ಚಿತ್ರ: ಮಾಲಿಕ್ (ಮಲೆಯಾಳಂ)–ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡಿದೆ
ನಿರ್ಮಾಣ: ಆ್ಯಂಟೊ ಜೋಸೆಫ್, ಕಾರ್ನಿವಲ್ ಮೂವಿ ನೆಟ್‌ವರ್ಕ್
ನಿರ್ದೇಶನ: ಮಹೇಶ್ ನಾರಾಯಣನ್
ತಾರಾಗಣ: ಫಹಾದ್ ಫಾಸಿಲ್, ನಿಮಿಷಾ ಸಜಯನ್, ಜೋಜು ಜಾರ್ಜ್, ವಿನಯ್ ಫೋರ್ಟ್, ದಿಲೀಪ್ ಪೋತನ್.
ಸನು ವರ್ಗೀಸ್ ಕ್ಯಾಮೆರಾ ಮೊದಲ ದೃಶ್ಯದಲ್ಲೇ ಹಲವು ಚಹರೆಗಳನ್ನು ಸಿಂಗಲ್ ಶಾಟ್‌ನಲ್ಲಿ ತೋರಿಸುತ್ತಾ ಹೋಗುತ್ತದೆ.
ಹಜ್ ಯಾತ್ರೆಗೆ ಹೊರಟು ನಿಂತ ಮನೆಯ ಯಜಮಾನ. ಯಾರಿಗೋ ಕಪಾಳಮೋಕ್ಷ ಮಾಡುವ ಹೊಸಕಾಲದ ಯುವತಿ. ಅವಳಿಗೆ ಕ್ಲಾಸ್ ತೆಗೆದುಕೊಳ್ಳುವ ತಾಯಿ. ತಕ್ಷಣವೇ ‘ಅಮ್ಮ ನನಗೆ ಹೊಡೆದಳು ಅಪ್ಪ’ ಎಂದು ಯಜಮಾನನ ಎದುರು ಅವಳ ನಿವೇದನಾ ಶೈಲಿಯ ಮೆಲುದನಿಯ ನುಡಿ. ಅಲ್ಲೇ ಊಟದ ತಟ್ಟೆ ಹಿಡಿದ ಸ್ಥಳೀಯ ಶಾಸಕನ ಲೆಕ್ಕಾಚಾರದ ಕಣ್ಣುಗಳು. ಇವೆಲ್ಲಕ್ಕೂ ಸಾಕ್ಷಿಯಾಗುತ್ತಲೇ ಒಲ್ಲದ ಮನಸ್ಸಿನಿಂದಲೇ ಯಜಮಾನನ ಮುಖದಲ್ಲಿ ಮೂಡುವ ಅರೆ ಮಂದಹಾಸ...ಇದೊಂದೇ ಸುದೀರ್ಘ ಶಾಟ್ ವಿಷಾದಕಥನವೊಂದರ ಸಾಂದ್ರ ಮುನ್ನುಡಿಯಂತೆ ಮಿದುಳಿಗೆ ಧರ್ಮಸೂಕ್ಷ್ಮದ ರಾಜಕೀಯ ಎಳೆಯನ್ನು ಇಳಿಸುತ್ತದೆ.
ದಶಕಗಳ ಅವಧಿಯ ಧರ್ಮ ರಾಜಕಾರಣದ ಸಾವಧಾನ ದರ್ಶನವೇ ‘ಮಾಲಿಕ್’. ಮಣಿರತ್ನಂ ವಿರಚಿತ ‘ನಾಯಕನ್’ ತಮಿಳು ಚಿತ್ರದ್ದೇ ಮಾದರಿಯಲ್ಲವೇ ಇದು ಎಂದುಕೊಳ್ಳುವಷ್ಟರಲ್ಲಿ, ಅಲ್ಲ ಎಂದು ಅಭಿಪ್ರಾಯವನ್ನು ತುಂಡರಿಸುತ್ತದೆ. ‘ಬಾಂಬೆ’ ಚಿತ್ರದ ಕೋಮು ಗಲಭೆಯ ಛಾಯೆ ಇದೇ ಹೌದಲ್ಲವೇ ಎನಿಸುವಾಗ, ‘ಅಷ್ಟೇ ಅಲ್ಲಪ್ಪ...ಇಲ್ಲಿ ನೋಡು’ ಎಂದು ರೆಪ್ಪೆಗಳು ತಂತಾವೇ ಬಡಿದು ತೀರ್ಮಾನ ತಡೆಹಿಡಿಯುವಂತೆ ಪ್ರೇರೇಪಿಸುತ್ತದೆ.
ಸಮಕಾಲೀನ ಲಿಂಗ–ಧರ್ಮ–ರಾಜಕೀಯ ಸಿಕ್ಕುಗಳನ್ನು ಒಪ್ಪಿತ ಭ್ರಷ್ಟತೆಯ ಚೌಕಟ್ಟಿನೊಳಗಿಟ್ಟು ತೋರುವ ‘ಮಾಲಿಕ್’ ಚಿಂತನೆಗೆ ಹಚ್ಚುವ ಚಿತ್ರ. ಮೊದಲ ದರ್ಶನಕ್ಕೆ ಇದು ತಲೆಗೆ ಬಿಡುವ ಹುಳುಗಳು ಒಂದೆರಡಲ್ಲ. ಚಿತ್ರಕಥಾ ಬರವಣಿಗೆಯಂತೂ ಅತಿ ಸಂಕೀರ್ಣ. ಸ್ವತಃ ಸಂಕಲನಕಾರನಾಗಿ ದೊಡ್ಡ ಅನುಭವ ಪಡೆದಿರುವ ಮಹೇಶ್ ನಾರಾಯಣನ್, ಕೋವಿಡ್ ಕಾಲದಲ್ಲೇ ‘ಸೀ ಯೂ ಸೂನ್’ ಎಂಬ ಅಚ್ಚರಿಯ, ಕಡಿಮೆ ಬಜೆಟ್‌ನ ಸಿನಿಮಾ ನೀಡಿ ಮನಗೆದ್ದಿದ್ದವರು. ಈ ಚಿತ್ರದಲ್ಲಿ ಅವರ ತಲೆಯಲ್ಲಿ ದೀರ್ಘಾವಧಿಯಿಂದ ಹರಳುಗಟ್ಟಿರಬಹುದಾದ ವಸ್ತುವೊಂದು ಅನಾವರಣಗೊಂಡಿದೆ. 2009ರಲ್ಲಿ ಕೇರಳ ಪೊಲೀಸರು ಭೀಮಪಲ್ಲಿಯಲ್ಲಿ ನಡೆಸಿದ್ದ ಗೋಲಿಬಾರ್ ಪ್ರಕರಣದ ಛಾಯೆಯ ಕಥೆ ಸಿನಿಮಾದಲ್ಲಿ ಅಡಕವಾಗಿದ್ದರೂ, ಅದನ್ನು ವಿವಾದಕ್ಕೆ ಪಕ್ಕಾಗದಂಥ ನಾಜೂಕು ಚಿತ್ರಬರವಣಿಗೆಯ ಮೂಲಕ ತೂಗಿಸಿಕೊಂಡು ಹೋಗಿದ್ದಾರೆ.
ನಾಯಕ ಬಾಲಾಪರಾಧಿ. ಮೇಲಾಗಿ ಮುಸ್ಲಿಂ. ಶಾಲೆಯಿಂದ ಹೊರಗುಳಿದು, ಕಳ್ಳಮಾಲಿನ ಮಾರುಕಟ್ಟೆಯಲ್ಲಿ ಮಾಲೀಕನಾಗುವವ. ಅವನಿಗೆ ತನ್ನದೇ ಹಳ್ಳಿಯ ಕ್ರಿಶ್ಚಿಯನ್ ಹುಡುಗಿಯ ಮೇಲೆ ಪ್ರೇಮಾಂಕುರವಾಗುತ್ತದೆ. ಅವನು ನಿರಕ್ಷರಕುಕ್ಷಿ. ಅವಳು ಇಡೀ ಹಳ್ಳಿಯಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಏಕೈಕ ಹುಡುಗಿ. ಸರಳ ಗಣಿತವನ್ನು ಮೀನು ವ್ಯಾಪಾರಕ್ಕೆ ಒಗ್ಗಿಸಬಲ್ಲ ಜಾಣೆ. ಕದ್ದ ಅತ್ತರಿನ ಅಸಲಿ ಬೆಲೆ ಅರಿಯದೆ, ಅಗ್ಗದ ದರಕ್ಕೆ ಬಿಕರಿ ಮಾಡುವ ಇವನು ರಾಬಿನ್‌ಹುಡ್. ಮಸೀದಿ ಎದುರಿನ ತಿಪ್ಪೆ ತೆಗೆಸಿ, ಅಲ್ಲೊಂದು ಶಾಲೆ ಕಟ್ಟಿಸುವುದು ಅವನ ಮಹತ್ವಾಕಾಂಕ್ಷೆ. ಅದಕ್ಕೆ ನೆರವಾಗುವ ಸಬ್ ಕಲೆಕ್ಟರ್ ಇಡೀ ಕಥೆಯ ಕೋಮು ತಿರುವಿಗೆ ಸಾಕ್ಷಿಯೂ ಆಗುತ್ತಾನೆ. ಅವನ ಬದುಕಿನಲ್ಲಿ ಆಗುವ ಅವಘಡವೇ ನಾಯಕನ ಪಾಲಿಗೆ ಕೊನೆಗೆ ಉರುಳಾಗುವ ಸೂಕ್ಷ್ಮವನ್ನು ನಿರ್ದೇಶಕರು ‘ಸಸ್ಪೆನ್ಸ್’ ಆಗಿಯೇ ಉಳಿಸಿ, ತೋರಿಸುತ್ತಾರೆ.
‘ಗಾಡ್‌ಫಾದರ್’ನ ಸಾಂಪ್ರದಾಯಿಕ ಶಾಟ್‌ಗಳು ಇದರಲ್ಲಿ ಇಲ್ಲ. ಬಿಜಿಎಂ ಅಥವಾ ಸ್ಲೋಮೋಷನ್‌ಗಳ ದೃಶ್ಯತೀವ್ರತೆಯ ಹಂಗಿಗೂ ಒಳಪಟ್ಟಿಲ್ಲ. ಪಾತ್ರಗಳ ಆಂಗಿಕ ಅಭಿನಯ, ನಯನಾಭಿವ್ಯಕ್ತಿಯೇ ಸಕಲೇಷ್ಟ ರಾಜಕೀಯವನ್ನೂ ಆಷಾಢಭೂತಿಗಳ ಅನುಕೂಲಸಿಂಧುತ್ವವನ್ನೂ ತುಳುಕಿಸುತ್ತದೆ.
ಫಹಾದ್ ಆವರಿಸಿಕೊಳ್ಳುವಂಥ ಅತ್ಯುತ್ಸಾಹ ತೋರದೆ ತಣ್ಣಗೆ ಪಾತ್ರವಾಗಿದ್ದಾರೆ. ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ ಅವರ ಪಾತ್ರದ ರೂಹನ್ನು ತೋರಿಸುವುದೂ ಗಮನಾರ್ಹ. ನಾಯಕಿ ನಿಮಿಷಾ, ಫಹಾದ್ ಜತೆ ಜುಗಲ್‌ಬಂದಿಗೆ ಇಳಿದಂತೆ ನಟಿಸಿದ್ದಾರೆ. ಕೆಲವೆಡೆ ಅವರ ಪಾತ್ರದ ತೂಕ ಮೇಲೇರುತ್ತದೆ. ಸ್ವಾತಂತ್ರ್ಯದ ಭರವಸೆಯೊಳಗೇ ಧರ್ಮದ ಹಂಗಿಗೆ ನಾಯಕ ಅವರನ್ನು ತಳ್ಳುವಾಗ, ಕರುಳ ಕುಡಿಯನ್ನು ಕಳೆದುಕೊಂಡು ಕಣ್ಣೀರಾಗುವಾಗ, ‘ನಿನ್ನ ಅಪ್ಪ ಇನ್ನಿಲ್ಲ’ ಎಂದು ತುಸುವೂ ದುಃಖವೇ ಇಲ್ಲದಂತೆ ಮಗಳ ಎದುರು ಹೇಳಿಕೊಂಡು ಅಣೆಕಟ್ಟೆಯಾಗಿ ಕೂರುವಾಗ... ಚಿತ್ರದ ಸ್ತ್ರೀಪಾತ್ರದ ಗಟ್ಟಿ ಬರವಣಿಗೆ ನಮಗೆ ಕಾಣಿಸುತ್ತದೆ. ಜೋಜು ಜಾರ್ಜ್, ದಿಲೀಪ್ ಪೋತನ್ ಅಭಿನಯವೂ ಹದವರಿತಂತೆ ಇದೆ.
ಕೇರಳದಂತಹ ರಾಜ್ಯದಲ್ಲಿ ಕ್ರಿಶ್ಚಿಯನ್–ಮುಸ್ಲಿಂ ಬಿಕ್ಕಟ್ಟನ್ನು ಸಿನಿಮಾ ಮಾಡಿ ತೋರಿ ದಕ್ಕಿಸಿಕೊಳ್ಳಲು ಗಟ್ಟಿ ಸಂಕಲ್ಪ ಇರಬೇಕು. ನಿರ್ದೇಶಕರಿಗೆ ಅದು ಇರುವುದರಿಂದಲೇ, ಫಹಾದ್ ತರಹದ ನಟರಿಗೆ ಸಿನಿಮಾ ಮಾಧ್ಯಮದ ಮೂಲಕ ಇನ್ನೇನೋ ಸೂಕ್ಷ್ಮವನ್ನೂ ದಾಟಿಸಬೇಕು ಎಂಬ ಮಹತ್ವಾಕಾಂಕ್ಷೆ ಇರುವುದರಿಂದಲೇ ಇಂಥ ಸಿನಿಮಾ ಸಾಕಾರಗೊಂಡಿದೆ. ‘ಕೈ ಅಗಲಿಸಿದ ಜೀಸಸ್ ಮಸೀದಿ ಎದುರಲ್ಲಿನ ಜನರನ್ನು ನಗುನಗುತ್ತಾ ಬರಮಾಡಿಕೊಳ್ಳುವಂತೆ ನಿಂತಿದ್ದಾನೆಲ್ಲವೇ’ ಎಂಬ ನಾಯಕನ ಪ್ರಶ್ನೆ ಕಥನೋದ್ದೇಶದ ಗುಪ್ತಗಾಮಿನಿಯೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.