ಚಿತ್ರ: ಪುಷ್ಪ–ದಿ ರೈಸ್ ಭಾಗ–1 (ತೆಲುಗು)
ನಿರ್ಮಾಣ: ನವೀನ್ ಯರ್ನೇನಿ, ವೈ. ರವಿಶಂಕರ್
ನಿರ್ದೇಶನ: ಸುಕುಮಾರ್
ತಾರಾಗಣ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ, ಸುನಿಲ್, ದಯಾನಂದ ರೆಡ್ಡಿ, ಫಹಾದ್ ಫಾಸಿಲ್, ಅನಸೂಯಾ ಭಾರದ್ವಾಜ್
***
ಬೆಂಗಳೂರಿನ ಚೆಂದದೊಂದು ರಸ್ತೆಯಲ್ಲಿ ಟ್ರಾಫಿಕ್ ಇಲ್ಲದ್ದನ್ನು ನೋಡಿ ಸರಾಗ ಸಾಗುತ್ತೇವೆ. ಆಮೇಲೆ ದಿಢೀರನೆ ಜಾಮ್. ತೆವಳುವ ಗಾಡಿ, ನಲುಗುವ ಮನ. ಸುಕುಮಾರ್ ನಿರ್ದೇಶನದ ‘ಪುಷ್ಪ–ದಿ ರೈಸಿಂಗ್’ ಸಿನಿಪಯಣವೂ ಹೀಗೆಯೇ. ಕೆಲವು ರಸ್ತೆಗಳಲ್ಲಿ ಪಯಣ ಸರಾಗ. ಅಲ್ಲಲ್ಲಿ ರಸವಿರಾಗ.
‘ಪುಷ್ಪ’ ಮೊದಲ ಅರ್ಧ ತಾಸು ಮಜಾ ಕೊಡುತ್ತದೆ. ಕೊನೆಯ ಅರ್ಧ ತಾಸು ಕಣ್ಣು ಕೀಲಿಸಿ ಕೂರಿಸಿಕೊಳ್ಳುತ್ತದೆ. ಯಾಕೆಂದರೆ, ಫಹಾದ್ ಫಾಸಿಲ್ ಬರುವುದೇ ಆಗ. ನಡುವೆ ರಶ್ಮಿಕಾ ಮಂದಣ್ಣ ಬಂದಾಗಲೆಲ್ಲ ಚಿತ್ರಕಥೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಗಾಡಿಯಂತಾಗಿಬಿಡುತ್ತದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಡುವಿನ ‘ಕೆಮಿಸ್ಟ್ರಿ’ ನೋಡುಗರು ಟೈಮ್ ನೋಡುವ ‘ಮ್ಯಾಥಮೆಟಿಕ್ಸ್’ ಆಗಿಬಿಡುವುದು ಚೋದ್ಯ.
ಸುಕುಮಾರ್ ತಮ್ಮ ಚಿತ್ರಕಥಾ ಬರವಣಿಗೆಯಲ್ಲಿ ಜನಪ್ರಿಯತೆಗೆ ಇಸ್ತ್ರಿ ಹಾಕಿರುವುದು ಸ್ಪಷ್ಟ. ಮೊದಲ ಭಾಗದ ಕೆಲವು ದೃಶ್ಯಗಳಲ್ಲಿ ಅವರು ಅನುಸರಿಸುವ ಅನನುಕ್ರಮಣಿಕೆಯ ಕಥನ ತಂತ್ರ ಕೂಡ ಆಸಕ್ತಿಕರ. ಆದರೆ, ಅದೇ ಲಯವನ್ನು ಆಮೇಲಾಮೇಲೆ ಸಿನಿಮಾ ಉಳಿಸಿಕೊಳ್ಳುವುದಿಲ್ಲ. ಅತಿಬರವಣಿಗೆಯ ದೃಶ್ಯಗಳು ತಂತಾವೇ ಅದನ್ನು ಹೇಳುವಂತೆ ಪ್ರಕಟಗೊಳ್ಳತೊಡಗುವುದು ಕೇಸರಿಬಾತ್‌ನಲ್ಲಿ ಸಿಕ್ಕ ಉಪ್ಪೆನ್ನಬಹುದು. ಇಷ್ಟಕ್ಕೂ ಸುಕುಮಾರ್ ಖುದ್ದು ತಮ್ಮ ಕೇಸರಿಭಾತ್‌ಗೆ ಉಪ್ಪು ಹಾಕಿರುವುದು.
ಕಥಾನಾಯಕ ಪುಷ್ಪ ರಕ್ತಚಂದನದ ಮಹಾಕಳ್ಳ. ತಂದೆಯಿಲ್ಲದ ಅವನು ಹೀಗಾಗಲೊಂದು ಇತಿಹಾಸವಿದೆ. ಅಳಲಿಕ್ಕೆ ಅವನಿಗೆ ತಾಯಿಯೂ ಇದ್ದಾಳೆ. ಕನಸಿನ ರಾಗಕ್ಕೆ ದನಿಗೂಡಬೇಕಲ್ಲ, ಹೀಗಾಗಿ ನಾಯಕಿಗೂ ಜಾಗ. ಕೂಲಿಕಾರನಾಗಿದ್ದಾಗಿನಿಂದಲೂ ಈ ಕಥಾನಾಯಕ ಸ್ಟೈಲಿಷ್. ಕಾಲಿನಮೇಲೆ ಕಾಲು ಹಾಕಿಯೇ ಕೂರುವುದು. ಎಡಭುಜವನ್ನು ತುಸು ಸೆಟೆಸಿ, ಬಲಕ್ಕೆ ವಾಲಿಕೊಂಡೇ ಬಿರುಗಾಲು ಹಾಕುವುದು. ತನ್ನ ಧಣಿಗಳು ಹುಬ್ಬೇರಿಸುವಂತೆ ಪೊಲೀಸರ ದಾಳಿಯಿಂದ ರಕ್ತಚಂದನದ ಮಾಲುಗಳನ್ನು ಬಚಾವು ಮಾಡಬಲ್ಲ. ಕಳ್ಳಸಾಗಾಣಿಕೆಗೆ ದಾರಿ ಹುಡುಕುವುದರಲ್ಲೂ ಜಗಜ್ಜಾಣ.
ರಕ್ತಚಂದನಕ್ಕೆ ಸಂಬಂಧಿಸಿದ ಕಾಡಿನ ದೃಶ್ಯಗಳು ರೋಚಕವಾಗಿ ಮೂಡಿಬಂದಿವೆ. ನದಿಗೆ ಲೋಡುಗಟ್ಟಲೆ ಮಾಲನ್ನು ಸುರಿದು, ಅಣೆಕಟ್ಟಿನ ಗೇಟ್ ಮುಚ್ಚಿಸುವ ಮೂಲಕ ಅವನ್ನು ರಕ್ಷಿಸಿಕೊಳ್ಳುವ ಭಾಗವಂತೂ ಫ್ಯಾಂಟಸಿ ಚಿತ್ರಕ್ಕೆ ಸರಿಸಮ. ‘ಊ ಅಂಟಾವಾ ಮಾವ ಉಹೂಂ ಅಂಟಾವಾ’ ಎಂದು ಸಮಂತಾ ಋತ್‌ಪ್ರಭು ನೃತ್ಯಲಾಲಿತ್ಯ ಇರುವ ಐಟಂ ಗೀತೆಯ ವಿಶೇಷ ಗಾಯಕಿ ಇಂದ್ರವತಿ ಚೌಹಾನ್ ಅವರ ಪಲುಕುಗಳು. ದೇವಿಶ್ರೀ ಪ್ರಸಾದ್ ಸಂಗೀತದ ಆಕರ್ಷಕ ಕೆಲಸಕ್ಕೂ ಇಂತಹ ಢಾಳು ಉದಾಹರಣೆಗಳಿವೆ. ಮೂರು ತಾಸಿಗೆ ಚಿತ್ರವನ್ನು ಎಡಿಟ್ ಮಾಡುವಲ್ಲಿ ಕಾರ್ತಿಕ ಶ್ರೀನಿವಾಸ್–ರುಬನ್ ಇಬ್ಬರೂ ಹೈರಾಣಾಗಿರಬಹುದೆನ್ನುವುದಕ್ಕೆ ಚಿತ್ರದ ಹದತಪ್ಪಿದ ಗತಿಯೇ ಸಾಕ್ಷಿ. ಮಿರೊಸ್ಲಾವ್ ಬ್ರೊಜೆಕ್ ಕ್ಯಾಮೆರಾ ಕಣ್ಣಿನ ಸೂಕ್ಷ್ಮಗಳು ಚಿತ್ರದ ದೃಶ್ಯವಂತಿಕೆಯನ್ನು ಹೆಚ್ಚಿಸಿದೆ.
ಅಲ್ಲು ಅರ್ಜುನ್ ತಮ್ಮ ಹಳೆಯ ಮ್ಯಾನರಿಸಂಗೆ ಹೊರತಾದ ಬಗೆಯಲ್ಲಿ ಈ ಚಿತ್ರದಲ್ಲಿ ಆಂಗಿಕ ಅಭಿನಯ ತೋರಿದ್ದಾರೆ. ಇಡೀ ಚಿತ್ರದ ಬರವಣಿಗೆ ಅವರಿಗಾಗಿಯೇ ಇದ್ದಂತಿದೆ. ‘ಡಾರ್ಕ್ ಮೇಕಪ್’ನಲ್ಲಿ ರಶ್ಮಿಕಾ ಮಂದಣ್ಣ ಅಗಲವಾದ ಕಣ್ಣುಗಳನ್ನು ನೋಡಿ ಆಗೀಗ ನಮಗೂ ಭಯವಾದೀತು. ಧನಂಜಯ ಕನ್ನಡದ ಚಿತ್ರಗಳಲ್ಲಿ ಕಾಣಿಸುವಷ್ಟು ಗಟ್ಟಿಯಾಗಿ ಈ ಸಿನಿಮಾದಲ್ಲಿ ಕಂಡಿಲ್ಲ. ಕೊನೆಯಲ್ಲಿ ಬರುವ ಫಹಾದ್ ಫಾಸಿಲ್ ಚಿತ್ರದ ರೂಹನ್ನೇ ಬದಲಿಸುವಂತಹ ಝಲಕ್ ನೀಡುತ್ತಾರೆ.
ಈ ಚಿತ್ರದ ಮುಂದಿನ ಭಾಗ ಬರಲಿದೆ ಎಂಬ ಸೂಚನೆಯೊಂದಿಗೆ ನಿರ್ದೇಶಕರು ಮುಕ್ತಾಯ ಮಾಡಿರುವುದರಿಂದ ಕಥನ ಕುತೂಹಲ ಉಳಿದಿದೆ. ಜತೆಗೆ ತಿದ್ದುಪಡಿಗೂ ಸಾಕಷ್ಟು ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.