ADVERTISEMENT

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ವಿಮರ್ಶೆ: ಫ್ರುಟ್ಸ್‌ ಸಲಾಡ್‌ನಂಥ ಪ್ರಣಯ ಕಥೆ

ಅಭಿಲಾಷ್ ಪಿ.ಎಸ್‌.
Published 15 ಆಗಸ್ಟ್ 2024, 10:43 IST
Last Updated 15 ಆಗಸ್ಟ್ 2024, 10:43 IST
ಮಾಳವಿಕ ನಾಯರ್‌, ಗಣೇಶ್‌ 
ಮಾಳವಿಕ ನಾಯರ್‌, ಗಣೇಶ್‌    

‘ದಂಡುಪಾಳ್ಯ’ ಸಿನಿಮಾ ನಿರ್ದೇಶಿಸಿದ್ದ ಶ್ರೀನಿವಾಸ ರಾಜು ಅವರ ಹೊಸ ಪ್ರಯತ್ನದಂತಿದೆ ಈ ಸಿನಿಮಾ. ಕಥೆಯ ಬಗ್ಗೆ ಸುಳಿವು ನೀಡದೆ, ಟೀಸರ್‌–ಟ್ರೇಲರ್‌ ಇಲ್ಲದೇ ಬಂದ ಸಿನಿಮಾವಿದು. ‘ಶ್ರೀಮಂತುಡು’, ‘ಅತ್ತರಿಂಟಿಕಿ ದಾರೇದಿ’ ಸಿನಿಮಾಗಳ ರಿಚ್‌ನೆಸ್‌ ಹೊತ್ತ ಹಾಗೂ ‘ಘಜಿನಿ’ ಸಿನಿಮಾದ ಒಂದೆಳೆ ಹೊಂದಿರುವ ಈ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಭಿನ್ನವಾದ ಕಥೆ ಹೊತ್ತುಬಂದಿದ್ದರೂ ಹಲವು ಸಿನಿಮಾಗಳ ಮಿಶ್ರಣದಂತೆ ಕಾಣುತ್ತದೆ. 

‘ಕೃಷ್ಣ’(ಗಣೇಶ್‌) ಶ್ರೀಮಂತ ಕುಟುಂಬದ ಯುವಕ. ಆತನದ್ದು ಕೂಡುಕುಟುಂಬ. ಮನೆಯಲ್ಲಿ ಹತ್ತಾರು ಜನ. ‘ಕೃಷ್ಣ ಗ್ರೂಪ್ ಆಫ್‌ ಕಂಪನೀಸ್‌’ ಮುಖ್ಯಸ್ಥನಾಗಿರುವ ಕೃಷ್ಣ, ಕಾರಿನಲ್ಲಿ ಹೋಗುವಾಗ ‘ಪ್ರಣಯ’ಳನ್ನು(ಮಾಳವಿಕ ನಾಯರ್‌) ನೋಡುತ್ತಾನೆ. ಆಕೆ ‘ಬೆಳಕು’ ಎಂಬ ಅನಾಥಾಶ್ರಮದಲ್ಲಿ ಬೆಳೆದಿರುವಾಕೆ. ಮೊದಲ ನೋಟದಲ್ಲೇ ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳುವ ‘ಕೃಷ್ಣ’ ಅವಳನ್ನು ಪಡೆಯಲು ಅನಾಥಾಶ್ರಮದ ಡ್ರೈವರ್‌ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇಲ್ಲಿಂದ ‘ಕೃಷ್ಣಂ ಪ್ರಯಣ ಸಖಿ’ ಪಯಣ ಆರಂಭ. 

ಗುಣಮಟ್ಟದಲ್ಲಿ ಹಾಗೂ ರಿಚ್‌ನೆಸ್‌ನಲ್ಲಿ ಈ ಸಿನಿಮಾ ಉತ್ಕೃಷ್ಟವಾಗಿ ಮೂಡಿಬಂದಿದೆ. ಒಂದು ಕಂಪನಿಯ ಮುಖ್ಯಸ್ಥನಾಗಿರುವ ಹೀರೊ, ಆತನ ಐಷಾರಾಮಿ ಮನೆ, ಜೀವನ, ದಿನನಿತ್ಯ ಸೀರೆ, ಕುರ್ತಾ, ಒಡವೆ ಧರಿಸಿಕೊಂಡೇ ಇರುವ ಮನೆಮಂದಿ ಹೀಗೆ ತೆಲುಗು ಸಿನಿಮಾಗಳಲ್ಲಿ ಕಂಡುಬರುತ್ತಿದ್ದ ರಿಚ್‌ನೆಸ್‌ ಈ ಸಿನಿಮಾದಲ್ಲಿದೆ. ಇದಕ್ಕಷ್ಟೇ ಒತ್ತು ನೀಡಿರುವಂತೆಯೂ ಕಾಣುತ್ತದೆ. ಸಿನಿಮಾದ ಕಥೆ ಹೀಗೇ ಸಾಗಲಿದೆ ಎನ್ನುವುದನ್ನು ಆರಂಭದಲ್ಲೇ ಊಹಿಸಬಹುದಾಗಿದೆ. ಕಥೆಗೆ ಪೂರಕವಾಗಿ ಪಾತ್ರಗಳನ್ನು ಸೃಷ್ಟಿಸುವುದರ ಬದಲು ಕೂಡುಕುಟುಂಬ ಎನ್ನುವ ಕಾರಣಕ್ಕೆ ಹೆಚ್ಚಿನ ಪಾತ್ರಗಳನ್ನು ತುಂಬಲಾಗಿದೆ. ಅವುಗಳಿಗೆ ಕಥೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯವೂ ಇಲ್ಲ. ರಂಗಾಯಣ ರಘು ಅವರು ನಿರ್ವಹಿಸಿದ ‘ಬೂಮ್‌ದೇವ್ರು’ ಎನ್ನುವ ಪಾತ್ರದ ಪೋಷಣೆ ತರ್ಕಕ್ಕೆ ಸಿಗುವುದಿಲ್ಲ. ತೆಲುಗು ಸಿನಿಮಾಗಳ ಪ್ರಭಾವಕ್ಕೆ ಸಾಕ್ಷ್ಯವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದೃಶ್ಯಗಳು ಸಿಗುತ್ತವೆ. ನಾನ್‌–ಲೀನಿಯರ್‌ ಮಾದರಿಯಲ್ಲಿ ಕಥೆ ಹೇಳುತ್ತಾ ಸಾಗಿದ್ದಾರೆ ನಿರ್ದೇಶಕರು. ಇದು ಕೆಲವೆಡೆ ಗೊಂದಲವನ್ನೂ ಮೂಡಿಸಿದೆ.

ADVERTISEMENT

ಪ್ರೇಕ್ಷಕರನ್ನು ನಗಿಸಲೇಬೇಕೆಂದು ಒಂದೆರಡು ದೃಶ್ಯಗಳನ್ನು, ಸಂಭಾಷಣೆಗಳನ್ನು ಚಿತ್ರಕಥೆಯಲ್ಲಿ ಹೆಣಿಯಲಾಗಿದೆ. ಜೊತೆಗೆ ತರ್ಕಕ್ಕೆ ಸಿಗದ ಚಿತ್ರಕಥೆಯೂ ಕೆಲವೆಡೆ ಇವೆ. ಗಣೇಶ್‌ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್‌ ಸಿನಿಮಾದ ಪ್ರಮುಖ ಅಂಶ. ಪ್ರೇಕ್ಷಕರನ್ನು ಹಲವೆಡೆ ಪಂಚ್‌ಲೈನ್‌ಗಳ ಮೂಲಕ ನಗಿಸುತ್ತಾ ಸಾಗುತ್ತದೆ ಈ ಜೋಡಿ. ಗಣೇಶ್‌ ಅವರ ಸಿನಿಮಾಗಳಲ್ಲಿ ಕಾಣಸಿಗುವ ಫ್ಯಾಮಿಲಿ ಎಂಟರ್‌ಟೈನರ್‌ ಅಂಶಗಳು ಇವೆ. ತಮ್ಮ ಪಾತ್ರಗಳಲ್ಲಿ ಗಣೇಶ್‌ ಹಾಗೂ ಮಾಳವಿಕ ನಾಯರ್‌ ಜೀವಿಸಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲೂ ಗಣೇಶ್‌ ಮಿಂಚಿದ್ದಾರೆ. ಎಂದಿನಂತೆ ಇಡೀ ಸಿನಿಮಾದಲ್ಲಿ ಸಾಧು ಕೋಕಿಲ ನಗಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

‘ದ್ವಾಪರ ದಾಟುತ..’ ಹಾಗೂ ‘ನೋಡುತ್ತಾ..ನೋಡುತ್ತಾ..’ ಹಾಡುಗಳು ಈ ಸಿನಿಮಾದ ಹೈಲೈಟ್‌. ಈ ಹಾಡುಗಳ ಸಾಹಿತ್ಯ, ಸಂಗೀತ, ನೃತ್ಯ ನಿರ್ದೇಶನ ಹಾಗೂ ಸೆರೆಹಿಡಿದಿರುವ ಪರಿ ಸಿನಿಮಾವನ್ನೇ ಎತ್ತಿಹಿಡಿದಿದೆ. ಹೀರೊ ಪ್ರವೇಶಕ್ಕಿಂತ ಹೆಚ್ಚಾದ ಚಪ್ಪಾಳೆ, ಶಿಳ್ಳೆ ಇವುಗಳಿಗೆ ದೊರಕಿದೆ. ಚಿತ್ರದ ಅವಧಿಯನ್ನು ಕೊಂಚ ತಗ್ಗಿಸಬಹುದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.