ADVERTISEMENT

ವಿಕ್ರಾಂತ್ ರೋಣ ಸಿನಿಮಾ ವಿಮರ್ಶೆ: ಕಮರೊಟ್ಟು ಕಾಂಡ–ಭಾಗ ಎರಡು

ವಿಶಾಖ ಎನ್.
Published 28 ಜುಲೈ 2022, 10:35 IST
Last Updated 28 ಜುಲೈ 2022, 10:35 IST
ಸುದೀಪ್‌ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌
ಸುದೀಪ್‌ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌   

ಚಿತ್ರ: ವಿಕ್ರಾಂತ್ ರೋಣ (ಕನ್ನಡ)
ನಿರ್ಮಾಣ: ಭೌಮಿಕ್ ಗೊಂಡಾಲಿಯಾ, ಶಾಲಿನಿ ಜಾಕ್ ಮಂಜು, ಅಲಂಕಾರ್ ಪಾಂಡಿಯನ್
ನಿರ್ದೇಶನ: ಅನೂಪ್ ಭಂಡಾರಿ
ತಾರಾಗಣ: ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂದನ್ ರಾವ್, ಜಾಕ್ವೆಲಿನ್ ಫರ್ನಾಂಡಿಸ್.

***

ಇಂಡಿಯಾನಾ–ಜೋನ್ಸ್ ತರಹ ಸುದೀಪ್ ಪ್ರಕಟಗೊಳ್ಳುವ ಹೊತ್ತಿಗೆ ನಿರ್ದೇಶಕ ಅನೂಪ್ ಭಂಡಾರಿ ಕಮರೊಟ್ಟುವಿನೊಳಗೆ ಪ್ರೇಕ್ಷಕರನ್ನು ಬಲವಂತವಾಗಿ ಎಳೆದು ಕೂರಿಸಿಕೊಳ್ಳತೊಡಗಿರುತ್ತಾರೆ. ಇದು ಕೂಡ ‘ರಂಗಿತರಂಗ’ದ ಇನ್ನೊಂದು ಆವೃತ್ತಿಯೇ ಎಂಬ ಅಂದಾಜನ್ನು ಅವರು ಕೊನೆಗೂ ಸುಳ್ಳಾಗಿಸುವುದಿಲ್ಲ.

ADVERTISEMENT

ನಿರ್ದೇಶಕರ ತಲೆಯೊಳಗೆ ಹೊಕ್ಕಿರುವ ಗುಡ್ಡದ ಭೂತ ಇಲ್ಲಿ ಬ್ರಹ್ಮರಾಕ್ಷಸ. ಜನಪದೀಯವಾಗಿ ಕಥೆ ಹೇಳುವ ಉಮೇದಿಗೆ ಥ್ರಿಲ್ಲರ್ ಹಾಗೂ ಸಸ್ಪೆನ್ಸ್‌ನ ಸಿಂಗಾರ. ಮೇಲಾಗಿ 3ಡಿ ಕನ್ನಡಕದಿಂದ ದೃಶ್ಯಗಳು ನೋಟಕ್ಕಿನ್ನೂ ಹತ್ತಿರ ಎಟಕುವಂಥ ತಂತ್ರಗಾರಿಕೆ.

‘ವಿಕ್ರಾಂತ್ ರೋಣ’ ಕಥಾಹೂರಣದಿಂದಾಗಲೀ, ಶಿಲ್ಪದಿಂದಾಗಲೀ ಹಿಡಿದು ಕೂರಿಸುವುದಿಲ್ಲ. ಸುದೀಪ್ ಸಪೂರ ದೇಹದ ಕದಲಿಕೆಗಳು, ಇರಿಯುವ ನೋಟ ಹಾಗೂ ಕಂಚಿನ ಕಂಠವನ್ನೇ ಬಂಡವಾಳ ಮಾಡಿಕೊಳ್ಳಲು ಅದು ಹೆಣಗಾಡಿದೆ.

ಸಿನಿಮಾ ಮೊದಲರ್ಧದ ಸಾರ ಪ್ರೇಕ್ಷಕರಿಗೆ ಕಥನಪ್ರವೇಶ ಮಾಡಿಸಲು ಇನ್ನಿಲ್ಲದಂತೆ ಹೆಣಗಾಡುತ್ತದೆ. ಬಿಡಿಬಿಡಿಯಾಗಿ ನೋಡಿಸಿಕೊಳ್ಳುವ ದೃಶ್ಯಗಳನ್ನು ಹಿಡಿದಿಟ್ಟಿರುವ ಸೂತ್ರ ಸಡಿಲಸ್ಪಷ್ಟ. ಏನೇನೂ ಆಗುತ್ತಲೇ ಇಲ್ಲವಲ್ಲ ಎಂದೆನಿಸುವುದೇ ‘ಪರಿಣಾಮ’. ಮಧ್ಯಂತರದ ನಂತರ ಅನೂಪ್ ಭಂಡಾರಿ ‘ರಂಗಿತರಂಗ’ ಎರಡನೇ ಆವೃತ್ತಿಯ ಬಂಧದಲ್ಲಿ ಕೂರಿಸಿಕೊಳ್ಳುತ್ತಾರೆ. ಮೊದಲ ಆವೃತ್ತಿಯಲ್ಲಿ ಕೊಲೆಯಾಗುವವರು ಗರ್ಭಿಣಿಯರು. ಇದರಲ್ಲಿ ಮಕ್ಕಳು. ಅದಕ್ಕೊಂದು ತರ್ಕ ದಕ್ಕಿಸಿಕೊಡುವುದು ಕೂಡ ಇಲ್ಲಿ ಕಷ್ಟವಾಗಿದೆ. ಕೊನೆಗೆ ಸೇಡಿನ ಕಥನವಾಗಿ ನಿರ್ದೇಶಕರು ಕಥಾಹಂದರವನ್ನು ಬಗ್ಗಿಸಬೇಕಾಗಿ ಬಂದಿರುವುದಕ್ಕೂ ಅದುವೇ ಕಾರಣ.

ಸಿನಿಮಾದಲ್ಲಿ ಮಳೆಕಾಡಿದ್ದರೂ ಅದು ಕೃತಕ. ಮಕ್ಕಳಿದ್ದರೂ ಹುಟ್ಟದು ಮರುಕ. ಸುದೀಪ್ ಜತೆ ಸದಾ ಇರುವ ಅವರ ಮಗಳ ಮಾತು ಹಾಗೂ ಕೊನೆಯಲ್ಲಿ ಆ ಮಗುವಿನ ನಿಜ ಅಸ್ತಿತ್ವವನ್ನು ಅನಾವರಣಗೊಳಿಸುವ ದೃಶ್ಯದ ತಂತ್ರಗಾರಿಕೆ ಆಸಕ್ತಿಕರ. ಭಾವುಕವಾಗಿಯೂ ಅದು ಇನ್ನೂ ಗಟ್ಟಿಯಾಗಬೇಕಿತ್ತು.

ಸುದೀಪ್ ಇರುವ ದೃಶ್ಯಗಳಿಗೆಲ್ಲ ತೋರಣ ಕಟ್ಟುವ ಗೊಡವೆಗೆ ನಿರ್ದೇಶಕರು ಬಿದ್ದಿದ್ದಾರೆ. ಅಂತಿಮ ಸಾಹಸದ ದೃಶ್ಯಗಳಲ್ಲಿ ಡ್ರೋನ್ ಕ್ಯಾಮೆರಾ ಕಣ್ಣಿನ ಅತಿಯಾಟದಲ್ಲಿ (ಸಿನಿಮಾಟೊಗ್ರಫಿ: ವಿಲಿಯಂ ಡೇವಿಡ್) ರೋಚಕತೆಯೇ ಇಲ್ಲವಾಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕಥನಾವಕಾಶಕ್ಕೆ ಪೂರಕವಾಗಿದೆ. ಹಾಡುಗಳಲ್ಲೂ ಅವರ ಕಸುಬುದಾರಿಕೆ ಕಾಣುತ್ತದೆ. ‘ರಕ್ಕಮ್ಮ’ ಹಾಡಿನಲ್ಲಿನ ಸುದೀಪ್–ಜಾಕ್ವೆಲಿನ್ ನೃತ್ಯಲಾಲಿತ್ಯ, ಗಂಭೀರವಾದ ಗೆರೆಗಳನ್ನೇ ಹೆಚ್ಚಾಗಿ ಮೂಡಿಸುವ ಸಿನಿಮಾದಲ್ಲಿನ ರಿಲೀಫ್.

ಸುದೀಪ್ ಹಿಂದೆ ತಾವು ನಡೆದ ಪಥದಿಂದ ಆಚೆ ಬಂದು, ಈ ಪಾತ್ರವನ್ನು ಒಪ್ಪಿಕೊಂಡಿರುವುದಕ್ಕೆ ಶಹಬ್ಬಾಸ್ ಹೇಳಬೇಕು. ಅಭಿನಯದಲ್ಲೂ ಅವರು ತಮ್ಮತನದ ರುಜು ಹಾಕಿದ್ದಾರೆ. ಪ್ರಮುಖ ಪಾತ್ರಧಾರಿ ನಿರೂಪ್ ಭಂಡಾರಿ ‘ರಂಗಿತರಂಗ’ದಂತೆ ಇಲ್ಲಿ ಗಮನ ಸೆಳೆಯುವುದಿಲ್ಲ. ನೀತಾ ಮುದ್ದುಮುಖ ಕಣ್ಣು ಕೀಲಿಸಿಕೊಳ್ಳುತ್ತದೆ.

ಒಂದೇ ಜಾಯಮಾನದ ಎರಡು ಸಿನಿಮಾಗಳನ್ನು ಮಾಡುವುದು ಎಂತಹ ನಿರ್ದೇಶಕನಿಗೂ ಸವಾಲೇ. ಅನೂಪ್ ಭಂಡಾರಿ ಈ ಸವಾಲಿಗೆ ಎದೆಗೊಡಲು ಎಷ್ಟೆಲ್ಲ ಚಡಪಡಿಸಿದ್ದಾರೆ ಎನ್ನುವುದಕ್ಕೆ ಚಿತ್ರದಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.