ಹಿಮ ಮುಸುಕಿದ ಟೆಹರಾನ್‌ನಲ್ಲಿ ಮಂಜಿನ ಬೊಂಬೆ ಮಾಡಿ, ಇವನಷ್ಟು ಖುಷಿಯಾಗಿರುವ ಜೀವ ಯಾವುದೂ ಇಲ್ಲ. ಒಂದೇ ದಿನದ ಆಯಸ್ಸು ಇವನದ್ದು ಅಂದಾಗ ಹೇಳಿದ ಮಾತುಗಳಿಗಿಂತಲೂ ಹೇಳದ ಕತೆಗಳೇ ಮಿನುಗಿ ಹೋಗುತ್ತವೆ.
ಪರ್ಷಿಯನ್ ಕವಿಯತ್ರಿ ಫಾರೂಖ್ ಫಾರೂಖ್‌ಜಾದ್ ಕಾವ್ಯಕ್ಕೆ ಮರುಳಾದ ಶ್ರೀಮೋಯಿ, ಕಾವ್ಯ ಹುಟ್ಟಿದ ನೆಲ ಟೆಹರಾನ್ ನೋಡಲು ಹೊರಡುತ್ತಾರೆ. ಜೊತೆಗೆ ಇರಾನ್ ಸಿನಿಮಾಗಳ ಕುರಿತು ಸಂಶೋಧನೆ ಮಾಡುತ್ತಿದ್ದ ಶ್ರೀಮೋಯಿ ನಿರ್ದೇಶಕ ಜಫರ್ ಪಹನಿ ಅವರೊಂದಿಗಿನ ಮಾತು ಕತೆಯನ್ನೇ ಚಿತ್ರಕ್ಕೆ ಇಳಿಸುತ್ತ ಹೋಗುತ್ತಾರೆ.
ಚಲನಚಿತ್ರ ಕ್ಷೇತ್ರದಿಂದ 20 ವರ್ಷ ನಿಷೇಧಕ್ಕೆ ಒಳಗಾದ ನಿರ್ದೇಶಕ, ತಾನೊಬ್ಬ ಕಲಾವಿದ ಎಂದು ದಾಖಲಿಸುತ್ತಾರೆ. ರಾಜಕೀಯ ನಿಲುವು ಇಲ್ಲದೆಯೇ, ನಮ್ಮ ಜನರಿಗೆ ಒಳಿತು ಯಾವುದು, ಯಾರು ಒಳ್ಳೆಯವರು ಎಂದು ಹೇಳುವುದು ತಪ್ಪಾಗುವುದಿಲ್ಲ. ಅದನ್ನಷ್ಟೇ ನಾನು ಮಾಡಿದ್ದು. ಅದು ನನ್ನ ದೇಶದ ಪರ ಇರುವ ನಿಲುವು ಎಂದು ಸಮರ್ಥಿಸಿಕೊಳ್ಳುತ್ತಾರೆ.
ಹಿಜಾಬ್ ವ್ಯವಸ್ಥೆ ಕೇವಲ ತಲೆಯ ಮೇಲೆ ಬಟ್ಟೆಯೊಂದನ್ನು ಹೊದೆಯುವುದಲ್ಲ. ಮನಸಿಗೆ ನಿಷ್ಠೆಯ ಬೇಲಿ ಹಾಕುವುದೂ ಅಷ್ಟೆ ಮುಖ್ಯ. ಚದರ್ ಹೊದೆಯುವುದನ್ನು ವಿರೋಧಿಸಿದ ಮಾನವ ಹಕ್ಕು ಚಳವಳಿಕಾರ್ತಿ, ಫುಟ್‌ಬಾಲ್ ಪಂದ್ಯ ನೋಡಲು ಒಂದು ಕಾಲದಲ್ಲಿ ನಿರ್ಬಂಧವಿದ್ದ ದೇಶದಲ್ಲಿ 2018ರಲ್ಲಿ ವಿಶ್ವಕಪ್ ಕ್ರಿಕೆಟ್ ನೋಡಲು ಮಹಿಳೆಯರೆಲ್ಲ ರಸ್ತೆಗೆ ಬಂದಿದ್ದು, ಸ್ವಾತಂತ್ರ್ಯ ಅನುಭವಿಸಿದ್ದು, ಡ್ರೆಸ್ ಕೋಡ್ ವಿರೋಧಿಸಲು ಧ್ವನಿ ಎತ್ತಿ ಮೂವತ್ತೆಂಟು ಜನ ಬಂಧನಕ್ಕೆ ಒಳಗಾಗಿದ್ದು, ರಸ್ತೆಯಲ್ಲಿ ನಡೆಯುವ ಪ್ರತಿಭಟನೆ, ಗೋಡೆಯ ಮೇಲೆ ಹುತಾತ್ಮರಾದವರ ಚಿತ್ರ, ಪೇಂಟಿಂಗ್‌ಗಳು.. ಟೆಹರಾನ್‌ನ ಬಿಡಿಬಿಡಿ ಚಿತ್ರಗಳನ್ನೆಲ್ಲ, ತಮ್ಮ ನಿರೂಪಣೆಯ ಬಿಗಿಯಾದ ಹೊಲಿಗೆಗಳೊಂದಿಗೆ ಕೌದಿ ನೀಡಿದ್ದಾರೆ ಶ್ರೀಮೋಯಿ.
ಬಾಲ ಕಲಾವಿದೆಯರು ಇದೀಗ ತಮ್ಮ ಯೌವ್ವನಾವಸ್ಥೆಯಲ್ಲಿರುವಾಗ ಪಹಣಿ ಅವರ ಜೊತೆಗಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕಾವ್ಯದ ಒಳಹೊರಗನ್ನು ಅರಿಯಲೆಂದೇ ಫಾರ್ಸಿ ಕಲಿತ ಶ್ರೀಮೋಯಿ, ಸಿನಿಮಾವನ್ನು ತಾವೇ ನಿರೂಪಿಸಿದ್ದಾರೆ. ತಮ್ಮ ಧ್ವನಿಯಲ್ಲಿ ಹಾಡನ್ನೂ ಹಾಡಿದ್ದಾರೆ.
ಸ್ಫುರದ್ರೂಪಿ ಎನಿಸಿಕೊಳ್ಳಲು ಮೂಗನ್ನು ತಿದ್ದಿಕೊಳ್ಳಲೆಂದೇ ಮುಂದಾಗುವ ಮಹಿಳೆಯರ ಸೌಂದರ್ಯ ಪ್ರಜ್ಞೆ ಮೂಗಿನ ತುದಿಯಲ್ಲಿ ಹೇಗೆ ಅಡಕವಾಗಿದೆ ಎಂಬುದನ್ನೂ ಹೇಳುತ್ತಾರೆ.
ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ದೇಶವೊಂದರಲ್ಲಿ ಬದಲಾವಣೆಯ ಬೀಸುಗಾಳಿಗೆ ಧ್ವನಿಯಾದ ಮಾಧ್ಯಮವನ್ನು ನಿರ್ಲಿಪ್ತವಾಗಿ ತೋರಿಸುತ್ತಲೇ ಹೋಗುತ್ತಾರೆ.
ತಿಳಿಹಸಿರು ಗಾಜಿನ ಗೋಲಿ ಬಣ್ಣದ ಕಂಗಳ ಚೆಲುವೆ, ಈ ಅರ್ಥದ ಸಾಲುಗಳ ಕವಿತೆ ಓದುವಾಗ, ಕಣ್ಣೀರ ಪಸೆ ನೋಡುಗರನ್ನು ಸೆಳೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.