ADVERTISEMENT

The Judgement Movie Review: ಊಹಿಸಬಹುದಾದ ‘ಜಡ್ಜ್‌ಮೆಂಟ್‌’

ವಿನಾಯಕ ಕೆ.ಎಸ್.
Published 24 ಮೇ 2024, 14:02 IST
Last Updated 24 ಮೇ 2024, 14:02 IST
ರವಿಚಂದ್ರನ್‌
ರವಿಚಂದ್ರನ್‌   

ಸಿನಿಮಾ: ದಿ ಜಡ್ಜ್‌ಮೆಂಟ್‌

ನಿರ್ದೇಶನ: ಗುರುರಾಜ್‌ ಕುಲಕರ್ಣಿ

ನಿರ್ಮಾಣ : ಜಿ9 ಕಮ್ಯೂನಿಕೇಷನ್‌ ಮೀಡಿಯಾ

ADVERTISEMENT

ತಾರಾಗಣ: ರವಿಚಂದ್ರನ್‌ ದಿಗಂತ್‌ ಮೇಘನಾ ಗಾಂವ್ಕರ್‌ ಮತ್ತಿತರರು

ಪೂರ್ತಿ ಸಿನಿಮಾ ನ್ಯಾಯಾಲಯದಲ್ಲೇ ನಡೆಯುವಂತಹ ಕಥೆಗಳು ಕನ್ನಡದಲ್ಲಿ ಬಂದಿದ್ದು ಬಹಳ ಕಡಿಮೆ. ಆ ಕೊರತೆ ನೀಗಿಸುವ ಯತ್ನ ‘ದಿ ಜಡ್ಜ್‌ಮೆಂಟ್‌’ ಚಿತ್ರದಲ್ಲಿದೆ. ರೈತಪರ ಹೋರಾಟಗಾರ್ತಿಯೊಬ್ಬರ ಕೊಲೆ ಆಗುತ್ತದೆ. ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಬ್ಯಾಂಕ್‌ ಅಧಿಕಾರಿ(ದಿಗಂತ್‌) ಆರೋಪಿಯಾಗಿ ಜೈಲು ಸೇರುತ್ತಾರೆ. ಈ ಆರೋಪ ಸಾಬೀತಾಗುತ್ತದೆಯೋ, ಇಲ್ಲವೋ ಎಂಬುದು ಚಿತ್ರದ ಮೊದಲಾರ್ಧ.

ಪ್ರಕರಣದ ಪರವಾಗಿ ವಾದಿಸಲು ಸರ್ಕಾರಿ ವಕೀಲರಾಗಿ ರವಿಚಂದ್ರನ್‌ ನೇಮಕಗೊಳ್ಳುತ್ತಾರೆ. ಆರೋಪಿ ಪರ ವಕೀಲರಾಗಿ ಲಕ್ಷ್ಮಿ ಗೋಪಾಲಸ್ವಾಮಿ ಕಾಣಿಸಿಕೊಂಡಿದ್ದಾರೆ. ಇಡೀ ಪ್ರಕರಣವನ್ನು ಕಾನೂನು ದೃಷ್ಟಿಯಿಂದ ಬಹಳ ಅಧ್ಯಯನ ಮಾಡಿ ಚಿತ್ರಕಥೆ ಬರೆದಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ. ರಾಜಕೀಯದ ಕೈಗೊಂಬೆಯಾಗಿರುವ ಹೋರಾಟಗಾರ್ತಿಯೊಬ್ಬರು ಅತ್ಯಾಚಾರವಾಗಿ ಕೊಲೆಯಾಗುವ ಕಥಾವಸ್ತು ಇದಾಗಿದೆ. ಆದರೆ ಇದನ್ನು ದೃಶ್ಯವಾಗಿಸುವಲ್ಲಿ ಸ್ವಲ್ಪ ಶ್ರಮ ಬೇಕಿತ್ತು.

ಸರ್ಕಾರದ ಪರ ವಕೀಲನಾಗಿ ರವಿಚಂದ್ರನ್‌ ಇಷ್ಟವಾಗುತ್ತಾರೆ. ಪಾತ್ರವಾಗಿ ಅವರು ‘ದೃಶ್ಯ’ ಸಿನಿಮಾವನ್ನು ನೆನಪಿಸುತ್ತಾರೆ. ಆರೋಪಿ ಪರ ವಕೀಲೆಯಾಗಿ ಲಕ್ಷ್ಮಿ ಗೋಪಾಲ ಸ್ವಾಮಿ ಸ್ವಲ್ಪ ಮೃದು ಎನಿಸುತ್ತಾರೆ. ಆ ಪಾತ್ರಕ್ಕೆ ವಕೀಲರ ಗತ್ತು, ಗಾಂಭಿರ್ಯ ಇನ್ನಷ್ಟು ಬೇಕಿತ್ತು. ದಿಗಂತ್‌ ಅಸಹಾಯಕತೆ ಕೂಡ ನಟನೆಯಲ್ಲಿ ಅಲ್ಲಲ್ಲಿ ಸಹಜ ಎನ್ನಿಸುವುದಿಲ್ಲ. ದಿಂಗತ್‌ ತಂದೆಯಾಗಿ ರಂಗಾಯಣ ರಘು ಇಷ್ಟವಾಗುತ್ತಾರೆ. ಮಂತ್ರಿಯಾಗಿ ಕೃಷ್ಣ ಹೆಬ್ಬಾಳೆ ಗಮನ ಸೆಳೆಯುತ್ತಾರೆ. 

ಪ್ರಾರಂಭದಲ್ಲಿಯೇ ಚಿತ್ರದ ಕಥೆಯನ್ನು ಊಹಿಸಬಹುದು ಮತ್ತು ನಾವು ಅಂದುಕೊಂಡಂತೆಯೇ ಕಥೆ ಸಾಗುವುದರಿಂದ ಸಿನಿಮಾ ಕುತೂಹಲ ಉಳಿಸಿಕೊಳ್ಳುವುದಿಲ್ಲ. ನ್ಯಾಯಾಲಯದ ವಾತಾವರಣ, ವಾದ–ವಿವಾದದ ಸನ್ನಿವೇಶಗಳು ಇನ್ನಷ್ಟು ಗಟ್ಟಿಯಾಗಬಹುದಿತ್ತು. ಹಿನ್ನೆಲೆ ಸಂಗೀತ, ಛಾಯಾಚಿತ್ರಗ್ರಹಣ ಕೂಡ ಅಷ್ಟೇನು ಗಮನ ಸೆಳೆಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.