ADVERTISEMENT

‘ಭೈರತಿ ರಣಗಲ್‌’ ವಿಮರ್ಶೆ: ಶಿವರಾಜ್‌ಕುಮಾರ್‌ ನಟನೆಯ ಗತ್ತು ಮೇಳೈಸಿದ ರಣಗಲ್‌

ಅಭಿಲಾಷ್ ಪಿ.ಎಸ್‌.
Published 15 ನವೆಂಬರ್ 2024, 11:25 IST
Last Updated 15 ನವೆಂಬರ್ 2024, 11:25 IST
ಶಿವರಾಜ್‌ಕುಮಾರ್‌ 
ಶಿವರಾಜ್‌ಕುಮಾರ್‌    

‘ನಾನು ಮಾಡದೇ ಇರೋ ಕೊಲೆಯ ಐ ವಿಟ್ನೆಸ್‌ ಅಂತೆ’ ಎನ್ನುತ್ತಾ ‘ಭೈರತಿ ರಣಗಲ್‌’ ಎರಡು ಕಣ್ಣುಗುಡ್ಡೆಗಳಿದ್ದ ಬಾಟಲಿಯೊಂದನ್ನು ಟೇಬಲ್‌ ಮೇಲೆ ಇಟ್ಟಾಗ ‘ಮಫ್ತಿ’ ಸಿನಿಮಾದಲ್ಲಿ ಟೇಬಲ್‌ ಮೇಲಿಟ್ಟ ಎರಡು ಕತ್ತರಿಸಿದ ಕೈಗಳು ನೆನಪಾಗುತ್ತವೆ. ‘ಭೈರತಿ ರಣಗಲ್‌’ ಡೈಲಾಗ್‌ನಲ್ಲಿ ಅದೇ ಧಾಟಿ, ಅದೇ ತೀಕ್ಷ್ಣ ಕಣ್ಣುಗಳು. ನರ್ತನ್‌ ಈ ರೀತಿ ‘ಭೈರತಿ ರಣಗಲ್‌’ ಒಳಗೆ ‘ಮಫ್ತಿ’ಯನ್ನು ಹೆಣೆದಿದ್ದಾರೆ. 2017ರಲ್ಲಿ ತೆರೆಕಂಡ ಶ್ರೀಮುರಳಿ ನಟನೆಯ ‘ಮಫ್ತಿ’ಯ ಪ್ರೀಕ್ವೆಲ್‌ ಆಗಿರುವ ‘ಭೈರತಿ ರಣಗಲ್‌’ ಊಹಿಸಬಹುದಾದ ಕಥೆಯನ್ನು ಹೇಳಿದೆಯಾದರೂ ಶಿವರಾಜ್‌ಕುಮಾರ್‌ ನಟನೆಯ ಗತ್ತನ್ನು ಮತ್ತೆ ಮೇಳೈಸಿದೆ. 

‘ಮಫ್ತಿ’ಯಲ್ಲಿನ ‘ಭೈರತಿ ರಣಗಲ್‌’ ಎಂಬ ಪಾತ್ರದ ಹುಟ್ಟಿನ ಕಥೆಯನ್ನು ಈ ಸಿನಿಮಾ ಹೇಳಿದೆ. ರಮೇಶ್‌ ಅರವಿಂದ್‌ ಹಿನ್ನೆಲೆ ಧ್ವನಿಯಲ್ಲಿ ರೋಣಾಪುರ ಎಂಬ ಊರಿನಲ್ಲಿ 1985ರಲ್ಲಿ ಚಿತ್ರದ ಕಥೆ ಆರಂಭವಾಗುತ್ತದೆ. ಹನಿ ನೀರಿಗೂ ಒದ್ದಾಡುವ ಊರಿದು. ‘ಭೈರತಿ ರಣಗಲ್‌’ ಎಂಬ ಬಾಲಕ ಇದೇ ಊರಿನಾತ. ಆತನ ತಂದೆ ನೀರಿನ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಪ್ರತಿನಿತ್ಯವೂ ಮನವಿ ಸಲ್ಲಿಸುತ್ತಿರುತ್ತಾನೆ. ಇದಕ್ಕೆ ಪ್ರತ್ಯುತ್ತರ ದೊರಕದಾಗ ‘ರಣಗಲ್‌’ ಒಂದು ದಿನ ಸರ್ಕಾರಿ ಕಛೇರಿಗೇ ಬಾಂಬ್‌ ಇಟ್ಟು ಆರು ಅಧಿಕಾರಿಗಳನ್ನು ಹತ್ಯೆ ಮಾಡುತ್ತಾನೆ. 21 ವರ್ಷದ ಶಿಕ್ಷೆ ಅನುಭವಿಸಿ ‘ರಣಗಲ್‌’(ಶಿವರಾಜ್‌ಕುಮಾರ್‌) ಹೊರಬಂದ ನಂತರ ಕಥೆಯ ಆರಂಭ. ವಕೀಲನಾಗಿದ್ದ ‘ಭೈರತಿ ರಣಗಲ್‌’ ಅದಿರು ಸಾಮ್ರಾಜ್ಯದ ‘ಪರಾಂಡೆ’(ರಾಹುಲ್‌ ಬೋಸ್‌) ಎಂಬಾತನನ್ನು ಎದುರು ಹಾಕಿಕೊಂಡಾಗ ಕಥೆಗೆ ತಿರುವು. ವಕೀಲನಾಗಿ ರಕ್ಷಕನಾಗಿದ್ದ ‘ಭೈರತಿ ರಣಗಲ್‌’ ಏಕೆ ರಾಕ್ಷಸನಾಗಿ ತನ್ನ ‘ರಣಗಲ್‌ ಸಾಮ್ರಾಜ್ಯ’ವನ್ನು ವಿಸ್ತರಿಸಿದ ಎನ್ನುವುದೇ ಉಳಿದ ಕಥೆ.

‘ಮಫ್ತಿ’ಯಲ್ಲಿ ‘ಭೈರತಿ ರಣಗಲ್‌’ ಪಾತ್ರವನ್ನು ನರ್ತನ್‌ ಸೆಳೆಯುವಂತೆ ಕೆತ್ತಿದ್ದರು. ಈ ಸಿನಿಮಾದಲ್ಲಿ ಆ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ವಿಸ್ತರಿಸಿದ್ದಾರೆ. ಚಿತ್ರದ ಮೊದಲಾರ್ಧದ ಚಿತ್ರಕಥೆಗೆ ವೇಗವಿಲ್ಲ. ಕಾರ್ಮಿಕರ ಮೇಲೆ ಶ್ರೀಮಂತ ಮಾಲೀಕನ ದಬ್ಬಾಳಿಕೆ ಎಂಬ ಎಳೆಯನ್ನೇ ಇಲ್ಲೂ ಬಳಸಿಕೊಳ್ಳಲಾಗಿದೆ. ರಕ್ಷಕ ‘ಭೈರತಿ ರಣಗಲ್‌’ ಪ್ರವೇಶಕ್ಕೆ ಯಾವುದೇ ಆರ್ಭಟವಿಲ್ಲ. ಇದನ್ನು ಬಹಳ ಎಚ್ಚರಿಕೆಯಿಂದಲೇ ನಿರ್ದೇಶಕರು ನಿಭಾಯಿಸಿದ್ದಾರೆ. ನೇರವಾಗಿ ಶಿವರಾಜ್‌ಕುಮಾರ್‌ ಪರಿಚಯವಿದೆ. ದ್ವಿತೀಯಾರ್ಧಕ್ಕೆ ವೇದಿಕೆ ಹಾಕಿಕೊಡುವುದಕ್ಕೆ ನಿರ್ದೇಶಕರು ಇದನ್ನು ಬಳಸಿಕೊಂಡಿದ್ದಾರೆ. ಮಧ್ಯಂತರ ಆಗಮಿಸುತ್ತಿದ್ದಂತೆ ರಾಕ್ಷಸ ‘ಭೈರತಿ ರಣಗಲ್‌’ ತೆರೆಗೆ ಬಂದಾಗ ಆ ಪಾತ್ರದ ಗತ್ತು ಬದಲಾಗುತ್ತದೆ. ‘ಮಫ್ತಿ’ಯ ಶಿವರಾಜ್‌ಕುಮಾರ್‌ ಮತ್ತೆ ತೆರೆ ಮೇಲೆ ಮೇಳೈಸಿದ್ದಾರೆ. ಕಣ್ಣುಗಳಲ್ಲೇ ನಟಿಸಿದ್ದಾರೆ. ಸಾಹಸ ದೃಶ್ಯಗಳಲ್ಲಿ ಅವರ ವಯಸ್ಸು ಮರೆಯಾಗಿದೆ. ಭಾವನೆಗಳಲ್ಲಿ ಮಿಂದಿದ್ದಾರೆ. ಪಂಚ್‌ ಲೈನ್‌ಗಳಿಂದ ಕೂಡಿದ, ಅಭಿಮಾನಿಗಳನ್ನು ರೋಮಾಂಚನಗೊಳಿಸುವ, ಶಿಳ್ಳೆ–ಚಪ್ಪಾಳೆಯ ಸುರಿಮಳೆಗೈಯುವ ಹಲವು ದೃಶ್ಯಗಳು ದ್ವಿತೀಯಾರ್ಧದಲ್ಲಿವೆ. 

ADVERTISEMENT

ಟ್ರೇಲರ್‌, ಪೋಸ್ಟರ್‌ನಲ್ಲೇ ಶಿವರಾಜ್‌ಕುಮಾರ್‌ ವಕೀಲರ ಪಾತ್ರಕ್ಕೆ ಬಣ್ಣಹಚ್ಚಿರುವುದು ತಿಳಿದ ಕಾರಣ, ಜೈಲಿನೊಳಗೆ ಹೋದ ‘ರಣಗಲ್‌’ ಏನಾಗುತ್ತಾನೆ ಎನ್ನುವುದನ್ನು ಸಸ್ಪೆನ್ಸ್‌ ಆಗಿ ಉಳಿಸಿಕೊಳ್ಳಲು ಚಿತ್ರಕಥೆಗೆ ಸಾಧ್ಯವಾಗಿಲ್ಲ. ಜೊತೆಗೆ ತಂಗಿಯ ಗಂಡ ಕಟುಕ, ಆತನನ್ನು ‘ಭೈರತಿ ರಣಗಲ್‌’ ಕೊಲ್ಲುತ್ತಾನೆ ಎನ್ನುವುದು ಮೊದಲೇ ತಿಳಿದಿತ್ತು. ಹೀಗಾಗಿ ಆ ಪಾತ್ರದ ಜೊತೆಗೆ ವರದ (ಗೋಪಾಲಕೃಷ್ಣ ದೇಶಪಾಂಡೆ) ಎಂಬ ಪಾತ್ರವನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ ನರ್ತನ್‌. ‘ಮಫ್ತಿ’ಯಂತೆ ಈ ಸಿನಿಮಾದಲ್ಲಿ ಸೀಟಿನಂಚಿನಲ್ಲಿ ಕೂರಿಸುವಂಥ ಕಥೆಯಿಲ್ಲ. ‘ಭೈರತಿ ರಣಗಲ್‌’ ಪಾತ್ರಕ್ಕೇ ಒತ್ತುನೀಡಿ ಕಥೆ ಹೆಣೆಯಲಾಗಿದೆ. ತಂಗಿ ಹಾಗೂ ನಾಯಕಿಯ ಪಾತ್ರದ ಬರವಣಿಗೆಯನ್ನು ಗಟ್ಟಿಗೊಳಿಸಬಹುದಿತ್ತು. ಉಳಿದ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಸ್ಯದ ಅಂಶವೇ ಇಲ್ಲ. ಬಾಲಾಪರಾಧಿಯ ಶಿಕ್ಷೆಯ ಅವಧಿ, ‘ರಣಗಲ್‌’ಗೆ ಬಾಂಬುಗಳು ಎಲ್ಲಿ ಸಿಕ್ಕವು ಎನ್ನುವುದು ಮುಂತಾದ ಕೆಲ ದೃಶ್ಯಗಳು ಪ್ರಶ್ನೆಯಾಗಿಯೇ ಉಳಿಯುತ್ತವೆ.  

‘ಮಫ್ತಿ’ಗೆ ಹೋಲಿಸಿದರೆ ತಾಂತ್ರಿಕವಾಗಿ ಈ ಸಿನಿಮಾ ತುಂಬಾ ಚೆನ್ನಾಗಿದೆ. ನವೀನ್ ಕುಮಾರ್ ಛಾಯಾಚಿತ್ರಗ್ರಹಣ ಮತ್ತು ರವಿ ಬಸ್ರೂರು ಸಂಗೀತ, ಗುಣ ಕಲಾನಿರ್ದೇಶನ, ಚೇತನ್‌ ಡಿಸೋಜಾ ಸಾಹಸ ನಿರ್ದೇಶನ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿದೆ. ‘ಕಾವಲಿಗ’ ಹಾಡು ನೆನಪಿನಲ್ಲುಳಿಯುವಂಥದ್ದು. ‘ಭೈರತಿ ರಣಗಲ್‌’ಗಿಂತ ‘ಮಫ್ತಿ’ ಕಥೆಯಲ್ಲಿ, ಚಿತ್ರಕಥೆಯಲ್ಲಿ ಒಂದು ಹೆಜ್ಜೆ ಮುಂದಿತ್ತು ಎನ್ನಬಹುದು. ಕ್ಲೈಮ್ಯಾಕ್ಸ್‌ನಲ್ಲಿ ‘ಮಫ್ತಿ’ಯನ್ನು ಮತ್ತೆ ಮೆಲುಕು ಹಾಕಿಕೊಳ್ಳಬಹುದು. ‘ಭೈರತಿ ರಣಗಲ್‌’ ಸೀಕ್ವೆಲ್‌ನ ಕುರುಹು ಬಿಟ್ಟುಕೊಟ್ಟಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.