ADVERTISEMENT

Maamannan Movie Review| ದಮನಿತರ ದಾವಾಗ್ನಿಗೆ ರೂಪಕದ ಇಂಧನ

ವಿಶಾಖ ಎನ್.
Published 29 ಜೂನ್ 2023, 23:31 IST
Last Updated 29 ಜೂನ್ 2023, 23:31 IST
‘ಮಾಮಣ್ಣನ್’ ಸಿನಿಮಾ ಪೋಸ್ಟರ್
‘ಮಾಮಣ್ಣನ್’ ಸಿನಿಮಾ ಪೋಸ್ಟರ್   

ಚಿತ್ರ: ಮಾಮಣ್ಣನ್ (ತಮಿಳು)

ನಿರ್ಮಾಣ: ಉದಯನಿಧಿ ಸ್ಟಾಲಿನ್

ನಿರ್ದೇಶನ: ಮಾರಿ ಸೆಲ್ವರಾಜ್

ADVERTISEMENT

ತಾರಾಗಣ: ವಡಿವೇಲು, ಫಹಾದ್ ಫಾಸಿಲ್, ಉದಯನಿಧಿ ಸ್ಟಾಲಿನ್, ಕೀರ್ತಿ ಸುರೇಶ್

ಚಿತ್ರಿಕೆ 1

‘ನಿನ್ನ ಅಪ್ಪ ನಮ್ಮ ಮನೆಯಲ್ಲಿ ಕೂರುವುದಿಲ್ಲ’ ಎಂದು ಪಾಳೇಗಾರನ ಗತ್ತಿನಲ್ಲೇ ರತ್ನವೇಲ್ ಹೇಳುತ್ತಾನೆ. ಮಗ ಅತಿವೀರನ್‌ಗೆ ಅದನ್ನು ಕೇಳಿ ಪರಮಾಶ್ಚರ್ಯ. ಆ ಭಾಗದ ಶಾಸಕನಾದ ತನ್ನ ತಂದೆ ಮೇಲ್ಜಾತಿಯವರ ಮನೆಯಲ್ಲಿ ಈಗಲೂ ಕೂರಲಾರದ ಸ್ಥಿತಿ ಅವನೊಳಗಿನ ದಾವಾಗ್ನಿಗೆ ಇಂಬು. ಅಪ್ಪನನ್ನು ಅವನು ಕುರ್ಚಿ ಮೇಲೆ ಬಲವಂತವಾಗಿ ಕೂರಿಸುವುದಿಲ್ಲ, ಪ್ರತಿಷ್ಠಾಪಿಸುತ್ತಾನೆ. ತಿಕ್ಕಾಟದ ಕಿಡಿ ನೋಡ ನೋಡುತ್ತಲೇ ದೊಡ್ಡ ಬೆಂಕಿ.

ಚಿತ್ರಿಕೆ 2

ಕನಸು ಕಂಗಳ ಹುಡುಗರು ಬಾವಿಯೊಳಗೆ ಜಿಗಿದು ನಿಮಿಷಗಳಾಗಿವೆಯಷ್ಟೆ. ನಾಲ್ವರು ಬಂದು ಒಂದೇ ಸಮನೆ ಅವರ ಮೇಲೆ ಕಲ್ಲುಗಳ ಮಳೆಗರೆದದ್ದೇ ನೀರಲ್ಲಿ ಚೆಲ್ಲಿದ ರಕ್ತ. ಬಚಾವಾಗುವುದು ಒಬ್ಬನಷ್ಟೆ. ಅಸುನೀಗುವವರು ಮೂವರು. ಸಾಕ್ಷ್ಯಗಳಿದ್ದೂ ನ್ಯಾಯ ಸಲ್ಲದ ಪ್ರಕರಣ ಅದು. ರಾಜಕೀಯ ಪ್ರಭಾವಿ ನಾಯಕನಲ್ಲಿ ಮಾಮಣ್ಣನ್ ಗೋಗರೆದರೂ ಉಳಿಯುವುದು ಸೂತಕದ ಮೌನವಷ್ಟೆ.

ಚಿತ್ರಿಕೆ 3 ಹಾಗೂ ಮತ್ತೊಂದು‌

ತನ್ನದೇ ರೇಸಿನಲ್ಲಿ ಓಡುವ ನಾಯಿಯೊಂದನ್ನು ರತ್ನವೇಲ್ ಸಲಾಕೆಯಿಂದ ಬಡಿದು ಕೊಲ್ಲುತ್ತಾನೆ. ಅಂಥದ್ದೇ ಸಲಾಕೆ, ಅದೇ ಏಟು, ಅದೇ ರೀತಿ ಚಿಮ್ಮುವ ರಕ್ತ. ಜಾಗವೂ ಅದೇ. ಕಾಲ ಬೇರೆ. ಈ ಸಲ ಸಾಯುವುದು ದಲಿತ ಮುಖಂಡ ಎನ್ನುವುದು ಗಮನಾರ್ಹ ವ್ಯತ್ಯಾಸ.

ನಿರ್ದೇಶಕ ಮಾರಿ ಸೆಲ್ವರಾಜ್ ರೂಪಕಗಳನ್ನಿಟ್ಟು ದಮನಿತರ ಕಥೆಗಳ ಹೇಳುವ ಕ್ರಮ ಅಪ್ಪಿಕೊಂಡವರು. ಈ ಸಿನಿಮಾದಲ್ಲಿ ಪಾಳೇಗಾರನ ಮನಃಸ್ಥಿತಿಯವನು ಸಾಕಿದ ಬೇಟೆ ನಾಯಿಗಳಿವೆ. ದಮನದ ಭಟ್ಟಿಯಲ್ಲಿ ಕಾದ ಇಟ್ಟಿಗೆಗಳ ಗೂಡಿನಿಂದ ಎದ್ದು ಬಂದಂತೆ ಕಾಣುವ ಶಾಸಕನಿದ್ದಾನೆ. ತಲೆಮಾರುಗಳ ತುಳಿತಕ್ಕೆ ಹಿಂಸೆಯಿಂದಲೇ ಉತ್ತರ ಕೊಡಬೇಕೆಂಬ ಆವೇಶ ಆವಾಹಿಸಿಕೊಂಡಂತಹ, ಅವನ ಮಗನೂ ಇದ್ದಾನೆ. ಈ ಮಗ ಪ್ರೀತಿಯಿಂದ ಸಾಕಿರುವ ಹಂದಿಗಳನ್ನು ಬೇಟೆ ನಾಯಿಗಳು ಮುಗಿಸುವುದು ಒಂದು ರೂಪಕ. ಸಾಕಿದ ನಾಯಿಯ ಬಡಿದುಹಾಕಿದ ಸಲಾಕೆಯಲ್ಲೇ ಮನುಷ್ಯನನ್ನೂ ಅಷ್ಟೇ ಸಲೀಸಾಗಿ ಮುಗಿಸುವ ಪ್ರತಿಷ್ಠಾಪುರುಷನ ಅಹಂ ಇನ್ನೊಂದು ರೂಪಕ. ಕಪ್ಪು–ಬಿಳುಪಿನಲ್ಲಿ ಕಾಣುವ ಹಳೆಯ ದೌರ್ಜನ್ಯದ ಕಥನಗಳು ಹೊಸ ಕಾಲದಲ್ಲಿ ಬಣ್ಣ ಪಡೆದುಕೊಂಡಿವೆಯಷ್ಟೆ.

‘ಪರಿಯೇರುಂ ಪೆರುಮಾಳ್’ ತಮಿಳು ಸಿನಿಮಾದಲ್ಲಿ ಕರಿನಾಯಿಯ ಸಶಕ್ತ ರೂಪಕವನ್ನು ಮಾರಿ ಸೆಲ್ವರಾಜ್ ಬಳಸಿದ್ದರು. ‘ಕರ್ಣನ್’ನಲ್ಲಿ ದೇಸಿದೇವಿಯ ರೂಪಕವಿತ್ತು. ಇದರಲ್ಲಿ ಹಂದಿ–ನಾಯಿಯ ಕಚ್ಚಾಟವಿದೆ. ರಾಜಕೀಯ ಮೇಲಾಟ, ಮೀಸಲಾತಿಯ ಸೂಕ್ಷ್ಮವೂ ಉಂಟು.

ಮಾರಿ ಸೆಲ್ವರಾಜ್‌ಗೆ ಮೌನದ ಹಂಗಿದೆ. ವಡಿವೇಲು ನಿರ್ವಹಿಸಿರುವ ಮಾಮಣ್ಣನ್ ಪಾತ್ರ ಗಟ್ಟಿಯಾಗುವುದು ಅದೇ ಕಾರಣಕ್ಕೆ. ದಾವಾನಲವೆಲ್ಲ ಈ ಪಾತ್ರದ ಕಣ್ಣಲ್ಲಿ ಕುಣಿಯುತ್ತಲಿರುತ್ತದೆ. ವಡಿವೇಲು ತುಂಬುಗೆನ್ನೆಯ ಮೇಲಿನ ಕೆಂಪು ಕಣ್ಣುಗಳಲ್ಲಿ ತುಂಬಿಕೊಂಡ ತುಸುವೇ ಪಸೆ ದೌರ್ಜನ್ಯ ತೋರುವ ಕನ್ನಡಿಯೂ ಹೌದು. ಸಿನಿಮಾಗಳಲ್ಲಿ ವಡಿವೇಲು ಅವರ ಬೇರೆಯದೇ ಚಹರೆಗಳನ್ನು ನೋಡಿದ್ದ ನಮಗಿಲ್ಲಿ ಶಾಕ್. ಸ್ವಪ್ರತಿಷ್ಠೆಯ ಕೊಳದಲ್ಲಿ ಸದಾ ಮಿಂದುಬಂದಂತೆ ಕಾಣುವ ಫಹಾದ್ ಫಾಸಿಲ್ ಅವರ ದಾಳಿಕೋರತನವೂ ವಡಿವೇಲು ಎದುರು ಅಲ್ಲಲ್ಲಿ ಸೋತುಬಿಡುತ್ತದೆ. ಪಾತ್ರದ ಆಂಗಿಕ ಅಭಿನಯದಲ್ಲಿ ನಿರ್ದೇಶಕರು ಹೊರತೆಗೆಸಿರುವುದು ಏನು ಎನ್ನುವುದರ ಸೂಕ್ಷ್ಮಕ್ಕೂ ಇದು ಉದಾಹರಣೆ.

ಮೊದಲರ್ಧದಲ್ಲಿ ಪ್ರೇಕ್ಷಕನನ್ನು ಎಳೆದೆಳೆದುಕೊಂಡು ಕಥಾಪ್ರವೇಶ ಮಾಡಿಸುವ ಧಾಟಿ, ಎರಡನೇ ಅರ್ಧದಲ್ಲಿ ಹೋರಾಟದ ದೃಶ್ಯಾವಳಿಗಳ ಮೆರವಣಿಗೆಯಾಗಿ ಬದಲಾಗುತ್ತದೆ. ಇದು ಕೂಡ ಮಾರಿ ಸೆಲ್ವರಾಜ್ ಶೈಲಿ. ಚುನಾವಣಾ ರಾಜಕೀಯ ಹೋರಾಟದ ಸನ್ನಿವೇಶಗಳ ಬರವಣಿಗೆ ಹಾಗೂ ನಾಯಕಿ ಕೀರ್ತಿ ಸುರೇಶ್ ಪಾತ್ರ ಪೋಷಣೆ ಎರಡೂ ತೆಳುವಾಗಿದೆ. ಉದಯನಿಧಿ ಸ್ಟಾಲಿನ್ ಮುಖದಲ್ಲಿನ ಏಕೋಭಾವ ಉಳಿದ ನಟ–ನಟಿಯರ ಎದುರು ಮಂಕು ಕವಿಯುವಂತೆ ಮಾಡುತ್ತದೆ.

ತೇಣಿ ಈಶ್ವರ್ ಕ್ಯಾಮೆರಾ ಕಣ್ಣು ನಿರ್ದೇಶಕರ ರೂಪಕ ಭಾಷೆಯನ್ನು ಅರ್ಥ ಮಾಡಿಕೊಂಡಿದೆ. ಎ.ಆರ್. ರೆಹಮಾನ್ ವಾದ್ಯ ಸಂಯೋಜನೆ, ಹಾಡುಗಳ ಸಂಗೀತದ ಹೆಣಿಗೆಯಲ್ಲೂ ಇದೇ ಉದ್ದೇಶ ಈಡೇರಿರುವುದು ಸ್ಪಷ್ಟ.

ತಲೆಬಾಗಿಲಿಗೆ ಚಿಲಕ ಹಾಕಿ ಅಪ್ಪ, ಮಗ ಇಬ್ಬರೂ ಶಸ್ತ್ರಾಸ್ತ್ರ ಹಿಡಿದು ಕುರ್ಚಿಗಳ ಮೇಲೆ ಅಕ್ಕ–ಪಕ್ಕ ಕೂರುವ ದೃಶ್ಯ ಮಾರಿ ಸೆಲ್ವರಾಜ್ ಹೊಸ ಕಾಲದ ಹುಡುಗರ ತಲೆಗೂ ಹುಳ ಬಿಡಬಲ್ಲರೆನ್ನುವುದಕ್ಕೆ ಇನ್ನೊಂದು ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.