ADVERTISEMENT

'O2' ಸಿನಿಮಾ ವಿಮರ್ಶೆ: ಆಸ್ಪತ್ರೆಯಲ್ಲಿ ಅರಳಿದ ಪ್ರೇಮ!

ವಿನಾಯಕ ಕೆ.ಎಸ್.
Published 19 ಏಪ್ರಿಲ್ 2024, 11:20 IST
Last Updated 19 ಏಪ್ರಿಲ್ 2024, 11:20 IST
<div class="paragraphs"><p>O2 ಚಿತ್ರದ ಪೋಸ್ಟರ್‌</p></div>

O2 ಚಿತ್ರದ ಪೋಸ್ಟರ್‌

   

ಅವಳು ಸಂಶೋಧನಾನಿರತ ವೈದ್ಯೆ. ಅವನು ರೇಡಿಯೊ ಜಾಕಿ. ಆಸ್ಪತ್ರೆಯ ಕಾರಿಡಾರ್‌ನಲ್ಲಿಯೇ ಪ್ರೀತಿ ಅರಳುತ್ತದೆ. ಡಾಕ್ಟರ್‌ ಶ್ರದ್ಧಾ ಆಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದರೆ, ಜಾಕಿ ಓಶೋ ಆಗಿ ರಾಘವ್‌ ನಾಯಕ್‌ ಅಭಿನಯಿಸಿದ್ದಾರೆ. ಇವರಿಬ್ಬರ ಪ್ರೀತಿಯ ಕೆಮಿಸ್ಟ್ರಿ ಅದೆಷ್ಟು ಚೆಂದವಾಗಿ ವರ್ಕ್‌ ಆಗಿದೆ ಎಂದರೆ, ಚಿತ್ರ ನೋಡುತ್ತಿದ್ದಾಗ ಸಾಕಷ್ಟು ಕಡೆ ನಿರ್ದೇಶಕರು ಇದನ್ನೊಂದು ಪರಿಶುದ್ಧ ಪ್ರೇಮಕಥೆಯಾಗಿಸಬಾರದಿತ್ತೆ ಎನ್ನಿಸುತ್ತದೆ. 

ಹೃದಾಯಾಘಾತದಿಂದ ಮರಣ ಹೊಂದಿದ ಕೆಲ ನಿಮಿಷಗಳಲ್ಲಿ ದೇಹಕ್ಕೆ O2 ಇಂಜೆಕ್ಟ್‌ ಮಾಡಿದರೆ ಮನುಷ್ಯ ಬದುಕುಳಿಯುವ ಸಾಧ್ಯತೆಯಿದೆ ಎಂಬ ವಿಷಯದ ಸುತ್ತ ಚಿತ್ರ ಸಾಗುತ್ತದೆ. ಡಾಕ್ಟರ್‌ ಶ್ರದ್ಧಾ ಇದೇ ವಿಷಯದಲ್ಲಿ ಸಂಶೋಧನೆ ನಡೆಸುತ್ತ ಇರುತ್ತಾಳೆ. ಡಾಕ್ಟರ್‌ ದೇವ್‌ ಆಗಿ ಪ್ರವೀಣ್‌ ತೇಜ್‌ ಹಾಗೂ ಡಾಕ್ಟರ್‌ ಸೃಷ್ಟಿಯಾಗಿ ಸಿರಿ ರವಿಕುಮಾರ್‌ ಈ ತಂಡ ಸೇರಿಕೊಳ್ಳುತ್ತಾರೆ. ಆದರೆ ಅಂದುಕೊಂಡಂತೆ ಸಂಶೋಧನೆ ನಡೆಯುವುದಿಲ್ಲ. ಹತ್ತಾರು ವಿಘ್ನಗಳು. ಸಂಶೋಧನೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದೇ ಚಿತ್ರಕಥೆ. ಖಳನಾಯಕನ ಪಾತ್ರದಲ್ಲಿ ಡಾ.ಮೃತ್ಯುಂಜಯನಾಗಿ ಬರುವ ಪ್ರಕಾಶ್‌ ಬೆಳವಾಡಿ ಈ ಸಂಶೋಧನೆಗೆ ಅಡ್ಡಗಾಲಾಗಿ ನಿಲ್ಲುತ್ತಾರೆ.

ADVERTISEMENT

ಕಥಾವಸ್ತು ಹೊಸತಾಗಿದೆ. ಕಥೆಯನ್ನು ಕಟ್ಟಿಕೊಟ್ಟಿರುವ ರೀತಿಯು ಭಿನ್ನವಾಗಿದೆ. ಸಂಶೋಧನೆ ನಡುವೆ ತೆರೆದುಕೊಳ್ಳುವ ಆಶಿಕಾ ಪ್ರೇಮಕಥೆ ಹಿತವಾದ ಅನುಭವ ನೀಡುತ್ತದೆ. ಆಶಿಕಾ ಹಾಗೂ ರಾಘವ್‌ ನಟನೆ ಅದ್ಭುತ. ಆಶಿಕಾ ಸಾಕಷ್ಟು ಕಡೆ ಕಣ್ಣಿನ ನೋಟದಿಂದಲೇ ಕೊಲ್ಲುತ್ತಾರೆ. ಚಿತ್ರದ ನಿರ್ದೇಶಕರಲ್ಲೊಬ್ಬರಾಗಿ, ಪ್ರಮುಖ ಪಾತ್ರದಲ್ಲಿಯೂ ನಟಿಸಿರುವ ರಾಘವ್‌ ನಾಯಕ್‌ ನಟನಾಗಿ ಬಹಳ ಭರವಸೆ ಮೂಡಿಸುತ್ತಾರೆ. ಪ್ರಕಾಶ್‌ ಬೆಳವಾಡಿ  ನಟನೆ ಗಮನೀಯ. ಡಾಕ್ಟರ್‌ ವೆಂಕಿಯಾಗಿ ಪುನೀತ್‌ ಬಿ.ಎ ಅಲ್ಲಲ್ಲಿ ನಗಿಸುತ್ತಾರೆ.

ಇಷ್ಟಾಗಿಯೂ ಚಿತ್ರ ಮನಸ್ಸಿಗೆ ನಾಟುವುದಿಲ್ಲ. ಸಂಶೋಧನೆ ಟ್ರ್ಯಾಕ್‌ ಅನ್ನು ಗಟ್ಟಿಯಾಗಿಸಿ ಸೈ–ಫೈ (ಸೈನ್ಸ್‌ ಫಿಕ್ಷನ್‌) ಚಿತ್ರವನ್ನಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಇಲ್ಲವಾದಲ್ಲಿ ಇದೇ ಪಾತ್ರಗಳನ್ನಿಟ್ಟುಕೊಂಡು ಪೂರ್ತಿಯಾಗಿ ಪ್ರೇಮಕಥೆಯಾಗಿಸಿದ್ದರೂ ಸಾಕಿತ್ತು. ಚಿತ್ರದಲ್ಲಿ ತೋರಿಸಿರುವ ಆಸ್ಪತ್ರೆ, ಲ್ಯಾಬ್‌ ಯಾವುದೂ ಈ ರೀತಿಯ ಗಂಭೀರ ವಿಷಯದ ಸಂಶೋಧನೆಗೆ ಸಹಜ ವಾತಾವರಣವನ್ನು ನಿರ್ಮಿಸಿಕೊಡುವುದಿಲ್ಲ. ಸನ್ನಿವೇಶಗಳಲ್ಲಿ ಕುತೂಹಲ, ಒತ್ತಡವಿಲ್ಲ. ಬಹಳ ಸುಲಭವಾಗಿ ಕಥೆ ನಡೆದಂತೆ ಭಾಸವಾಗುತ್ತದೆ. ಸಂಗೀತ ನಿರ್ದೇಶಕ ವಿವಾನ್‌ ರಾಧಾಕೃಷ್ಣ ಹಿನ್ನೆಲೆ ಸಂಗೀತ ಹಿತವಾಗಿದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ನವೀನ್‌ ಕುಮಾರ್‌ ಛಾಯಾಚಿತ್ರಗ್ರಹಣ ಅಚ್ಚುಕಟ್ಟಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.