ನಿರ್ಮಾಪಕರು: ಅಮರೇಜ್ ಸೂರ್ಯವಂಶಿ
ಅಯೋಧ್ಯೆ ಆಳಬೇಕಿದ್ದ ಶ್ರೀರಾಮನಿಗೆ ವನವಾಸವಾಯಿತು. ವನವಾಸದಲ್ಲಿದ್ದ ಸಂದರ್ಭದಲ್ಲಿ ಸೀತೆಯ ಅಪಹರಣವಾಯಿತು. ಸೀತೆಯ ಅಪಹರಣ ರಾವಣನ ವಧೆಗೆ ಕಾರಣವಾಯಿತು. ರಾಮಾಯಣದ ಈ ಸರಣಿ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ‘ರಾಮನ ಅವತಾರ’ವೆಂಬ ಹೊಸ ಎಳೆ ಸೃಷ್ಟಿಸಿದ್ದಾರೆ ನಿರ್ದೇಶಕ ವಿಕಾಸ್ ಪಂಪಾಪತಿ.
ಊರಿನಲ್ಲಿರೋ ‘ರಾಮ’ನಿಗೆ(ರಿಷಿ) ‘ಪೂರ್ಣಿ’ಯ(ಶುಭ್ರ ಅಯ್ಯಪ್ಪ) ಮೇಲೆ ಪ್ರೀತಿ. ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದಾಗ ‘ರಾಮ’ನ ಪ್ರೀತಿಗೆ ಎಳ್ಳುನೀರು ಬಿಟ್ಟು ‘ಪೂರ್ಣಿ’ ಊರು ತೊರೆಯುತ್ತಾಳೆ. ಊರಿನಲ್ಲೇ ಯುವಜನತೆಗೆ ಕೆಲಸ ನೀಡುತ್ತೇನೆ ಎಂದು ಪ್ರತಿಜ್ಞೆ ತೆಗೆದುಕೊಳ್ಳುವ ‘ರಾಮ’ ಚುನಾವಣೆಗೆ ನಿಲ್ಲುತ್ತಾನೆ. ಚುನಾವಣೆಗಾಗಿ ಊರಿನವರಿಂದಲೇ ಸಂಗ್ರಹಿಸಿದ ₹30 ಲಕ್ಷ ಹಣವನ್ನು ‘ರಾಮ’ನ ಸ್ನೇಹಿತ ಕದ್ದೊಯ್ಯುತ್ತಾನೆ. ಇದರಿಂದ ಊರು ಬಿಟ್ಟು ಮಂಗಳೂರು ಸೇರಿಕೊಳ್ಳುವ ‘ರಾಮ’ನಿಗೆ ಸೀತೆ ಸಿಗುತ್ತಾಳೆ. ಮುಂದೆ ‘ರಾಮ’ನ ಬದುಕಿನಲ್ಲಾಗುವ ಸರಣಿ ಘಟನೆಗಳೇ ಸಿನಿಮಾದ ಕಥೆ.
‘ಆಪರೇಷನ್ ಅಲಮೇಲಮ್ಮ’ದಂತಹ ಹಾಸ್ಯಪ್ರಧಾನ ಸಿನಿಮಾ ಹಾಗೂ ‘ಕವಲುದಾರಿ’ಯಂತಹ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ರಿಷಿ, ‘ರಾಮನ ಅವತಾರ’ವೆತ್ತಿ ಪ್ರೇಕ್ಷಕರನ್ನು ಕೊಂಚ ನಗಿಸುತ್ತಾರೆ. ರಿಷಿಯ ಹಾವಭಾವಕ್ಕೆ ತಕ್ಕಂತೆ ನಗು ಉಕ್ಕಿಸುವ ಸಂಭಾಷಣೆಗಳ ಕೊರತೆ ಆರಂಭದಿಂದಲೇ ಕಾಡುತ್ತದೆ. ಗಟ್ಟಿಯಾದ ಚಿತ್ರಕಥೆಯ ಕೊರತೆ ಇಡೀ ಸಿನಿಮಾದ ಅವಧಿ ಹೆಚ್ಚಿಸಿದೆ. ಕೆಲವಡೆ ತರ್ಕಕ್ಕೆ ಸಿಗದ ದೃಶ್ಯಗಳೂ ಇವೆ. ಯೂಟ್ಯೂಬ್ ಸರಣಿಗಳಲ್ಲಿ ಪಂಚಿಂಗ್ ಡೈಲಾಗ್ಸ್ ಮುಖಾಂತರ ನಗಿಸುತ್ತಿದ್ದ ನಿರ್ದೇಶಕರು ಈ ಸಿನಿಮಾದಲ್ಲಿ ಅದನ್ನು ಅಳವಡಿಸುವಲ್ಲಿ ವಿಫಲವಾದಂತೆ ಭಾಸವಾಗುತ್ತದೆ. ಸರಳವಾದ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಅನಗತ್ಯವಾದ ಹಲವು ದೃಶ್ಯಗಳನ್ನು ಕಾಣಬಹುದು. ಕ್ಲೈಮ್ಯಾಕ್ಸ್ ದೃಶ್ಯ ಎಳೆದಾಡಿದಂತಿದೆ.
ನಟನೆಯಲ್ಲಿ ರಿಷಿ ‘ರಾಮ’ನಾಗಿ ಜೀವಿಸಿದ್ದಾರೆ. ಸಂಭಾಷಣೆಯ ಕೊರತೆಯ ನಡುವೆಯೂ ತಮ್ಮ ಮುಗ್ಧ ನಗು, ಹಾವಭಾವದಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಭಾವುಕರಾಗಿಸಿದ್ದಾರೆ. ಶುಭ್ರ ಅವರ ಪಾತ್ರ ಸಂಕ್ಷಿಪ್ತವಾಗಿದೆ. ಪ್ರಣೀತಾ ಸುಭಾಷ್ ಈ ಸಿನಿಮಾ ಮುಖಾಂತರ ಸಿನಿಪಯಣದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ‘ರೀಟ’ಳಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಂಗಳೂರು ಕನ್ನಡ ಮಾತನಾಡುತ್ತಾ ಅರುಣ್ ಸಾಗರ್ ಖಳನಟನಾಗಿ ಮಿಂಚಿದ್ದಾರೆ. ಭಿನ್ನವಾದ ಕೇಶವಿನ್ಯಾಸ ಅವರ ಪಾತ್ರಕ್ಕೆ ಹಿಡಿಸಿದೆ. ಆದರೆ ಇವರೆಲ್ಲರನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡುವಲ್ಲಿ ಚಿತ್ರಕಥೆಯು ಸೋತಿದೆ ಎಂದರೆ ತಪ್ಪಲ್ಲ. ಹಾಡುಗಳು ಇಂಪಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.