ADVERTISEMENT

ಸಾರಾ ವಜ್ರ ಸಿನಿಮಾ ವಿಮರ್ಶೆ: ತಲಾಖ್‌... ಶಕ್ತಿಗಳ ಅಂತರಂಗಕ್ಕೊಂದು ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 6:08 IST
Last Updated 20 ಮೇ 2022, 6:08 IST
‘ಸಾರಾವಜ್ರ’ ಚಿತ್ರದ ಪೋಸ್ಟರ್‌
‘ಸಾರಾವಜ್ರ’ ಚಿತ್ರದ ಪೋಸ್ಟರ್‌   

ಚಿತ್ರ: ಸಾರಾ ವಜ್ರ

ನಿರ್ದೇಶನ: ಆರ್ನಾ ಸಾಧ್ಯ (ಶ್ವೇತಾ)

ತಾರಾಗಣ: ಅನು ಪ್ರಭಾಕರ್‌,ರೆಹಮಾನ್‌ ಹಾಸನ್‌, ರಮೇಶ್‌ ಭಟ್‌,ಸುಧಾ ಬೆಳವಾಡಿ

ADVERTISEMENT

ಸಂಗೀತ: ವಿ. ಮನೋಹರ್‌

ನಿರ್ಮಾಣ: ಡಾ.ಎಂ.ದೇವೇಂದ್ರ ರೆಡ್ಡಿ

ಹೆಣ್ಣುಮಕ್ಕಳನ್ನು ಹೂವಿನಂತೆ ನೋಡುತ್ತೇವೆ, ವಜ್ರದಂತೆ ಕಾಪಾಡುತ್ತೇವೆ ಎಂದು ಹೇಳುವ ಮುಸ್ಲಿಂ ಧ್ವನಿಗಳು ವಾಸ್ತವದಲ್ಲಿ ಹಾಗಿವೆಯೇ ಎಂಬುದನ್ನು ವಿಸ್ತಾರವಾಗಿ ತೆರೆದಿಟ್ಟಿದೆ ಈ ‘ಸಾರಾ ವಜ್ರ’ ಚಿತ್ರ.

ವಜ್ರ ಬಿಡಿ, ಕೊನೆಗೆ ಹೆಣ್ಣಿನ ಬಾಳು ಸುಟ್ಟು ಇದ್ದಿಲಾಗುವಂತಹ ಪರಿಸ್ಥಿತಿ. ಏಕೆಂದರೆ ಯಾವ ನಿರ್ಧಾರಗಳೂ ಅವಳದಾಗಿರುವುದಿಲ್ಲ... ಹೀಗೆ ರೋಸಿ ಹೋದ ನಾಯಕಿ ಗಂಡಸರು ಹುಟ್ಟಿದ ತಕ್ಷಣ ಹೊಸಕಿ ಸಾಯಿಸಬೇಕು ಎನ್ನುವಷ್ಟರ ಮಟ್ಟಿಗೆ ಕಟುವಾಗುತ್ತಾಳೆ.

ಚಿತ್ರದ ಆರಂಭದಲ್ಲೇ ಸಾಹಿತಿ ಸಾರಾ ಅಬೂಬಕ್ಕರ್‌ ಅವರು ಈ ಚಿತ್ರದ ಮೂಲ ‘ವಜ್ರಗಳು’ (ಕಾದಂಬರಿ) ಹುಟ್ಟಿಕೊಂಡ ಬಗೆ ಹಾಗೂ ಅದರ ಆಶಯವನ್ನು ಹೇಳಿದ್ದಾರೆ.

ಹಾಜಿ (ರಮೇಶ್‌ ಭಟ್‌)– ಹಲೀಮಾ (ಸುಧಾ ಬೆಳವಾಡಿ) ದಂಪತಿಯ ಕೊನೆಯ ಪುತ್ರಿ ನಫೀಸಾಳನ್ನು (ಅನು ಪ್ರಭಾಕರ್‌) ಪೇಟೆಯ ಹುಡುಗನಿಗೇ ಕೊಟ್ಟು ಮದುವೆ ಮಾಡಿಕೊಡಬೇಕು ಅನ್ನುವ ತಾಯಿಯ ಆಸೆ. ಹುಡುಗಿಯ ಮುಖ ನೋಡದೇ ಮದುವೆಯಾಗಿ ಆಕೆ ಕಪ್ಪು ಎಂಬ ಕಾರಣಕ್ಕೆ ತಿರಸ್ಕರಿಸುವ ಬದ್ರುದ್ದೀನ್‌ (ರೆಹಮಾನ್‌ ಹಾಸನ್‌). ಗಂಡ ದೂರವಾದರೂ ಪರವಾಗಿಲ್ಲ, ತಲಾಖ್‌ ಹೇಳದಿರಲಿ ಎಂದು ಬಯಸುವ ನಾಯಕಿ, ಗರ್ಭಿಣಿಯನ್ನು ಪುರುಷ ವೈದ್ಯನೂ ನೋಡಬಾರದು ಎಂದು ಕೂಡಿ ಹಾಕುವ ನಾಯಕಿಯ ಎರಡನೇ ಪತಿಯ ಪುತ್ರ ಹುಸೇನ್‌ನ (ಪ್ರದೀಪ್‌ ಪೂಜಾರಿ) ಕ್ರೌರ್ಯ... ಹೀಗೆ ಹಲವು ಸಂಕಷ್ಟ, ತುಮುಲಗಳನ್ನು ಚಿತ್ರ ಚರ್ಚಿಸುತ್ತಲೇ ಹೋಗಿದೆ.

ತಲಾಖ್‌ ಹಿಂದಿರುವ ಆಸ್ತಿಯ ಆಸೆ, ವರ್ಣ ತಾತ್ಸಾರ, ಅಹಂ– ಅಂತಸ್ತುಗಳ ಸಂಘರ್ಷಗಳ ಆಯಾಮವೂ ಇಲ್ಲಿ ಕಾಣಿಸಿಕೊಂಡಿದೆ. ಹಿಜಾಬ್‌ ತೆಗೆದಿಟ್ಟು ಶಾಲೆಗೆ ಹೋಗುವ ನಫೀಸಾಳ ಸಾಕುಮಗಳು ತ್ರಿವಳಿ ತಲಾಖ್‌ ನಿಷೇಧಿಸಿದ ಸುಪ್ರೀಂ ಕೋರ್ಟ್‌ ಆದೇಶದಸುದ್ದಿ ಓದುವುದರೊಂದಿಗೆ ಸಿನಿಮಾ ಸುಖಾಂತ್ಯಗೊಳ್ಳುತ್ತದೆ. ಬಿಡುಗಡೆಯ ಭರವಸೆಯ ಬೆಳಕಿನ ಕಿರಣವಾಗಿ ಆ ದೃಶ್ಯ ಭಾಸವಾಗುತ್ತದೆ.

ಕನ್ನಡದಲ್ಲಿ ಸಂದೇಶಾತ್ಮಕ ಚಿತ್ರಗಳು ಬೇಕೆನ್ನುವವರು, ಇನ್ನೂ ಧಾರ್ಮಿಕ ಕಂದಾಚಾರಗಳನ್ನೇ ನಂಬಿರುವವರು ನೋಡಬೇಕಾದ ಚಿತ್ರ. ಪ್ರತಿರೋಧದ ಧ್ವನಿಯ ದೃಷ್ಟಿಯಿಂದಾದರೂ ಒಂದಿಷ್ಟು ಚಿಂತನೆಗಳನ್ನು ಈ ಸಿನಿಮಾ ತುಂಬುತ್ತದೆ. ಮುಸ್ಲಿಂ ಸಮುದಾಯದ ನಿರ್ಧಾರಕ ಶಕ್ತಿಗಳನ್ನು ಪ್ರಶ್ನಿಸುತ್ತಲೇ ಹೋಗುತ್ತದೆ. ವಿಷಯದ ದೃಷ್ಟಿಯಿಂದ ಒಳ್ಳೆಯ ಚಿತ್ರ.

ರಮೇಶ್‌ ಭಟ್‌, ಅನು ಪ್ರಭಾಕರ್‌, ಸುಧಾ ಬೆಳವಾಡಿ, ರೆಹಮಾನ್‌ ಹಾಸನ್‌, ದಿವಂಗತ ಶಂಖನಾದ ಅರವಿಂದ್‌ ಸಹಿತ ಎಲ್ಲರ ಅಭಿನಯ ಉತ್ತಮವಾಗಿದೆ. ಚಿತ್ರ ಭಾವನಾತ್ಮಕವಾಗಿ ತಟ್ಟುವಂತೆ ಮಾಡಿದ್ದಾರೆ ನಿರ್ದೇಶಕಿ. ಸಂಗೀತವೂ ಆರ್ದ್ರ ಭಾವಗಳನ್ನು ಸೃಷ್ಟಿಸಿದೆ.

ಭಾಷಾ ಸಂಯೋಜನೆ, ಬಳಕೆ ಮತ್ತು ಸಂಕಲನದಲ್ಲಿ ಚಿತ್ರ ಎಡವಿದೆ. ಚಿತ್ರದ ವಿಷಯ ಕರಾವಳಿಯ ಬ್ಯಾರಿ ಸಮುದಾಯವನ್ನು ಕೇಂದ್ರೀಕರಿಸಿದೆ. ಆದರೆ, ಅತ್ತ ಕರಾವಳಿ ಕನ್ನಡವೂ ಅಲ್ಲದ, ಇತ್ತ ಬೆಂಗಳೂರು ಕನ್ನಡವೂ ಅಲ್ಲದ ಭಾಷಾ ಶೈಲಿ, ಕನ್ನಡ ಶಬ್ದಗಳ ಮಧ್ಯೆ ತುರುಕುವ ಒಂದೊಂದು ಬ್ಯಾರಿ(!) ಭಾಷೆಯ ಶಬ್ದಗಳು ಪ್ರೇಕ್ಷಕನ ಮೂಡ್‌ಗೆ ಅಲ್ಲಲ್ಲಿ ತೊಡರೆನಿಸಿವೆ. ಸಂಕಲನಕಾರರಂತೂ ಅವಸರ ಮಾಡಿದ್ದಾರೆ. ಪಾತ್ರಗಳು ನಿಗದಿತ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಮೊದಲೇ ಸಂಭಾಷಣೆಗಳು ಕೇಳಿಸುವುದು ಇತ್ಯಾದಿ ಅಲ್ಲಲ್ಲಿ ಆಭಾಸ ಸೃಷ್ಟಿಸಿವೆ.

ಹರೇಕಳ – ಪಾವೂರಿನಲ್ಲಿ ಹರಿಯುವ ನೇತ್ರಾವತಿ, ಗದ್ದೆ, ತೋಟಗಳ ಹಸಿರನ್ನು ಕ್ಯಾಮೆರಾದಲ್ಲಿ ಇನ್ನಷ್ಟು ಚೆಂದವಾಗಿ ಕಾಣಿಸಬಹುದಿತ್ತು. ಸುಮಾರು 80 – 90ರ ದಶಕದ ಕಥೆಯನ್ನು ಅಂದಿನ ಶೈಲಿಯಲ್ಲೇ ತರಲು ಸಾಕಷ್ಟು ಕಸರತ್ತು ನಡೆದಿದೆ. ಹಾಗಾಗಿ ತಾಂತ್ರಿಕ ಆಯಾಮದಲ್ಲಿ ನೋಡುವುದಾದರೆ ನಿರ್ಮಾಣ ಸಂದರ್ಭದಲ್ಲಿದ್ದ ಇತಿಮಿತಿಗಳು ಢಾಳಾಗಿ ಕಾಣಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.