ADVERTISEMENT

ಮೌಢ್ಯದಲ್ಲಿ 'ತಾರಕಾಸುರ'ನ ಉರುಳಾಟ

ಕೆ.ಎಚ್.ಓಬಳೇಶ್
Published 23 ನವೆಂಬರ್ 2018, 10:03 IST
Last Updated 23 ನವೆಂಬರ್ 2018, 10:03 IST
‘ತಾರಕಾಸುರ’ ಚಿತ್ರದಲ್ಲಿ ವೈಭವ್ 
‘ತಾರಕಾಸುರ’ ಚಿತ್ರದಲ್ಲಿ ವೈಭವ್    

ಚಿತ್ರ: ತಾರಕಾಸುರ
ನಿರ್ಮಾಣ: ಎಂ. ನರಸಿಂಹಲು
ನಿರ್ದೇಶನ: ಚಂದ್ರಶೇಖರ್‌ ಬಂಡಿಯ‍ಪ್ಪ
ತಾರಾಗಣ: ವೈಭವ್, ಮಾನ್ವಿತಾ ಹರೀಶ್‌, ಸಾಧುಕೋಕಿಲ ಮತ್ತು ಎಂ.ಕೆ. ಮಠ

ಹೋಟೆಲ್‌ನಲ್ಲಿ ಕುಳಿತು ನಾಯಕಿ ಟೀ ಕುಡಿಯುತ್ತಾಳೆ. ಸಿಗರೇಟು ಸೇದುತ್ತಾಳೆ. ತಕ್ಷಣವೇ ಕೆಎಎಸ್‌ ಪರೀಕ್ಷೆ ಬರೆದು ತಹಶೀಲ್ದಾರ್‌ ಆಗುತ್ತಾಳೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ಅಭ್ಯಾಸ ಬೇಡವೇ, ಅವಳು ಪರೀಕ್ಷೆ ಬರೆದಿದ್ದಾರೂ ಎಲ್ಲಿ? ಇಂತಹ ತರ್ಕದ ಪ್ರಶ್ನೆಗಳಿಗೆ ಅರ್ಥ ಹುಡುಕುತ್ತಾ ಹೋದರೆ ‘ತಾರಕಾಸುರ’ ಚಿತ್ರ ನೋಡುವುದು ಕಷ್ಟವಾಗುತ್ತದೆ.

ಮನದಲ್ಲಿ ಏಳುವ ತರ್ಕದ ಪ್ರಶ್ನೆಗಳನ್ನು ಬದಿಗೆ ಸರಿಸಿ ಚಿತ್ರ ನೋಡುತ್ತೇನೆ ಎಂದರೂ ಅಸಹಜ ದೃಶ್ಯಗಳು ಹೇವರಿಕೆ ಹುಟ್ಟಿಸುತ್ತವೆ. ಮಾಟ, ಮಂತ್ರದ ಮೂಲಕ ದುಷ್ಟಶಕ್ತಿಯನ್ನು ಒಲಿಸಿಕೊಂಡು ಸಿದ್ಧಿಪುರುಷನಾಗುವುದು, ಸತ್ತ ಗರ್ಭಿಣಿಯ ಬಲಗೈ ಕಡಿದು ಪೂಜೆ ಮಾಡಿ ಇಷ್ಟಾರ್ಥ ಸಿದ್ಧಿಸಿಕೊಳ್ಳುವುದು... ಹೀಗೆ ಮೌಢ್ಯದ ವೃತ್ತದಿಂದ ಆಚೆ ಜಿಗಿಯುವ, ನೋಡುಗರಿಗೆ ಹೊಸ ಸಂದೇಶ ರವಾನಿಸುವ ಉದ್ದೇಶವೇ ‘ತಾರಕಾಸುರ’ ಚಿತ್ರಕ್ಕೆ ಇಲ್ಲ.

ADVERTISEMENT

ಬುಡಬುಡಿಕೆ ಜನಾಂಗದ ಆಚರಣಾ ಪದ್ಧತಿ ಮತ್ತು ಮರಳು ಗಣಿಗಾರಿಕೆ ಸುತ್ತ ‘ತಾರಕಾಸುರ’ನ ಕಥೆ ಹೆಣೆದಿದ್ದಾರೆ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ. ಹಾಲಕ್ಕಿ ಶಕುನ ನುಡಿದೈತೆ. ಜಯವಾಗುತೈತೆ ಶುಭವಾಗತೈತೆ ಶುಭವಾಗತೈತೆ ಜಯವಾಗತೈತೆ’ ಎಂದು ನುಡಿಯುತ್ತಾ ಊರಿಂದೂರಿಗೆ ಅಲೆಯುವ ಈ ಸಮುದಾಯದವರು ಒಂದರ್ಥದಲ್ಲಿ ಸಂಚಾರಿ ಸಾಂಸ್ಕೃತಿಕ ರಾಯಭಾರಿಗಳು.

ಆದರೆ, ಆಧುನಿಕತೆಯ ನಾಗಾಲೋಟಕ್ಕೆ ಸಿಲುಕಿ ಈ ಅಲೆಮಾರಿಗಳ ಜೀವನ ದಿಕ್ಕೆಟ್ಟಿದೆ. ಚಿತ್ರದಲ್ಲಿ ಎಲ್ಲಿಯೂ ಅವರ ಬದುಕಿನ ತವಕ, ತಲ್ಲಣವನ್ನು ನಿರ್ದೇಶಕರು ಕಟ್ಟಿಕೊಡುವುದಿಲ್ಲ. ಸಮುದಾಯವೊಂದರ ಆಚರಣೆಗಳನ್ನೇ ಭೀಭತ್ಸವಾಗಿ ತೋರಿಸುವುದರೊಂದಿಗೆ ಚಿತ್ರ ಕೊನೆಯಾಗುತ್ತದೆ.

ಈ ಸಿನಿಮಾ ಆರಂಭವಾಗುವುದೇ ಹಾಲಿವುಡ್‌ ನಟ ಡ್ಯಾನಿ ಸಫಾನಿಯ ಭರ್ಜರಿ ಫೈಟಿಂಗ್‌ ಮೂಲಕ. ಕಾರ್ಬನ್‌ ಅಲಿಯಾಸ್‌ ಕಾರ್ತಿಕೇಯ ಬುಡಬುಡಿಕೆ ಸಮುದಾಯದ ಸಿದ್ಧಿ‍ಪುರುಷ. ಸಿದ್ಧಿಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕೆಂಬುದು ಸಮುದಾಯದ ನಾಯಕರ ಕಟ್ಟಾಜ್ಞೆ. ಕಾರ್ತಿಕೇಯ ಈ ನಿಯಮ ಮೀರುತ್ತಾನೆ. ವ್ಯಕ್ತಿಯೊಬ್ಬನಿಗೆ ನೆರವಾಗಲು ಹೂತಿಟ್ಟ ಗರ್ಭಿಣಿಯ ಬಲಗೈ ಕಡಿದು ಪೂಜೆ ನೆರವೇರಿಸುತ್ತಾನೆ. ಆಕೆ ಕಾಳಿಂಗನ ಪುತ್ರಿ(ಡ್ಯಾನಿ ಸಫಾನಿ). ಕಾಳಿಂಗನ ರೌದ್ರಾವತಾರಕ್ಕೆ ಅಲೆಮಾರಿಗಳ ಬದುಕು ಛಿದ್ರವಾಗುತ್ತದೆ.

ನಗರಕ್ಕೆ ಬರುವ ಕಾರ್ತಿಕೇಯ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಕಾಳಿಂಗ ಮರಳು ದಂಧೆಯಲ್ಲಿ ನಿಸ್ಸೀಮ. ರೈಸ್‌ ಫುಲ್ಲಿಂಗ್‌ ಪಡೆಯಬೇಕೆಂಬುದು ಅವನ ಆಸೆ. ಈ ಕಾರ್ಯ ಸಿದ್ಧಿಪುರುಷನಿಂದ ಸಾಧ್ಯ ಎಂಬುದು ಅವನ ನಂಬಿಕೆ. ಕೊನೆಗೆ, ಛಿದ್ರಗೊಂಡ ತನ್ನ ಸಮುದಾಯಕ್ಕೆ ಭದ್ರನೆಲೆ ಒದಗಿಸಲು ಕಾರ್ತಿಕೇಯ ಶಕುನ ನುಡಿಯಲು ಒಪ್ಪಿಕೊಳ್ಳುತ್ತಾನೆ. ಪೂಜೆ ನೆರವೇರಿಸಲು ಹೋದಾಗ ಆತ ಯಾವ ಸಂಕಷ್ಟಕ್ಕೆ ಸಿಲುಕುತ್ತಾನೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕಿದೆ.

ಚಿತ್ರದಲ್ಲಿ ಡ್ಯಾನಿ ಸಫಾನಿಯೇ ಹೀರೊ. ನಾಯಕ ವೈಭವ್‌ ನಟನೆ ಪರವಾಗಿಲ್ಲ. ಮಾನ್ವಿತಾ ಹರೀಶ್‌ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಧರ್ಮವಿಶ್‌ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಕುಮಾರ್‌ಗೌಡ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಚೆನ್ನಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.