ಚಿತ್ರ: ಆರೆಂಜ್
ನಿರ್ಮಾಣ: ನವೀನ್ ರಾಜ್
ನಿರ್ದೇಶನ: ಪ್ರಶಾಂತ್ ರಾಜ್
ತಾರಾಗಣ: ಗಣೇಶ್, ಪ್ರಿಯಾ ಆನಂದ್, ಅವಿನಾಶ್, ಸಾಧುಕೋಕಿಲ, ರಂಗಾಯಣ ರಘು
ಕಿತ್ತಳೆ ಬಹುಪಯೋಗಿ ಹಣ್ಣು. ತಾಜಾ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಕುಡಿದರೆ ಮನಸ್ಸಿಗೆ ಹಿತಕರ. ಮಾಗದ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಕುಡಿಯುವುದು ಕಷ್ಟಕರ. ಆದರೆ, ಅದೇ ಜ್ಯೂಸ್‌ಗೆ ಹೆಚ್ಚಾಗಿ ಸಕ್ಕರೆ ಮಿಶ್ರಣ ಮಾಡಿ ಕುಡಿಯುಲು ಕೊಟ್ಟರೆ ಗ್ರಾಹಕರು ಮುಖ ಸಿಂಡರಿಸಿಕೊಳ್ಳುತ್ತಾರೆ. ‘ಆರೆಂಜ್’ ಚಿತ್ರದಲ್ಲಿ ಹುಳಿ ಹುಳಿಯಾದ ಕಿತ್ತಳೆಗೆ ಹೆಚ್ಚಾಗಿ ಸಕ್ಕರೆಯ ಪಾಕ ಹಾಕಿ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.
ಒಂದೊಳ್ಳೆ ಉದ್ದೇಶಕ್ಕಾಗಿ ಕಳ್ಳತನ ಮಾಡಿದರೂ ತಪ್ಪಿಲ್ಲ ಎಂದು ನಂಬಿದ ಯುವಕ. ಆತ ರೈಲಿನಲ್ಲಿ ಸಿಗುವ ಹುಡುಗಿಯ ಮನೆಯೊಳಗೆ ಹೋಗಿ ಸೃಷ್ಟಿಸುವ ಅವಾಂತರ ಇಟ್ಟುಕೊಂಡು ಕಾಮಿಡಿ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಹಣದ ಮತ್ತಿನಲ್ಲಿ ಮಾನವೀಯತೆ, ಭಾವನಾತ್ಮಕ ಸಂಬಂಧಗಳು ಮರೆಯಾಗುತ್ತಿರುವ ಎಳೆಯನ್ನು ಜೋಡಿಸುವ ಪ್ರಯತ್ನ ಮಾಡಿದ್ದಾರೆ.
ರಾಧಾ (ಪ್ರಿಯಾ ಆನಂದ್) ಪ್ರಿಯಕರನಿಗಾಗಿ ಮನೆ ತೊರೆಯುತ್ತಾಳೆ. ಪ್ರಿಯಕರನಿಗೆ ವಂಶಪಾರಂಪರ್ಯವಾಗಿ ಬಂದ ಕೈಗಡಗ ಕೊಟ್ಟು ಆತನನ್ನು ಮನೆಗೆ ಕರೆತರಬೇಕೆನ್ನುವುದು ಅವಳ ಗುರಿ. ಸಂತೋಷ್(ಗಣೇಶ್)ನನ್ನು ಆಕೆ ಭೇಟಿಯಾಗುವುದು ರೈಲಿನಲ್ಲಿ. ಅಲ್ಲಿ ಅವನಿಗೆ ಕಿತ್ತಳೆ ಹಣ್ಣು ಕೊಡುತ್ತಾಳೆ. ರೈಲಿನಲ್ಲಿ ಕೈಗಡಗ ಕಳ್ಳನ ಪಾಲಾಗುತ್ತದೆ. ಸಂತೋಷ್ ಕಳ್ಳನಿಗೆ ಥಳಿಸಿ ಅದನ್ನು ತರುವಷ್ಟರಲ್ಲಿ ನಿಲ್ದಾಣದಿಂದ ರೈಲು ಹೊರಟು ಹೋಗುತ್ತದೆ. ಆಕೆಯ ಕುಟುಂಬಕ್ಕೆ ಕೈಗಡಗ ಕೊಡಲು ಆತ ಹೋದಾಗ ನಡೆಯುವ ಸನ್ನಿವೇಶವೇ ಚಿತ್ರದ ಹೂರಣ.
ಈ ಕಥೆಯಲ್ಲಿ ಹೊಸತೇನೂ ಇಲ್ಲ. ಬಿಗಿಯಾದ ನಿರೂಪಣೆ, ಸಮರ್ಥವಾದ ಹಿನ್ನೆಲೆ ಸಂಗೀತ ಇದ್ದರೆ ಸಾಧಾರಣವಾದಕಾಮಿಡಿ ಕಥೆಗಳಿಗೂ ಗೆಲ್ಲುವ ಶಕ್ತಿ ಇರುತ್ತದೆ. ಪ್ರತಿ ದೃಶ್ಯದಲ್ಲೂ ಕಚಗುಳಿ ಇಟ್ಟರಷ್ಟೇ ಜನರಿಗೆ ಇಷ್ಟವಾಗುವುದು. ಆದರೆ, ಹಾಸ್ಯನಟರ ದಂಡೇ ಇದ್ದರೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಶಕ್ತಿ ಸಂಭಾಷಣೆಗಿಲ್ಲ. ಆರೆಂಜ್ ಹುಳಿ ಹುಳಿಯಾಗುವುದು ಇಲ್ಲಿಯೇ.
ನಿರೂಪಣೆಯ ಹರಿವಿಗೆ ತಕ್ಕಂತೆ ಪಾತ್ರಗಳು ಗಟ್ಟಿಯಾಗಿ ಚಲಿಸುವುದಿಲ್ಲ. ಹಿಂದಿನ ಹಲವು ಚಿತ್ರಗಳಂತೆಯೇ ನಟ ಗಣೇಶ್ ಪಾತ್ರ ನಿಶ್ಚಿತಾರ್ಥವಾದ ಹುಡುಗಿಯ ಹಿಂದೆ ಬೀಳುವುದು, ಹೆಂಡ ಕುಡಿದು ಅವಳ ಮುಂದೆ ಪ್ರೇಮದ ತಾಪ ತೋಡಿಕೊಳ್ಳುವುದು ಇಲ್ಲಿಯೂ ಮುಂದುವರಿಯುತ್ತದೆ. ಅವರ ಪಾತ್ರ ಅಲ್ಲಿಂದಿಲ್ಲಿಗೆ ಜಿಗಿಯುತ್ತ ಗಟ್ಟಿತನ ಕಳೆದುಕೊಂಡು ತೆಳುವಾಗಿ ಬಿಡುತ್ತದೆ.
ನಿರ್ದೇಶಕನ ಅವಶ್ಯಕತೆಗೆ ಅನುಗುಣವಾಗಿ ಕೆಲವೆಡೆ ಪಾತ್ರಗಳು ಪೆದ್ದು ಪೆದ್ದಾಗಿ ವರ್ತಿಸುತ್ತವೆ. ಚಿತ್ರದ ನಾಯಕ ಅನಾಥ. ಆತ ಅನಾಥಾಶ್ರಮಕ್ಕೆ ನೆರವಾಗಲು ಕಳ್ಳತನಕ್ಕೆ ಇಳಿಯುವುದು ಅಸಹಜವಾಗಿದೆ.
ರಂಗಾಯಣ ರಘು, ಅವಿನಾಶ್, ಸಾಧುಕೋಕಿಲ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ಕೈಚಳಕ ಮನಸೆಳೆಯುತ್ತದೆ. ಎಸ್. ತಮನ್ ಸಂಗೀತ ಸಂಯೋಜನೆಯ ಒಂದು ಹಾಡು ಕೇಳುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.