ADVERTISEMENT

‘ಒಂದು ಸರಳ ಪ್ರೇಮಕಥೆ’ ಸಿನಿಮಾ ವಿಮರ್ಶೆ: ಸಂಗೀತದ ಸುತ್ತಲಿನ ಪ್ರೇಮಕಥೆ

ವಿನಾಯಕ ಕೆ.ಎಸ್.
Published 9 ಫೆಬ್ರುವರಿ 2024, 12:48 IST
Last Updated 9 ಫೆಬ್ರುವರಿ 2024, 12:48 IST
ವಿನಯ್‌ ರಾಜ್‌ಕುಮಾರ್‌, ಸ್ವಾತಿಷ್ಠ 
ವಿನಯ್‌ ರಾಜ್‌ಕುಮಾರ್‌, ಸ್ವಾತಿಷ್ಠ    

ಚಿತ್ರ: ಒಂದು ಸರಳ ಪ್ರೇಮಕಥೆ

ನಿರ್ದೇಶನ: ಸಿಂಪಲ್‌ ಸುನಿ

ನಿರ್ಮಾಣ: ಮೈಸೂರು ರಮೇಶ್‌

ADVERTISEMENT

ತಾರಾಗಣ: ವಿನಯ್‌ ರಾಜ್‌ಕುಮಾರ್‌, ಸ್ವಾತಿಷ್ಠ, ಮಲ್ಲಿಕಾ ಸಿಂಗ್‌, ರಾಜೇಶ್‌ ನಟರಂಗ ಮತ್ತಿತರರು.

ಸಂಗೀತದಲ್ಲಿ ಸಾಧನೆ ಮಾಡಬೇಕು, ದೊಡ್ಡ ಸಂಗೀತ ನಿರ್ದೇಶಕನಾಗಬೇಕು ಎಂದು ಕನಸು ಕಾಣುವ ಚಿತ್ರದ ನಾಯಕ ಅತಿಶಯ್‌. ಹಿನ್ನೆಲೆ ಗಾಯಕಿಯಾಗಬೇಕು ಎಂಬ ಕನಸಿನಲ್ಲಿರುವ ನಾಯಕಿ ಮಧುರ. ಬಾಲ್ಯದಿಂದಲೂ ಅತಿಶಯನೊಂದಿಗೆ ಬೆಳೆದು, ಆತನನ್ನು ಪ್ರೀತಿಸುವ ಅನುರಾಗ. ಈ ಮೂವರ ನಡುವಿನ ಸರಳವೆನಿಸಿದರೂ ವಿರಳವಾಗಿರುವ ಪ್ರೇಮವೇ ಚಿತ್ರದ ಒಟ್ಟಾರೆ ಕಥೆ. ಸುದ್ದಿವಾಹಿನಿ ನಿರೂಪಕಿ ಅನುರಾಗಳಾಗಿ ನಾಯಕಿ ಸ್ವಾತಿಷ್ಟ ಸಿನಿಮಾ ಮುಗಿದ ಮೇಲೆಯೂ ನೆನಪಿನಲ್ಲಿ ಉಳಿಯುತ್ತಾರೆ. ತಾನು ಇರುವುದೇ ಹೀಗೆ ಎನ್ನಿಸುವಷ್ಟು ಸಹಜವಾದ ಅವರ ನಟನೆಯೇ ಸಿನಿಮಾಕ್ಕೆ ದೊಡ್ಡ ಬಲ.

ನಿರ್ದೇಶಕ ಸಿಂಪಲ್‌ ಸುನಿ ಸರಳವಾದ ಕಥೆಯನ್ನು ನಗಿಸುತ್ತ ಹೇಳುತ್ತಾರೆ. ಅವರ ಹಿಂದಿನ ಸಿನಿಮಾಗಳ ಸೂತ್ರವೇ ಇಲ್ಲಿಯೂ ಇದೆ. ಕೆಲವಷ್ಟು ಕಡೆ ಮಾತು, ಸನ್ನಿವೇಶಗಳಿಂದ ನಗಿಸುವಲ್ಲಿ ಸುನಿ ಯಶಸ್ವಿಯಾಗಿದ್ದಾರೆ. ಆದರೆ ಸರಳ ಪ್ರೇಮವನ್ನು ವಿರಳ ಪ್ರೇಮವೆಂದು ಸಾಬೀತುಪಡಿಸಲಿಕ್ಕಾಗಿಯೇ ಹೆಣೆದ ಕೆಲವಷ್ಟು ದೃಶ್ಯಗಳು ನವಿರಾದ ಪ್ರೇಮದ ಸ್ವಾದಕ್ಕೆ ಅಡ್ಡಿಯುಂಟು ಮಾಡಿವೆ. ಉದಾಹರಣೆಗೆ ನಾಯಕನ ಅಜ್ಜಿಯ ಕೊನೆಯ ಆಸೆ ತೀರಿಸಲೆಂದು ಆಸ್ಪತ್ರೆಯಲ್ಲಿಯೇ ನಾಯಕ-ನಾಯಕಿಯನ್ನು ಬಲವಂತವಾಗಿ ಮದುವೆ ಮಾಡಿಸುವ ದೃಶ್ಯ ನಾಟಕೀಯ ಧಾರಾವಾಹಿಗಳ ಸನ್ನಿವೇಶದ ಅನುಭವ ನೀಡುತ್ತದೆ. ನಾಯಕಿ ಅನುವಿಗೆ ಸಹಾಯ ಮಾಡಿದ್ದು ನಾಯಕನೇ ಎಂದು ಸುತ್ತಿ ಬಳಸಿಕೊಂಡು ಹೇಳಿರುವ ದೃಶ್ಯ ಕೂಡ ಅದೇ ಅನುಭವ ನೀಡುತ್ತದೆ.

ನಾಯಕ ಅತಿಶಯನಾಗಿ ವಿನಯ್‌ ರಾಜ್‌ಕುಮಾರ್‌ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಪರದಾಡುತ್ತಿರುವ ತಂತ್ರಜ್ಞನ ಪಾತ್ರ ಎಂಬ ಕಾರಣಕ್ಕೆ ಬಹುಶಃ ಅವರ ಲುಕ್‌ ಅನ್ನು ಉದ್ದನೆಯ ಗಡ್ಡದೊಂದಿಗೆ ರಗಡ್‌ ಆಗಿಸಿರಬೇಕು. ಆದರೆ ಇಬ್ಬರು ನಾಯಕಿಯರ ಮುದ್ದಾದ ಲುಕ್‌ಗೆ ಇವರ ರಗಡ್‌ ಲುಕ್‌ ತಾಳೆ ಆಗುವುದಿಲ್ಲ. ಹಿನ್ನೆಲೆ ಗಾಯಕಿ ಮಧುರಾ ಆಗಿ ಮಲ್ಲಿಕಾ ಸಿಂಗ್‌ ಇಷ್ಟವಾಗುತ್ತಾರೆ. ನಾಯಕನ ತಂದೆಯಾಗಿ ರಾಜೇಶ್‌ ನಟರಂಗ, ತಾಯಿಯಾಗಿ ಅರುಣಾ ಬಾಲರಾಜ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಚಿತ್ರದುದ್ದಕ್ಕೂ ಹಾಡಿನ ಬಿಟ್‌ಗಳಿವೆ. ಸನ್ನಿವೇಶಕ್ಕೆ ತಕ್ಕ ಹಾಡುಗಳನ್ನು ನೀಡುವಲ್ಲಿ ವೀರ್‌ ಸಮರ್ಥ್‌ ಯಶಸ್ವಿಯಾಗಿದ್ದಾರೆ. ಆದರೆ ಪೂರ್ಣಪ್ರಮಾಣದಲ್ಲಿ ಬಳಕೆಯಾದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕಾರ್ತಿಕ್‌ ಶರ್ಮಾ ಸಾಧ್ಯವಿರುವೆಡೆಯೆಲ್ಲ ಛಾಯಾಚಿತ್ರಗ್ರಹಣದಿಂದ ಫ್ರೇಮ್‌ಗಳನ್ನು ವರ್ಣಮಯವಾಗಿಸಿದ್ದಾರೆ. ಥಟ್‌ ಎಂದು ನಗಿಸುವ ಮೊನುಚಾದ ಸಂಭಾಷಣೆ ಚಿತ್ರಕ್ಕೊಂದು ಬಲ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.