ADVERTISEMENT

Night Curfew Movie Review: ಕೋವಿಡ್‌ ಕಾಲದ ಕರಾಳ ಮುಖ

ಪ್ರಜಾವಾಣಿ ವಿಶೇಷ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಚಿತ್ರದ ದೃಶ್ಯ
ಚಿತ್ರದ ದೃಶ್ಯ   

ಚಿತ್ರ: ನೈಟ್‌ ಕರ್ಫ್ಯೂ

ನಿರ್ದೇಶನ: ರವೀಂದ್ರ ವೆಂಶಿ

ನಿರ್ಮಾಣ: ಚಂದ್ರಶೇಖರ ಬಿ.ಎಸ್‌.

ADVERTISEMENT

ತಾರಾಗಣ: ಮಾಲಾಶ್ರೀ, ರಂಜನಿ ರಾಘವನ್‌, ಪ್ರಮೋದ್‌ ಶೆಟ್ಟಿ, ಸಾಧು ಕೋಕಿಲ ಮತ್ತಿತರರು

ಕೋವಿಡ್‌–19 ಮನುಷ್ಯನ ಬದುಕಿಗೆ ಕಲಿಸಿದ ಪಾಠಗಳು ಸಾಕಷ್ಟು. ಆಸ್ಪತ್ರೆ ಸಿಗದೆ ಪರದಾಟ, ಚಿಕಿತ್ಸೆಗೆ ಹಾಸಿಗೆಯಿಲ್ಲದೆ ಒದ್ದಾಟ, ಸಾವು, ನೋವು... ಬದುಕಿನಿಂದ ಬಿಟ್ಟುಹೋದವರ ಚಿತೆಗೆ ಕುಟುಂಬಸ್ಥರು ಅಗ್ನಿಸ್ಪರ್ಶ ಮಾಡಲೂ ಸಾಧ್ಯವಾಗದಂತಹ ಕರಾಳ ಸ್ಥಿತಿಯನ್ನು ಈ ಮಹಾಮಾರಿ ಸೃಷ್ಟಿಸಿತ್ತು. ಇದೇ ಸನ್ನಿವೇಶಗಳನ್ನಿಟ್ಟುಕೊಂಡು ಹೆಣೆದ ಚಿತ್ರ ‘ನೈಟ್‌ ಕರ್ಫ್ಯೂ’.

ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಮಾಲಾಶ್ರೀ ಮತ್ತು ರಂಜನಿ ರಾಘವನ್‌ ಇಬ್ಬರೂ ವೈದ್ಯರು. ಕರೋನಾ ಉತ್ತುಂಗದಲ್ಲಿದ್ದ ಕಾಲ. ಕರೋನಾ ಪೀಡಿತ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಇಲ್ಲದಂತಹ ಸನ್ನಿವೇಶ. ಆಗ ಇವರ ಆಸ್ಪತ್ರೆಗೆ ಮಹಿಳೆಯೊಬ್ಬರನ್ನು ಕರೆತರಲಾಗುತ್ತದೆ. ಆಕೆಯನ್ನು ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸುತ್ತಿರುವಾಗಲೇ ಆಕೆಯ ಜೀವ ಹೋಗಿರುತ್ತದೆ. ಇಲ್ಲಿಂದ ಚಿತ್ರದ ಕಥೆ ಪ್ರಾರಂಭವಾಗುತ್ತದೆ.

ಖಳನಟನಾಗಿ ಪ್ರಮೋದ್‌ ಶೆಟ್ಟಿ ಪ್ರವೇಶವಾಗುತ್ತದೆ. ಆಕೆಯ ಹೆಣ ಸುಡಲು ನಮಗೆ ಆಕೆ ಕರೋನಾದಿಂದ ಸತ್ತಿದ್ದು ಎಂಬ ಸರ್ಟಿಫಿಕೆಟ್‌ ಬೇಕು ಎಂದು ಶೆಟ್ಟರು ಮಾಲಾಶ್ರೀ ಬಳಿ ಪಟ್ಟುಹಿಡಿಯುತ್ತಾರೆ. ಆದರೆ ಆಕೆಯದ್ದು ಕೊಲೆ, ಕರೋನಾದಿಂದ ಸಂಭವಿಸಿದ ಸಾವಲ್ಲ ಎಂಬುದು ಮಾಲಾಶ್ರೀಗೆ ತಿಳಿದುಹೋಗುತ್ತದೆ. ಮುಂದೇನಾಗುತ್ತದೆ ಎಂಬುದೇ ಚಿತ್ರಕಥೆ.

ಚಿತ್ರದ ಕಥಾವಸ್ತು ಅನನ್ಯವಾಗಿದೆ. ಆದರೆ ಇವತ್ತಿಗೆ ಸ್ವಲ್ಪ ಹಳತೆನ್ನಿಸುತ್ತದೆ. ಮಾಲಾಶ್ರೀ ವೈದ್ಯೆಯಾಗಿದ್ದರೂ ನಿರ್ದೇಶಕರು ಕೆಲ ಫೈಟ್‌ಗಳನ್ನಿಟ್ಟು ಆ್ಯಕ್ಷನ್‌ ಮಾಡಿಸಿದ್ದಾರೆ. ಆದರೆ ಆಸ್ಪತ್ರೆ ಒಳಗೆ ನಡೆಯುವ ಈ ಹೊಡೆದಾಟ ತುಂಬ ಅಸಹಜ ಎನ್ನಿಸುತ್ತದೆ ಮತ್ತು ಕಥೆಗೆ ಅವಶ್ಯವಿರಲಿಲ್ಲ. ರಂಜನಿ ರಾಘವನ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಮೋದ್‌ ಶೆಟ್ಟಿ ಖಳನಾಯಕನಾಗಿ ಇಷ್ಟವಾಗುತ್ತಾರೆ. ಸಾಧು ಕೋಕಿಲ ಗಂಭೀರವಾದ, ಕುತೂಹಲಕಾರಿ ಕಥೆಯಲ್ಲಿ ನಗಿಸಲಿಕ್ಕಾಗಿಯೇ ಬರುತ್ತಾರೆ.

ಕಥಾವಸ್ತುವಿಗೆ ತಕ್ಕಂತೆ ಕಥೆಯನ್ನು ನಿರೂಪಿಸುವತ್ತ ನಿರ್ದೇಶಕರು ಇನ್ನಷ್ಟು ಗಮನಹರಿಸಬೇಕಿತ್ತು. ಕರೋನಾದಲ್ಲಿದ್ದ ಭಯ, ಕೊಲೆಯ ಸುತ್ತಲಿನ ಕುತೂಹಲಗಳು ದೃಶ್ಯಗಳಾಗಿ ಇನ್ನಷ್ಟು ಗಟ್ಟಿಯಾಗಬೇಕಿತ್ತು. ಹಿನ್ನೆಲೆ ಸಂಗೀತ, ಛಾಯಾಚಿತ್ರಗ್ರಹಣದಲ್ಲಿ ಹೊಸತೇನೂ ಕಾಣಿಸುವುದಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.