ADVERTISEMENT

‘ರೂಪಾಂತರ’ ಸಿನಿಮಾ ವಿಮರ್ಶೆ: ಬರವಣಿಗೆಯ ಶಕ್ತಿ ಪ್ರದರ್ಶನ; ಭಿನ್ನರೂಪದ ಸಂಕಲನ

ಅಭಿಲಾಷ್ ಪಿ.ಎಸ್‌.
Published 26 ಜುಲೈ 2024, 9:21 IST
Last Updated 26 ಜುಲೈ 2024, 9:21 IST
ರೂಪಾಂತರ 
ರೂಪಾಂತರ    

ಇಲ್ಲಿ ಯಾವ ಪಾತ್ರಗಳ ಹೆಸರೂ ಉಲ್ಲೇಖಗೊಳ್ಳುವುದಿಲ್ಲ. ಕಥೆ ಹೆಣೆದಿರುವ ಶೈಲಿಗೆ ಪಾತ್ರಗಳಿಗೆ ಹೆಸರೂ ಅಮುಖ್ಯ ಎಂದು ಎನಿಸಿಬಿಡುತ್ತದೆ. ಭಾವನೆಗಳಿಗೆ, ಸಂದೇಶಕ್ಕೆ, ರೂಪಾಂತರಗೊಳ್ಳುವ ಪ್ರಕ್ರಿಯೆ; ಘಟನೆಗಳಿಗಷ್ಟೇ ಇಲ್ಲಿ ಆದ್ಯತೆ. ಬರವಣಿಗೆಯ ಶಕ್ತಿ ಪ್ರದರ್ಶಿಸಿರುವ ಈ ಸಿನಿಮಾ ನಾಲ್ಕು ಕಥೆಗಳ ಗುಚ್ಛವಾದರೂ ಪೋಣಿಸಿದ ರೀತಿ ಇದಕ್ಕೆ ಭಿನ್ನರೂಪ ನೀಡಿದೆ. ಸಿನಿಮಾ ಕಥಾಲೋಕದ ‘ರೂಪಾಂತರ’ಕ್ಕೆ ಬೇಕಾದ ನವ್ಯ ಕನಸೊಂದನ್ನು ಬಿತ್ತಿರುವ ಈ ಚಿತ್ರ ಚಂದನವನಕ್ಕೆ ಭಿನ್ನ ಕಲ್ಪನೆಯ ನಿರ್ದೇಶಕನೊಬ್ಬರನ್ನು ನೀಡಿದೆ.

‘ಡಿಸ್ಟೋಪಿಅ’–ಎಂದರೆ ನರಕಸದೃಶವಾದ ಒಂದು ಸಮಾಜ. ಭವಿಷ್ಯದ ಅಂತಹ ಲೋಕದಿಂದ ಸಿನಿಮಾ ಕಥೆ ಆರಂಭವಾಗುತ್ತದೆ. ಅಲ್ಲಿ ನೀರು, ಗಾಳಿ ಮಾರಾಟದ ವಸ್ತುವಾಗಿದೆ. ಜನರ ಮಾರಣಹೋಮ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಆ ಲೋಕವನ್ನಾಳುತ್ತಿರುವ ದುರುಳರ ಕೈಗೆ ಅಜ್ಜನೊಬ್ಬ ಸಿಕ್ಕಿಬೀಳುತ್ತಾನೆ. ಆತನ ಕೈಯಲ್ಲೊಂದು ಸಣ್ಣ ಪೆಟ್ಟಿಗೆ. ಆ ಪೆಟ್ಟಿಗೆಯೊಳಗೆ ಚಿಟ್ಟೆಯ ಹೊದೆಗೂಡು (ಕಕೂನ್‌). ತನ್ನ ಜೀವ ರಕ್ಷಿಸಿಕೊಳ್ಳಲು ಆತ ಹೇಳುವ ಕಥೆಯೇ ‘ರೂಪಾಂತರ’. ಅವುಗಳಲ್ಲಿ ಬೆಂಗಳೂರಿನ ಒಬ್ಬ ರೌಡಿಯ ಕಥೆಯಿದೆ, ಉತ್ತರ ಕರ್ನಾಟಕದ ಹಳ್ಳಿಯೊಂದರ ಅಜ್ಜ–ಅಜ್ಜಿಯ ಕನಸಿದೆ, ಓರ್ವ ಭಿಕ್ಷುಕಿಯ ವೇದನೆಯಿದೆ ಮತ್ತು ಮಾದಕವ್ಯಸನಿಯಾದ ಓರ್ವ ಯುವಕನ ಜೀವನದ ಕ್ಷಣಗಳಿವೆ. ಈ ಗುಚ್ಛವನ್ನು ಹೆಣೆಯುತ್ತಾ ಸಾಗಿದಂತೆ ಅವುಗಳೆಲ್ಲವೂ ಒಂದೆಡೆ ಸೇರಿದಾಗ ಕಥೆಗೊಂದು ಅಂತ್ಯ.

‘ರೂಪಾಂತರ’ ಮಿಥಿಲೇಶ್‌ ಎಡವಲತ್‌ ಬರೆದು ನಿರ್ದೇಶಿಸಿರುವ ಚಿತ್ರ. ಈ ಅಕ್ಷರಗಳಿಗೆ ಸಂಭಾಷಣೆ ಹಾಗೂ ಹೆಚ್ಚುವರಿ ಚಿತ್ರಕಥೆಯ ಮೂಲಕ ಜೀವತುಂಬಿದವರು ರಾಜ್‌ ಬಿ.ಶೆಟ್ಟಿ. ಹೀಗಾಗಿ ಒಟ್ಟು ಬರವಣಿಗೆಯಿಂದಲೇ ಸಿನಿಮಾ ನವೀನವಾಗಿದೆ. ಹಿಂದೆ ‘ಕಥಾಸಂಗಮ’ದಂತಹ ಕಥೆಗಳ ಗುಚ್ಛ ಹೊತ್ತ ಸಿನಿಮಾಗಳು ಬಂದಿದ್ದರೂ, ಅಂತ್ಯದಲ್ಲಿ ಎಲ್ಲ ಕಥೆಗಳನ್ನು ಸೇರಿಸಿ ಪೋಣಿಸಿದ ಚಿತ್ರಕಥೆಯಿರಲಿಲ್ಲ. ‘ರೂಪಾಂತರ’ ಈ ನಿಟ್ಟಿನಲ್ಲಿ ಹೊಸ ಪ್ರಯತ್ನ. ಹೀಗಾಗಿಯೇ ಇದು ಅಂತ್ಯದವರೆಗೂ ನೋಡುಗನನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಬರವಣಿಗೆಗೆ ತಕ್ಕ ನಟನೆಯೂ ಕಲಾವಿದರಿಂದ ಹೊಮ್ಮಿರುವುದು ಸಿನಿಮಾವನ್ನು ಉತ್ಕೃಷ್ಟವಾಗಿಸಿದೆ. ಸಿನಿಮಾದ ಆರಂಭದಲ್ಲಿ ಚಿತ್ರಕಥೆ ನಿಧಾನವೆನಿಸಿದರೂ, ನಾಲ್ಕು ಕಥೆಗಳಿಗೆ ಸಿನಿಮಾ ಹೊರಳುತ್ತಿದ್ದಂತೆ ಕುತೂಹಲ, ಭಾವನೆಗಳ ಹರಿವು ಹೆಚ್ಚುತ್ತದೆ.

ADVERTISEMENT

ಅಜ್ಜ–ಅಜ್ಜಿಯ ಪಾತ್ರ ನಿಭಾಯಿಸಿದ ಸೋಮಶೇಖರ್‌ ಬೋಳೆಗಾಂವ್‌ ಹಾಗೂ ಹನುಮಕ್ಕ ಅವರು ಇಡೀ ಸಿನಿಮಾದ ಜೀವಾಳ. ಅಪ್ಪಟ ಗ್ರಾಮೀಣ ಭಾಗದ ದಂಪತಿಯಂತೆ ನಗಿಸುತ್ತಾ, ದುಃಖ ಉಮ್ಮಳಿಸುತ್ತಾ ಸಾಗುವ ಇವರು ಸಿನಿಮಾದಲ್ಲಿ ಜೀವಿಸಿದ್ದಾರೆ. ಇವರ ಪಾತ್ರದ ಬರವಣಿಗೆ, ನಿರ್ವಹಣೆ ಮತ್ತು ಸಂಭಾಷಣೆ ಸಿನಿಮಾದಲ್ಲಿ ಮುಖ್ಯಭೂಮಿಕೆ ವಹಿಸಿದೆ. ಉಳಿದಂತೆ ರಾಜ್‌ ಬಿ.ಶೆಟ್ಟಿ, ಲೇಖಾ ನಾಯ್ಡು, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಒಂದೆರಡು ತರ್ಕಕ್ಕೆ ಸಿಗದ ದೃಶ್ಯಗಳು ಕಂಡರೂ ಅವು ಚಿತ್ರಕಥೆಯ ವೇಗದೊಂದಿಗೆ ಮರೆಯಾಗುತ್ತವೆ.

ಸಿನಿಮಾದ ಆರಂಭದಲ್ಲಿ ಗ್ರಾಫಿಕ್ಸ್‌ ಪ್ರಮುಖ ಪಾತ್ರವಹಿಸಿದ್ದು, ಕಥೆಗಳಿಗೆ ಸೂಕ್ತ ವೇದಿಕೆ ಹಾಕಿಕೊಟ್ಟಿವೆ. ಹಿನ್ನೆಲೆ ಸಂಗೀತವೂ ದೃಶ್ಯಗಳಿಗೆ ಇಂಬು ನೀಡಿದೆ. ರಾಜ್‌ ಬರೆದ ‘ಕಿತ್ತಾಳೆ..’ ಹಾಡು ಅರ್ಥಗರ್ಭಿತವಾಗಿದ್ದು, ಚೈತ್ರಾ ಜೆ.ಆಚಾರ್‌ ಧ್ವನಿ ಚಿತ್ರಮಂದಿರದೊಳಗೆ ಪ್ರತಿಧ್ವನಿಸುತ್ತದೆ. ಇಲ್ಲಿ ಯಾವ ಕಥೆಗಳಿಗೂ ಅಂತ್ಯವಿಲ್ಲ. ಪಾತ್ರಗಳು ರೂಪಾಂತರಗೊಳ್ಳುವ ಘಳಿಗೆಯಲ್ಲಿ ಕಥೆಗಳು ಅಂತ್ಯವಾಗುತ್ತದೆ. ಇದು ಸಿನಿಮಾಗೆ ಪೂರ್ಣವಿರಾಮ ನೀಡಿದರೂ ಆಲೋಚನೆಗಳಿಗೆ ಆದಿಯಾಗಿದೆ. ಕೀಟದಂತೆ ಹುಟ್ಟುವ ನಾವು ಹೊದೆಗೂಡು ಸೇರಿ ಅದರೊಳಗೆ ಸಾಯುತ್ತೇವೆಯೋ ಅಥವಾ ರೂಪಾಂತರಗೊಂಡು ಚಿಟ್ಟೆಯಾಗುತ್ತೇವೆಯೋ ಎನ್ನುವುದನ್ನು ಕಲಾತ್ಮಕವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ಕಥೆ ಹೇಳಲು ಆರಂಭಿಸಿದ ಆ ಅಜ್ಜನೇ ಕಥೆಯಲ್ಲಿರುವ ರೌಡಿಯೇ ಎಂಬ ಪ್ರಶ್ನೆಯೊಂದನ್ನೂ ಸಿನಿಮಾ ಉಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.