ಕಥೆಯನ್ನು ಹೇಳಬಹುದು ಎನ್ನುವುದಕ್ಕೆ ಪವನ್‌ ಒಡೆಯರ್‌ ನಿರ್ದೇಶನದ ‘ನಟಸಾರ್ವಭೌಮ’ ಸಾಕ್ಷಿ.

ನೇರವಾಗಿ ಹೇಳಿದ್ದರೆ ಈ ಕಥೆ ಇನ್ನಷ್ಟು ಪರಿಣಾಮಕಾರಿ ಆಗುತ್ತಿತ್ತು. ಆದರೆ ಪುನೀತ್‌ ರಾಜ್‌ಕುಮಾರ್‌ನಂತಹ ಜನಪ್ರಿಯ ನಟನನ್ನು ಇಟ್ಟುಕೊಂಡು ಕಥೆಗೆ ಅಡ್ಡಾದಿಡ್ಡಿ ಮಸಾಲೆ ತುಂಬಿಸಿ ಹದಮಿಶ್ರಣದ ಚೌಚೌ ಬಾತ್‌ ಉಣಬಡಿಸಿದ್ದಾರೆ ಒಡೆಯರ್‌.

‘ನೀವು ದೆವ್ವ ದೇವರುಗಳನ್ನು ನಂಬ್ತೀರಾ’ ಎಂದು ಕೇಳುತ್ತಾನೆ ಚಿತ್ರದ ಹೀರೊ. ಅವನು ನಂಬುವುದಿಲ್ಲ. ಆದರೆ ಪ್ರೇಕ್ಷಕರು ಎರಡನ್ನೂ ನಂಬುವಂತೆ ಮುಕ್ಕಾಲು ಪಾಲು ಚಿತ್ರವನ್ನು ತೋರಿಸಿದ ಬಳಿಕ ನಿರ್ದೇಶಕರು ಫ್ಲ್ಯಾಷ್‌ಬ್ಯಾಕ್‌ಗಿಳಿದು ಇಡೀ ಚಿತ್ರದ ತರ್ಕವನ್ನೇ ಬದಲಾಯಿಸುತ್ತಾರೆ. ದೆವ್ವ, ಆತ್ಮಗಳೆಲ್ಲ ನಾಯಕ ಸೇಡು ತೀರಿಸಿಕೊಳ್ಳುವುದಕ್ಕೊಂದು ನೆಪ ಎಂದು ಬಿಂಬಿಸಿದ್ದಾರೆ. ಅಷ್ಟರ ಮಟ್ಟಿಗೆ ಇದು ಮೂಢನಂಬಿಕೆಯಿಂದ ದೂರವಾದ ಪ್ರಯತ್ನ. ತನ್ನ ಪ್ರಿಯತಮೆಯನ್ನು ಕೊಂದ ಇಬ್ಬರು ವಿಲ್ಲನ್‌ಗಳನ್ನು (ಅದರಲ್ಲಿ ಒಬ್ಬ ಕೇಂದ್ರ ಸಚಿವ, ಇನ್ನೊಬ್ಬ ಖ್ಯಾತ ಕ್ರಿಮಿನಲ್‌ ಲಾಯರ್‌!) ಆಕೆಯ ದೆವ್ವ ತನ್ನ ಮೇಲೆ ಬಂದಿದೆಯೆಂಬಂತೆ ಬಿಂಬಿಸಿ ನಾಯಕನೊಬ್ಬ ಪ್ರತೀಕಾರದಿಂದ ಕೊಲ್ಲುವುದೇ ಚಿತ್ರದ ಕಥೆ.

ಸಾಮಾನ್ಯ ಕಥೆಯ ಚಿತ್ರವೊಂದನ್ನು, ಜನಪ್ರಿಯ ನಾಯಕನೊಬ್ಬನ ಇಮೇಜ್‌ನಲ್ಲಿ ತುರುಕಿಸಿ ಅಭಿಮಾನಿಗಳು ಸಿಳ್ಳೆ ಹೊಡೆಯುವಂತೆ ರೂಪಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಟನೆ, ಡ್ಯಾನ್ಸ್‌ ಮತ್ತು ಫೈಟಿಂಗ್‌ಗಳಲ್ಲಿ ನಾಯಕ ಪುನೀತ್‌ ಕೂಡಾ ಸಾಕಷ್ಟು ಸಿಳ್ಳೆ ಪಡೆಯುತ್ತಾರೆ. ಒಂದೂವರೆವರ್ಷದ ಬಳಿಕ ಪುನೀತ್‌ ಅಭಿನಯದ ಚಿತ್ರವೊಂದು ಬಿಡುಗಡೆಯಾದಾಗ ಏನಾದರೂ ಹೊಸತು ಇರಬಹುದೆ ಎಂದು ನೋಡಲು ಹೋದರೆ ಮಾತ್ರ ನಿರಾಶೆಯಾಗುತ್ತದೆ. ಹಾಗೆಯೇ ದೆವ್ವ, ಭೂತಗಳ ಫ್ಯಾಂಟಸಿ ಇದೆಯೆಂದು ಕೊಂಡರೂ ನಿರಾಶೆ ಖಚಿತ.

ಹಾರರ್‌ ಹಣೆಪಟ್ಟಿಯ ಚಿತ್ರದಲ್ಲಿ ಹಾಸ್ಯವೂ ಇದೆ. ಪುನೀತ್‌ ಜೊತೆಗೆ ಚಿಕ್ಕಣ್ಣನ ಪಾತ್ರಪೋಷಣೆಯ ಉದ್ದೇಶವೇ ಅದು. ನಟಿಯರಾದ ರಚಿತಾ ರಾಮ್‌ ಮತ್ತು ಅನುಪಮಾ ಪರಮೇಶ್ವರ್‌ ತಮ್ಮ ಗ್ಲ್ಯಾಮರ್‌ನಿಂದ ಚಿತ್ರವನ್ನು ಅಂದಗೊಳಿಸಿದ್ದಾರೆ. ಹಿರಿಯ ನಟಿ ಬಿ.ಸರೋಜಾದೇವಿ ಸ್ವಂತ ಹೆಸರಿನಲ್ಲೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಳನಟ ರವಿಶಂಕರ್‌ ತಮ್ಮ ಎಂದಿನ ಡೈಲಾಗ್‌ ಡೆಲಿವರಿಯನ್ನೇ ನಂಬಿಕೊಂಡಿದ್ದಾರೆ. ಚಿತ್ರದ ಟೈಟಲ್‌ ಸಾಂಗ್‌ ಮತ್ತು ಯೋಗರಾಜ ಭಟ್‌ ಬರೆದಿರುವ ಒಂದು ‘ಟೈಟ್‌’ ಸಾಂಗ್‌, ಅಭಿಮಾನಿಗಳನ್ನು ರಂಜಿಸುತ್ತದೆ. ಅದಕ್ಕೆ ತಕ್ಕಂತೆ ಡಿ ಇಮ್ಮಾನ್ ಸಂಗೀತವಿದೆ.

ಒಳಾಂಗಣದಲ್ಲಿ ಗಮನ ಸೆಳೆಯುವ ಛಾಯಾಗ್ರಾಹಕ ವೈದಿ, ಕೋಲ್ಕತ್ತಾ ನಗರದಲ್ಲಿ ಮಾತ್ರ ನಿರಾಶೆ ಮೂಡಿಸಿದ್ದಾರೆ. ಚುರುಕಾದ ಸಂಭಾಷಣೆ ಇದ್ದರೂ ಅಲ್ಲಲ್ಲಿ ಅಭಿಮಾನಿಗಳಿಗೆ ಮಸ್ಕಾ ಹೊಡೆಯುವ ಡೈಲಾಗ್‌ಗಳು ಕಿರಿಕಿರಿ ಉಂಟುಮಾಡುತ್ತವೆ. ಚುರುಕಾದ ನಿರೂಪಣೆಯಲ್ಲಿ ಚಿತ್ರದ ಎಲ್ಲ ಸಾಮಾನ್ಯಗುಣಗಳನ್ನೂ ಮರೆಮಾಡುವ ನಿರ್ದೇಶಕರು ಎರಡು ಕೊಲೆಗಳನ್ನು ಮಾತ್ರ ನೇರವಾಗಿ ತೋರಿಸಿ ಕ್ರೌರ್ಯ ಮೆರೆಯುತ್ತಾರೆ. ಹೀರೋ ಪ್ರಧಾನವಾದ ಚಿತ್ರವನ್ನು ಅಭಿಮಾನದ ‘ಕನ್ನಡಕ’ದಲ್ಲೇ ನೋಡಬೇಕು ಎನ್ನುವ ನಿರ್ದೇಶಕರ ಧೋರಣೆಗೆ ತಕ್ಕಂತೆ ಚಿತ್ರ ‘ಅಚ್ಚುಕಟ್ಟಾಗಿ’ ಮೂಡಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.