ಚಿತ್ರ: ಭಾವಪೂರ್ಣ
ನಿರ್ದೇಶನ: ಚೇತನ್ ಮುಂಡಾಡಿ
ನಿರ್ಮಾಣ: ಪ್ರಶಾಂತ್ ಅಂಜನಪ್ಪ
ತಾರಾಗಣ: ರಮೇಶ್ ಪಂಡಿತ್, ಮಂಜುನಾಥ್ ಹೆಗಡೆ, ಶೈಲಶ್ರೀ ಧರ್ಮೇಂದ್ರ ಅರಸ್ ಮತ್ತಿರರು
________________________
ತಾಳಗುಪ್ಪ ಹೋಬಳಿಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಧರ್ಮಣ್ಣ. ಸಾಯುವುದರೊಳಗೆ ತನ್ನದೊಂದು ಭಾವಚಿತ್ರ ತೆಗೆಸಿಕೊಳ್ಳಬೇಕು ಎಂಬುದು ಆತನ ಆಸೆ. ಅದು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನೇ ಕಥೆಯಾಗಿಸಿಕೊಂಡ ಚಿತ್ರ ‘ಭಾವಪೂರ್ಣ’. ಒಟ್ಟಾರೆ ಕಥೆ ಥಟ್ಟನೆ ಮರಾಠಿಯ ‘ಫೋಟೊ ಫ್ರೇಮ್’ ಸಿನಿಮಾವನ್ನು ನೆನಪಿಸುತ್ತದೆ. ‘ಫೋಟೊ’ದಲ್ಲಿ ಮಾಯಿ ಪಾತ್ರ ಮಾಡಿದ ನೀನಾ ಕುಲಕರ್ಣಿ ಅವರಿಗೆ ಛಾಯಾಚಿತ್ರ ತೆಗೆಸಿಕೊಳ್ಳಲು ನಿಂತುಕೊಳ್ಳುವುದೆಂದರೆ ಒಂದು ರೀತಿ ಮುಜುಗರ. ಇಲ್ಲಿ ಧರ್ಮಣ್ಣನದ್ದು ತದ್ವಿರುದ್ಧದ ಪಾತ್ರ. ರಮೇಶ್ ಪಂಡಿತ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದು 20 ವರ್ಷ ಹಿಂದಿನ ಕಾಲಘಟ್ಟದ ಕಥೆ. ಅದಕ್ಕೆ ಬೇಕಾದ ಸನ್ನಿವೇಶಗಳನ್ನು ನಿರ್ದೇಶಕರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರೀಕರಣದ ಸ್ಥಳ ಮತ್ತು ಛಾಯಾಗ್ರಾಹಕ ಪ್ರಸನ್ನ ಅವರ ಕ್ಯಾಮರಾ ಕೆಲಸ ಇಡೀ ಚಿತ್ರದ ಹೈಲೆಟ್. ಕಲಾ ನಿರ್ದೇಶಕರೂ ಆಗಿರುವ ಚಿತ್ರದ ನಿರ್ದೇಶಕ ಚೇತನ್ ಮುಂಡಾಡಿ ಚಿತ್ರದ ಪ್ರತಿ ಫ್ರೇಮ್ ಅನ್ನು ವರ್ಣಮಯವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ವರ್ಣಮಯ ಜಗತ್ತಿನಿಂದಾಗಿಯೇ ಎಷ್ಟೋ ಕಡೆ ಕಥೆ ನಡೆಯುತ್ತಿರುವುದು ಪ್ರಸ್ತುತದಲ್ಲಿ ಎಂಬ ಭಾವ ಮೂಡುತ್ತದೆ. ಸಾಕಷ್ಟು ಕಡೆ ಹಳೆಯ ಕಾಲದ ಕೆಲವಷ್ಟು ವಸ್ತುಗಳನ್ನು ತೋರಿಸಲೆಂದೇ ದೃಶ್ಯ ಹೆಣೆದಂತೆ ಭಾಸವಾಗುತ್ತದೆ. ಇದು ಚಿತ್ರಕಥೆಯ ಉದ್ದೇಶವನ್ನೇನೂ ಈಡೇರಿಸುವುದಿಲ್ಲ.
ಫೋಟೊ ತೆಗೆಸಿಕೊಳ್ಳಲು ಧರ್ಮಣ್ಣ ಪರದಾಡುವುದರ ನಡುವೆ ಶೇಖರಿ, ರಾಧಾಳ ಒಂದು ಪುಟ್ಟ ಪ್ರೇಮಕಥೆಯ ಟ್ರ್ಯಾಕ್ ತೆರೆದುಕೊಳ್ಳುತ್ತದೆ. ಈ ಕಥೆಯಲ್ಲಿ ನಿರ್ದೇಶಕರು ಇಂಪಾದ ಹಾಡುಗಳಿಗೂ ಜಾಗ ನೀಡಿದ್ದಾರೆ. ಆದರೆ, ಚಿತ್ರದ ಮುಖ್ಯವಾದ ಕಥೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ; ಸುಮ್ಮನೆ ತುರುಕಿದಂತೆ ಭಾಸವಾಗುತ್ತದೆ.
ರಮೇಶ್ ಪಂಡಿತ್, ಮಂಜುನಾಥ್ ಹೆಗಡೆಯವರಂತಹ ನುರಿತ ಕಲಾವಿದರಿಂದ ಸಹಜ ನಟನೆ ತೆಗೆಸುವಲ್ಲಿ ನಿರ್ದೇಶಕರು ಕೆಲವೆಡೆ ಎಡವಿದಂತಿದೆ. ಸದಾ ಬೈಯುತ್ತಲೇ ಇರುವ ಧರ್ಮಣ್ಣನ ಪತ್ನಿಯ ಪಾತ್ರ, ಅಸಹಜವೆನಿಸುವ ಮಂಜುನಾಥ್ ಹೆಗಡೆಯವರ ಹಾಸ್ಯ ಒಂಚೂರು ಕಿರಿಕಿರಿಯನ್ನೇ ಮೂಡಿಸುತ್ತದೆ. ಕಥೆಯ ಸ್ವರೂಪ, ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಚಿತ್ರಕಥೆ ಒಂದು ‘ಭಾವಪೂರ್ಣ’ ಪಯಣ ಮಾಡಿಸುವಷ್ಟು ಗಟ್ಟಿಯಾಗಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.