ಸಿನಿಮಾ: 777 ಚಾರ್ಲಿ(ಕನ್ನಡ)
ನಿರ್ದೇಶನ: ಕಿರಣ್‌ರಾಜ್ ಕೆ.
ನಿರ್ಮಾಪಕ: ರಕ್ಷಿತ್ ಶೆಟ್ಟಿ, ಜಿ.ಎಸ್.ಗುಪ್ತಾ
ತಾರಾಗಣ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ಬಾಬಿ ಸಿಂಹ, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ
***
ಮಹಾಭಾರತದ ಕಥೆ ನೆನಪಿದೆಯೇ? ಸ್ವರ್ಗಾರೋಹಣ ಪರ್ವದಲ್ಲಿ ಸ್ವರ್ಗಕ್ಕೆ ನಾಯಿಗೆ ಪ್ರವೇಶವನ್ನು ಇಂದ್ರ ನಿರಾಕರಿಸಿದಾಗ ‘ನಾಯಿಗೆ ವಾಸದ ಅವಕಾಶವಿಲ್ಲದ ನಿನ್ನ ಸ್ವರ್ಗ ನನಗೂ ಬೇಡ’ ಎಂದು ತಿರಸ್ಕರಿಸಿದಾತ ಧರ್ಮರಾಯ. ಈ ಚಿತ್ರದಲ್ಲಿರುವ ನಾಯಕನೂ ‘ಕಲಿಯುಗದ ಧರ್ಮರಾಯ’. ಆತನ ಹೆಸರೂ ‘ಧರ್ಮ’(ರಕ್ಷಿತ್ ಶೆಟ್ಟಿ). ಆದರೆ ವ್ಯತ್ಯಾಸವೊಂದೇ, ಈ ಕಲಿಯುಗದ ‘ಧರ್ಮ’ನಿಗೆ ‘ಭೂಲೋಕದ ಸ್ವರ್ಗ’ದ ದಾರಿ ತೋರಿಸಿದ್ದು ‘ಚಾರ್ಲಿ’ ಹೆಸರಿನ ನಾಯಿ.
ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಕಟ್ಟಿಕೊಡುವ ಹಲವು ಸಿನಿಮಾಗಳು ಹಾಲಿವುಡ್‌ನಲ್ಲಿ ಬಂದಿವೆ. ‘ಹಚಿ’ ಇಂಥ ಸಿನಿಮಾಗಳಲ್ಲೊಂದು. ಮಾಲೀಕ ನಿಧನನಾದರೂ ಆತನ ಬರುವಿಕೆಗಾಗಿಯೇ ಹತ್ತು ವರ್ಷ ರೈಲು ನಿಲ್ದಾಣ ಪ್ರವೇಶದ್ವಾರದಲ್ಲಿ ಕಾದುಕೂರುವ ‘ಹಚಿ’ ಹಲವು ವಾಸ್ತವವನ್ನು ತೆರೆದಿಡುತ್ತದೆ. ‘777 ಚಾರ್ಲಿ’ ಕಥೆಯೂ ಈ ಎಳೆಯನ್ನೇ ಹೊಂದಿದೆ. ಕಥೆ ಕೊಂಚ ಭಿನ್ನವಷ್ಟೆ.
‘ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್’– ಬಾಲ್ಯದಲ್ಲೇ ಹೆತ್ತವರು, ತಂಗಿಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡ ‘ಧರ್ಮ’ನ ಜೀವನ ಸುತ್ತುತ್ತಿರುವುದು ಇವುಗಳ ನಡುವೆಯಷ್ಟೇ. ಈತನದು ‘ಚೌಕಟ್ಟಿನ ಜೀವನ’. ದೇವರ ಮೇಲೆ ನಂಬಿಕೆ ಇಲ್ಲ, ಆಪ್ತರೂ ಇಲ್ಲ. ಈತ ಫ್ಯಾಕ್ಟರಿಯಲ್ಲಿ ಒಂದೂ ದಿನ ರಜೆ ತೆಗೆದುಕೊಳ್ಳದೆ ಕೆಲಸ ಮಾಡುವಾತ. ಇಂಥ ‘ಧರ್ಮಸಂಕಟದ’ ಬದುಕು ಬದುಕುತ್ತಿರುವವನ ಬಾಳಿಗೆ ಅಚಾನಕ್ ಆಗಿ ಪ್ರವೇಶಿಸುವವಳು ಚಾರ್ಲಿ. ‘ದೊಡ್ಡ ದುರದೃಷ್ಟ’ವಾಗಿ ತನ್ನ ಜೀವನಕ್ಕೆ ಪ್ರವೇಶಿಸಿದವಳನ್ನು ಧರ್ಮ ಮೊದಲು ಕಡೆಗಣಿಸುತ್ತಾನೆ. ಆದರೆ ಚಾರ್ಲಿ ಮೇಲೆ ಪ್ರೀತಿ ಹುಟ್ಟುವಂಥ ಘಟನೆಗಳು ನಡೆಯುತ್ತವೆ. ಧರ್ಮನ ಕಲ್ಲು ಹೃದಯ ಐಸ್‌ಕ್ರೀಂನಂತೆ ಕರಗುತ್ತದೆ.ಮುಗುಳುನಗೆಯನ್ನೂ ಬೀರದ ಧರ್ಮ ಮನಸ್ಸುಬಿಚ್ಚಿ ನಗುವಷ್ಟು, ಆನಂದಿಸುವಷ್ಟು ಕಾರಣ ನೀಡುತ್ತಾಳೆ ಚಾರ್ಲಿ. ಕಪ್ಪು–ಬಿಳುಪಿನಲ್ಲೇ ಜೀವನಕ್ಕೆ ಬಣ್ಣತುಂಬಿದ ನಟ ಚಾರ್ಲಿ ಚಾಪ್ಲಿನ್ ಧರ್ಮನ ಜೀವನಕ್ಕೂ ಊರುಗೋಲಾಗುತ್ತಾನೆ. ಇನ್ನೇನು ಮಧ್ಯಂತರ ಹತ್ತಿರವಾಗುತ್ತಿದಂತೆ ಕಥೆಗೊಂದು ತಿರುವು. ಈ ತಿರುವೇ ದ್ವಿತೀಯಾರ್ಧದಲ್ಲಿ ಮೈಸೂರಿನ ಕಾಲೊನಿಯೊಂದರಿಂದ ಕಾಶ್ಮೀರದತ್ತ ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಪಯಣಕ್ಕೆ ಕಾರಣವಾಗುತ್ತದೆ.
ಕಿರಣ್‌ರಾಜ್ ಅವರ ಚೊಚ್ಚಲ ಸಿನಿಮಾ ಇದು. ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಇದಕ್ಕೆ ಕೈಜೋಡಿಸಿರುವ ಕಾರಣ ಚೊಚ್ಚಲ ಚಿತ್ರದ ನ್ಯೂನತೆಗಳು ಇಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಕಿರಣ್‌ರಾಜ್ ಪರಿಪೂರ್ಣವಾಗಿ ತೊಡಗಿಸಿಕೊಂಡು ಸಿನಿಮಾ ಕಟ್ಟಿರುವುದು ಪ್ರತಿದೃಶ್ಯದಲ್ಲೂ ಕಾಣಿಸುತ್ತದೆ. ನಟನೆಯಲ್ಲಿ ರಕ್ಷಿತ್ ಶೆಟ್ಟಿ ಮುಂದಡಿ ಇಟ್ಟಿದ್ದಾರೆ. ಧರ್ಮನ ಪರದಾಟ, ಸಂಕಟ ಕಟ್ಟಿಕೊಡುತ್ತಾ, ದ್ವಿತೀಯಾರ್ಧದಲ್ಲಿ ತಾವೇ ‘ಧರ್ಮ’ ಎನ್ನುವಷ್ಟರಮಟ್ಟಿಗೆ ಪಾತ್ರದೊಳಗಿಳಿದಿದ್ದಾರೆ. ಚಾರ್ಲಿಯನ್ನು ಅದ್ಭುತವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಆಕೆಯ ತುಂಟಾಟ, ಚೆಲ್ಲಾಟಗಳೆಲ್ಲವೂ ಪ್ರೇಕ್ಷಕರಿಗೆ ಹಿಡಿಸುತ್ತದೆ. ಚಾರ್ಲಿ ತಿಂಡಿಪೋತಿ ಎಂದು ಕಿರಣ್‌ರಾಜ್ ಮೊದಲೇ ಹೇಳಿದ್ದರು. ಬಗೆಬಗೆಯ ಆಹಾರ ನೀಡಿದರಷ್ಟೇ ಆಕೆ ಹೇಳಿದ ಹಾಗೆ ಕೇಳುತ್ತಿದ್ದಳು ಎನ್ನುವುದಕ್ಕೆ ಪೂರಕವಾಗಿ ಹಲವು ದೃಶ್ಯಗಳು ಇಲ್ಲಿ ಸೆರೆಯಾಗಿವೆ.
ರಾಜ್ ಬಿ.ಶೆಟ್ಟಿ ಪಾತ್ರ ಇಲ್ಲಿ ಉಲ್ಲೇಖಾರ್ಹ. ಪಶುವೈದ್ಯ ಅಶ್ವಿನ್ ಕುಮಾರ್ ಆಗಿ ಕಾಣಿಸಿಕೊಳ್ಳುವ ರಾಜ್ ಪ್ರತಿ ದೃಶ್ಯದಲ್ಲೂ ನಗಿಸುತ್ತಾರೆ. ಅತಿಥಿ ಪಾತ್ರದಲ್ಲಿ ಕೆಲ ಸಮಯ ತೆರೆಮೇಲೆ ಕಾಣಿಸಿಕೊಳ್ಳುವ ಬಾಬಿ ಸಿಂಹ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟಿ, ದಿವಂಗತ ಭಾರ್ಗವಿ ನಾರಾಯಣ್, ಬೆಂಗಳೂರು ನಾಗೇಶ್, ಶಾರ್ವರಿ ನಟನೆ ಮನಸ್ಸು ತಟ್ಟುತ್ತದೆ. ನಟಿ ಸಂಗೀತಾ ಶೃಂಗೇರಿ ಹಾಗೂ ಡ್ಯಾನಿಷ್ ಸೇಟ್ ಪಾತ್ರಗಳು ಕಥೆಯ ನೆಪಕ್ಕಷ್ಟೇ.ನಗರಗಳಲ್ಲಿ ಶ್ವಾನಗಳ ಮೇಲಿನ ಅತಿಯಾದ ಪ್ರೀತಿಯ ದುಷ್ಪರಿಣಾಮ, ವಾಸ್ತವದಲ್ಲೂ ಚಿತ್ರತಂಡ ಎದುರಿಸಿದ ಶ್ವಾನಗಳಿಗೆ ಪ್ರವೇಶ ನೀಡದ ಹೋಟೆಲ್‌ಗಳ ನೀತಿಯನ್ನು ಪರೋಕ್ಷವಾಗಿ ಪ್ರಶ್ನಿಸುತ್ತಾ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಮೊದಲಾರ್ಧದಲ್ಲಿ ಸಂಭಾಷಣೆ ಮೇಲುಗೈ ಸಾಧಿಸಿದೆ. ದ್ವಿತೀಯಾರ್ಧದ ಭಾವನಾತ್ಮಕ ಪಯಣ ಕೊಂಚ ಸುದೀರ್ಘವೆಂದೆನಿಸಿದರೂ, ನೋಬಿನ್ ಪೌಲ್ ಸಂಗೀತ, ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೈಚಳಕ ಪ್ರೇಕ್ಷಕನ್ನು ಹಿಡಿದಿಡುತ್ತದೆ. ಕಾಶ್ಮೀರ ‘ಸ್ವರ್ಗ’ವಾಗಿ ಕಣ್ಮುಂದೆ ಹರಡಿಕೊಳ್ಳುತ್ತದೆ. ‘ದೊಡ್ಡಮ್ಮ’ನ ಆರ್ಭಟದಿಂದ ಹೊರಬರಲಿಚ್ಛಿಸುತ್ತಿರುವ ಪ್ರೇಕ್ಷಕರಿಗೆ ಇಂಥ ಸರಳ ಕಥೆಯ ಸಿನಿಮಾವೊಂದು ಅಗತ್ಯವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.