ಚಿತ್ರ: ಟೋಬಿ (ಕನ್ನಡ)
ನಿರ್ಮಾಣ: ರವಿ ರೈ ಕಳಸ
ನಿರ್ದೇಶನ: ಬಾಸಿಲ್ ಅಲ್ಚಲಕ್ಕಲ್
ತಾರಾಗಣ: ರಾಜ್ ಬಿ. ಶೆಟ್ಟಿ, ಚೈತ್ರ ಜೆ. ಆಚಾರ್, ರಾಜ್ ದೀಪಕ್ ಶೆಟ್ಟಿ, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ಭರತ್ ಜಿ.ಬಿ., ಯೋಗಿ ಬಂಕೇಶ್ವರ್, ಸ್ನಿಗ್ಧ.
ನರಿ ಬುದ್ಧಿಯ ಆನಂದನ ಮನೆ. ಟೀಪಾಯಿಯ ಮೇಲೆ ಟ್ರೇ. ಕಪ್ ಆ್ಯಂಡ್ ಸಾಸರ್‌ನಲ್ಲಿನ ಚಹಾ ಒಂದು ಬದಿ. ಸ್ಟೇನ್‌ಲೆಸ್ ಸ್ಟೀಲ್ ಲೋಟದಲ್ಲಿನ ಚಹಾ ಇನ್ನೊಂದು ಬದಿ. ಟೋಬಿ(ರಾಜ್ ಬಿ.ಶೆಟ್ಟಿ) ಥಟ್ಟನೆ ಸಾಸರ್ ಮೇಲಿಟ್ಟ ಕಪ್ ಎತ್ತಿಕೊಂಡು ಕುಡಿಯತೊಡಗುತ್ತಾನೆ. ಆನಂದನ ಬಿಟ್ಟ ಕಣ್ಣು ಬಿಟ್ಟ ಹಾಗೆ.
‘ನಾನು ಮೈ ಮಾರಿಕೊಂಡು ಬದುಕುವವಳು. ಮದುವೆ ಗಿದುವೆ ಬೇಡ’ ಹೇಳುತ್ತಾಳೆ ಸಾವಿತ್ರಿ. ‘ಏನಾದರೂ ಮಾರಿಕೋ...ನಮಗೇನಾಗಬೇಕು’ ಎಂದು ಟೋಬಿ ಪಕ್ಕದಲ್ಲಿ ನಿಂತ ಪುಟಾಣಿ ಜೆನ್ನಿ(ಸ್ನಿಗ್ಧ) ನಿರುಮ್ಮಳವಾಗಿ ಹೇಳುತ್ತಾಳೆ.
ಕಸದ ರಾಶಿಯಲ್ಲಿನ ಮೂಟೆಗಳಲ್ಲಿ ಶವವೊಂದಕ್ಕಾಗಿ ಹುಡುಕಾಡುವ ಟೋಬಿ, ಅದರ ಪಕ್ಕ ಬಿದ್ದ ಮೂಗಿನುಂಗುರ ಎತ್ತಿಕೊಳ್ಳುತ್ತಾನೆ. ಮೂಗು ಚುಚ್ಚಿಸಿಕೊಂಡು ಕುದುರೆ ಏರಿ ಹೊರಡುತ್ತಾನೆ.
ಚರ್ಚ್ ಪಾದ್ರಿ ಮಹಾ ಕೋಪಿಷ್ಟ ಬಾಲಕನನ್ನು ಬೇಷರತ್ ತಬ್ಬಿಕೊಳ್ಳುತ್ತಾನೆ. ಅದೇ ಮನುಷ್ಯ ಕಾರುಣ್ಯವೆನ್ನುವಂತೆ ಭಾವಿಸುವ ಬಾಲಕ ತೋಳಿನಲ್ಲಿ ತೋಳು ಬಂದಿ ಎನ್ನುವಂತೆ ಆತುಕೊಂಡು, ಪಾದ್ರಿಯ ಬೆನ್ನ ಮೇಲೆ ಕೈಯಾಡಿಸುತ್ತಾನೆ. ಆ ಬಾಲಕನಿಗೆ ‘ಟೋಬಿ’ ಎಂದು ಹೆಸರು ಕೊಡುವುದು ಅದೇ ಪಾದ್ರಿ.
ಇವೆಲ್ಲ ಚದುರಿದ ಚಿತ್ರಗಳು ‘ಟೋಬಿ’ಯಲ್ಲಿ ಒಂದು ಸೂತ್ರಕ್ಕೆ ಒಳಪಟ್ಟಿವೆ. ಬಿಡಿಬಿಡಿಯಾಗಿ ಅವು ತಣ್ಣಗಿನ ಕ್ರೌರ್ಯದ ಕಥನವನ್ನು ಜೋರು ದೃಶ್ಯಭಾಷೆಯಲ್ಲಿ ಹೇಳುತ್ತವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಕುರಿಯಂತೆ ಪರಿಸ್ಥಿತಿಯ ಮಿಕವಾಗುತ್ತಲೇ ಹೋಗುವ ಅಮಾಯಕನೊಬ್ಬ ಮಾರಿಯಾಗಿ ಮಾರ್ಪಡುವ ರುದ್ರ ಭಯಾನಕ ಕಥನವಿದು. ಕಥಾಎಳೆ ಟಿ.ಕೆ. ದಯಾನಂದ ಅವರದ್ದು.
ಬಹುತೇಕ ರಕ್ತತರ್ಪಣ, ಅಲ್ಲಲ್ಲಿ ಮಾತಿನ ಉಳಿ ಪೆಟ್ಟು, ಪದರ ಪದರಗಳಲ್ಲಿ ಚಿತ್ರಕಥೆಯನ್ನು ಹೆಣೆದ ಜಾಣ್ಮೆ, ಸ್ಲೋಮೋಷನ್‌ಗಳು, ಕೆಣಕುವ ಮೌನ, ಆಗೀಗ ಎದೆಗೆ ಬಡಿಯುವ ಹಿನ್ನೆಲೆ ಸಂಗೀತ, ಅತಿ ಕೃತಕವೆನ್ನಿಸುವ ಅಂತ್ಯ–ಇವೆಲ್ಲವೂ ‘ಟೋಬಿ’ಯ ಹಿಂಸಾಸೂತ್ರದಲ್ಲಿ ಬಿಗಿಯಾಗಿವೆ. ಮೊದಲಾರ್ಧದಲ್ಲಿ ಸಾವಧಾನದಿಂದಲೇ ಕಥೆ ಚಕಚಕನೆ ಮುಂದುವರಿಯುವ ತಂತ್ರವಿದೆ. ಎರಡನೇ ಅರ್ಧದಲ್ಲಿ ಊಹೆಗೆ ನಿಲುಕುವ ಮೆಲೋಡ್ರಾಮಾಗಳ ಮೆರವಣಿಗೆ.
‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಹಿಂಸಾದರ್ಶನದ ಕೆಲವು ಮಾದರಿಗಳನ್ನು ಬಿಂಬಿಸಿದ್ದರು. ಕೊಲೆ ಮಾಡುವಾಗ ಮಳೆ ಬರಬೇಕು, ಪಾತ್ರದ ಸ್ವರೂಪಕ್ಕೆ ಹೊರತೇ ಆದ ಗೀತಸಾಹಿತ್ಯ ಅಪರೂಪಕ್ಕೊಮ್ಮೆ ಮೂಡಬೇಕು, ತನ್ನನ್ನು ನಾಯಿಯ ಸ್ಥಿತಿಗೆ ತರುತ್ತಿದ್ದಾರೆನ್ನುವುದನ್ನು ಆ ಪ್ರಾಣಿಯನ್ನೇ ತೋರಿಸಿ ಹೇಳಬೇಕು... ಹೀಗೆ. ಇಂತಹ ಹಿಂಸಾಪ್ರತಿಮೆಗಳು ಈ ಚಿತ್ರದಲ್ಲಿಯೂ ಇವೆ. ಕ್ರೌರ್ಯದ ಬಿಂಬಗಳೇ ಗೀಳಾಗಿರುವುದರ ಪರಿಣಾಮವಿದು. ‘ಕಾಂತಾರ’ ಸಿನಿಮಾದಲ್ಲಿ ಅಂತ್ಯವನ್ನು ದೈವಶಕ್ತಿಗೆ ಸಮೀಕರಿಸುವ ಅನುಕೂಲಸಿಂಧು ಧೋರಣೆಯೊಂದು ಇದೆ. ಅದನ್ನೇ ಎತ್ತಿಕೊಂಡು, ಈ ಸಿನಿಮಾದಲ್ಲೂ ದುರ್ಬಲವಾಗಿ ಅಳವಡಿಸಿದ್ದಾರೆ.
ಅಭಿನಯದಲ್ಲಿ ರಾಜ್ ಕ್ರೌರ್ಯದಲ್ಲಿ ಅದ್ದಿ ತೆಗೆದಂತಿದ್ದಾರೆ. ಮಾತೇ ಇಲ್ಲದೆ ನಗುವುದರಲ್ಲಿ, ಮನಸೋಇಚ್ಛೆ ತದುಕುವುದರಲ್ಲಿ ಅವರು ನಿಸ್ಸೀಮರು. ಚೈತ್ರಾ ಜೆ. ಆಚಾರ್ ಅವರಿಗೆ ಛಾಪು ಮೂಡಿಸುವಂತಹ ಮಾತು, ಅಭಿನಯಾವಕಾಶ ಲಭಿಸಿದೆ. ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ ಅವರದ್ದೂ ಹದವರಿತ ಅಭಿನಯ. ಬಾಲಕಿಯ ಪಾತ್ರದಲ್ಲಿ ಸ್ನಿಗ್ಧ ಅಭಿನಯ ಹೆಚ್ಚು ಸಹಜವಾಗಿದೆ. ಪ್ರವೀಣ್ ಶ್ರಿಯಾನ್ ಛಾಯಾಚಿತ್ರಗ್ರಹಣ, ಮಿದುನ್ ಮುಕುಂದನ್ ಹಿನ್ನೆಲೆ ಸಂಗೀತ ದೃಶ್ಯತೀವ್ರತೆಯನ್ನು ಹೆಚ್ಚು ಮಾಡಿವೆ.
ರಾಜ್ ಶೆಟ್ಟಿ ಚಿತ್ರಕಥಾ ಬರವಣಿಗೆಯಲ್ಲಿ ಕಸುಬುದಾರಿಕೆಯೇನೋ ಇದೆ. ಆದರೆ, ಕಥಾವಸ್ತುವಿನ ಔಚಿತ್ಯದ ಅವಗಣನೆ, ಕೇಂದ್ರ ಪಾತ್ರದ ಮನೋಭೂಮಿಕೆಯನ್ನೇ ಆಗೀಗ ಹದ ತಪ್ಪುವಂತೆ ಮಾಡಿರುವುದು ಸಿನಿಮಾ ಒಟ್ಟಾರೆಯಾಗಿ ಏನನ್ನು ಹೇಳಲು ಹೊರಟಿದೆ ಎನ್ನುವುದನ್ನೇ ಮರೆಮಾಡಿಬಿಡುತ್ತದೆ. ಚೆಲ್ಲಿದ ರಕ್ತ ಮನಕ್ಕೆ ಸಿಡಿದು, ಕಣ್ಣೀರು ಕಾಣಿಸದಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.