ಚಿತ್ರ: ಮಾಲ್ಗುಡಿ ಡೇಸ್,ತಾರಾಗಣ: ವಿಜಯ್ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್, ಅರ್ಜುನ್ ಕಾಪಿಕಾಡ್,ನಿರ್ದೇಶನ: ಕಿಶೋರ್ ಮೂಡುಬಿದಿರಿ.
ಗೆಳೆತನ ಮತ್ತು ಪ್ರೀತಿಯ ಸುತ್ತ ಕಥೆ ಹೆಣೆದು ನಿರ್ಮಿಸಿದ ಹಲವು ಚಿತ್ರಗಳು ತೆರೆಕಂಡಿವೆ. ಇಂತಹ ಕಥಾವಸ್ತುವನ್ನೇ ಇಟ್ಟುಕೊಂಡು ನಿರ್ಮಿಸಿರುವ ಚಿತ್ರ ‘ಮಾಲ್ಗುಡಿ ಡೇಸ್’.
ಟೆಕಿಯಾಗಿ ಕೆಲಸ ಮಾಡುತ್ತಿರುವ ಪ್ರಕೃತಿ (ಗ್ರೀಷ್ಮಾ), ಕಚೇರಿಯಲ್ಲಿ ಎಂ.ಡಿ. ನೀಡುವ ಕಿರುಕುಳಕ್ಕೆ ಬೇಸತ್ತು, ಎಲ್ಲರೆದುರಿಗೆ ಎಂ.ಡಿಯನ್ನು ನಿಂದಿಸಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾಳೆ. ಕ್ಷುಲ್ಲಕ ವಿಚಾರಕ್ಕೆ ದೂರವಾದ ಪ್ರಿಯಕರನ ಕೊರಗು ಒಂದೆಡೆಯಾದರೆ, ಕೆಲಸದ ಜಂಜಾಟ ಮತ್ತೊಂದೆಡೆ. ಈ ಖಿನ್ನತೆಯಿಂದ ದೂರವಾಗಲು ಪ್ರವಾಸ ಹೋಗುವ ನಿರ್ಣಯ ಮಾಡುತ್ತಾಳೆ.
ಚಿಕ್ಕ ವಯಸ್ಸಿನಲ್ಲೇ ಊರು ಬಿಟ್ಟು ಬಂದು, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು, ತಮ್ಮ ಬರಹಗಳ ಮೂಲಕ ಸಾಹಿತ್ಯಸಕ್ತರ ಮನ ತಣಿಸಿದ ಇಳಿ ಸಂಜೆಯಲ್ಲಿರುವ ಸಾಹಿತಿ ಲಕ್ಷ್ಮಿ ನಾರಾಯಣ ಮಾಲ್ಗುಡಿ (ವಿಜಯ್ ರಾಘವೇಂದ್ರ) ಅವರೂ ಬರವಣಿಗೆ ನಿಲ್ಲಿಸುತ್ತಿರುವುದಾಗಿ ಘೋಷಿಸುತ್ತಾರೆ. ಅದೇ ಸಂದರ್ಭದಲ್ಲಿ ಆಸರೆಯಾಗಿದ್ದ ಬಾಳ ಸಂಗಾತಿ ಅಗಲಿಕೆ ನೋವೂ ಅವರನ್ನು ಆವರಿಸಿಕೊಳ್ಳುತ್ತದೆ. ದೂರದೂರಿನಲ್ಲಿದ್ದ ಮಗಳು ತನ್ನೊಟ್ಟಿಗೆ ಬರುವಂತೆ ಹೇಳಿದರೂ ಬಾಲ್ಯದ ಗೆಳೆತನ, ಹುಟ್ಟಿದ ಊರು ನೆನಪಾಗಿ, ಮನೆಯಿಂದ ಹೊರಬರುತ್ತಾರೆ.
ಪ್ರವಾಸದಲ್ಲಿಯೇ ಗ್ರೀಷ್ಮಾ ಮತ್ತು ಲಕ್ಷ್ಮಿ ನಾರಾಯಣ ಭೇಟಿಯಾಗುತ್ತಾರೆ. ಈ ಇಬ್ಬರೂ ಮಲೆನಾಡಿನ ‘ಮಾಲ್ಗುಡಿ’ಗೆ ಹೋಗಲು ನಿರ್ಧರಿಸುತ್ತಾರೆ.
ಮಾರ್ಗ ಮಧ್ಯೆ, ಗ್ರೀಷ್ಮಾ ತನ್ನ ಪ್ರೀತಿ ಮತ್ತು ಪ್ರಿಯಕರನ ವಿಷಯವನ್ನು ಹಂಚಿಕೊಂಡರೆ, ಲಕ್ಷ್ಮೀ ನಾರಾಯಣ, ತಮ್ಮ ಬಾಲ್ಯ, ಶಾಲಾ ದಿನಗಳ ಸುಂದರ ಅನುಭವ, ಮೌಂಟ್ ಬ್ಯಾಟನ್ ವಿಗ್ರಹದ ತಲೆ ಕಡಿದ ಸಾಹಸ, ಹಾವಿನೊಂದಿಗೆ ಸರಸ, ಮತೋನ್ಮಾದ ಕಿಚ್ಚು, ತಾಯಿಯಿಂದ, ಪ್ರೀತಿಯಿಂದ ದೂರವಾಗಿ, ಹುಟ್ಟಿದ ಊರು ಬಿಡಬೇಕಾದ ಪರಿಸ್ಥಿತಿ… ಹೀಗೆ ಹಲವು ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಈ ಹಂತದಲ್ಲಿ ಲಕ್ಷ್ಮಿ ನಾರಾಯಣ ಅವರ ಬಾಲ್ಯದ ಪ್ರೀತಿಯ ಗೆಳತಿ ಲೆನಿಟಾ ಪಾತ್ರ ಬರುತ್ತದೆ. ಲೆನಿಟಾ ಅವರನ್ನು ಭೇಟಿಯಾಗಿ ಕ್ಷಮೆ ಕೇಳಬೇಕು ಎಂದು ಲಕ್ಷ್ಮಿ ನಾರಾಯಣ ಬಯಸುತ್ತಾರೆ.
ಲಕ್ಷ್ಮಿ ಮತ್ತು ಲೆನಿಟಾ ಅವರ ಬಾಲ್ಯದ ಸುಂದರ ಪ್ರೇಮದ ಕಥೆ ಕೇಳಿ ಬೆರಗಾಗುವ ಪ್ರಕೃತಿ ಹಾಗೂ ಆಕೆಯ ಕಾಲೇಜಿನ ಸ್ನೇಹಿತ, ಲೆನಿಟಾ ಮತ್ತು ಲಕ್ಷ್ಮಿ ನಾರಾಯಣ ಅವರನ್ನು ಭೇಟಿ ಮಾಡಿಸುವ ನಿರ್ಧಾರ ಮಾಡುತ್ತಾರೆ. ಲೆನಿಟಾ ಅವರನ್ನು ಹುಡುಕಲು ಮಲೆನಾಡಿನ ಬಹುತೇಕ ಪ್ರದೇಶಗಳನ್ನು ಸುತ್ತುತ್ತಾರೆ.
ಲೆನಿಟಾ ಯಾರು, ಲಕ್ಷ್ಮಿ ನಾರಾಯಣ ಲೆನಿಟಾ ಅವರಲ್ಲಿ ಕ್ಷಮೆ ಕೇಳಬೇಕು ಅಂತ ಅಂದುಕೊಂಡಿದ್ದು ಯಾಕೆ, ಕೊನೆಗೂ ಅವರು ಭೇಟಿಯಾದರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಚಿತ್ರ ನೋಡಬೇಕು.
‘ಆತ್ಮವಿಶ್ವಾಸದಿಂದ ಇರುವ ಮಹಿಳೆ ಹೆಚ್ಚು ಸುಂದರವಾಗಿ ಕಾಣುತ್ತಾಳೆ’ ಎಂಬ ಸಂಭಾಷಣೆಯ ತುಣುಕು ಹಾಗೂ ಸ್ನೇಹ-ಪ್ರೀತಿಗೆ ಸಂಬಂಧಿಸಿದ ಸಂಭಾಷಣೆಯ ಕೆಲವು ತುಣುಕುಗಳು ಗಮನ ಸೆಳೆಯುತ್ತವೆ.
ಗಗನ್ ಬಡಾರಿಯಾ ಅವರು ಹಾಡುಗಳಿಗೆ ನೀಡಿರುವ ಸಂಗೀತ ಇಂಪಾಗಿದ್ದು, ಹಾಡುಗಳ ಸಾಹಿತ್ಯವೂ ಉತ್ತಮವಾಗಿದೆ.
ಮಲೆನಾಡಿನ ಸುಂದರ ಪ್ರದೇಶಗಳನ್ನು ಸೊಗಸಾಗಿ ಚಿತ್ರಿಸುವ ಅವಕಾಶ ಚಿತ್ರದಲ್ಲಿ ಇತ್ತು. ಶೃಂಗೇರಿ ದೇವಸ್ಥಾನವನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ. ಕೆಲವು ನದಿಗಳನ್ನೂ ಉತ್ತಮವಾಗಿಯೇ ತೋರಿಸಲಾಗಿದೆ. ಒಂದೆರಡು ದೃಶ್ಯಗಳು ಹಾಗೂ ಸಂಭಾಷಣೆ ಪುನರಾವರ್ತನೆ ಆಗಿದ್ದು, ಕತ್ತರಿ ಹಾಕಬಹುದಿತ್ತು.
ನೆನಪುಗಳನ್ನು ನೆನಪಿಸುವ ಚಿತ್ರವಾಗಿ ಮಾಲ್ಗುಡಿ ಡೇಸ್ ಅನ್ನು ಚಿತ್ರೀಕರಿಸಲು ಶ್ರಮಿಸಿರುವ ನಿರ್ದೇಶಕ ಕಿಶೋರ್ ಅವರ ಪ್ರಯತ್ನ ಮೆಚ್ಚಬೇಕು. ಒಟ್ಟಿನಲ್ಲಿ ಕುಟುಂಬ ಸಮೇತ ಹೋಗಿ ವೀಕ್ಷಿಸಬಹುದಾದ ಚಿತ್ರ.
ಈ ಚಿತ್ರದ ಮೂಲಕ ನಟ ವಿಜಯ್ ರಾಘವೇಂದ್ರ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸಿ, ನಟನೆ ಬಗ್ಗೆ ತಮಗಿರುವ ಕಾಳಜಿ ಎಂಥದ್ದು ಎಂದು ತೋರಿಸಿದ್ದಾರೆ. ಹದಿಹರೆಯದ ಹುಡುಗನಾಗಿ ಮತ್ತು ಇಳಿ ವಯಸ್ಸಿನ ಸಾಹಿತಿಯಾಗಿ ಎರಡು ಭಿನ್ನಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಹಿರಿಯ ಸಾಹಿತಿಯ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ಆದರೆ 10ನೇ ತರಗತಿಯ ಬಾಲಕನ ಪಾತ್ರ ಹೆಚ್ಚು ಒಗ್ಗಿಲ್ಲ.
ವಿಜಯ್ ಅವರನ್ನು ಹೊರತುಪಡಿಸಿದರೆ ಮುಖ್ಯಪಾತ್ರಗಳಲ್ಲಿ ನಟಿಸಿರುವ ಬಹುತೇಕರು ಬೆಳ್ಳಿತೆರೆಗೆ ಹೊಸಬರು. ಚಿತ್ರದ ಮುಖ್ಯಪಾತ್ರವೊಂದರಲ್ಲಿ ನಟಿಸಿರುವ ಗ್ರೀಷ್ಮಾ ಶ್ರೀಧರ್ ಅವರಿಗೆ ಇದು ಮೊದಲ ಚಿತ್ರವಾದರೂ ಉತ್ತಮವಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅವರ ಗೆಳೆಯರ ಪಾತ್ರಗಳಲ್ಲಿ ಮನ್ ದೀಪ್ ರಾಯ್ ಹಾಗೂ ರಿಚರ್ಡ್ ಲೂಯಿಸ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.