ಚಿತ್ರ: ವಿರಾಜ್
ನಿರ್ಮಾಪಕರು: ಮಂಜುನಾಥ ಸ್ವಾಮಿ ಎನ್.
ನಿರ್ದೇಶನ: ನಾಗೇಶ್ ನಾರದಾಸಿ
ತಾರಾಗಣ: ವಿದ್ಯಾಭರಣ್, ಶಿರೀನ್ ಕಂಚವಾಲ, ದೇವರಾಜ್, ನಿಖಿತಾ, ವಿನಯಾ ಪ್ರಸಾದ್, ಜೈಜಗದೀಶ್, ಸ್ವಾತಿ
ಊರಿನ ಬಡವರ ಜಮೀನಿನ ಮೇಲೆ ಎಂಎಲ್‌ಎ ಕಣ್ಣುಹಾಕುತ್ತಾನೆ. ಅಲ್ಲಿ ಫ್ಯಾಕ್ಟರಿ ಕಟ್ಟಿಸುವುದು ಅವನ ಗುರಿ. ಅದಕ್ಕೆ ತಡೆಯೊಡ್ಡಲು ಗ್ರಾಮದ ಯಜಮಾನ (ದೇವರಾಜ್) ಮುಂದಾಗುತ್ತಾರೆ. ಅವರ ಮೇಲೆ ಎಂಎಲ್‌ಎಯ ಬೆಂಬಲಿಗರು ದಾಳಿಗೆ ಸಜ್ಜಾಗುತ್ತಾರೆ. ಆಗ ವಿರಾಜ್‌ನ (ವಿದ್ಯಾಭರಣ್) ಪ್ರವೇಶವಾಗುತ್ತದೆ. ಮುಂದಿನ ದೃಶ್ಯಾವಳಿಗಳಲ್ಲಿ ರೌಡಿಗಳ ಮೂಳೆಗಳು ಪುಡಿಪುಡಿಯಾಗುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ.
‘ವಿರಾಜ್’ ಚಿತ್ರದಲ್ಲಿ ನಾಯಕನ ಪ್ರವೇಶಕ್ಕೆ ಬಿಲ್ಡಪ್ ನೀಡಲು ನಿರ್ದೇಶಕರು ಬಳಸಿರುವ ಈ ತಂತ್ರಗಾರಿಕೆ ಹೊಸದೇನಲ್ಲ. ಸಾಕಷ್ಟು ಬಾರಿ ಬಳಸಿ ಸವಕಲಾಗಿರುವ ತಂತ್ರಗಳನ್ನೇ ಬಳಸಿ ಪ್ರೇಕ್ಷಕರಿಗೆ ಪ್ರೀತಿಯ ಸಂದೇಶ ಹೇಳಲು ಪ್ರಯಾಸಪಟ್ಟಿದ್ದಾರೆ ನಿರ್ದೇಶಕ ನಾಗೇಶ್ ನಾರದಾಸಿ.
ಒಂದು ಸುಸಂಸ್ಕೃತ ಮನೆತನ. ಮತ್ತೊಂದು ಅಂತಸ್ತಿಗೆ ಅಂಟಿಕೊಂಡ ಕುಟುಂಬ. ಸಮಾಜದಲ್ಲಿ ಪ್ರತಿಷ್ಠೆಯ ಅಂಟುರೋಗಕ್ಕೆ ಸಿಲುಕಿದ ಪೋಷಕರ ಮನಸ್ಥಿತಿಯು ಮಕ್ಕಳ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಪರದೆ ಮೇಲೆ ಮುಖಾಮುಖಿಯಾಗಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ, ದುರ್ಬಲ ಚಿತ್ರಕಥೆ, ಜಾಳು ಪಾತ್ರ ಪೋಷಣೆಯಿಂದ ಸಿನಿಮಾ ಸೊರಗಿದೆ. ಇದಕ್ಕೆ ಅನಗತ್ಯವಾಗಿ ಅತ್ಯಾಚಾರದ ಎಳೆಯೊಂದನ್ನು ಸುತ್ತಿ ಕಥೆಗೊಂದು ಟ್ವಿಸ್ಟ್ ನೀಡುವ ನಿರ್ದೇಶಕರ ಪ್ರಯತ್ನ ಪ್ರಹಸನ ಸೃಷ್ಟಿಸಿದೆ.
ವಿರಾಜ್‌ಗೆ ಅಜ್ಜ, ಅಜ್ಜಿಯೇ ಆಸರೆ. ಅಮೆರಿಕದಿಂದ ಕರ್ನಾಟಕಕ್ಕೆ ಬರುವ ನಂದಿನಿ(ಶಿರೀನ್) ಆತ ಓದುವ ಕಾಲೇಜಿಗೆ ಸೇರುತ್ತಾಳೆ. ಮೊದಲ ನೋಟದಲ್ಲೇ ಇಬ್ಬರಲ್ಲೂ ಪ್ರೀತಿ ಬೆಳೆಯುತ್ತದೆ. ನಂದಿನಿಯ ಅಪ್ಪ ಉದ್ಯಮಿ. ಆತನಿಗೆ ಪ್ರತಿಷ್ಠೆಯ ಹುಚ್ಚು. ಮನೆಯಲ್ಲಿರುವ ಕೆಲಸದಾಳುಗಳನ್ನು ಕೀಳಾಗಿ ಕಾಣುತ್ತಿರುತ್ತಾನೆ.
ವಿರಾಜ್, ನಂದಿನಿಯ ನಿಶ್ಚಿತಾರ್ಥ ನಿಗದಿಯಾಗುತ್ತದೆ. ಶುಭ ಕಾರ್ಯಕ್ರಮದಲ್ಲಿ ನಂದಿನಿಯ ಅಪ್ಪ ಮನೆ ಕೆಲಸದ ವ್ಯಕ್ತಿಯನ್ನು ಕೀಳಾಗಿ ಕಾಣುತ್ತಾನೆ. ನಿಶ್ಚಿತಾರ್ಥ ಮುರಿದು ಬೀಳುತ್ತದೆ. ಈ ನಡುವೆ ಮತ್ತೊಬ್ಬ ನಾಯಕಿಯ ಪ್ರವೇಶ. ಮತ್ತೆ ನಿಶ್ಚಿತಾರ್ಥಕ್ಕೆ ನಾಯಕ ಸಜ್ಜಾಗುತ್ತಾನೆ. ನಿರ್ದೇಶಕರು ಅಲ್ಲೊಂದು ಅವಾಂತರ ಸೃಷ್ಟಿಸಿ ಮತ್ತೆ ನಿಶ್ಚಿತಾರ್ಥವನ್ನು ಮುರಿಯುತ್ತಾರೆ. ಇನ್ನೇನು ಇಬ್ಬರಿಗೂ ಮದುವೆಯಾಗುತ್ತದೆ ಎಂದು ಪ್ರೇಕ್ಷಕರು ಅಂದಾಜಿಸುವಾಗಲೇ ಮತ್ತೊಂದು ಹಾಡು, ಫೈಟಿಂಗ್ ದೃಶ್ಯ ತೋರಿಸಿ ತಬ್ಬಿಬ್ಬುಗೊಳಿಸುತ್ತಾರೆ. ಕೊನೆಗೆ, ನಿಶ್ಚಿತಾರ್ಥ ನಾಯಕನಿಗೆ ಆಗಿಬರುವುದಿಲ್ಲವೆಂದು ನಾಯಕಿಯ ತಂದೆಯ ಬಾಯಿಯಲ್ಲಿ ಹೇಳಿಸಿ ನೇರವಾಗಿ ಮದುವೆ ಮಾಡಿಸುವುದರೊಂದಿಗೆ ಸಿನಿಮಾವನ್ನು ಮುಗಿಸುತ್ತಾರೆ.
ದೇವರಾಜ್, ವಿನಯಾ ಪ್ರಸಾದ್, ಜೈಜಗದೀಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಭಾಷ್ ಆನಂದ್ ಸಂಗೀತ ಸಂಯೋಜನೆಯ ಹಾಡುಗಳು ಮನದಲ್ಲಿ ಉಳಿಯುವುದಿಲ್ಲ. ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವೂ ಚಿತ್ರಕ್ಕೆ ಹೊಸತೇನನ್ನೂ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.